Site icon Vistara News

Hassan Pen Drive Case: SIT ತನಿಖೆಗೆ ಸಂತ್ರಸ್ತೆಯರ ಹಿಂದೇಟು; ವಿಚಾರಣೆ ಅಂತ ತೊಂದರೆ ಕೊಟ್ಟರೆ ಸೂಸೈಡ್‌ ಬೆದರಿಕೆ!

O

ಬೆಂಗಳೂರು: ಹಾಸನ ಸಂಸದ (Hassan MP), ಜೆಡಿಎಸ್‌ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಎಸ್‌ಐಟಿಗೆ ಮಾಹಿತಿ ನೀಡಲು ಸಂತ್ರಸ್ತೆಯರು ಹಿಂದೇಟು ಹಾಕುತ್ತಿದ್ದಾರೆ. “ನನಗೆ ತೊಂದರೆ ಕೊಟ್ಟರೆ ಸೂಸೈಡ್ ಮಾಡಿಕೊಳ್ಳುತ್ತೇವೆ” ಎಂದು ಬೆದರಿಕೆ ಒಡ್ಡುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಪ್ರಜ್ವಲ್‌ ರೇವಣ್ಣ ಒಬ್ಬ ಸಂಸದ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ವಂಶದ ಕುಡಿ. ಈ ಹಿನ್ನೆಲೆಯಲ್ಲಿ ಇದೊಂದು ಹೈ ಪ್ರೊಫೈಲ್‌ ಕೇಸ್‌ ಆಗಿದೆ. ಇದರ ಜತೆಗೆ ವಿಡಿಯೊ ಲೀಕ್‌ ವೇಳೆ ಸಂತ್ರಸ್ತೆಯರ ಮುಖವನ್ನು ಬ್ಲರ್‌ ಮಾಡಲಾಗಿಲ್ಲ. ಇದರಿಂದ ಅದೆಷ್ಟೋ ಹೆಣ್ಣು ಮಕ್ಕಳು ಹೊರಗಡೆ ತಲೆ ಎತ್ತಿ ತಿರುಗುವಂತೆ ಆಗುತ್ತಿಲ್ಲ. ಈ ಮಧ್ಯೆ ಎಸ್‌ಐಟಿ ಅಧಿಕಾರಿಗಳು ತನಿಖೆಗಾಗಿ ಅವರನ್ನು ಭೇಟಿ ಮಾಡಿ ಹೇಳಿಕೆ ಪಡೆಯಲು ಹೋದರೆ ಮೊದಲೇ ನೊಂದಿರುವ ನಮ್ಮನ್ನು ಮತ್ತಷ್ಟು ನೋಯಿಸಬೇಡಿ. ಈ ಬಗ್ಗೆ ನಮ್ಮ ಬಳಿ ಏನನ್ನೂ ಕೇಳಬೇಡಿ. ಇದು ನಮ್ಮ ಜೀವನದ ಪ್ರಶ್ನೆಯಾಗಿದೆ. ಅಷ್ಟಕ್ಕೂ ನೀವು ಒತ್ತಾಯ ಮಾಡಿದ್ದೇ ಆದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ದೂರುದಾರೆ ಹೊರತುಪಡಿಸಿ ಉಳಿದವರು ನೋ ರೆಸ್ಪಾನ್ಸ್!

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೊದಲ್ಲಿರುವ ಮಹಿಳೆಯರನ್ನು ಸಂಪರ್ಕಿಸಲು ಎಸ್‌ಐಟಿ ತಂಡವು ಸಾಕಷ್ಟು ಪ್ರಯತ್ನಪಟ್ಟಿದೆ. ಎಷ್ಟೇ ಪ್ರಯತ್ನ ಪಟ್ಟರೂ ಸಂತ್ರಸ್ತೆಯರು ಮಾತ್ರ ಇವರಿಗೆ ಸ್ಪಂದಿಸುತ್ತಿಲ್ಲ. ನಾವು ಏನೂ ಹೇಳಲ್ಲ, ಏನನ್ನೂ ಕೇಳಬೇಡಿ ಎಂದು ಸಂತ್ರಸ್ತೆಯರು ಹೇಳುತ್ತಿದ್ದಾರೆ.

ನಾವೇನು ದೂರು ಕೊಟ್ಟಿಲ್ಲ, ನಮ್ಮನ್ನು ಯಾಕೆ ಎಳೆದು ತರುತ್ತೀರಿ? ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ ಎಂದು ಹೇಳುತ್ತಿರುವುದರಿಂದ ಎಸ್‌ಐಟಿ ತನಿಖೆಗೆ ಸ್ವಲ್ಪ ಹಿನ್ನಡೆಯಾಗಿದೆ. ಹೀಗಾಗಿ ಸದ್ಯಕ್ಕೆ ದೂರುದಾರೆ ಸಂತ್ರಸ್ತೆಯ ಮಾಹಿತಿ ಆಧರಿಸಿ ತನಿಖೆಯನ್ನು ಮುನ್ನಡೆಸುವ ತೀರ್ಮಾನಕ್ಕೆ ಬರಲಾಗಿದೆ.

ಮೇ 3ರಂದು ಪ್ರಜ್ವಲ್‌ ರೇವಣ್ಣ ಬೆಂಗಳೂರಿಗೆ, ಬಂದ ತಕ್ಷಣ ಎಸ್‌ಐಟಿ ವಶಕ್ಕೆ?

ಅಶ್ಲೀಲ ವಿಡಿಯೋದಲ್ಲಿರುವ (Obscene video) ಪ್ರಧಾನ ಆರೋಪಿ, ಹಾಸನ ಸಂಸದ (Hassan MP) ಪ್ರಜ್ವಲ್‌ ರೇವಣ್ಣ (Prajwal Revanna) ಮೇ 3ರಂದು ತಡರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಗೊತ್ತಾಗಿದೆ. ಸದ್ಯ ಅವರು ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿದ್ದಾರೆ.

ಲುಪ್ತಾನ್ಸಾ ಏರ್‌ಲೈನ್ಸ್‌ನಲ್ಲಿ ಮೇ 3ರ ಪ್ರಯಾಣಕ್ಕೆ ಪ್ರಜ್ವಲ್‌ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೇ 3 ಮಧ್ಯರಾತ್ರಿ ಕೆಂಪೇಗೌಡ ಏರ್‌ಪೋರ್ಟ್‌ಗೆ ಅವರು ಆಗಮಿಸಬಹುದು. ಮೇ 4ರಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಅಥವಾ ಅವರು ವಿಮಾನದಿಂದ ಇಳಿದ ಕೂಡಲೇ ಅವರನ್ನು ವಿಶೇಷ ತನಿಖಾ ತಂಡ (SIT) ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಮೊದಲ ಹಂತದ ಮತದಾನದ ದಿನವೇ ಪ್ರಜ್ವಲ್‌ ಅವರು ದೇಶ ಬಿಟ್ಟು ತೆರಳಿದ್ದರು. ಬ್ಯುಸಿನೆಸ್‌ ವೀಸಾವನ್ನು ಅವರು ಹೊಂದಿದ್ದಾರೆ. ಟೂರಿಸ್ಟ್‌ ವೀಸಾದಲ್ಲಿ ಅವರು ಜರ್ಮನಿಗೆ ತೆರಳಿದ್ದು, ಇದರ ಅವಧಿ 90 ದಿನಗಳ ಕಾಲ ಚಾಲೂ ಇರುತ್ತದೆ. CRPC41A ಸೆಕ್ಷನ್‌ ಪ್ರಕಾರ, ಅವರು ನೋಟಿಸ್‌ಗೆ ಸ್ಪಂದಿಸಿ ಹಾಜರಾಗದೆ ಇದ್ದರೆ ಅವರನ್ನು ಬಂಧಿಸಬಹುದಾಗಿದೆ.

ಏಕಾಏಕಿ ಬಂಧನವಿಲ್ಲ: ಪರಮೇಶ್ವರ್‌

ಆದರೆ ಹಾಗೆ ಏಕಾಏಕಿ ಯಾರನ್ನೂ ಬಂಧಿಸಲು ಮುಂದಾಗುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಇಂದು ಬೆಳಗ್ಗೆ ಹೇಳಿದ್ದಾರೆ. “ಅದಕ್ಕೆ ಪುರಾವೆಗಳು, ದೂರು, ದೂರಿನಲ್ಲಿ ಏನು ಹೇಳಿರುತ್ತಾರೆ ಅನ್ನೋದು ಮುಖ್ಯ. ಯಾವ ಸೆಕ್ಷನ್ ಬರುತ್ತೆ, ಅದರಲ್ಲಿ ‌ಅರೆಸ್ಟ್ ಮಾಡಬಹುದಾ, ಬೇಲ್ ಕೇಸಾ, ನಾನ್ ಬೇಲ್ ಕೇಸಾ ಅಂತ ನೋಡಬೇಕು. ಅದಕ್ಕೆ 41A CRPC ಸೆಕ್ಷನ್ ಅಡಿ‌ ನೋಟಿಸ್ ಕೊಟ್ಟಿದ್ದಾರೆ. ಅವರು 24 ಗಂಟೆ ಒಳಗೆ ಒಂದು ಹಾಜರಾಗಬೇಕು. ಹಾಜರಾಗದೇ ಹೋದರೆ SITಯವರು ಮುಂದಿನ ಪ್ರಕ್ರಿಯೆ ಮಾಡ್ತಾರೆ” ಎಂದಿದ್ದಾರೆ.

ಪ್ರಜ್ವಲ್‌ ತನಿಖೆ ಮುಖ್ಯ

ಸದ್ಯ ಪ್ರಜ್ವಲ್ ತನಿಖೆ ಎಸ್‌ಐಟಿಗೆ ತುಂಬಾ ಮುಖ್ಯವಾಗಿದೆ. ಎ1 ರೇವಣ್ಣ ಆಗಿದ್ದರೂ ಪ್ರಕರಣಗಳು ಹೊರಬಂದಿದ್ದು ಪ್ರಜ್ವಲ್ ರೇವಣ್ಣ ವಿಡೀಯೋಗಳಿಂದ ಆಗಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಸ್ಟೇಟ್‌ಮೆಂಟ್ ಇಲ್ಲಿ ಅಗತ್ಯವಿದೆ. ಮಾಜಿ ಸಚಿವ ಎಚ್‌.ಡಿ ರೇವಣ್ಣ (HD Revanna) ಹಾಗೂ ಪ್ರಜ್ವಲ್ ರೇವಣ್ಣ (Hassan MP Prajwal Revanna) ಇವರಿಬ್ಬರ ಹೊಳೆನರಸೀಪುರ ಮನೆಯ ಬಾಗಿಲಿಗೆ ಇಂದು ನೊಟೀಸ್ (Notice) ಅನ್ನು ಎಸ್‌ಐಟಿ (SIT) ಟೀಂ ಅಂಟಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಯ ಬಾಗಿಲಿಗೆ ನೊಟೀಸ್ ಅಂಟಿಸಿದ್ದು, ಎಸ್‌ಐಟಿ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ತನಿಖೆಗೆ ಬೇಕು ಎಂದರೆ ಪ್ರಜ್ವಲ್ ಹಾಜರಾಗ್ತಾನೆ ಎಂದು ಎಚ್.ಡಿ ರೇವಣ್ಣ ಹೇಳಿದ್ದಾರೆ. ಪ್ರಜ್ವಲ್ ಬಾರದಿದ್ದಲ್ಲಿ ತನಿಖೆ ನಿಧಾನಗತಿಯಲ್ಲಿ ಸಾಗಬಹುದು. ಆದರೆ ಈಗಾಗಲೇ ಎಸ್‌ಐಟಿ ವಿಚಾರಣೆ ನೋಟಿಸ್‌ ಜಾರಿ ಮಾಡಿದೆ. ಇದಕ್ಕೆ ಉತ್ತರಿಸದೆ ತಲೆ ಮರೆಸಿಕೊಂಡರೆ ಆರೋಪಿಗೆ ಇಂಟರ್‌ಪೋಲ್ ಮುಖಾಂತರ ರೆಡ್ ಕಾರ್ನರ್ ಅಥವಾ ಲುಕ್ ಔಟ್ ನೋಟಿಸ್ ಜಾರಿ ಮಾಡುವ ಸಾಧ್ಯತೆಯೂ ಎಸ್‌ಐಟಿ ಮುಂದಿದೆ.

ಈಗಾಗಲೇ ಡ್ರೈವರ್ ಕಾರ್ತಿಕ್‌ನನ್ನು ಎಸ್‌ಐಟಿ ವಿಚಾರಣೆಗೊಳಪಡಿಸಿದೆ. ಸಂತ್ರಸ್ತೆಯ ಹೇಳಿಕೆಯನ್ನೂ ದಾಖಲಿಸಿದೆ. ನಾಳೆ ಅಥವಾ ನಾಡಿದ್ದು CRPC 164 ಅಡಿಯಲ್ಲಿ ಸ್ಟೆಟ್ಮೆಂಟ್ ಪಡೆಯಲಿದೆ. ವಿಚಾರಣೆ ಬಳಿಕ ಕಾರ್ತಿಕ್ ಮೊಬೈಲ್ ಸೀಜ್ ಮಾಡಿ ಎಫ್ಎಸ್ಎಲ್‌ಗೆ ವಿಧಿವಿಜ್ಞಾನ ಪರಿಶೀಲನೆಗಾಗಿ ಕಳಿಸಲಾಗಿದೆ.

ಇದನ್ನೂ ಓದಿ: Hassan Pen Drive Case: ಹೊಳೆನರಸೀಪುರದ ಮನೆ ಬಾಗಿಲಿಗೆ ನೋಟಿಸ್‌ ಅಂಟಿಸಿ ಎಸ್‌ಐಟಿ ವಾಪಸ್!‌

ಹೋಮ ಮಾಡಿಸುತ್ತಿರುವ ರೇವಣ್ಣ

ತಮ್ಮ ವಿರುದ್ಧ ಎಸ್ಐಟಿ ತನಿಖೆ ಚುರುಕುಗೊಂಡಿರುವ ನಡುವೆ ರೇವಣ್ಣ ದೇವರು ದಿಂಡಿರ ಮೊರೆ ಹೋಗಿದ್ದಾರೆ. ಹೊಳೆನರಸೀಪುರದ ಅವರ ಮನೆಯಲ್ಲಿ ಹೋಮ ಹವನ ಮಾಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಎದುರಾದ ಸಂಕಷ್ಟ ನಿವಾರಣೆಗಾಗಿ ಮನೆಯೊಳಗೇ ಹೋಮ ಕುಂಡ ನಿರ್ಮಿಸಿ ಬೆಳಗ್ಗೆಯಿಂದ ಪೂಜೆ ಸಲ್ಲಿಸಲಾಗುತ್ತಿದೆ.

Exit mobile version