Site icon Vistara News

Gokulraj Murder | ಮರ್ಯಾದಾ ಹತ್ಯೆ, ಸಂತ್ರಸ್ತ ಜೀವಂತವಾಗಿ ಕಂಡಿದ್ದ ಸ್ಥಳಕ್ಕೇ ಭೇಟಿ ನೀಡಲು ಜಡ್ಜ್‌ಗಳ ತೀರ್ಮಾನ, ಇದು ಅಪರೂಪ

Gokulraj Murder Case

ಚೆನ್ನೈ: ತಮಿಳುನಾಡಿನ ನಾಮಕ್ಕಲ್‌ ಜಿಲ್ಲೆಯಲ್ಲಿ 2015ರಲ್ಲಿ ನಡೆದ ಎಂಜಿನಿಯರಿಂಗ್‌ ವಿದ್ಯಾರ್ಥಿ ಗೋಕುಲ್‌ ರಾಜ್‌ ಹತ್ಯೆ (Gokulraj Murder) ಪ್ರಕರಣದ ಅರ್ಜಿ ವಿಚಾರಣೆ ನಡೆಸುತ್ತಿರುವ ಮದ್ರಾಸ್‌ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು ಗೋಕುಲ್‌ ರಾಜ್‌ ಕೊನೆಯ ಬಾರಿ ಜೀವಂತವಾಗಿ ಕಂಡ ದೇವಸ್ಥಾನಕ್ಕೆ ಭೇಟಿ ನೀಡಲು ತೀರ್ಮಾನಿಸಿದ್ದಾರೆ. ತಮಿಳುನಾಡಿನಾದ್ಯಂತ ಸುದ್ದಿಯಾಗಿದ್ದ ಪ್ರಕರಣದಲ್ಲಿ ಸ್ಥಳ ವಿವರಣೆ (Topography) ಪಡೆಯಲು ಖುದ್ದು ನ್ಯಾಯಮೂರ್ತಿಗಳೇ ಜನವರಿ 22ರಂದು ಸ್ಥಳಕ್ಕೆ ತೆರಳುತ್ತಿರುವುದು ಅಪರೂಪವಾಗಿದೆ.

2015ರ ಜೂನ್‌ನಲ್ಲಿ ನಾಮಕ್ಕಲ್‌ ಜಿಲ್ಲೆಯ ತಿರುಚೆಂಗೋಡ್‌ನಲ್ಲಿ ದಲಿತ ವಿದ್ಯಾರ್ಥಿ ಗೋಕುಲ್‌ ರಾಜ್‌ ಅವರ ರುಂಡವಿಲ್ಲದ ದೇಹವು ರೈಲು ಹಳಿ ಪಕ್ಕ ಪತ್ತೆಯಾಗಿತ್ತು. ಗೌಂಡೆರ್‌ ಸಮುದಾಯದ ಯುವತಿ ಜತೆ ಗೋಕುಲ್‌ ರಾಜ್‌ ಅರ್ಧನಾರೀಶ್ವರ ದೇವಾಲಯಕ್ಕೆ ತೆರಳಿದ ಹಿನ್ನೆಲೆಯಲ್ಲಿ ಮೇಲ್ಜಾತಿಯವರು ವಿದ್ಯಾರ್ಥಿಯನ್ನು ಹತ್ಯೆ ಮಾಡಿದ ಪ್ರಕರಣ ಇದಾಗಿದೆ. ಈಗಾಗಲೇ ಪ್ರಕರಣದಲ್ಲಿ ಮುಖ್ಯ ಆರೋಪಿ ಯುವರಾಜ್‌ ಹಲವರಿಗೆ ಅಧೀನ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.

ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿಗಳಾದ ಎಂ.ಎಸ್‌.ರಮೇಶ್‌ ಹಾಗೂ ಆನಂದ್‌ ವೆಂಕಟೇಶ್‌ ಅವರು ವಿಚಾರಣೆ ನಡೆಸುತ್ತಿದ್ದಾರೆ. ನ್ಯಾಯಮೂರ್ತಿಗಳು ಸ್ಥಳ ವಿವರಣೆ ಪಡೆಯಲು ಕೊನೆಯ ಬಾರಿ ಗೋಕುಲ್‌ ರಾಜ್‌ ಜೀವಂತವಾಗಿ ಕಂಡಿದ್ದ ಅರ್ಧನಾರೀಶ್ವರ ದೇವಾಲಯಕ್ಕೆ ಭಾನುವಾರ ಭೇಟಿ ನೀಡಲು ತೀರ್ಮಾನಿಸಿದ್ದಾರೆ. ನ್ಯಾಯಮೂರ್ತಿಗಳೇ ಹೀಗೆ ಸ್ಥಳ ವಿವರಣೆ ಪಡೆಯಲು ಭೇಟಿ ನೀಡುತ್ತಿರುವುದು ಅಪರೂಪವಾಗಿದೆ.

ಇದನ್ನೂ ಓದಿ | Lakhimpur Kheri violence | ಅಪರಾಧ ಸಾಬೀತಾಗದೇ ಆರೋಪಿಯನ್ನು ಅನಿರ್ದಿಷ್ಟಾವಧಿಗೆ ಜೈಲಿನಲ್ಲಿಡುವಂತಿಲ್ಲ: ಸುಪ್ರೀಂ ಕೋರ್ಟ್

Exit mobile version