Site icon Vistara News

ಪಾಕಿಸ್ತಾನದಲ್ಲಿ 16ರ ಹಿಂದೂ ಬಾಲಕಿಯನ್ನು ಅಪಹರಿಸಿ ಮುಸ್ಲಿಂ ಯುವಕನಿಗೆ ಮದುವೆ

hindu girl

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಕ್ಕೆ ಇನ್ನೊಂದು ಉದಾಹರಣೆ ಸಿಕ್ಕಿದೆ. ಇಲ್ಲಿನ ಸಿಂಧ್‌ ಪ್ರಾಂತ್ಯದಲ್ಲಿ ೧೬ ವರ್ಷದ ಹಿಂದೂ ಬಾಲಕಿಯೊಬ್ಬಳನ್ನು ಅಪಹರಿಸಿ ಬಲವಂತವಾಗಿ ಮುಸ್ಲಿಂ ಯುವಕನೊಬ್ಬನಿಗೆ ಮದುವೆ ಮಾಡಲಾಗಿದೆ.

ಸಿಂಧ್‌ ಪ್ರಾಂತ್ಯದ ಖಾಜಿ ಅಹ್ಮದ್‌ ನಗರದಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಭಾಗದಲ್ಲಿ ಹಿಂದೂಗಳ ಮೇಲೆ ಸಾಕಷ್ಟು ದೌರ್ಜನ್ಯದ ಘಟನೆಗಳು ನಿರಂತರವಾಗಿ ನಡೆಯುತ್ತಿದೆ.
ಈ ನಡುವೆ, ಇಲ್ಲಿನ ಹಿಂದೂ ಸಮುದಾಯ ನವಾಬ್‌ ಶಾದಲ್ಲಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಅಸಿಪ್‌ ಅಲಿ ಜರ್ದಾರಿ ಅವರ ನಿವಾಸದ ಮುಂದೆ ಜಮಾಯಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.

ವಾರದ ಹಿಂದೆ ನಡೆದ ಘಟನೆ
ಕರೀನಾ ಎಂಬ ಹೆಸರಿನ ಈ ಬಾಲಕಿಯನ್ನು ಖಲೀಲ್‌ ರೆಹಮಾನ್‌ ಜೋನೋ ಎಂಬಾತ ಅಪಹರಿಸಿ ಮದುವೆಯಾಗಿರುವ ಈ ಘಟನೆ ಒಂದು ವಾರದ ಹಿಂದೆ ನಡೆದಿದೆ. ಬಾಲಕಿಯ ಮನೆಯವರು ಅಪಹರಣದ ದೂರು ದಾಖಲಿಸಿದ್ದರಿಂದ ಪೊಲೀಸರು ಖಲೀಲ್‌ನ ತಂದೆ ಅಸ್ಘರ್‌ ಜೋನೋ ಅವರನ್ನು ಬಂಧಿಸಿದ್ದಾರೆ.
ಈ ಮಧ್ಯೆ, ಸ್ಥಳೀಯ ಮುಸ್ಲಿಮರು ಕರೀನಾಳೇ ಖಲೀಲ್‌ ಜತೆ ಓಡಿ ಹೋಗಿದ್ದಾಳೆ. ಅವರಿಬ್ಬರು ಒಪ್ಪಿಯೇ ಕರಾಚಿ ಕೋರ್ಟ್‌ನಲ್ಲಿ ಮದುವೆಯಾಗಿದ್ದಾರೆ ಎಂದೂ ಹೇಳುತ್ತಿದ್ದಾರೆ.

ಈ ವರ್ಷದ ಆರಂಭದಲ್ಲಿ ಇದೇ ಸಿಂಧ್‌ ಪ್ರಾಂತ್ಯ ಸುಕ್ಕುರ್‌ ಎಂಬಲ್ಲಿ ಮುಸ್ಲಿಂ ಯುವಕರು ಪೂಜಾ ಕುಮಾರಿ ಎಂಬಾಕೆಯ ಮೇಲೆ ಆಕೆಯ ಮನೆಗೇ ನುಗ್ಗಿ ದೌರ್ಜನ್ಯ ನಡೆಸಲು ಮುಂದಾಗಿದ್ದರು. ಆಗ ಆಕೆ ಪ್ರತಿರೋಧ ತೋರಿದಾಗ ಆಕೆಯನ್ನು ಕೊಂದೇ ಹಾಕಿದ್ದರು. ಸಿಂಧ್‌ ಪ್ರಾಂತ್ಯದಲ್ಲಿ ಇಂಥ ಹಲವು ಘಟನೆಗಳು ನಡೆಯುತ್ತಲೇ ಇದ್ದು, ಮಾನವ ಹಕ್ಕುಗಳ ಸಂಘಟನೆಗಳು ಇದರ ಬಗ್ಗೆ ಧ್ವನಿ ಎತ್ತುತ್ತಲೇ ಇವೆ.

ಇದನ್ನೂ ಓದಿ| ಪಾಕಿಸ್ತಾನದಲ್ಲಿ ಮೊಬೈಲ್‌, ಅಂತರ್ಜಾಲಕ್ಕೂ ವಿದ್ಯುತ್‌ ಇಲ್ಲ

Exit mobile version