Site icon Vistara News

ಅಮೆರಿಕದ ಟೆಕ್ಸಾಸ್‌ ಶಾಲೆಯಲ್ಲಿ 19 ಮಕ್ಕಳನ್ನು ಗುಂಡಿಕ್ಕಿ ಕೊಂದ ಯುವಕ

killings

ವಾಷಿಂಗ್ಟನ್:‌ ಅಮೆರಿಕದ ಟೆಕ್ಸಾಸ್‌ ಪ್ರಾಥಮಿಕ ಶಾಲೆಯಲ್ಲಿ ಬಂದೂಕುಧಾರಿಯೊಬ್ಬ 19 ಮಂದಿ ಶಾಲಾ ಮಕ್ಕಳು ಮತ್ತು ಒಬ್ಬ ಶಿಕ್ಷಕರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾನೆ.

ದಶಕದ ಬಳಿಕ ಶಾಲೆಯಲ್ಲಿ ಘೋರ ನರಮೇಧ ಅಮೆರಿಕದಲ್ಲಿ ಸಂಭವಿಸಿದಂತಾಗಿದೆ. 19 ಮಕ್ಕಳು ಹಾಗೂ ಒಬ್ಬ ಶಿಕ್ಷಕರು ಹತರಾಗಿದ್ದಾರೆ. ಟೆಕ್ಸಾಸ್‌ನ ರೋಬ್‌ ಎಲಿಮೆಂಟರಿ ಶಾಲೆಯಲ್ಲಿ ಈ ಭೀಕರ ಹತ್ಯಾಕಾಂಡ ನಡೆದಿದೆ. ಬಂದೂಕುಧಾರಿಯ ವಯಸ್ಸು 18 ವರ್ಷ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಆತ ಕೂಡ ಘಟನೆಯಲ್ಲಿ ಸಾವಿಗೀಡಾಗಿದ್ದಾನೆ. ಮಂಗಳವಾರ ಬೆಳಗ್ಗೆ 11.32 ರ ವೇಳೆಗೆ ಹತ್ಯಾಕಾಂಡ ನಡೆದಿದೆ. ಶಾಲೆಯಲ್ಲಿ 500 ಮಂದಿ ವಿದ್ಯಾರ್ಥಿಗಳಿದ್ದರು.

ಶಾಲೆಗೆ ನುಗ್ಗಿದ ಹಂತಕ ಎಆರ್‌ 15 ಸೆಮಿ-ಆಟೊಮ್ಯಾಟಿಕ್‌ ರೈಫಲ್‌ ಮೂಲಕ ಯದ್ವಾತದ್ವಾ ಮಕ್ಕಳ ಮೇಲೆ ಗುಂಡಿನ ಮಳೆಗೆರೆದಿದ್ದಾನೆ. ಈತ ತನ್ನ ಅಜ್ಜಿಯನ್ನೂ ಇದಕ್ಕೂ ಮುನ್ನ ಸಾಯಿಸಿದ್ದಾನೆ ಎನ್ನಲಾಗಿದೆ. ದಾಳಿಯ ಸುದ್ದಿ ಕೇಳಿದೊಡನೆ ಧಾವಿಸಿದ ಭದ್ರತಾ ಸಿಬ್ಬಂದಿ ಹಂತಕ ಯುವಕನಿಗೆ ಗುಂಡಿಕ್ಕಿದ್ದಾರೆ. ಗಾಯಗೊಂಡಿರುವ ಹತ್ತಕ್ಕೂ ಹೆಚ್ಚು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಈ ದುರ್ಘಟನೆಗೆ ಅಮೆರಿಕ ಬೆಚ್ಚಿಬಿದ್ದಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಮೂಡಿಸಿದೆ. ದುರ್ಘಟನೆ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ ಅಗತ್ಯ ನೆರವನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ರಾಷ್ಟ್ರವನ್ನು ಉದ್ದೇಶಿಸಿ ಬೈಡೆನ್‌ ಮಾತನಾಡಿದ್ದು, ಇಂಥ ಹತ್ಯಾಕಾಂಡಗಳು ನಡೆಯದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ನಾವು ಕಾರ್ಯಪ್ರವೃತ್ತರಾಗಬೇಕಾಗಿದೆ. ಮುಖ್ಯವಾಗಿ ಅಮೆರಿಕನ್ನರು ಬಂದೂಕು ಲಾಬಿಯ ವಿರುದ್ಧ ಸಂಘಟಿತರಾಗಿ ನಿಲ್ಲಬೇಕಾದ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಆಘಾತ ವ್ಯಕ್ತಪಡಿಸಿರುವ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಂಥ ಅಪರಾಧ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದಿದ್ದಾರೆ. ಅಮೆರಿಕದ ಶಾಲೆಗಳಲ್ಲಿ ಕಳೆದ ವರ್ಷ 26 ಗುಂಡಿನ ದಾಳಿ ಪ್ರಕರಣಗಳು ನಡೆದಿವೆ.

Exit mobile version