ರಿಚ್ಮಂಡ್ ಹಿಲ್ (ಕೆನಡಾ): ಕೆನಡಾದ ರಿಚ್ಮಂಡ್ ಹಿಲ್‌ನ ಹಿಂದೂ ದೇವಾಲಯವೊಂದರ ಮುಂದೆ ೩೦ ವರ್ಷಗಳ ಹಿಂದೆ ಸ್ಥಾಪಿಸಲಾದ ಬೃಹತ್ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ ವಿರೂಪಗೊಳಿಸಿದ್ದಾರೆ. ಇದು ಭಾರತದ ಮೇಲೆ, ಭಾರತೀಯರ ಮೇಲೆ ದ್ವೇಷದಿಂದ ನಡೆಸಿದ ಕೃತ್ಯ ಎಂಬ ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದುಷ್ಕರ್ಮಿಗಳು ಪ್ರತಿಮೆಯ ಕೆಳಭಾಗದಲ್ಲಿರುವ ಕಟ್ಟೆಯ ಮೇಲೆ ಖಲೀಸ್ತಾನ್ ಮತ್ತು ರೇಪಿಸ್ಟ್ ಎಂಬ ಪದಗಳನ್ನು ಬರೆದಿದ್ದಾರೆ. ಹೀಗಾಗಿ ಇದು ಕೆನಡಾದಲ್ಲಿ ಆಶ್ರಯ ಪಡೆದಿರುವ ಪಂಜಾಬ್ ಮೂಲದ ಖಲಿಸ್ತಾನಿಗಳ ಕೃತ್ಯ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ರಿಚ್ಮಂಡ್ ಹಿಲ್ನ ಯೋಂಗ್ ಸ್ಟ್ರೀಟ್ ಮತ್ತು ಗಾರ್ಡನ್ ಅವೆನ್ಯೂ ಎಂಬ ಪ್ರದೇಶದಲ್ಲಿ ವಿಷ್ಣು ಮಂದಿರವಿದೆ. ಇದರ ಆವರಣದೊಳಗೆ ಐದು ಮೀಟರ್ ಎತ್ತರದ ಗಾಂಧಿ ಮೂರ್ತಿಯನ್ನು ೩೦ ವರ್ಷಗಳ ಹಿಂದೆ ಸ್ಥಾಪಿಸಲಾಗಿದೆ. ಬುಧವಾರ ರಾತ್ರಿ ಯಾರೋ ದುಷ್ಕರ್ಮಿಗಳು ಅದನ್ನು ವಿರೂಪಗೊಳಿಸಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಯಾರ್ಕ್‌ನ ಪ್ರಾದೇಶಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು ಇದು ದ್ವೇಷ ಕೃತ್ಯ ಎಂದು ಸ್ಪಷ್ಟವಾಗಿದೆ. ಅಪರಾಧಿಗಳ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ. ʻʻಜಾತಿ, ರಾಷ್ಟ್ರೀಯತೆ, ಜನಾಂಗದ ಮೂಲ, ಭಾಷೆ, ಬಣ್ಣ, ಧರ್ಮ, ವಯಸ್ಸು, ಲಿಂಗ ಮತ್ತು ಇತರ ಕಾರಣಗಳಿಗಾಗಿ ಇತರರ ಮೇಲೆ ದೌರ್ಜನ್ಯ ನಡೆಸುವುದರ ವಿರುದ್ಧ ಕಠಿಣ ಶಿಕ್ಷೆ ವಿಧಿಸಲಾಗುವುದುʼʼ ಎಂದು ಯಾರ್ಕ್ ಪ್ರಾದೇಶಿಕ ಪೊಲೀಸ್ ಇಲಾಖೆಯ ವಕ್ತಾರೆ ಅಮಿ ಬೌರ್ಡ್ಯೂ ಅವರು ಹೇಳಿದ್ದಾರೆ.
ಶಾಂತಿವನದ ಗಾಂಧಿ ಪ್ರತಿಮೆ
ವಿಷ್ಣು ಮಂದಿರದ ಸುತ್ತಲಿನ ಉದ್ಯಾನ ಪ್ರದೇಶಕ್ಕೆ ಶಾಂತಿ ವನ ಎಂದು ಹೆಸರಿಡಲಾಗಿದೆ. ಇಲ್ಲಿ ಗಾಂಧಿ ಪ್ರತಿಮೆಯನ್ನು ೩೦ ವರ್ಷಗಳ ಹಿಂದೆ ಸ್ಥಾಪಿಸಿ ಹೆಸರನ್ನು ಅನ್ವರ್ಥಗೊಳಿಸಲಾಗಿದೆ. ಆದರೆ, ಇಲ್ಲಿ ಇಂಥ ದುಷ್ಟ ಕೃತ್ಯಗಳನ್ನು ನಡೆಸಿರುವುದು ಭಾರಿ ಬೇಸರ ಉಂಟು ಮಾಡಿದೆ ಎಂದು ದೇವಸ್ಥಾನದ ಅಧ್ಯಕ್ಷರಾಗಿರುವ ಡಾ. ಬುಧೇಂದ್ರ ದುಬೆ ಹೇಳಿದ್ದಾರೆ. ಇದುವರೆಗೆ ಈ ರೀತಿಯ ಶಾಂತಿ ಭಂಗದ ಕೆಲಸ ಇಲ್ಲಿ ನಡೆದಿರಲಿಲ್ಲ. ನಾವು ಕಳೆದ ಅದೆಷ್ಟೋ ವರ್ಷಗಳಿಂದ ಶಾಂತಿಯಿಂದ ಬದುಕುತ್ತಿದ್ದೇವೆ. ಯಾವತ್ತೂ ಈ ರೀತಿ ನಡೆದಿರಲಿಲ್ಲ. ಮುಂದೆಯೂ ಇಂಥ ಘಟನೆ ನಡೆಯಲಾರದು ಎಂದು ಆಶಿಸುತ್ತೇವೆ ಎಂದು ಆವರು ಹೇಳಿಕೊಂಡಿದ್ದಾರೆ.
ಕಾನ್ಸುಲೇಟ್ ಕಚೇರಿಗಳಿಂದಲೂ ಖಂಡನೆ
ಈ ಘಟನೆಯನ್ನು ಟೊರಾಂಟೋದಲ್ಲಿರುವ ಕಾನ್ಸುಲೇಟ್ ಜನರಲ್ ಮತ್ತು ಒಟ್ಟಾವದಲ್ಲಿರುವ ಭಾರತೀಯ ಹೈಕಮಿಷನ್‌ಗಳು ಖಂಡಿಸಿವೆ. ಕೆನಡಾದ ಅಧಿಕಾರಿಗಳನ್ನು ಸಂಪರ್ಕಿಸಿ ಭಾರತೀಯ ಸಮುದಾಯಕ್ಕೆ ಎದುರಾಗಿರುವ ಆತಂಕವನ್ನು ತೋಡಿಕೊಂಡಿವೆ. ಕಠಿಣ ಕ್ರಮಕ್ಕೆ ಆಗ್ರಹಿಸಿವೆ.
ಕೆನಡಾದಲ್ಲಿ ಖಲಿಸ್ತಾನಿಗಳ ಅಟ್ಟಹಾಸ
ಸಿಕ್ಖರಿಗೆ ಪ್ರತ್ಯೇಕ ರಾಷ್ಟ್ರ ಆಗ್ರಹಿಸಿ ಹೋರಾಟ ನಡೆಸುತ್ತಿರುವ, ಹಿಂಸೆಯನ್ನು ಬಿತ್ತುತ್ತಿರುವ ಪಂಜಾಬಿನ ಖಲಿಸ್ತಾನಿ ಸಂಘಟನೆಗಳು ಈ ಕೃತ್ಯದ ಹಿಂದಿರುವುದು ಸ್ಪಷ್ಟವಾಗಿದೆ. ಖಲಿಸ್ತಾನಿಗಳು ಭಾರತದಿಂದ ತಪ್ಪಿಸಿಕೊಂಡು ಹೋಗಿ ಕೆನಡಾದಲ್ಲಿ ಆಶ್ರಯ ಪಡೆಯುವ ವಿದ್ಯಮಾನಗಳು ಹೆಚ್ಚುತ್ತಿವೆ. ಕೆಲವರಿಗೆ ಕೆನಡಾ ಎನ್ನುವುದು ಭಾರತದ ವಿರುದ್ಧ ಸಂಚು ನಡೆಸುವ ಕಾರ್ಯಸ್ಥಳವೂ ಆಗಿದೆ. ಈ ಖಲಿಸ್ತಾನಿಗಳು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳ ಜತೆ ಸೇರಿಕೊಂಡು ಭಾರತದಲ್ಲಿ ದುಷ್ಕೃತ್ಯಗಳನ್ನು ನಡೆಸಲು ಸಂಚು ನಡೆಸುತ್ತಿರುವುದು ಆಗಾಗ ಬೆಳಕಿಗೆ ಬರುತ್ತಿವೆ.
ಇದನ್ನೂ ಓದಿ| Explainer: ಆಪರೇಷನ್ ಬ್ಲೂ ಸ್ಟಾರ್ ಎಂಬ ಚಂಡಮಾರುತಕ್ಕೆ ಈಗ 38 ವರ್ಷ!