Site icon Vistara News

Life Threat : ಸಾಹಿತಿಗಳಿಗೆ ಬೆದರಿಕೆ ಒಡ್ಡಿ ಬರೆದಿದ್ದ ಪತ್ರಗಳ ಕೈ ಬರಹ ಒಂದೇ! ಪೋಸ್ಟ್‌ ಆಫೀಸ್‌ ಹಿಂದೆ ಬಿದ್ದ ಸಿಸಿಬಿ

Life Threat letters to writers

ಬೆಂಗಳೂರು: ಕರ್ನಾಟಕದ ಲೇಖಕರು, ಸಾಹಿತಿಗಳು ಸೇರಿ ಒಟ್ಟು 15ಕ್ಕೂ ಹೆಚ್ಚು ಹಿರಿಯ ಸಾಹಿತಿಗಳಿಗೆ ಜೀವ ಬೆದರಿಕೆ (Life Threat) ಹಾಕಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರ (CCB Police) ತನಿಖೆ ವೇಳೆ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಒಂದೇ ಕೈಬರಹದಲ್ಲಿ ಎಲ್ಲ ಪತ್ರಗಳನ್ನೂ ಬರೆಯಲಾಗಿದೆ ಎಂಬ ಅಂಶ ಗೊತ್ತಾಗಿದೆ. ಎಫ್ಎಸ್ಎಲ್ ವರದಿಯಲ್ಲಿ (FSL Report) ಈ ಸತ್ಯಾಂಶ ದೃಢವಾಗಿದೆ. ಈಗ ಸಿಸಿಬಿ ಪೊಲೀಸರು ಪೋಸ್ಟ್‌ ಆಫೀಸ್‌ (Post Office) ಹಿಂದೆ ಬಿದ್ದಿದ್ದಾರೆ.

ಬೆದರಿಕೆ ಪತ್ರಗಳನ್ನು ಸಿಸಿಬಿ ಎಫ್ಎಸ್ಎಲ್‌ಗೆ ರವಾನಿಸಿತ್ತು. ಈ ವೇಳೆ ಎಲ್ಲ ಬರಹಗಳು ಒಂದೇ ಕೈ ಬರಹದಲ್ಲಿ ಸಿದ್ಧವಾಗಿದೆ ಎಂಬ ವರದಿ ಸಿಕ್ಕಿದೆ. ಆದರೆ, ಪತ್ರ ಬರೆದವರು ಯಾರು ಎಂಬುದು ಮಾತ್ರ ಇನ್ನೂ ನಿಗೂಢ. ಪತ್ರ ಬರೆದವರ ಬಗ್ಗೆ ಇದುವರೆಗೂ ಯಾವುದೇ ರೀತಿಯ ಸುಳಿವು ಸಿಕ್ಕಿಲ್ಲ.

ಅಲ್ಲದೆ ಪ್ರತಿಯೊಬ್ಬರಿಗೂ ಬರೆಯಲಾದ ಪತ್ರಗಳನ್ನು ಬೇರೆ ಬೇರೆ ಪೋಸ್ಟ್ ಆಫೀಸ್‌ನಿಂದ ಸಾಹಿತಿಗಳಿಗೆ ರವಾನೆ ಮಾಡಲಾಗಿದೆ. ಈಗಾಗಲೇ ಪೋಸ್ಟ್ ಆಫೀಸ್‌ಗಳ ಸೀಲುಗಳನ್ನು ಸಿಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಜತೆಗೆ ಪತ್ರಗಳ ಪೋಸ್ಟ್ ಸಂಬಂಧ ಕೆಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ, ಇನ್ನೂ ಪತ್ರ ಬರೆದವರದ್ದಾಗಲೀ, ಆ ಪತ್ರವನ್ನು ತಂದು ಪೋಸ್ಟ್‌ ಮಾಡಿದವರಾಗಲೀ ಯಾರು ಎಂಬುದು ಗೊತ್ತಾಗಿಲ್ಲ. ಈ ಸಂಬಂಧ ಕೆಲವು ಅನುಮಾನಿತ ವ್ಯಕ್ತಿಗಳನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸಾಹಿತಿಗಳಿಗೆ ಬೆದರಿಕೆ ಹಾಕಿದ ಸಂಬಂಧ ಹಲವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪತ್ರದ ಮೂಲಕ ಬೆದರಿಕೆ ಹಾಕುತ್ತಿದ್ದ ದುಷ್ಕರ್ಮಿಗಳ ಪತ್ತೆ ಈಗ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಕುಂ. ವೀರಭದ್ರಪ್ಪ, ಬಿ.ಎಲ್. ವೇಣು, ಬಂಜಗೆರೆ ಜೈಪ್ರಕಾಶ್, ಬಿ.ಟಿ. ಲಲಿತಾ ನಾಯಕ್ ಸೇರಿದಂತೆ ಐದು ಜನ ಸಾಹಿತಿಗಳಿಂದ ದೂರು ನೀಡಲಾಗಿತ್ತು.

ಬಸವೇಶ್ವರನಗರ, ಸಂಜಯನಗರ, ಚಿತ್ರದುರ್ಗ ಸೇರಿದಂತೆ ಹಲವೆಡೆ ದೂರು ದಾಖಲಾಗಿತ್ತು. ಈ ಎಲ್ಲ ಪ್ರಕರಣದ ತನಿಖೆಯನ್ನು ಆಗಿನ ಬಿಜೆಪಿ ಸರ್ಕಾರ ಸಿಸಿಬಿಗೆ ವರ್ಗಾವಣೆ ಮಾಡಿ ಆದೇಶಿಸಿತ್ತು.

ಇದನ್ನೂ ಓದಿ: Chaitra Fraud Case : ಫೈರ್‌ ಬ್ರಾಂಡ್‌ ಭಾಷಣಕಾರ್ತಿ ಚೈತ್ರಾ ಈಗ ಕೈದಿ ನಂಬರ್ 9737!

ಬೆದರಿಕೆ ಪತ್ರದಲ್ಲಿ ಏನಿತ್ತು?

ಇಸ್ರೋ ಚಂದ್ರಯಾನ – 3ಕ್ಕೆ (Chandrayaan 3) ಸಂಬಂಧಪಟ್ಟಂತೆ ವಿಜ್ಞಾನಿಗಳು ತಿರುಪತಿಯಲ್ಲಿ ಪೂಜೆ ಮಾಡಿಸಿದ್ದನ್ನು ಟೀಕಿಸಿರುವ ನಡೆಯನ್ನು ಬಲವಾಗಿ ಖಂಡಿಸಿ ಬೆದರಿಕೆ ಪತ್ರವನ್ನು ಬರೆಯಲಾಗಿತ್ತು. ಅಲ್ಲದೆ, ಉಗ್ರವಾದವನ್ನು (Terrorism) ಖಂಡಿಸುವ ಧೈರ್ಯ, ತಾಕತ್ತು ನಿಮ್ಮಲ್ಲಿದೆಯೇ? ಎಂದು ಪ್ರಶ್ನೆ ಮಾಡಲಾಗಿತ್ತು. ಈ ಎಲ್ಲದಕ್ಕೂ ಉತ್ತರ ಕೊಡದಿದ್ದರೆ ಭೀಕರ ಸಾವಿಗೆ ತುತ್ತಾಗಲು ಸಿದ್ಧರಾಗಿ ಎಂದು ಪತ್ರದ ಮೂಲಕ ಬೆದರಿಕೆ ಒಡ್ಡಲಾಗಿತ್ತು. ಈ ಸಂಬಂಧ ಚಿಂತಕರು ಜೀವ ಬೆದರಿಕೆ ಪತ್ರವನ್ನು ಹಿಡಿದಿದ್ದ ಸಾಹಿತಿಗಳು, ಚಿಂತಕರು ಸರ್ಕಾರದ ಕದ ತಟ್ಟಿದ್ದರು. ಸೂಕ್ತ ಕ್ರಮ ವಹಿಸಿ, ತಪ್ಪಿತಸ್ಥರನ್ನು ಬಂಧಿಸಿ, ತಮ್ಮ ಜೀವಕ್ಕೆ ಭದ್ರತೆ ನೀಡಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರಿಗೆ (Home Minister) ಮನವಿ ಮಾಡಿದ್ದರು. ಬಳಿಕ ಗೃಹ ಸಚಿವರು ಪೊಲೀಸ್‌ ಆಯುಕ್ತರಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದರು.

Exit mobile version