Site icon Vistara News

Gay Husband : ಹುಡುಗಿಯರು ಇನ್ನು ಮದುವೆ ಗಂಡಿಗೆ ಪರಪುರುಷರ ಸಂಪರ್ಕ ಇದ್ಯಾ ಅಂತಾನೂ ಚೆಕ್‌ ಮಾಡ್ಕೊಬೇಕು!

gay husband

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಮದುವೆಗೆ (Girls Marriage) ಮುನ್ನ ಗಂಡಿಗೆ ಮೊದಲು ಬೇರೆ ಲವ್‌ ಆಗಿತ್ತಾ? ಬೇರೆ ಹುಡುಗಿಯರ ಜತೆ ಫ್ಲರ್ಟ್‌ (Flirting with Girls) ಮಾಡ್ತಿದ್ನಾ? ಆತನ ಸೋಷಿಯಲ್‌ ಮೀಡಿಯಾ ಪ್ರೊಫೈಲ್‌ಗಳು (Social Media Profile) ಹೇಗಿವೆ ಎಂದೆಲ್ಲ ಸೀಕ್ರೆಟ್‌ ಆಗಿ ಚೆಕ್‌ ಮಾಡುತ್ತಿದ್ದರು. ಈಗ ಚೆಕಿಂಗ್‌ ಪಾಯಿಂಟ್ಸ್‌ಗೆ ಇನ್ನೊಂದು ಅಂಶವನ್ನೂ ಸೇರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಅದೇನೆಂದರೆ ಮದುವೆಯಾಗಲು ಬಂದಿರುವ ಹುಡುಗನಿಗೆ ʻಪರ ಪುರುಷರ ಸಂಪರ್ಕʼ ಇದೆಯಾ! (Gay Husband) ಎನ್ನುವುದು.

ಇತ್ತೀಚೆಗೆ ಕಂಡುಬಂದ ಕೆಲವೊಂದು ವಿದ್ಯಮಾನಗಳಲ್ಲಿ ಮದುವೆಯಾದ ಗಂಡನಿಗೆ ಪತ್ನಿಯ ಮೇಲೆ ಯಾವುದೇ ಆಕರ್ಷಣೆ ಇಲ್ಲದಿರುವುದು ಕಂಡುಬಂದಿದೆ. ಇದರಿಂದ ಹೆಣ್ಣಿನ ವೈವಾಹಿಕ ಜೀವನ ಕಷ್ಟಕ್ಕೆ ಸಿಲುಕಿರುವುದು ಕಂಡುಬಂದಿದೆ. ಅದೆಷ್ಟೋ ಮಂದಿ ಇದನ್ನು ಮೌನವಾಗಿಯೇ ಸಹಿಸಿಕೊಂಡಿದ್ದು, ಕೆಲವರು ಮಾತ್ರ ಮೋಸವಾಗಿದ್ದನ್ನು ಪ್ರತಿಭಟಿಸಿದ್ದಾರೆ.

ಇದೀಗ ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ತನ್ನ ಗಂಡನ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಮದುವೆಯಾಗಿ ಅದೆಷ್ಟೋ ತಿಂಗಳಾಗಿದ್ದರೂ ದಿನವೂ ಒಂದೊಂದು ಕಾರಣ ನೀಡಿ ಲೈಂಗಿಕ ಸಂರ್ಪಕವನ್ನು ಮುಂದೂಡುತ್ತಿದ್ದ ಗಂಡನ ಅಸಲಿ ಮುಖವನ್ನು ಆಕೆ ಪತ್ತೆ ಹಚ್ಚಿದ್ದಾಳೆ ಮತ್ತು ನೋಡಿ ಬೆಚ್ಚಿ ಬಿದ್ದಿದ್ದಾಳೆ.

ಅವನು ಸಲಿಂಗಕಾಮಿಯಾಗಿದ್ದು, ಹೆಣ್ಮಕ್ಕಳ ಬಗ್ಗೆ ಅವನಿಗೆ ಎಳ್ಳಷ್ಟೂ ಆಸಕ್ತಿ ಇಲ್ಲ. ಕೇವಲ ಪುರುಷರು ಮಾತ್ರ ಅವನ ಆಕರ್ಷಣೆಯ ಕೇಂದ್ರಬಿಂದು ಎನ್ನುವುದನ್ನು ಕಂಡುಕೊಂಡ ಆಕೆ ಈಗ ತನ್ನ ಸಲಿಂಗಿ ಗಂಡನ ವಿರುದ್ದ ಜ್ಞಾನ ಭಾರತಿ ಪೊಲೀಸ್‌ ಠಾಣೆ ಮೆಟ್ಟಿಲು ಏರಿದ್ದಾರೆ.

ಏನಿದು ಸಲಿಂಗಿಯ ಮದುವೆ ಕಥೆ?

ಅವಳು ವೃತ್ತಿಯಲ್ಲಿ ಎಂಜಿನಿಯರ್‌. ಬದುಕಿನಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ಕಂಡಿದ್ದಳು. ಕೆಲವು ವರ್ಷಗಳ ಹಿಂದೆ ಅವಳಿಗೆ ಮದುವೆಯಾಗಿತ್ತು. ಹುಡುಗನೂ ಒಳ್ಳೆಯ ಕೆಲಸದಲ್ಲಿದ್ದ. ಆತನ ತುಂಬ ಪ್ರಬುದ್ಧ ಮತ್ತು ನಯವಾದ ವರ್ತನೆಗಳು ಆಕೆಗೂ ಇಷ್ಟವಾಗಿದ್ದ. ಆದರೆ, ದಿನ ಕಳೆದಂತೆ ಆತ ಯಾಕೋ ಮದುವೆಯ ನಂತರ ನಡೆಯಬೇಕಾದ ಯಾವ ಚಟುವಟಿಕೆಗಳಿಗೂ ಆತ ಆಸಕ್ತನಾಗಿಲ್ಲ ಎನ್ನುವ ಸಂಗತಿ ಆಕೆಯ ಅರಿವಿಗೆ ಬಂತು. ಮೊದಲ ರಾತ್ರಿ ಬಿಡಿ, ಎಷ್ಟು ರಾತ್ರಿ ಕಳೆದರೂ ಫಸ್ಟ್‌ ನೈಟ್‌ ನಡೆಯಲೇ ಇಲ್ಲ.

ಆತ ದಿನಕ್ಕೊಂದು ಕಾರಣ ಹೇಳುತ್ತಾ ರಾತ್ರಿ ಆಕೆಯಿಂದ ದೂರ ಉಳಿಯಲು ಯತ್ನಿಸುತ್ತಿದ್ದ. ಈ ನಡುವೆ ಕುಟುಂಬಿಕರಲ್ಲಿ ಈ ಸಂಗತಿಯ ಬಗ್ಗೆ ಸಣ್ಣದಾಗಿ ಪ್ರಸ್ತಾಪಿಸಿದಾಗ ಅದಕ್ಕೆ ಅವಸರ ಮಾಡಬೇಡ, ಅವನ ಅಣ್ಣನಿಗೆ ಮಕ್ಕಳಾಗಿಲ್ಲ. ಅವನಿಗೆ ಆಗಲಿ, ನಿಮಗೆ ನಂತರ ಆದರೆ ಸಾಕು ಎಂದಿದ್ದರು. ಆದರೆ ಅವಳ ಸಮಸ್ಯೆ ಮಕ್ಕಳಾಗುವುದಕ್ಕೆ ಸಂಬಂಧಿಸಿದ್ದಾಗಿರಲಿಲ್ಲ. ಬದಲಾಗಿ ಗಂಡು-ಹೆಣ್ಣಿನ ನಡುವೆ ನಡೆಯುವ ಸಹಜ ಚಟುವಟಿಕೆಗಳೂ ನಡೆಯುತ್ತಿಲ್ಲವಲ್ಲ, ಹಾಗಿದ್ದರೆ ಮದುವೆ ಆಗಿದ್ದು ಯಾಕೆ ಎನ್ನುವುದು ಆಕೆಯ ಚಿಂತೆಯಾಗಿತ್ತು.

ಅವನು ಮಕ್ಕಳ ಬಗ್ಗೆ ಮಾತನಾಡಿದಾಗಲೂ ಪಲಾಯನ ಮಾಡುತ್ತಿದ್ದ. ಏನೇನೋ ಕಾರಣಗಳನ್ನು ನಯವಾಗಿ ಹೇಳುತ್ತಿದ್ದ. ಯಾಕೆ ಹೀಗೆ ಎಂದು ಯೋಚಿಸುತಿದ್ದವಳು ಒಂದು ದಿನ ಅವನ ಮೊಬೈಲನ್ನು ಪರೀಕ್ಷಿಸಿದಳು. ಆಗ ಅವಳಿಗೆ ಬೆಚ್ಚಿ ಬೀಳುವ ಸಂಗತಿಯೊಂದು ತಿಳಿದುಬಂತು. ಅದೇನೆಂದರೆ ಅವನಿಗೆ ಹುಡುಗಿಯರ ಮೇಲೆ ಆಸಕ್ತಿಯೇ ಇಲ್ಲ. ಅವನ ಆಸಕ್ತಿ ಏನಿದ್ದರೂ ಹುಡುಗರು. ಅವನೊಬ್ಬ ಪುರುಷ ಸಲಿಂಗಿಯಾಗಿದ್ದ!

ಆತನ ಮೊಬೈಲ್‌ ವಾಟ್ಸ್‌ ಆಪ್‌, ಮೆಸೇಂಜರ್‌ಗಳನ್ನು ನೋಡಿದಾಗ ಆತ ಬೇರೆ ಬೇರೆ ಹುಡುಗರ ಜತೆ ನಡೆಸಿದ ಸೆಕ್ಸ್‌ ಚಾಟ್‌ಗಳು ಕಂಡುಬಂದವು. ಜತೆಗೆ ವಾಟ್ಸ್‌ ಆಪ್‌ನಲ್ಲಿ ಆತ ಗಂಡ-ಹೆಂಡತಿ ಆಲಿಂಗಿಸಿಕೊಳ್ಳುವಂತೆ ಬೇರೆ ಹುಡುಗನನ್ನು ಆಲಿಂಗಿಸಿಕೊಂಡಿದ್ದು ಕಂಡುಬಂದಿದೆ. ಮಾತ್ರವಲ್ಲ ಲೈಂಗಿಕ ಚಟುವಟಿಕೆ ನಡೆಸುವ ಚಿತ್ರಗಳು, ವಿಡಿಯೋಗಳೂ ಇದ್ದವು.

ಇದನ್ನೆಲ್ಲ ಗಮನಿಸಿ ಪ್ರಶ್ನಿಸಿದಾಗ ಅದುವರೆಗೆ ನಯವಾಗಿ ಮಾತನಾಡುತ್ತಿದ್ದ ಆತ ಒಮ್ಮಿಂದೊಮ್ಮೆಗೇ ಕೆರಳಿದ. ಅವಳ ಮೇಲೆ ಹಲ್ಲೆ ನಡೆಸಿದ. ಇದಾದ ಬಳಿಕ ಯುವತಿ ಮತ್ತೊಮ್ಮೆ ತನ್ನ ಮನೆಯವರಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾಳೆ. ಆಗಲೂ ಅವರು ಹೊಂದಿಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ. ಅದೆಷ್ಟೋ ಗಂಡು ಮಕ್ಕಳಿಗೆ ಕೆಟ್ಟ ಹೆಂಗಸರ ಸಂಗ ಇರುತ್ತದೆ. ಆದರೆ, ಇವನು ಹಾಗಲ್ಲವಲ್ಲ ಎಂದು ಹೇಳುವ ಮೂಲಕ ಆಕೆಯನ್ನೇ ಸಮಾಧಾನ ಮಾಡಿದ್ದರು.

ಇದೆಲ್ಲದರ ನಡುವೆ ಆಕೆಗೆ ಈ ವ್ಯಕ್ತಿ ಸಲಿಂಗಿ ಎನ್ನುವುದು ಗೊತ್ತಿದ್ದೇ ಗಂಡನ ಮನೆಯವರು ಮದುವೆ ಮಾಡಿದ್ದಾರೆ ಎನ್ನುವ ಸತ್ಯ ತಿಳಿದು ಇನ್ನಷ್ಟು ಆಕ್ರೋಶ ಉಕ್ಕಿತು. ಅವರು ಮದುವೆಯಾದ ಮೇಲೆ ಮಗ ಸರಿ ಹೋದಾನು ಎಂದು ಮದುವೆ ಮಾಡಿಸಿದ್ದರು. 160 ಗ್ರಾಂ ಚಿನ್ನ ಮತ್ತು ನಗದನ್ನು ಹುಡುಗಿ ಕಡೆಯವರು ನೀಡಿದ್ದರು.

ಇದೀಗ ಯುವತಿ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾರೆ. ಗಂಡ ಮತ್ತು ಮನೆಯವರ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Exit mobile version