Site icon Vistara News

Hassan Pen Drive Case: ಹೊಳೆನರಸೀಪುರದ ಮನೆ ಬಾಗಿಲಿಗೆ ನೊಟೀಸ್‌ ಅಂಟಿಸಿ ಎಸ್‌ಐಟಿ ವಾಪಸ್!‌

hassan pen drive case hd revanna prajwal revanna

ಹಾಸನ: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋಗಳ ಆರೋಪಿಗಳಾಗಿರುವ (Hassan Pen Drive Case) ಮಾಜಿ ಸಚಿವ ಎಚ್‌.ಡಿ ರೇವಣ್ಣ (HD Revanna) ಹಾಗು ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP Prajwal Revanna) ಇವರಿಬ್ಬರ ಹೊಳೆನರಸೀಪುರ ಮನೆಯ ಬಾಗಿಲಿಗೆ ನೊಟೀಸ್ (Notice) ಅನ್ನು ಅಂಟಿಸಿ ಎಸ್‌ಐಟಿ (SIT) ಟೀಂ ವಾಪಸಾಗಿದೆ.

ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಯ ಬಾಗಿಲಿಗೆ ನೊಟೀಸ್ ಅಂಟಿಸಿದ್ದು, ಎಸ್‌ಐಟಿ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಪ್ರಜ್ವಲ್‌ ರೇವಣ್ಣ ಜರ್ಮನಿಗೆ ತೆರಳಿದ್ದು, ಎಚ್‌ಡಿ ರೇವಣ್ಣ ಅವರು ಉತ್ತರ ಕರ್ನಾಟಕದ ಚುನಾವಣೆ ಪ್ರಚಾರಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಮನೆಯಲ್ಲೇ ಇದ್ದಾರೆ ಎಂದೂ ಹೇಳಲಾಗುತ್ತಿದೆ.

ಇಂದು ಸ್ಥಳ ಮಹಜರು

ಇಂದು ಹೊಳೆನರಸೀಪುರಕ್ಕೆ ತೆರಳಿರುವ ಎಸ್‌ಐಟಿ ಟೀಂ, ಏಪ್ರಿಲ್ 28ರಂದು ದೂರು ನೀಡಿದ್ದ ಸಂತ್ರಸ್ತ ಮಹಿಳೆಯ ಸಮ್ಮುಖದಲ್ಲಿ ಸ್ಥಳ ಮಹಜರ್ ನಡೆಸಲಿದೆ. ಹೊಳೆನರಸೀಪುರದ ಎಚ್‌ಡಿ ರೇವಣ್ಣ ಮನೆಯಲ್ಲಿ ಕೂಡ ಮಹಜರ್ ನಡೆಸಬೇಕಿದೆ. ತಾನು ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ರೇವಣ್ಣ ಲೈಂಗಿಕ ಕಿರುಕುಳ ನೀಡಿದ್ದಾಗಿ ಮಹಿಳೆ ದೂರು ನೀಡಿದ್ದರು.

ಹೊಳೆನರಸೀಪುರ ನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದರು. ಬಳಿಕ ಪ್ರಕರಣವನ್ನು ಸರ್ಕಾರ ಎಸ್‌ಐಟಿಗೆ ವಹಿಸಿತ್ತು. ನಿನ್ನೆ ಮಹಿಳೆಯ ಹೇಳಿಕೆಯನ್ನು ಎಸ್‌ಐಟಿ ದಾಖಲು ಮಾಡಿಕೊಂಡಿದೆ. ಇಂದು ಖುದ್ದು ಮಹಿಳೆ ಸಮ್ಮುಖದಲ್ಲಿ ಸ್ಥಳ ಮಹಜರ್ ಮಾಡಬೇಕಿದೆ.

ಪ್ರಜ್ವಲ್‌ಗೆ ನೋಟಿಸ್‌ ಇಶ್ಯೂ ಹೇಗೆ?

ಪ್ರಕರಣದ ಎ1 ಹೆಚ್.ಡಿ ರೇವಣ್ಣ ಹಾಗೂ ಎ2 ಪ್ರಜ್ವಲ್‌ ರೇವಣ್ಣ ಇಬ್ಬರಿಗೂ ನೊಟೀಸ್ ಇಶ್ಯೂ ಆಗಿದ್ದು, ಇದನ್ನು ಪ್ರಜ್ವಲ್‌ಗೆ ತಲುಪಿಸುವುದು ಹೇಗೆ ಎಂಬುದು ಈಗ ಎಸ್‌ಐಟಿ ಮುಂದಿರುವ ಪ್ರಶ್ನೆಯಾಗಿದೆ. ಪ್ರಜ್ವಲ್ ಸದ್ಯ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿದ್ದು, ಎರಡು ತಿಂಗಳ ಟೂರಿಸ್ಟ್ ವೀಸಾದಲ್ಲಿ ತೆರಳಿದ್ದಾರೆ.

ಸದ್ಯ ಪ್ರಜ್ವಲ್ ತನಿಖೆ ಎಸ್‌ಐಟಿಗೆ ತುಂಬಾ ಮುಖ್ಯವಾಗಿದೆ. ಎ1 ರೇವಣ್ಣ ಆಗಿದ್ದರೂ ಪ್ರಕರಣಗಳು ಹೊರಬಂದಿದ್ದು ಪ್ರಜ್ವಲ್ ರೇವಣ್ಣ ವಿಡೀಯೋಗಳಿಂದ ಆಗಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಸ್ಟೇಟ್‌ಮೆಂಟ್ ಇಲ್ಲಿ ಅಗತ್ಯವಿದೆ. ಆದರೆ ಪ್ರಜ್ವಲ್ ರೇವಣ್ಣಗೆ ನೊಟೀಸ್ ಕೊಟ್ಟು ಕರೆಸಿಕೊಳ್ಳಲು ಫ್ರಾಂಕ್‌ಫರ್ಟ್ ಟ್ರೀಟಿ ಏನು ಹೇಳುತ್ತದೆ ಎಂದು ತಿಳಿಯಬೇಕಿದೆ.

ತನಿಖೆಗೆ ಬೇಕು ಎಂದರೆ ಪ್ರಜ್ವಲ್ ಹಾಜರಾಗ್ತಾನೆ ಎಂದು ಹೆಚ್.ಡಿ ರೇವಣ್ಣ ಹೇಳಿದ್ದಾರೆ. ಪ್ರಜ್ವಲ್ ಬಾರದಿದ್ದಲ್ಲಿ ತನಿಖೆ ನಿಧಾನಗತಿಯಲ್ಲಿ ಸಾಗಬಹುದು. ಸದ್ಯ ತೀವ್ರಗತಿಯಲ್ಲಿ ಸಾಗುತ್ತಿರುವ ತನಿಖೆ ಪ್ರಜ್ವಲ್‌ ಗೈರುಹಾಜರಿಯಲ್ಲಿ ವಿಳಂಬಗತಿಗೆ ಜಾರಬಹುದು. ಚುನಾವಣೆ ಬಿಸಿ ಮುಗಿದ ನಂತರ ಹಳ್ಳ ಹಿಡಿಯಲೂಬಹುದು. ಆದರೆ ಒಬ್ಬ ಸಂಸತ್‌ ಸದಸ್ಯ ತಲೆ ತಪ್ಪಿಸಿಕೊಂಡಿದ್ದಾರೆಂದರೆ ಕ್ಷೇತ್ರಕ್ಕೆ, ಪಕ್ಷಕ್ಕೆ ಹಾಗೂ ಇಡೀ ರಾಜ್ಯಕ್ಕೆ ಮುಜುಗರದ ಸಂಗತಿ.

ಅರೋಪಿಗಾಗಿ ಇಂಟರ್‌ಪೋಲ್ ಮುಖಾಂತರ ರೆಡ್ ಕಾರ್ನರ್ ಅಥವಾ ಲುಕ್ ಔಟ್ ನೊಟೀಸ್ ಜಾರಿ ಮಾಡುವ ಸಾಧ್ಯತೆ ಇದೆ. ಈಗಾಗಲೇ ಡ್ರೈವರ್ ಕಾರ್ತಿಕ್‌ನನ್ನು ಎಸ್‌ಐಟಿ ವಿಚಾರಣೆಗೊಳಪಡಿಸಿದೆ. ಹಾಗೂ ಸಂತ್ರಸ್ತೆಯ ಹೇಳಿಕೆಯನ್ನೂ ದಾಖಲಿಸಿದೆ. ನಾಳೆ ಅಥವ ನಾಡಿದ್ದು CRPC 164 ಅಡಿಯಲ್ಲಿ ಸ್ಟೆಟ್ಮೆಂಟ್ ಪಡೆಯಲಿದೆ.

ಏಕಾಏಕಿ ಬಂಧನವಿಲ್ಲ: ಪರಮೇಶ್ವರ್‌

ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿ, “ಯಾರನ್ನೇ ಆದರೂ ಏಕಾಏಕಿ ಬಂಧನ ಮಾಡುವುದಿಲ್ಲ” ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. “ಅದಕ್ಕೆ ಪುರಾವೆಗಳು, ದೂರು, ದೂರಿನಲ್ಲಿ ಏನು ಹೇಳಿರುತ್ತಾರೆ ಅನ್ನೋದು ಮುಖ್ಯ. ಯಾವ ಸೆಕ್ಷನ್ ಬರುತ್ತೆ, ಅದರಲ್ಲಿ ‌ಅರೆಸ್ಟ್ ಮಾಡಬಹುದಾ, ಬೇಲ್ ಕೇಸಾ, ನಾನ್ ಬೇಲ್ ಕೇಸಾ ಅಂತ ನೋಡಬೇಕು. ಅದಕ್ಕೆ 41A CRPC ಸೆಕ್ಷನ್ ಅಡಿ‌ ನೊಟೀಸ್ ಕೊಟ್ಟಿದ್ದಾರೆ. ಅವರು 24 ಗಂಟೆ ಒಳಗೆ ಒಂದು ಹಾಜರಾಗಬೇಕು. ಹಾಜರಾಗದೇ ಹೋದರೆ SITಯವರು ಮುಂದಿನ ಪ್ರಕ್ರಿಯೆ ಮಾಡ್ತಾರೆ” ಎಂದಿದ್ದಾರೆ.

“ನಾವು SIT ಮಾಡಿ ತನಿಖೆಗೆ ಚಾಲನೆ ಕೊಟ್ಟಿದ್ದೇವೆ. ಅವರೇನೂ ಮಾಡಿಲ್ಲ ಅಂತ ಅಮಿತ್ ಶಾ ಹೇಳಿದ್ದಾರೆ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವಂತಹದ್ದು ಏನೂ ಇಲ್ಲ. ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನ ಮಾಡ್ತೀವಿ. ಇದರಲ್ಲಿ ಬಹಳ ಜನರ ಜೀವನ ಇದೆ. ಇಷ್ಟ ಬಂದ ಹಾಗೆ ತನಿಖೆ‌ ಮಾಡೋಕೆ ಆಗೊಲ್ಲ. SIT ತನಿಖೆ ಶುರುವಾಗಿದೆ. ನೊಟೀಸ್‌ ಕೊಟ್ಟಿದ್ದಾರೆ. ದೂರು ಕೊಟ್ಟವರ ಹೇಳಿಕೆ ಪಡೆದಿದ್ದಾರೆ. ಏನು ಕಾನೂನು ಪ್ರಕ್ರಿಯೆ ಇದೆಯೋ ಆ ರೀತಿ ಮಾಡ್ತಿದ್ದಾರೆ” ಎಂದು ಪರಮೇಶ್ವರ್‌ ತಿಳಿಸಿದ್ದಾರೆ.

ಇದನ್ನೂ ಓದಿ: Hassan Pen Drive Case: ಪೆನ್‌ಡ್ರೈವ್‌ನಲ್ಲಿ ಅಶ್ಲೀಲ ವಿಡಿಯೊ ಅಪ್‌ಲೋಡ್‌ ಆಗಿದ್ದು ವಿದೇಶದಲ್ಲಿ! ದುಬೈನಲ್ಲಿ ನಡೆದಿದ್ದೇನು?

Exit mobile version