ಬೆಂಗಳೂರು: ಅತ್ತ ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದಲ್ಲಿ ಜಾಮೀನು (Bail) ಪಡೆಯಲು ಮಾಜಿ ಸಚಿವ ಎಚ್.ಡಿ ರೇವಣ್ಣ (HD Revanna Case) ನ್ಯಾಯಾಲಯದಲ್ಲಿ ಕಸರತ್ತು ನಡೆಸಿದ್ದರೆ, ಇತ್ತ ಎಸ್‌ಐಟಿ (SIT) ಅಧಿಕಾರಿಗಳು ರೇವಣ್ಣರ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.
ಎಚ್‌ಡಿ ರೇವಣ್ಣ ಅವರು ಇಂದು ಬೆಳಗ್ಗಿನಿಂದ ಟೆಂಪಲ್ ರನ್ ನಡೆಸಿದರು. ಬಳಿಕ ಇನ್ನೊಂದು ಪ್ರಕರಣದಲ್ಲಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಗಾಗಿ ನ್ಯಾಯಾಲಯದ ಮುಂದೆ ಹಾಜರಾದರು. ಈಗಾಗಲೇ ಮೈಸೂರಿನ ಸಂತ್ರಸ್ತೆಯ ಕಿಡ್‌ನ್ಯಾಪ್ (kidnap case) ಪ್ರಕರಣದಲ್ಲಿ ಅವರು ಜಾಮೀನು ಪಡೆದಿದ್ದಾರೆ. ಆದರೆ ಹೊಳೆನರಸೀಪುರದ ಪ್ರಕರಣದಲ್ಲೂ ಜಾಮೀನು ಪಡೆಯಲು ಅವರು ತಯಾರಿ ನಡೆಸಿದ್ದಾರೆ.
ಇಂದು ಮುಂಜಾನೆ ತಾವು ಉಳಿದುಕೊಂಡಿದ್ದ ದೇವೇಗೌಡರ ಮನೆಯಿಂದ ಹೊರಟ ರೇವಣ್ಣ ಅವರು ವೈದ್ಯ ಸಿಎನ್ ಮಂಜುನಾಥ್ ಅವರ ನಿವಾಸಕ್ಕೆ ಬಂದು, ಅಲ್ಲಿಂದ ಟೆಂಪಲ್ ರನ್ ಶುರು ಮಾಡಿದರು. ಬೆಳಗ್ಗೆ 8:26ಕ್ಕೆ ಜಯನಗರ ಶ್ರೀ ಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನ, 8:50ಕ್ಕೆ ಗವಿಗಂಗಾಧರೇಶ್ವರ ದೇವಸ್ಥಾನ, 9:10ಕ್ಕೆ ಶ್ರೀ ಶೃಂಗೇರಿ ಶಂಕರ ಮಠ, 10:31ಕ್ಕೆ ಬಸವನಗುಡಿಯ ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿ ನಂತರ ಕೋರ್ಟ್‌ಗೆ ಹಾಜರಾದರು.
ವಕೀಲರೊಂದಿಗೆ ಜನಪ್ರತಿನಿಧಿಗಳ ಕೋರ್ಟ್‌ಗೆ ಹಾಜರಾಗಿರುವ ರೇವಣ್ಣ ನ್ಯಾಯಾಧೀಶರ ಎದುರು ಕೈ ಕಟ್ಟಿಕೊಂಡು ನಿಂತರು. ಹೊಳೆನರಸೀಪುರದ ಪ್ರಕರಣ ಬೇಲೆಬಲ್ ಪ್ರಕರಣವಾಗಿದ್ದು, ಇದರಲ್ಲೂ ಮುನ್ನೆಚ್ಚರಿಕೆಯಾಗಿ ಜಾಮೀನು ಪಡೆಯಲು ಅವರು ಮುಂದಾಗಿದ್ದಾರೆ. 42ನೇ ಎಸಿಎಂಎಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ನ್ಯಾಯಾಧೀಶರು ಜಾಮೀನು ಅರ್ಜಿ ವಿಚಾರಣೆಯನ್ನು ಮಧ್ಯಾಹ್ನ ನಂತರದ ಕಲಾಪಕ್ಕೆ ಮುಂದೂಡಿದರು.
ರೇವಣ್ಣಗೆ ಜಾಮೀನು ನೀಡದಂತೆ ಎಸ್ಐಟಿ ಪರ ವಕೀಲರಾದ ಎಸ್ಪಿಪಿ ಅಶೋಕ್ ನಾಯಕ್ ಅವರ ಜ್ಯೂನಿಯರ್ ವಕೀಲರು ಮನವಿ ಮಾಡಿದರು. ನ್ಯಾಯಾಧೀಶೆ ಪ್ರೀತ್ ಜೆ. ಅವರು, ಎಸ್ಐಟಿ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆ ಮುಂದೂಡಿದರು. ಈ ಕೇಸಲ್ಲಿ ನಾನ್ ಬೇಲೆಬಲ್ ಸೆಕ್ಷನ್ ಇಲ್ಲ, ಹೀಗಾಗಿ ಕಡ್ಡಾಯವಾಗಿ ಜಾಮೀನು ನೀಡಬೇಕು ಎಂದು ರೇವಣ್ಣ ಪರ ವಕೀಲರು ಮನವಿ ಮಾಡಿದರು.
ಎಸ್‌ಐಟಿ ಸ್ಥಳ ಮಹಜರು
ಅತ್ತ ಅದೇ ಸಮಯದಲ್ಲಿ ಬಸವನಗುಡಿಯ ರೇವಣ್ಣರ ನಿವಾಸದಲ್ಲಿ ಎಸ್‌ಐಟಿ ತಂಡ ಸ್ಥಳ ಮಹಜರು ನಡೆಸಿತು. ಮನೆಗೆಲಸದ ಹುಡುಗನಿಗೆ ತಪಾಸಣೆಗೆ ಪಡೆದ ಅನುಮತಿ ಪತ್ರ ತೋರಿಸಿ ನಿವಾಸದೊಳಗೆ ಹೋದ ಎಸ್ಐಟಿ ಟೀಮ್, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳಿಗಾಗಿ ಹುಡುಕಾಟ ನಡೆಸಿತು.
ರೇವಣ್ಣ ನಡೆ ನಿಗೂಢ
ಜಾಮೀನು ಆಗಿ ಎರಡು ದಿನಗಳು ಕಳೆದರೂ ರೇವಣ್ಣ ಹಾಸನ ಕಡೆ ಮುಖ ಮಾಡಿಲ್ಲ. ಮೊದಲ ದಿನವೇ ಶೃಂಗೇರಿಗೆ ಹೋಗಿ ಬಳಿಕ ಹಾಸನಕ್ಕೆ ಹೋಗ್ತಾರೆ ಎಂದು ರೇವಣ್ಣ ಆಪ್ತ ಮೂಲಗಳು ಹೇಳಿದ್ದರಾದರೂ, ನಿನ್ನೆ ಏಕಾಏಕಿ ಪ್ರವಾಸ ರದ್ದು ಮಾಡಿದ್ದರು. ನಿನ್ನೆ ಟೆಂಪಲ್ ರನ್ ಬಳಿಕ ವಕೀಲರ ಭೇಟಿ ಮಾಡಿದ್ದರು. ಇಂದು ಸಹ ಬೆಂಗಳೂರಿನಲ್ಲಿ ಉಳಿದುಕೊಂಡು ಟೆಂಪಲ್ ರನ್ ನಡೆಸಿ ಬಳಿಕ ಕೋರ್ಟ್‌ಗೆ ತೆರಳಿದ್ದಾರೆ.
ಈ ನಡುವೆ, ಮಾಜಿ ಸಚಿವರ ಪತ್ನಿ ಭವಾನಿ ಹಾಗೂ ಪುತ್ರ ಸೂರಜ್ ರೇವಣ್ಣ ಎಲ್ಲೂ ಕಾಣಿಸಿಕೊಂಡಿಲ್ಲ. ಬಸವನಗುಡಿಯ ಸ್ವನಿವಾಸದಿಂದ ರೇವಣ್ಣ ದೂರವೇ ಉಳಿದಿದ್ದಾರೆ. ಸ್ವನಿವಾಸದಿಂದ ದೂರ ಉಳಿಯುವಂತೆ ರೇವಣ್ಣನಿಗೆ ಆಪ್ತ ಜ್ಯೋತಿಷ್ಯಿಗಳು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಜೈಲಿನಿಂದ ಬಿಡುಗಡೆಯಾದಾಗಿನಿಂದ ಬಸವನಗುಡಿ ನಿವಾಸಕ್ಕೆ ಒಮ್ಮೆ ಮಾತ್ರ ಭೇಟಿ ನೀಡಿ ಎರಡೇ ನಿಮಿಷಗಳಲ್ಲಿ ತೆರಳಿದ್ದರು. ಇದಾದ ನಂತರ ಹೆಚ್.ಡಿ ದೇವೇಗೌಡರ ನಿವಾಸದಲ್ಲಿಯೇ ಅವರು ವಾಸ್ತವ್ಯ ಹೂಡಿದ್ದಾರೆ.
ಇದನ್ನೂ ಓದಿ: HD Revanna: ಬಸವನಗುಡಿ ನಿವಾಸದಿಂದ ದೂರವೇ ಉಳಿದ ಎಚ್ ಡಿ ರೇವಣ್ಣ; ಜ್ಯೋತಿಷಿಗಳ ಕಟ್ಟೆಚ್ಚರ?