Site icon Vistara News

Gas Leak deaths: ಮುಚ್ಚಿದ ಮನೆಯಲ್ಲಿ ಗ್ಯಾಸ್‌ ಸೋರಿಕೆ, ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದ 4 ಮಂದಿ

gas leak deaths mysore

ಮೈಸೂರು: ಮನೆಯೊಳಗೆ ಅಡುಗೆ ಅನಿಲ ಸೋರಿಕೆಯಾದ (Gas leakage) ಪರಿಣಾಮ ಒಂದೇ ಕುಟುಂಬದ ನಾಲ್ವರು ರಾತ್ರಿ ನಿದ್ರೆಯಲ್ಲೇ ಪ್ರಾಣ (Gas Leak deaths) ಬಿಟ್ಟಿದ್ದಾರೆ. ಕಿಟಕಿ ಬಾಗಿಲುಗಳು ಭದ್ರವಾಗಿ ಮುಚ್ಚಿದ್ದರಿಂದ, ಅಡುಗೆ ಅನಿಲ (LPG) ಹೊರಹೋಗಲು ಯಾವುದೇ ಕಿಂಡಿಯಿಲ್ಲದೆ ಬಂದ್‌ ಆಗಿದ್ದು, ನಾಲ್ವರ ಜೀವ ತೆಗೆದಿದೆ.

ಮೃತಪಟ್ಟ ನಾಲ್ವರು ಚಿಕ್ಕಮಗಳೂರು ಜಿಲ್ಲೆಯ ಸಕ್ಕರಾಯ ಪಟ್ಟಣ ಗ್ರಾಮದವರು. ಕುಮಾರಸ್ವಾಮಿ (45), ಮಂಜುಳಾ (39), ಮಕ್ಕಳಾದ ಅರ್ಚನಾ (19) ಸ್ವಾತಿ (17) ಸಾವನ್ನಪ್ಪಿದ್ದಾರೆ. ಸೋಮವಾರ ಕಡೂರಿನಲ್ಲಿ ಸಂಬಂಧಿಕರ ಮದುವೆ ಮುಗಿಸಿ ವಾಪಸ್ ಮನೆಗೆ ಬಂದಿದ್ದರು. ಸೋಮವಾರ ರಾತ್ರಿ ಮನೆಯಲ್ಲಿ ಮಲಗಿದ್ದರು. ಬುಧವಾರ ಬೆಳಗಿನ ಜಾವ ಆದರೂ ಎದ್ದಿರಲಿಲ್ಲ. ಅನುಮಾನಗೊಂಡ ಸ್ಥಳೀಯರು ಬಾಗಿಲು ಬಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ನಾಲ್ವರ ಬಲಿ ಪಡೆಯಿತಾ ಗಾಳಿ ಬೆಳಕು ಇಲ್ಲದ ಮನೆ?

ಮೃತಪಟ್ಟ ಕುಮಾರಸ್ವಾಮಿ ಕುಟುಂಬ ಎರಗನಹಳ್ಳಿ ಗ್ರಾಮದಲ್ಲಿ ಕಳೆದ ಮೂವತ್ತು ವರ್ಷಗಳಿಂದ ವಾಸವಿದೆ. 10×30 ಅಡಿ ಅಳತೆಯ ಪುಟ್ಟ ಮನೆಯಲ್ಲಿ ನಾಲ್ವರ ಕುಟುಂಬ ವಾಸವಿತ್ತು. ಮನೆಯ ಹಿಂಭಾಗ ಹಾಗೂ ಮುಂಭಾಗ ಮಾತ್ರ ಕಿಟಕಿ ವ್ಯವಸ್ಥೆಯಿದೆ. ಮನೆಯ ಯಜಮಾನ ಕುಮಾರಸ್ವಾಮಿ ಇಸ್ತ್ರೀ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಬಟ್ಟೆ ಇಸ್ತ್ರಿ ಪೆಟ್ಟಿಗೆಗೆ ಗ್ಯಾಸ್ ಬಳಸುತ್ತಿದ್ದರು. ಇದಕ್ಕಾಗಿ ಹೆಚ್ಚುವರಿ ಗ್ಯಾಸ್‌ ಸಿಲಿಂಡರ್‌ ಇಟ್ಟುಕೊಂಡಿದ್ದರು. ಇದರಿಂದಲೇ ಅನಿಲ ಸೋರಿಕೆಯಾಗಿದೆ.

ಸೋಮವಾರ ರಾತ್ರಿ ಮನೆಗೆ ಬಂದವರು ಎರಡು ಕಿಟಕಿ ಬಂದ್ ಮಾಡಿಕೊಂಡು ಮಲಗಿದ್ದರು. ರೂಂನಲ್ಲಿ ಗಂಡ ಹೆಂಡತಿ, ಹಾಲ್‌ನಲ್ಲಿ ಮಕ್ಕಳಿಬ್ಬರು ಮಲಗಿದ್ದರು. ಈ ವೇಳೆ ಸೋರಿಕೆಯಾದ ಅನಿಲ ಸೇವಿಸಿ ಎಲ್ಲರೂ ಮೃತಪಟ್ಟಿದ್ದಾರೆ. ಅವರಲ್ಲಿ ಒಬ್ಬ ಮಗಳಿಂದ ಬಾಗಿಲು ತೆಗೆಯುವ ವಿಫಲ ಯತ್ನ ನಡೆದಿದೆ. ಎಲ್ಲರ ಕಿವಿ ಮತ್ತು ಮೂಗು ಬಾಯಲ್ಲಿ ರಕ್ತ ಸೋರಿದೆ. ಅಂತಿಮವಾಗಿ ಕುಟುಂಬ ದುರಂತ ಅಂತ್ಯ ಕಂಡಿದೆ.

” ಮೊಬೈಲ್‌ ಕಾಲ್‌ ರಿಸೀವ್‌ ಮಾಡದ್ದರಿಂದ ಅನುಮಾನಪಟ್ಟ ಸಂಬಂಧಿಕರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಿಯರು ಪರಿಶೀಲಿಸಿ ನಮಗೆ ಮಾಹಿತಿ ನೀಡಿದರು. ನಾವು ಬಂದಾಗ ಗ್ಯಾಸ್ ವಾಸನೆ ಬರುತ್ತಿತ್ತು. ಮನೆಯ ಹಿಂದಿನ ಕಿಟಕಿ ತೆರೆದು ನೋಡಿದಾಗಲೂ ಸ್ಮೆಲ್ ಬರ್ತಿತ್ತು. ಫೈರ್ ಡಿಪಾರ್ಟ್ಮೆಂಟ್, ಎಫ್ಎಸ್ಐಲ್ ಬಂದು ಡೋರ್ ಒಪನ್ ಮಾಡಿದೆವು. ಮನೆಯಲ್ಲಿ ಮೂರು ಸಿಲಿಂಡರ್ ಇದೆ. ಗ್ಯಾಸ್‌ ಬಳಸಿ ಐರನ್ ಮಾಡ್ತಿದ್ದರು. ಮೇಲ್ನೋಟಕ್ಕೆ ಒಂದು ಸಿಲಿಂಡರ್ ಮಾತ್ರ ಲೀಕ್ ಆಗಿದೆ. ಉಳಿದ ಎರಡು ಸಿಲಿಂಡರ್ ಖಾಲಿ ಇತ್ತು” ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದ್ದಾರೆ.

ಇದನ್ನೂ ಓದಿ: Road Accident: ಬೆಂಗಳೂರು, ಗದಗದಲ್ಲಿ ಸರಣಿ ಅಪಘಾತ; ಗ್ಯಾಸ್ ಟ್ಯಾಂಕರ್ ಸ್ಫೋಟಕ್ಕೆ ಮನೆಗಳೇ ಭಸ್ಮ

Exit mobile version