Site icon Vistara News

Gauri Lankesh Murder: ಗೌರಿ ಲಂಕೇಶ್‌ ಹತ್ಯೆ ಪ್ರಕರಣದ 3 ಆರೋಪಿಗಳಿಗೆ ಜಾಮೀನು

Gauri Lankesh murder

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ (Journalist Gauri Lankesh) ಪ್ರಕರಣದ ಮೂವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ (Karnataka High Court) ಮಂಗಳವಾರ ಜಾಮೀನು (Bail) ಮಂಜೂರು ಮಾಡಿದೆ. ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಅಮಿತ್‌ ದಿಗ್ವೇಕರ್‌ ಅಲಿಯಾಸ್‌ ಅಮಿತ್‌ ಅಲಿಯಾಸ್‌ ಪ್ರದೀಪ್‌ ಮಹಾಜನ್‌, ಏಳನೇ ಆರೋಪಿ ಸುರೇಶ್‌ ಎಚ್‌.ಎಲ್‌ ಅಲಿಯಾಸ್‌ ಟೀಚರ್‌ ಮತ್ತು 17ನೇ ಆರೋಪಿ ಕೆ.ಟಿ ನವೀನ್‌ ಕುಮಾರ್‌ ಅಲಿಯಾಸ್‌ ನವೀನ್‌ಗೆ ಜಾಮೀನು ದೊರೆತಿದೆ.

ಇವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಕಲಬುರ್ಗಿ ಪೀಠದ ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ಕಳೆದ 6 ವರ್ಷಗಳಿಂದ ಆರೋಪಿಗಳು ಜೈಲಿನಲ್ಲಿದ್ದಾರೆ. ವಿಚಾರಣೆ ಮುಗಿಯದೇ ದೀರ್ಘ ಕಾಲ‌ ಜೈಲಿನಲ್ಲಿಡುವಂತಿಲ್ಲವೆಂದು ತೀರ್ಪು ಇದೆ. ಹೀಗಾಗಿ ಷರತ್ತುಬದ್ಧ ಜಾಮೀನು ನೀಡಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಆರೋಪಿಗಳ ಪರ ನ್ಯಾಯವಾದಿಗಳಾದ ಅರುಣ್ ಶ್ಯಾಮ್, ಮಧುಕರ್ ದೇಶಪಾಂಡೆ, ಬಸವರಾಜ ಸಪ್ಪಣ್ಣವರ್ ವಾದಿಸಿದ್ದರು.

11ನೇ ಆರೋಪಿ ಮೋಹನ್‌ ನಾಯಕ್‌ಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿರುವುದನ್ನು ಪರಿಗಣಿಸಿ ತಮಗೂ ಜಾಮೀನು ಮಂಜೂರು ಮಾಡಬೇಕು ಎಂಬುದು ಎಲ್ಲಾ ಅರ್ಜಿದಾರರ ವಾದವಾಗಿತ್ತು. ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಪ್ರಾಸಿಕ್ಯೂಷನ್‌ “ಮೋಹನ್‌ ನಾಯಕ್‌ ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್‌ನ ಬೇರೊಂದು ಪೀಠವು ತಿರಸ್ಕರಿಸಿದ್ದು, ಕೊಲೆ, ಪಿತೂರಿಯಂಥ ಗಂಭೀರ ಆರೋಪಗಳಿರುವಾಗ ಜಾಮೀನು ನೀಡಲಾಗದು ಎಂದಿದೆ. ಇಡೀ ಪ್ರಕರಣದಲ್ಲಿ ಜಾಮೀನು ಪಡೆದಿರುವ ಏಕೈಕ ಮತ್ತು ಮೊದಲ ಆರೋಪಿ ಮೋಹನ್‌ ನಾಯಕ್‌. ಆತನ ಜಾಮೀನು ಆದೇಶವನ್ನು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಅದು ವಿಚಾರಣೆಗೆ ಬಾಕಿಯಿದೆ” ಎಂದಿತ್ತು.

ಸಂಚಲನ ಮೂಡಿಸಿದ್ದ ಗೌರಿ ಕೊಲೆ

ಲಂಕೇಶ್‌ ಪತ್ರಿಕೆಯ ಸಂಪಾದಕರಾಗಿದ್ದ ಗೌರಿ ಲಂಕೇಶ್‌ ಅವರನ್ನು 2017ರ ಸೆಪ್ಟೆಂಬರ್‌ 5ರಂದು ಕೆಲಸ ಮುಗಿಸಿ ಮನೆಗೆ ಮರಳಿದ ವೇಳೆ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಹತ್ಯೆಯ ಸಂಚು ರೂಪಿಸಿದ ಪ್ರಮುಖ ರೂವಾರಿ ಎಂದು ಅಮೋಲ್ ಕಾಳೆ ಮೇಲೆ ಆರೋಪವಿದ್ದರೆ, ಗುಂಡು ಹಾರಿಸಿದ ಆರೋಪ ಪರಶುರಾಮ್ ವಾಗ್ಮೋರೆ ಮೇಲೆ ಹಾಗೂ ಆತನನ್ನು ಕೂರಿಸಿಕೊಂಡು ಬೈಕ್ ಚಲಾಯಿಸಿ ತಪ್ಪಿಸಿಕೊಳ್ಳಲು ನೆರವಾದ ಆರೋಪ ಗಣೇಶ್ ಮಿಸ್ಕಿನ್ ಮೇಲೆ ಇದೆ.

ಅಮೋಲ್ ಕಾಳೆ, ಪರಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ಬಾಡ್, ಅಮಿತ್ ದೆಗ್ವೇಕರ್, ಭರತ್ ಕುರಣೆ, ಸುರೇಶ್ ಹೆಚ್ ಎಲ್, ರಾಜೇಶ್ ಬಂಗೇರ, ಸುಧನ್ವ ಗೊಂದಲೇಕರ್, ಶರದ್ ಕಾಲಸ್ಕರ್, ಮೋಹನ್ ನಾಯಕ್, ವಾಸುದೇವ್ ಸೂರ್ಯವಂಶಿ, ಸುಜಿತ್ ಕುಮಾರ್, ಮನೋಹರ ಎಡವೆ, ವಿಕಾಸ್‌ ಪಾಟೀಲ್‌, ಶ್ರೀಕಾಂತ್ ಪಂಗರ್ಕರ್, ಕೆ ಟಿ ನವೀನ್ ಕುಮಾರ್ ಮತ್ತು ಹೃಶಿಕೇಶ್ ದಿಯೋದಿಕರ್‌ ಪ್ರಕರಣದ ಆರೋಪಿಗಳಾಗಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 302, 120ಬಿ, 114, 118, 109, 201, 203, 204 ಮತ್ತು 35, ಸಶಸ್ತ್ರ ಕಾಯಿದೆಯ ಸೆಕ್ಷನ್‌ಗಳಾದ 25(1), 25(1B), 27(1) ಮತ್ತು ಕೋಕಾ ಕಾಯಿದೆಯ ಸೆಕ್ಷನ್‌ಗಳಾದ 3(1)(I), 3(2), 3(3), 3(4) ಅಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: Kalaburagi News : ಕಲಬುರಗಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ನದಿಗೆ ಹಾರಿ ಯುವಕ-ಯುವತಿ ಆತ್ಮಹತ್ಯೆ

Exit mobile version