ಬೆಂಗಳೂರು: ಆನೇಕಲ್ ತಾಲೂಕಿನ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ಸಂಭವಿಸಿರುವ ಅಗ್ನಿ ದುರಂತದಲ್ಲಿ (Attibele Fire Accident) 14 ಜನ ಕಾರ್ಮಿಕರು ದುರಂತ ಸಾವು ಕಂಡಿರುವ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಸುರಕ್ಷತೆ ಬಗ್ಗೆ ಮುನ್ನೆಚ್ಚರಿಕೆ (Safety precautions) ವಹಿಸದೆ ಇದ್ದಿದ್ದೇ ದುರಂತಕ್ಕೆ ಕಾರಣ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೆ, ಈ ಬಗ್ಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆಗೆ (High level investigation) ಆದೇಶಿಸಬೇಕು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮುಂದೆ ಇಂತಹ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮೃತರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಕೋರಿದ್ದಾರೆ. ಅಲ್ಲದೆ, ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಹೀಗಿದೆ
- ಆನೇಕಲ್ ತಾಲೂಕಿನ ಅತ್ತಿಬೆಲೆಯ ಪಟಾಕಿ ಸಂಗ್ರಹಾಗಾರದಲ್ಲಿ ಸಂಭವಿಸಿರುವ ಅಗ್ನಿ ದುರಂತದಲ್ಲಿ 14 ಜನ ಕಾರ್ಮಿಕರು ದುರಂತ ಸಾವು ಕಂಡಿರುವ ಘಟನೆಯ ಬಗ್ಗೆ ತಿಳಿದು ನನಗೆ ತೀವ್ರ ದಿಗ್ಭ್ರಮೆ ಉಂಟಾಗಿದೆ.
- ದೀಪಾವಳಿಗೆ ಬದುಕು ಕಟ್ಟಿಕೊಳ್ಳಲು ಹೊರಟಿದ್ದ ಈ ಮುಗ್ಧ ಜೀವಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಬಲಿಯಾಗಿರುವ ಘಟನೆ ನನ್ನ ಮನವನ್ನು ಕಲಕಿದೆ.
- ಜೀವ ಕಳೆದುಕೊಂಡ ಎಲ್ಲ ನತದೃಷ್ಟ ಕಾರ್ಮಿಕರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕುಟುಂಬಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
- ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಸಂಭವಿಸಿರುವ ಈ ಘಟನೆ ಅನೇಕ ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿದೆ. ಸುರಕ್ಷತೆ ಬಗ್ಗೆ ಮುನ್ನೆಚ್ಚರಿಕೆ ವಹಿಸದೆ ಇದ್ದಿದ್ದೇ ದುರಂತಕ್ಕೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.
- ಈ ಬಗ್ಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಮುಂದೆ ಇಂತಹ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು. ಬದುಕು ಕಳೆದುಕೊಂಡ ಕುಟುಂಬಗಳಿಗೆ ರಾಜ್ಯ ಸರಕಾರ ಆಸರೆಯಾಗಿ ನಿಲ್ಲಬೇಕು.
ಸರ್ಕಾರ ಈ ನಿಟ್ಟಿನಲ್ಲಿ ಕೂಡಲೇ ಕ್ರಮ ವಹಿಸಬೇಕು. ಜತೆಗೆ ಬದುಕು ಕಳೆದುಕೊಂಡ ಕುಟುಂಬಗಳಿಗೆ ರಾಜ್ಯ ಸರ್ಕಾರ ಆಸರೆಯಾಗಿ ನಿಲ್ಲಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
20 ಕಾರ್ಮಿಕರಿದ್ದರು
ದೀಪಾವಳಿ ಹಬ್ಬಕ್ಕಾಗಿ ಮಳಿಗೆಯಲ್ಲಿ ಹೆಚ್ಚು ಪಟಾಕಿಗಳನ್ನು ಶೇಖರಣೆ ಮಾಡಲಾಗಿತ್ತು. ಆದರೆ, ಏಕಾಏಕಿ ಪಟಾಕಿ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ದುರಂತ ಸಂಭವಿಸಿದೆ. ಮಳಿಗೆಯಲ್ಲಿ 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 6 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನವೀನ್ ಎಂಬುವವರ ಪಟಾಕಿ ಮಳಿಗೆ ಇದಾಗಿದ್ದು, ಪಟಾಕಿ ಬಾಕ್ಸ್ಗಳನ್ನು ತಂದು ಲಾರಿಯಿಂದ ಅನ್ಲೋಡ್ ಮಾಡುವಾಗ ಈ ಅವಘಡ ಸಂಭವಿಸಿದೆ.
ಮೃತರಲ್ಲಿ ಏಳು ಜನ ಒಂದೇ ಗ್ರಾಮದವರು
ಅಗ್ನಿ ಅವಘಡದಲ್ಲಿ ಸಜೀವವಾಗಿ ದಹನಗೊಂಡ 14 ಜನರ ಪೈಕಿ ಏಳು ಮಂದಿ ಒಂದೇ ಗ್ರಾಮದವರು ಎಂದು ತಿಳಿದುಬಂದಿದೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಟಿ ಅಮ್ಮಾಪೇಟೆ ಎಂಬ ಗ್ರಾಮದ ಗಿರಿ, ಆದಿಕೇಶವನ್, ವಿಜಯ್ ರಾಘವನ್, ಇಲಂಬರದಿ, ಆಕಾಶ, ವೇಡಪನ್ ಸಚಿನ್ ಸೇರಿ ಏಳು ಯುವಕರು ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದ್ದು, ಈ ವೇಳೆ ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಹಿಂಭಾಗ ಕೊಠಡಿಯಲ್ಲಿ ಸಜೀವ ದಹನ
ಗೋದಾಮಿನ ಒಳಗಡೆ ಸಿಲುಕಿಕೊಂಡ ಕಾರ್ಮಿಕರಿಗೆ ಎಮರ್ಜೆನ್ಸಿ ಎಕ್ಸಿಟ್ ಡೋರ್ ಸಹ ಇರದೇ ಇದ್ದರಿಂದ ಹೊರಗೆ ಹೋಗುವ ದಾರಿ ಕಾಣದಂತಾಗಿತ್ತು. ಹೀಗಾಗಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಹಿಂಬದಿಗೆ ಓಡಿ ಹೋಗಿದ್ದರು. ಆದರೆ, ಹಿಂಬದಿ ಸಹ ಪಟಾಕಿಗಳ ರಾಶಿಯೇ ಇತ್ತು. ಅಲ್ಲಿ ಅವರಿಗೆ ತಪ್ಪಿಸಿಕೊಳ್ಳಲು ದ್ವಾರ ಇರಲಿಲ್ಲ. ಇದರಿಂದ ಮತ್ತಷ್ಟು ಗಾಬರಿಗೊಂಡರು.
ಇದನ್ನೂ ಓದಿ: Attibele Fire Accident : ಎಮರ್ಜೆನ್ಸಿ ಎಕ್ಸಿಟ್ ಇದ್ದಿದ್ದರೆ ಬದುಕುತ್ತಿದ್ದರು ಆ 14 ಮಂದಿ!
ಕೊನೆಗೆ ಅವರಿಗೆ ಕಾಣಿಸಿದ್ದೇ ಪಟಾಕಿ ಗೋದಾಮಿನ ಹಿಂಭಾಗ ಇರುವ ಕೊಠಡಿಯಾಗಿದೆ. ಎಲ್ಲರೂ ಅಲ್ಲಿಯೇ ಹೋಗಿ ಅವಿತು ಕುಳಿತುಕೊಂಡಿದ್ದರು. ಹೀಗಾಗಿ ಒಂದೇ ಜಾಗದಲ್ಲಿ ಏಳು ಜನ ಸ್ನೇಹಿತರು ಸುಟ್ಟು ಕರಕಲಾಗಿ ಹೋದರು. ಇನ್ನು ಪಟಾಕಿ ಸಂಗ್ರಹಿಸಲು ಗೋದಾಮು ಮಾಲೀಕರ ಬಳಿ ಪರವಾನಗಿಯೇ ಇಲ್ಲ ಎಂಬ ಮಾಹಿತಿ ಸಹ ಲಭ್ಯವಾಗಿದೆ.