ಬೆಂಗಳೂರು: ಲೈಂಗಿಕ ದೌರ್ಜನ್ಯ (physical Abuse) ಪ್ರಕರಣದಲ್ಲಿ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿರುವ ಮಾಜಿ ಸಚಿವ ಎಚ್.ಡಿ ರೇವಣ್ಣ (HD Revanna Jailed) ಅವರು ನಿನ್ನೆ ಜಾಮೀನು (bail) ಸಿಗದ ಹಿನ್ನೆಲೆಯಲ್ಲಿ ಮತ್ತಷ್ಟು ಮಂಕಾಗಿದ್ದು, ಮೌನವಾಗಿ ದಿನ ಕಳೆದಿದ್ದಾರೆ. ಇನ್ನು ಮೂರು ದಿನ ಅವರನ್ನು ಆಪ್ತರೂ ಭೇಟಿಯಾಗುವಂತಿಲ್ಲ.
ರೇವಣ್ಣ ಅವರನ್ನು ಆಪ್ತರು ಬಂದು ಪ್ರತಿದಿನ ಭೇಟಿಯಾಗುತ್ತಿದ್ದರು. ಆದರೆ ಇಂದು ಸೇರಿದಂತೆ ಮೂರು ದಿನ ರೇವಣ್ಣ ಯಾರನ್ನೂ ಭೇಟಿ ಮಾಡಲು ಸಾಧ್ಯವಿಲ್ಲದಾಗಿದೆ. ಇಂದು ಅಕ್ಷಯ ತೃತೀಯ ಸರ್ಕಾರಿ ರಜೆ, ನಾಳೆ ಎರಡನೇ ಶನಿವಾರ ರಜೆ, ನಾಡಿದು ಭಾನುವಾರ ಹೀಗೆ ಮೂರು ದಿನ ಸರ್ಕಾರಿ ರಜೆ ಹಿನ್ನೆಲೆಯಲ್ಲಿ, ಮೂರು ದಿನ ಜೈಲು ಬಂಧಿಗಳ ಭೇಟಿಗೆ ಅವಕಾಶವಿಲ್ಲ.
ಆಪ್ತರ ಭೇಟಿಯಲ್ಲಿ ರೇವಣ್ಣ ತಮ್ಮ ದುಗುಡ ದುಮ್ಮಾನ ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದರು. ಇದೀಗ ಅದಕ್ಕೂ ಸರ್ಕಾರಿ ರಜೆ ಅಡ್ಡಿಯಾಗಿದೆ. ಪ್ರತಿ ಶುಕ್ರವಾರ ಜೈಲುವಾಸಿಗಳಿಗೆ ಚಿಕನ್ ಊಟ ನೀಡಲಾಗುತ್ತಿತ್ತು. ಆದರೆ ಇಂದು ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ನಾನ್ ವೆಜ್ ನೀಡಲಾಗುತ್ತಿಲ್ಲ. ಭಾನುವಾರ ಚಿಕನ್ ನೀಡಲಿದ್ದಾರೆ ಎಂದು ಗೊತ್ತಾಗಿದೆ. ಇಂದು ನಿತ್ಯ ಕೈದಿಗಳಿಗೆ ನೀಡಲಾಗುವ ಉಪ್ಪಿಟ್ಟು, ಚಿತ್ರಾನ್ನವನ್ನೇ ಅವರಿಗೂ ನೀಡಲಾಗಿದ್ದು, ಅದನ್ನು ಅವರು ಸೇವಿಸಿಲ್ಲ.
ಸಾಮಾನ್ಯ ವಿಚಾರಣಾಧೀನ ಕೈದಿಯಂತೆ ದಿನ ಕಳೆಯುತ್ತಿರುವ ರೇವಣ್ಣ ಅವರಿಗೆ ನಿನ್ನೆ ಜಾಮೀನು ಸಿಗದೆ ನಿರಾಸೆಯಾಗಿದೆ. ಬೇಲ್ ಸಿಗದ ಹಿನ್ನೆಲೆಯಲ್ಲಿ ಮತ್ತಷ್ಟು ಮಂಕಾಗಿರುವ ರೇವಣ್ಣ ಆಪ್ತರ ಭೇಟಿ ವೇಳೆ ಬೇಸರ ಹೊರಹಾಕಿದ್ದಾರೆ. ರಾತ್ರಿ ಊಟ ಕೂಡ ತಡವಾಗಿ ಮಾಡಿದ್ದಾರೆ. ರಾತ್ರಿಯೂಟಕ್ಕೆ ಮುದ್ದೆ, ಚಪಾತಿ, ಅನ್ನ, ಸಾಂಬಾರ್ ಮತ್ತು ಮಜ್ಜಿಗೆ ನೀಡಲಾಗಿತ್ತು.
ಹೊಟ್ಟೆ ನೋವು ಹಿನ್ನೆಲೆಯಲ್ಲಿ ರೇವಣ್ಣ ಮೇಲೆ ವೈದ್ಯರು ನಿಗಾ ಇಟ್ಟಿದ್ದಾರೆ. ಬೆಳಗ್ಗೆ ಮತ್ತು ಸಂಜೆ ವೇಳೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಜೈಲಿನ ಮೆನು ಪ್ರಕಾರ ಇಂದು ಟೊಮ್ಯಾಟೊ ಬಾತ್ ನೀಡಲಿದ್ದಾರೆ. ಇಂದು ಬೆಳಗ್ಗೆ ಕಾಫಿ ಕುಡಿಯುತ್ತಾ ದಿನಪತ್ರಿಕೆಯ ಮೇಲೆ ಕಣ್ಣಾಡಿಸಿದ್ದಾರೆ ಎಂದು ಗೊತ್ತಾಗಿದೆ.
“ಈ ಪ್ರಕರಣದಲ್ಲಿ ನಾನಿಲ್ಲ ಅಂದಾಗ ಹೀಗಾದಾಗ ಮನಸ್ಸಿನಲ್ಲಿ ಬೇಜಾರಾಗುತ್ತೆ. ಸೋಮವಾರ ಏನಾಗುತ್ತೆ ನೋಡೋಣ. ನ್ಯಾಯ ದೊರಕುತ್ತೆ ಅನ್ನೋದು ಅವರ ಅಭಿಪ್ರಾಯ” ಎಂದು ಗುರುವಾರ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇವಣ್ಣರನ್ನು ಭೇಟಿಯಾಗಿ ಬಂದ ಬಳಿಕ ಶಾಸಕ ಸಿ.ಎನ್ ಬಾಲಕೃಷ್ಣ ಹೇಳಿದ್ದಾರೆ. “ನಮ್ಮ ಜಿಲ್ಲೆ ಮುಖಂಡರು ಅವರು. ಅವರಿಗೆ ಧೈರ್ಯ ತುಂಬಿ ಬಂದಿದ್ದೀವಿ. ಕಾನೂನು ರೇವಣ್ಣ ಪರ ಆಗುತ್ತೆ ಅನ್ನೋ ನಂಬಿಕೆ ಇದೆ. ಈ ರೀತಿಯಾದ ದ್ವೇಷದ ರಾಜಕಾರಣ ಯಾರಿಗೂ ಆಗಬಾರದು. ಈ ರೀತಿಯಾದ ರಾಜಕೀಯ ದ್ವೇಷ ಖಂಡಿಸುತ್ತೇನೆ. ರೇವಣ್ಣ ಮೇಲೆ ಈ ರೀತಿ ಆಪಾದನೆ ಮಾಡಿ ಕೇಸ್ ಆಗಿರುವುದು ತಪ್ಪು” ಎಂದಿದ್ದಾರೆ.
ಜಾಮೀನು ಅರ್ಜಿ ಸೋಮವಾರಕ್ಕೆ ಮುಂದೂಡಿಕೆ
ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರಿನ ಕೆ.ಆರ್. ನಗರದ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ (HD Revanna) ಅವರಿಗೆ ಗುರುವಾರ ಸಹ ಜಾಮೀನು ಸಿಕ್ಕಿಲ್ಲ. ಸಾಕಷ್ಟು ವಾದ – ಪ್ರತಿವಾದದ ಬಳಿಕ ಜನಪ್ರತಿನಿಧಿಗಳ ಕೋರ್ಟ್, ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿದೆ.
ಎಚ್.ಡಿ. ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ಕೋರ್ಟ್, ಸೋಮವಾರ ಬೆಳಗ್ಗೆ 11.30ಕ್ಕೆ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಸುವುದಾಗಿ ಮುಂದೂಡಿದೆ. ಕೋರ್ಟ್‌ಗೆ ಮಹತ್ವದ ಮಾಹಿತಿಯನ್ನು ನೀಡಬೇಕಾಗಿದೆ. ಸೋಮವಾರ ಸಮಯ ವ್ಯರ್ಥ ಮಾಡದೆ ಮಾಹಿತಿ ನೀಡುತ್ತೇವೆ. ಸೋಮವಾರದವರೆಗೆ ವಿಚಾರಣೆ ಮುಂದೂಡಬೇಕೆಂದು ವಿಶೇಷ ಸಾರ್ವಜನಿಕ ಅಭಿಯೋಜಕರು (ಎಸ್‌ಪಿಪಿ) ನ್ಯಾಯಾಧೀಶರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸೋಮವಾರಕ್ಕೆ ಮುಂದೂಡಿಕೆ ಮಾಡಿ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಆದೇಶವನ್ನು ನೀಡಿದ್ದಾರೆ.
ಎಸ್ಐಟಿ ಪರ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡನೆ ಮಾಡಿದ್ದು, ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ, ವಿಳಂಬದ ಉದ್ದೇಶವಿಲ್ಲ. ನಾವು ವಾದ ಮಂಡಿಸಲು ಸ್ವಲ್ಪ ಸಮಯಾವಕಾಶ ಬೇಕಾಗಿದೆ ಎಂದು ಕೋರ್ಟ್ ಮುಂದೆ ಕೋರಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ನೀವು ಹಿರಿಯ ವಕೀಲರು ಇದ್ದೀರಿ, ವಿಳಂಬ ಮಾಡಬೇಡಿ
ಎಸ್‌ಐಟಿ ಪರ ವಕೀಲರಿಗೆ ಸೂಚಿಸಿದರು. ಅದಕ್ಕೆ ಒಪ್ಪಿದ ಜಯ್ನಾ ಕೊಠಾರಿ, ಕೋರ್ಟ್‌ಗೆ ಮತ್ತಷ್ಟು ಮಹತ್ವದ ಮಾಹಿತಿಯನ್ನು ನೀಡಬೇಕಾಗಿದೆ. ಯಾವುದೇ ಕಾರಣಕ್ಕೂ ಸೋಮವಾರ ಸಮಯ ವ್ಯರ್ಥ ಮಾಡಲ್ಲ ಎಂದು ಮನವಿ ಮಾಡಿದರು.
ಇದಕ್ಕೂ ಮೊದಲು ವಾದ ಮಂಡಿಸಿದ ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್, ನನ್ನ 56 ವರ್ಷಗಳ ವಕೀಲ ವೃತ್ತಿಯಲ್ಲಿ ತಪ್ಪು ಮಾಹಿತಿ ನೀಡಿಲ್ಲ. ಬೇಲ್ ಅರ್ಜಿ ಊರ್ಜಿತವಲ್ಲವೆಂದು ಎಸ್‌ಪಿಪಿ ವಾದ ಮಂಡಿಸಿದ್ದಾರೆ. ಇದು ಹೇಗೆ ಸಾಧ್ಯ? ಎಂದು ‘ಸುಪ್ರೀಂ’ ತೀರ್ಪುಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು. 2023ರ ತೀಸ್ತಾ ಸೆಟಲ್ ವಾಡ್ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಿದ ನಾಗೇಶ್, ಸೆಟಲ್ ವಾಡ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಇದೆ. ನಿರಂಜನ್ ಸಿಂಗ್ ಕೇಸ್‌ನಲ್ಲಿಯೂ ಜಾಮೀನು ಉಲ್ಲೇಖವಿದೆ. 22 ತೀರ್ಪುಗಳಲ್ಲಿ ನಿರಂಜನ್ ಕೇಸ್ ಅನ್ನು ಅನುಸರಿಸಲಾಗಿದೆ. ಕಸ್ಟಡಿಯಲ್ಲಿದ್ದಾಗಲೂ ಜಾಮೀನು ನೀಡಿರುವ ಉಲ್ಲೇಖವಿದೆ. ಒಂದೊಂದು ದಿನ ಒಬ್ಬೊಬ್ಬರನ್ನು ಎಸ್‌ಪಿಪಿಯಾಗಿ ನೇಮಕ ಮಾಡಲಾಗುತ್ತಿದೆ. ಮೊದಲು ಜಗದೀಶ್ ಇದ್ದರು, ಈಗ ಜಯ್ನಾ ಕೊಠಾರಿ ಇದ್ದಾರೆ. ಎಸ್‌ಪಿಪಿ ನೇಮಕಕ್ಕೂ ಕಾನೂನಿನಲ್ಲಿ ಕೆಲ ಕ್ರಮಗಳಿವೆ ಎಂದು ವಾದಿಸಿದರು.
ಈ ವೇಳೆ ವಾದ ಮಂಡನೆಗೆ ಜಯ್ನಾ ಕೊಠಾರಿ ಕಾಲಾವಕಾಶ ಕೋರಿದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಡ್ಜ್, ಈಗಾಗಲೇ ಆಕ್ಷೇಪಣೆಗೆ 3 ಬಾರಿ ಸಮಯ ನೀಡಲಾಗಿದೆ. ಇನ್ನೂ ಹೆಚ್ಚು ಸಮಯ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ಎಸ್‌ಐಟಿ ಕಾರ್ಯವೈಖರಿಗೆ ತೀವ್ರ ಆಕ್ಷೇಪ
ಈ ವೇಳೆ ವಾದ ಮುಂದುವರಿಸಿದ ನಾಗೇಶ್, ಪ್ರಕರಣದಲ್ಲಿ ಹಾಕಿದ ಸೆಕ್ಷನ್‌ಗಳ ಬಗ್ಗೆ ಉಲ್ಲೇಖಿದರು. ಸಂತ್ರಸ್ತೆ ಎಲ್ಲಿದ್ದಾರೆ, ಸಂತ್ರಸ್ತೆಗೆ ಏನಾದರೂ ಗಾಯವಾಗಿದೆಯಾ? ಸಂತ್ರಸ್ತೆಯ ಪರಿಸ್ಥಿತಿಯ ಬಗ್ಗೆ ಎಸ್‌ಐಟಿ ಮಾತನಾಡುತ್ತಿಲ್ಲ. ಸಂತ್ರಸ್ತೆ ಪತ್ತೆಯಾಗದ ಕಾರಣ ನಿರೀಕ್ಷಣಾ ಜಾಮೀನು ರಿಜೆಕ್ಟ್ ಆಗಿತ್ತು. ಮಹಿಳೆಯ ಸುರಕ್ಷತೆ ಸಂಬಂಧ ನಿರೀಕ್ಷಣಾ ಜಾಮೀನು ನಿರಾಕರಣೆ ಮಾಡಲಾಗಿತ್ತು. 364(a), 365 ಅಡಿ ಕೇಸ್ ದಾಖಲಿಸುವ ಅಗತ್ಯವೇ ಇರಲಿಲ್ಲ ಎಂದು ವಕೀಲರಾದ ನಾಗೇಶ್ ಅವರು ಎಸ್‌ಐಟಿ ಕಾರ್ಯವೈಖರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ: Prajwal Revanna case: ಪ್ರಜ್ವಲ್ ರೇವಣ್ಣ ಮೇಲೆ ಸುಳ್ಳು ಆರೋಪ ನೀಡಲು ಒತ್ತಡ: ಮಹಿಳೆ ದೂರು