ಯಾದಗಿರಿ: ಹೊರದೇಶದಲ್ಲಿ ಹೆಚ್ಚಿನ ಹಣ ಸಿಗುತ್ತೆ ಅಂತ ಗಲ್ಫ್ ದೇಶಗಳಿಗೆ (Gulf Nations) ಕೆಲಸಕ್ಕೆ ಹೋಗಬಯಸುವವರು ಈ ಸ್ಟೋರಿ ಓದಬೇಕು. ಇದು ಇತ್ತೀಚೆಗೆ ಬಂದ ʼಆಡುಜೀವಿತಂʼ ಸಿನಿಮಾ (Adujeevitam Movie) ಕತೆಯಂತೆಯೇ ಇದೆ. ಒಳ್ಳೆಯ ಉದ್ಯೋಗ (Job) ಕೊಡಿಸುತ್ತೇವೆ ಎಂದು ನಂಬಿಸಿ ದುಬೈಗೆ ಕರೆದೊಯ್ದ ಏಜೆಂಟರಿಂದಾಗಿ ಯಾದಗಿರಿಯ (Yadgiri news) ವ್ಯಕ್ತಿಯೊಬ್ಬರು ಮೋಸ (Fraud Case) ಹೋಗಿದ್ದು, ಇದೀಗ ಜೀತದಾಳಿನಂತೆ ದುಬೈಯಲ್ಲಿ (Dubai) ಕುರಿ, ಒಂಟೆ ಕಾಯುವ ಕೆಲಸ ಮಾಡುತ್ತಿದ್ದಾರೆ. ತಮ್ಮನ್ನು ಈ ಸ್ಥಿತಿಯಿಂದ ಪಾರು ಮಾಡಿ ಎಂದು ಸಂಬಂಧಿಸಿದವರಿಗೆ ಅಂಗಲಾಚಿದ್ದಾರೆ.
ಏಜೆಂಟರ ಬಣ್ಣ ಬಣ್ಣದ ಮಾತುಗಳಿಗೆ ಮೋಸ ಹೋಗಿ ಈಗ ಕಣ್ಣೀರು ಹಾಕುತ್ತಿರುವ ವ್ಯಕ್ತಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರಾಜಾಪುರ ಗ್ರಾಮದ ರಾಜಾಪುರ ಗ್ರಾಮದ ದ್ಯಾಮರಾಯ ಎಂಬವರು. ಒಳ್ಳೆ ಕೆಲಸ ಕೊಡಿಸ್ತೀವಿ ಎಂದು ವೀಸಾ ಮಾಡಿಸಿ ದುಬೈಗೆ ಕಳಿಸಿರುವ ಕಿರಾತಕರು ಅಲ್ಲಿ ಕೊಡಿಸಿದ್ದು ಕುರಿ ಕಾಯುವ, ಒಂಟೆ ಮೇಯಿಸುವ ಕೆಲಸ. ಜೊತೆಗೆ, ಇವರ ಪ್ರಯಾಣ ದಾಖಲೆಗಳನ್ನೂ ಏಜೆಂಟರು ಕಿತ್ತಿಟ್ಟುಕೊಂಡಿದ್ದಾರೆ.
ಏಜೆಂಟ್ ಲಾಲಸಾಬ ಎಂಬಾತ ಇವರನ್ನು ಬಹಳ ಸಂಬಳ ಕೊಡಿಸುತ್ತೇನೆ ಎಂದು ನಂಬಿಸಿ ಕೆಲಸಕ್ಕಾಗಿ ದುಬೈಗೆ ಕರೆದುಕೊಂಡು ಹೋಗಿದ್ದ. ದುಬೈನ ಕಪೀಲ್ ಎಂಬವರ ಬಳಿ ಕೆಲಸಕ್ಕಾಗಿ ಬಿಟ್ಟಿದ್ದಾನೆ. ಕಪೀಲ್, ದ್ಯಾಮರಾಯನಿಂದ ಕುರಿ ಮೇಯಿಸಿ, ಒಂಟೆ ಕಾಯಿಸಿದ್ದಾನೆ. ಇಬ್ಬರೂ ದ್ಯಾಮರಾಯನಿಗೆ ದುಡ್ಡು ನೀಡಿಲ್ಲ. ದ್ಯಾಮರಾಯನ ಪಾಸ್‌ಪೋರ್ಟ್ ವೀಸಾ ಇತ್ಯಾದಿಗಳನ್ನು ಲಾಲಸಾಬ ಕಿತ್ತಿಟ್ಟುಕೊಂಡಿದ್ದು, ಇದೀಗ ಭಾರತಕ್ಕೆ ಮರಳುತ್ತೇನೆ ಎಂದರೆ ಅವುಗಳನ್ನು ಕೊಡದೆ ಸತಾಯಿಸುತ್ತಿದ್ದಾನೆ.
ಅನಾರೋಗ್ಯದಿಂದ ಬಳಲುತ್ತಿದ್ದೇನೆ ಭಾರತಕ್ಕೆ ತೆರಳ್ತೀನಿ ಅಂದರೂ ವೀಸಾ, ಪಾಸ್‌ಪೋರ್ಟ್ ಕೊಡುತ್ತಿಲ್ಲ ಎಂದು ದ್ಯಾಮರಾಯ ಅಲವತ್ತುಕೊಂಡಿದ್ದಾರೆ. ಸದ್ಯ ದ್ಯಾಮರಾಯ ದುಬೈನ ತಮಾಮ ನಗರದಲ್ಲಿದ್ದಾರೆ. ಕಳೆದ 3 ತಿಂಗಳಿನಿಂದ ದುಬೈನಲ್ಲಿ ದುಡಿಸಿಕೊಂಡು ದುಡ್ಡು ನೀಡದೇ ನಡುನೀರಿನಲ್ಲಿ ಏಜೆಂಟ್ ಲಾಲಸಾಬ ಕೈಬಿಟ್ಟಿದ್ದಾನೆ. ನನ್ನ ಹೆಂಡತಿ-ಮಕ್ಕಳು ಊರಲ್ಲಿದ್ದಾರೆ. ನನಗೆ ಊಟ ಸಹ ದೊರೆಯುತ್ತಿಲ್ಲ ಎಂದು ದ್ಯಾಮರಾಯ ಅತ್ತಿದ್ದಾರೆ.
ದುಬೈನಲ್ಲಿ ಬಹಳ ತೊಂದರೆಯಲ್ಲಿದ್ದೇನೆ. ದಯವಿಟ್ಟು ನನ್ನನ್ನು ಭಾರತಕ್ಕೆ ಕರೆಯಿಸಿಕೊಳ್ಳಿ. 2-3 ಬಾರಿ ಇಂಡಿಯನ್ ಎಂಬೆಸ್ಸಿ ಬಳಿ ಹೋದರೂ ಅಧಿಕಾರಿಗಳು ಕೇರ್ ಮಾಡುತ್ತಿಲ್ಲ. ಭಾರತ ಸರ್ಕಾರ ಸಹಾಯ ಮಾಡಿ ನನ್ನನ್ನು ಕರೆಸಿಕೊಳ್ಳಬೇಕು. ಇಲ್ಲದಿದ್ದರೆ ನಾನು ಏನಾದರೂ ಮಾಡಿಕೊಂಡು ಸಾಯಬೇಕಾಗುತ್ತದೆ ಎಂದು ದ್ಯಾಮರಾಯ ಅಂಗಲಾಚಿದ್ದಾರೆ.
ಕಾಡಾನೆ ದಾಳಿಗೆ ಫಾರೆಸ್ಟ್ ವಾಚರ್ ಬಲಿ
ಆನೇಕಲ್: ಕಾಡಾನೆ ದಾಳಿಗೆ (Elephant Attack) ಫಾರೆಸ್ಟ್ ವಾಚರ್ (forest Watcher) ಒಬ್ಬರು ಬಲಿಯಾದ ದುರ್ಘಟನೆ ಬನ್ನೇರುಘಟ್ಟ (Bannerghatta) ಸಮೀಪದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ನಡೆದಿದೆ. ಚಿಕ್ಕಮಾದಯ್ಯ (46) ಸಾವನ್ನಪ್ಪಿದ ಫಾರೆಸ್ಟ್ ವಾಚರ್. ಇದರಿಂದ ರೊಚ್ಚಿಗೆದ್ದ ಕುಟುಂಬಿಕರು ಹಾಗೂ ಗ್ರಾಮಸ್ಥರು ಪರಿಹಾರ ದೊರೆಯದೆ ಹೆಣ ತೆಗೆಯುವುದಿಲ್ಲ ಎಂದು ಪ್ರತಿಭಟಿಸಿದರು.
ಹಕ್ಕಿಪಿಕ್ಕಿ ಕಾಲೋನಿಯ ದೊಡ್ಡಬಂಡೆ ಬಳಿ ಘಟನೆ ನಡೆದಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಫಾರೆಸ್ಟ್ ವಾಚರ್ ಆಗಿ ಕೆಲಸ ಮಾಡುತ್ತಿದ್ದ ಚಿಕ್ಕಮಾದಯ್ಯ ಅವರ ಮೇಲೆ ರಾತ್ರಿ 12.30ರ ಸುಮಾರಿಗೆ ಕಾಡಾನೆ ದಾಳಿ ಮಾಡಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾಕಾನೆಗಳನ್ನು ನಿತ್ಯ ಕಾಡಿಗೆ ಬಿಡಲಾಗುತ್ತದೆ. ನಿನ್ನೆ ಸಂಜೆ ಸಾಕಾನೆಗಳನ್ನು ಕಾಡಿಗೆ ಬೀಡಲಾಗಿತ್ತು. ಸಾಕಾನೆಗಳ ಗುಂಪಿನ ಜೊತೆಗೆ ಕಾಡಾನೆ ಸೇರಿಕೊಂಡಿತ್ತು. ನೈಟ್ ಬೀಟ್ ರೌಂಡ್ಸ್ ಮಾಡುತ್ತಿದ್ದ ಚಿಕ್ಕ ಮಾದಯ್ಯ ಮತ್ತು ಇನ್ನೊಬ್ಬ ಸಿಬ್ಬಂದಿ ಮೇಲೆ ಕಾಡಾನೆ ಏಕಾಏಕಿ ಅಟ್ಯಾಕ್ ಮಾಡಿದೆ. ಚಿಕ್ಕಮಾದಯ್ಯ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಇನ್ನೊಬ್ಬ ಸಿಬ್ಬಂದಿ ಪಾರಾಗಿದ್ದಾರೆ.
ಚಿಕ್ಕ ಮಾದಯ್ಯ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಬನ್ನೇರುಘಟ್ಟ ಅರಣ್ಯಾಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ದಾರೆ. ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪದೇ ಪದೆ ಕಾಡಾನೆ ಹಾವಳಿಗೆ ಬೆಳೆಹಾನಿ ಜೊತೆಗೆ ಪ್ರಾಣಹಾನಿಯಾಗುತ್ತಿದೆ. ಕಡಿವಾಣ ಹಾಕಲು ಅರಣ್ಯಾಧಿಕಾರಿಗಳು ಮುಂದಾಗಿಲ್ಲ. ಫಾರೆಸ್ಟ್ ಸಿಬ್ಬಂದಿ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು. ಪರಿಹಾರ ಕೊಡುವವರೆಗೆ ಮೃತದೇಹ ತೆಗೆಯುವುದಿಲ್ಲ ಎಂದು ಗ್ರಾಮಸ್ಥರು ಪ್ರತಿಭಟಿಸಿದರು.
ಇದನ್ನೂ ಓದಿ: Elephant attack :ಕಾರಿನ ಮೇಲೆ ಕಾಡಾನೆ ದಾಳಿ; ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ