Site icon Vistara News

Girl student attacked : ಕಾಲೇಜು ಕ್ಯಾಂಪಸ್‌ನಲ್ಲೇ ವಿದ್ಯಾರ್ಥಿನಿಗೆ ಚೂರಿ; ಕಾರಿನಲ್ಲಿ ಬಂದ ಪಾಗಲ್‌ ಪ್ರೇಮಿ ದುಷ್ಕೃತ್ಯ, ಯುವತಿ ಗಂಭೀರ

Girl student attacked

ರಾಮನಗರ: ಸೋಮವಾರ ಮುಂಜಾನೆ ತನ್ನ ಪಾಡಿಗೆ ತಾನು ಕಾಲೇಜಿಗೆ ಹೋಗುತ್ತಿದ್ದ ಯುವತಿಯೊಬ್ಬಳನ್ನು ಕಾಲೇಜಿನ ಆವರಣದಲ್ಲೇ ದುಷ್ಕರ್ಮಿಯೊಬ್ಬ ಚೂರಿಯಿಂದ ಇರಿದು (Girl student attacked) ಬಳಿಕ ಆಕೆಯನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ ಸಿನಿಮೀಯ ಘಟನೆ ರಾಮನಗರದಲ್ಲಿ ನಡೆದಿದೆ. ರಾಮನಗರದ ಮಹಿಳಾ ಪಿಯು ಕಾಲೇಜಿನಲ್ಲಿ (Ramanagara Womens PU College) ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ (Second PU student) ಸಂಜನಾಳ ಮೇಲೆ ಈ ದಾಳಿ ನಡೆದಿದೆ. ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಪೈಕಿ ಒಬ್ಬಾತ ಕಾರಿನಿಂದ ಕೆಳಗಿಳಿದು ಆಕೆಗೆ ಚೂರಿಯಿಂದ ಇರಿದುದಲ್ಲದೆ ಬಳಿಕ ಆಕೆಯನ್ನು ಕಾರಿನಲ್ಲಿ ಎತ್ತಾಕಿಕೊಂಡು ಪರಾರಿಯಾಗಿದ್ದಾನೆ. ಇದೇ ದುಷ್ಕರ್ಮಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿಂದ ಪರಾರಿಯಾಗುವ ಪ್ರಯತ್ನದಲ್ಲಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹೀಗೆ ಚೂರಿಯಿಂದ ಇರಿದ ದುಷ್ಟನನ್ನು ಡಿ.ಎನ್‌ ಚೇತನ್‌ ಎಂದು ಗುರುತಿಸಲಾಗಿದ್ದು, ಆತನ ಒಬ್ಬ ಪಾಗಲ್‌ ಪ್ರೇಮಿ ಎನ್ನಲಾಗಿದೆ. ಈತ ಕನಕಪುರದ ದಾಳಿಂಬ ಗ್ರಾಮದವನು.

ಏನಿದು ಭಯಾನಕ ಘಟನೆ?

ವಿದ್ಯಾರ್ಥಿನಿ ಸಂಜನಾ ಕನಕಪುರದ ದಾಳಿಂಬ ಗ್ರಾಮದ ಕುಮಾರ್ ಮತ್ತು ಕನ್ಯಾ ಅವರ ಪುತ್ರಿಯಾಗಿದ್ದಾಳೆ. ಎಂದಿನಂತೆ ಆಕೆ ಬೆಳಗ್ಗೆ 9.15ರ ಸುಮಾರಿಗೆ ಸಹಪಾಠಿಗಳ ಜತೆ ಕಾಲೇಜಿಗೆ ಆಗಮಿಸಿದ್ದಳು.

ದುಷ್ಕರ್ಮಿ ಬಳಸಿದ ಕಾರು

ಆಕೆ ಕಾಲೇಜಿನ ಆವರಣಕ್ಕೆ ಎಂಟ್ರಿ ಪಡೆಯುತ್ತಿದ್ದಂತೆಯೇ ಒಂದು ಇನ್ನೋವಾ ಕಾರು ಅಲ್ಲಿಗೆ ಎಂಟ್ರಿ ಕೊಟ್ಟಿದೆ. ಇನ್ನೋವಾ ಕಾರಿನಲ್ಲಿ ಬಂದ ತಂಡದಲ್ಲಿದ್ದ ಒಬ್ಬ ಯುವಕ ಕಾರಿನಿಂದ ಇಳಿದು ಸಂಜನಾಗೆ ಚಾಕುವಿನಿಂದ ಇರಿದಿದ್ದಾನೆ. ಸಂಜನಾ ಚೂರಿ ಇರಿತಕ್ಕೆ ತತ್ತರಿಸಿ ಕೆಳಗೆ ಬೀಳುತ್ತಿದ್ದಂತೆಯೇ ಯುವಕ ಆಕೆಯನ್ನು ನೇರವಾಗಿ ಕಾರಿಗೆ ಎತ್ತಾಕಿಕೊಂಡಿದ್ದಾನೆ. ಕಾರು ಅಲ್ಲಿಂದ ಪರಾರಿಯಾಗಿದೆ.

ಈ ನಡುವೆ ಚೂರಿ ಇರಿತ ಮತ್ತು ಅಪಹರಣದ ಘಟನೆಯಿಂದ ಕಾಲೇಜು ಆವರಣ ಬೆಚ್ಚಿ ಬಿದ್ದಿದೆ. ಸ್ಥಳದಲ್ಲಿದ್ದ ಕೆಲವರು ಕಾರಿನತ್ತ ಕಲ್ಲು ತೂರಿದ್ದಾರೆ. ಆದರೂ ದುಷ್ಕರ್ಮಿಗಳು ಕಾರು ನಿಲ್ಲಿಸದೆ ಪರಾರಿಯಾಗಿದ್ದಾರೆ. ಕೂಡಲೇ ಕಾಲೇಜಿನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಗೆ ಸೇರಿಸಿದ ಚೇತನ್‌ ಎಂಡ್‌ ಟೀಮ್‌

ಈ ನಡುವೆ ಭುಜ ಮತ್ತು ಕತ್ತಿನ ಭಾಗಕ್ಕೆ ಚೂರಿಯಿಂದ ಇರಿಯಲ್ಪಟ್ಟು ರಕ್ತ ಸ್ರಾವಕ್ಕೆ ಒಳಗಾದ ವಿದ್ಯಾರ್ಥಿನಿಯನ್ನು ಕಾರಿನಲ್ಲೇ ಎತ್ತಾಕಿಕೊಂಡು ಹೋದ ತಂಡ ಆಕೆಯನ್ನು ರಾಮನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದೆ.

ಕನಕಪುರದ ದಾಳಿಂಬ ಗ್ರಾಮದ ಯುವಕನಾಗಿರುವ ಚೇತನ್‌ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಅಲ್ಲಿಂದಲೂ ಪರಾರಿಯಾಗಲು ಸಜ್ಜಾಗುತ್ತಿದ್ದಾಗ ಪೊಲೀಸರು ಅಲ್ಲಿಗೆ ಧಾವಿಸಿ ವಶಕ್ಕೆ ಪಡೆದಿದ್ದಾರೆ.

ಪಾಗಲ್‌ ಪ್ರೇಮಿ ಡಿ.ಎನ್‌ ಚೇತನ್‌

ಚೂರಿಯಿಂದ ಇರಿದಿರುವ ಆರೋಪಿ ಡಿ.ಎನ್‌. ಚೇತನ್‌ ಒಬ್ಬ ಪಾಗಲ್‌ ಪ್ರೇಮಿ ಎಂದು ತಿಳಿದುಬಂದಿದೆ. ಆತ ಕಾರು ಚಾಲಕನಾಗಿದ್ದು ಸಂಜನಾಳ ಹಿಂದೆ ಬಿದ್ದಿದ್ದಾನೆ. ಸಂಜನಾಳನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಆತ ಆಕೆ ಒಪ್ಪದೆ ಇದ್ದಾಗ ಈ ರೀತಿಯ ಕೃತ್ಯಕ್ಕೆ ಮುಂದಾಗಿದ್ದಾನೆ ಎನ್ನಲಾಗಿದೆ.

ಯುವತಿಯ ಸ್ಥಿತಿ ಇನ್ನೂ ಗಂಭೀರ

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಎಸ್‌ಪಿ ಕಾರ್ತಿಕ್‌ ರೆಡ್ಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಯುವತಿಯ ಆರೋಗ್ಯ ವಿಚಾರಿಸಿದ್ದಾರೆ. ರಾಮನಗರದ ಐಜೂರು ಠಾಣೆಯಲ್ಲಿ ಆರೋಪಿ ಚೇತನ್ ನನ್ನು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯನ್ನು ಖುದ್ದು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ವಿಚಾರಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ : Murder Case: ಸ್ನೇಹಿತನೊಂದಿಗೆ ರೀಲ್ಸ್‌; ಮದುವೆ ಬೇಡ ಎಂದವಳ ಸುಟ್ಟು ಹಾಕಿದ ಪಾಗಲ್‌ ಪ್ರೇಮಿ

Exit mobile version