ಬೆಂಗಳೂರು: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ (HD Revanna Case) ಅವರಿಗೆ ಜಾಮೀನು (Bail) ನೀಡಲಾಗಿದೆ. ಗುರುವಾರ ಮಧ್ಯಂತರ ಜಾಮೀನು ನೀಡಿ ಶುಕ್ರವಾರಕ್ಕೆ (ಮೇ 17) ವಿಚಾರಣೆಯನ್ನು ಮುಂದೂಡಲಾಗಿತ್ತು. ಶುಕ್ರವಾರ ವಾದ – ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಸೋಮವಾರಕ್ಕೆ (ಮೇ 20) ವಿಚಾರಣೆಯನ್ನು ಮುಂದೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್.ಡಿ. ರೇವಣ್ಣ ಅವರಿಗೆ ಮಧ್ಯಂತರ ರಿಲೀಫ್ ಸಿಕ್ಕಿದೆಯಾದರೂ ಜೈಲಾ? ಬೇಲಾ? ಎಂಬುದು ಸೋಮವಾರ ಪ್ರಕಟವಾಗುವ ತೀರ್ಪಿನ ಮೇಲೆ ನಿಂತಿದೆ. ಇದೇ ವೇಳೆ ರೇವಣ್ಣ ಪರ ವಕೀಲರು ಪ್ರಕರಣದ ದೋಷಗಳನ್ನು ಕೋರ್ಟ್ ಮುಂದೆ ಎತ್ತಿ ತೋರಿಸಿದರು. ಪೊಲೀಸರು ದಾಖಲಿಸಿಕೊಂಡಿರುವ ದೂರಿನಲ್ಲಿ ಉಲ್ಲೇಖವಾಗಿರುವ ಮಹಿಳೆಯ ಹೇಳಿಕೆಯಲ್ಲಿನ ಗೊಂದಲದ ಬಗ್ಗೆ ಗಮನ ಸೆಳೆದಿದ್ದಾರೆ.
ಹೊಳೆನರಸೀಪುರದಲ್ಲಿ ಎಚ್.ಡಿ. ರೇವಣ್ಣ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರಿಗೆ ಜಾಮೀನು ನೀಡುವ ಬಗ್ಗೆ ವಾದ ಮಂಡಿಸಿದ ವಕೀಲ ಸಿ.ವಿ. ನಾಗೇಶ್, ದೂರುದಾರೆಯ ಹೇಳಿಕೆ ಬಗ್ಗೆ ಕೋರ್ಟ್ ಗಮನಕ್ಕೆ ತಂದರು. ಈ ಹೇಳಿಕೆಯು ಸಂಪೂರ್ಣ ಗೊಂದಲಮಯವಾಗಿದೆ. ಬೇಕೆಂದೇ ನಮ್ಮ ಕಕ್ಷಿದಾರರನ್ನು ಇಲ್ಲಿ ಫಿಟ್ ಮಾಡಲಾಗಿದೆ. ಇದೊಂದು ಸುಳ್ಳು ಕೇಸ್ ಎಂದು ವಾದಿಸಿದರು.
ಕೋರ್ಟ್‌ನಲ್ಲಿ ವಾದ ಮಂಡಿಸಿದ ಸಿ.ವಿ. ನಾಗೇಶ್, ದೂರುದಾರರು ಹೊಳೆನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಹೊಳೆನರಸೀಪುರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಬೆಂಗಳೂರಿಗೆ ಬಂದು ದೂರುದಾರರಿಂದ ತಮಗೆ ನೀಡಿದಂತೆ ದೂರು ಬರೆಸಿಕೊಂಡು ಹೋಗಿ ಕೇಸ್ ದಾಖಲಿಸಿದ್ದಾರೆ ಎಂಬುದನ್ನು ಗಮನಕ್ಕೆ ತಂದರು. ಅಲ್ಲದೆ, ಪೊಲೀಸರು ದಾಖಲು ಮಾಡಿಕೊಂಡಿರುವ ಹೇಳಿಕೆಯನ್ನು ಕೋರ್ಟ್ ಮುಂದೆ ಓದಿದರು.
ಇದು ಸಂತ್ರಸ್ತೆ ನೀಡಿದ ದೂರೇ ಅಲ್ಲ
ಪ್ರಜ್ವಲ್ ರೇವಣ್ಣ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ಏಪ್ರಿಲ್ 24ರ ರಾತ್ರಿ 11 ಗಂಟೆಗೆ ಬೆಂಗಳೂರಿನಲ್ಲಿರುವ ಸಂತ್ರಸ್ತೆಯೊಬ್ಬರು ದೂರು ನೀಡಲು ಬಂದಿದ್ದರು. ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿ, ಮಹಿಳಾ ಸಿಬ್ಬಂದಿಯೊಂದಿಗೆ ಸಂತ್ರಸ್ತೆ ಇರುವ ಸ್ಥಳಕ್ಕೆ ಹೋಗಿ ದೂರು ಪಡೆದು ಕೇಸ್ ದಾಖಲಿಸಿದ್ದಾಗಿ ಸ್ಟೇಷನ್ ಬುಕ್‌ನಲ್ಲಿ ಉಲ್ಲೇಖಿಸಿದ್ದಾರೆ. ಇಲ್ಲಿ ಸ್ಪಷ್ಟವಾಗಿ ಗೊತ್ತಾಗುವುದೇನೆಂದರೆ ಈ ದೂರು ರಿಜಿಸ್ಟರ್ ಆಗಿರುವುದಲ್ಲ. ದೂರನ್ನು ತಿದ್ದುಪಡಿ ಮಾಡಿ ತಮಗೆ ಬೇಕಾದ ಹಾಗೆ ಮಾಡಿಕೊಂಡಿದ್ದಾರೆ. ರೇವಣ್ಣ ವಿರುದ್ಧ ದೂರುದಾರೆ ನೀಡಿದ ದೂರನ್ನು ಮಹಿಳಾ ಅಧಿಕಾರಿ ದಾಖಲಿಸಿಕೊಳ್ಳಲ್ಲಿಲ್ಲ. ಆಕೆಯ ಹೇಳಿಕೆಯನ್ನು ಲಿಖಿತ ರೂಪದಲ್ಲಿ ದಾಖಲಿಸಿಕೊಂಡಿಲ್ಲ. ಇದು ಸಂತ್ರಸ್ತೆ ನೀಡಿದ ದೂರೇ ಅಲ್ಲ. ಬೇಕಂತಲೇ ಸೃಷ್ಟಿಯಾಗಿರುವ ಕೇಸ್ ಆಗಿದೆ. ಆಕೆಗೆ ಲೈಂಗಿಕ ದೌರ್ಜನ್ಯ ಅಂದರೇನು ಅಂತ ಗೊತ್ತೇ ಇರುವುದಿಲ್ಲ ಎಂದು ಸಿ.ವಿ. ನಾಗೇಶ್ ವಾದಿಸಿದರು.
ಸಂತ್ರಸ್ತೆ ಹೇಳಿಕೆಯಲ್ಲಿ ಭಾರಿ ಗೊಂದಲ!
ಲೈಂಗಿಕ ದೌರ್ಜನ್ಯವೇ ಬೇರೆ, ಅತ್ಯಾಚಾರವೇ ಬೇರೆ. ಸಂತ್ರಸ್ತೆ ನೀಡಿದ ದೂರಿನ ಅಂಶಗಳನ್ನು ಓದಿ ಹೇಳಿದ ಸಿ.ವಿ. ನಾಗೇಶ್, ಸಂತ್ರಸ್ತೆಯ ಪತಿ ಆಕೆಯ ಮೇಲೆ ಪಟ್ಟ ಅನುಮಾನವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆಕೆ ನನ್ನ ಮೇಲೆ ಆ ರೀತಿ ಕೃತ್ಯ ನಡೆದಿಲ್ಲ ಎಂದು ಹೇಳಿದ್ದಾಳೆ. ನಾಲ್ಕೈದು ವರ್ಷಗಳ ಹಿಂದೆ ನಡೆದಿರುವ ಕೃತ್ಯದ ಬಗ್ಗೆ ಆರೋಪಿಸಿದ್ದಾರೆ. ಒಂದು ಕಡೆ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ನೀಡಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳುತ್ತಾರೆ. ಮತ್ತೊಂದೆಡೆ ಸಂತ್ರಸ್ತೆ ಗಂಡ ಬೇರೆ ಹೆಣ್ಣು ಮಕ್ಕಳ ವಿಡಿಯೊ ಬಗ್ಗೆ ಕೇಳಿದಾಗ ನನ್ನ ಮೇಲೆ ಆ ರೀತಿ ಆಗಿಲ್ಲ ಅಂತ ಹೇಳಿದ್ದಾಳೆ. ಮತ್ತೊಂದೆಡೆ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳ ತಾಳಲಾರದೆ ಮನೆ ಕೆಲಸ ಬಿಟ್ಟು ಬಂದೆ ಎಂದು ಹೇಳುತ್ತಾಳೆ. ತನಿಖಾಧಿಕಾರಿಗಳು ಸಂತ್ರಸ್ತೆ ಹೇಳಿಕೆ ಆಧಾರದ ಮೇಲೆ 376 ದಾಖಲಿಸಲು ಅನುಮತಿ ಕೇಳಿದ್ದಾರೆ. ಯಾರ ಮೇಲೆ ಸೆಕ್ಷನ್ 376 ದಾಖಲಿಸುತ್ತಾರೆ ಎಂದು ಸಿ.ವಿ. ನಾಗೇಶ್ ಪ್ರಶ್ನೆ ಮಾಡಿದರು.
ದೂರುದಾರರು ಲೈಂಗಿಕ ದೌರ್ಜನ್ಯ ತಾಳಲಾರದೆ 4 ವರ್ಷದ ಹಿಂದೆ ಮನೆ ಕೆಲಸ ಬಿಟ್ಟೆ ಎಂದು ಹೇಳುತ್ತಾರೆ. ಮನೆ ಬಿಟ್ಟು ಬಂದಿದ್ದಕ್ಕೆ ಪೊಲೀಸರನ್ನು ಕಳುಹಿಸಿ ಆಶ್ರಯ ಮನೆ ಖಾಲಿ ಮಾಡಿಸಿದರು ಎಂದು ಆರೋಪಿಸುತ್ತಾರೆ. ತಮ್ಮ ಒಡವೆ, ಬಟ್ಟೆ ಎಲ್ಲವನ್ನೂ ಕಿತ್ತುಕೊಂಡರು ಎಂದು ಹೇಳುತ್ತಾರೆ. ಹಾಗಾದರೆ ನಾಲ್ಕೂವರೆ ವರ್ಷದ ಹಿಂದೆ ಅವರ ಮನೆಯಲ್ಲಿದ್ದಾಗ ನಡೆದ ಅತ್ಯಾಚಾರ, ಲೈಂಗಿಕ ದೌರ್ಜನ್ಯವು ಅವರಿಗೆ ಗೊತ್ತಾಗಲಿಲ್ಲವೇ? ಮನೆ ಖಾಲಿ ಮಾಡಿಸಿದ ಮೇಲೆ ಯಾಕೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ನಡೆದಿದೆ ಅಂತ ಗೊತ್ತಾಯ್ತಾ ಎಂದು ಸಿ.ವಿ. ನಾಗೇಶ್ ಪ್ರಶ್ನೆ ಮಾಡಿದರು.
ವಾದ ಆರಂಭಿಸಿ ಜಯ್ನಾ ಕೊಠಾರಿ
ಇದಕ್ಕೂ ಮೊದಲು 42ನೇ ಎಸಿಎಂಎಂ ಕೋರ್ಟ್‌ನಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಆರಂಭವಾಯಿತು. ಈ ವೇಳೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಬರಿಗಾಲಿನಲ್ಲಿಯೇ ಕೋರ್ಟ್‌ಗೆ ಹಾಜರಾದರು. ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡನೆಗೆ ಮುಂಚೆ ಇನ್ ಕ್ಯಾಮೆರಾ ವಿಚಾರಣೆ ನಡೆಸುವಂತೆ ಮನವಿ ಮಾಡಿದರು. ಅದಕ್ಕೆ ನ್ಯಾಯಾಧೀಶರು, ಮೊದಲು ಅರ್ಜಿ ವಿಚಾರಣೆಯ ಅರ್ಹತೆ ಬಗ್ಗೆ ವಾದ ಮಂಡಿಸಿ. ನಂತರ ಇನ್ ಕ್ಯಾಮೆರಾ ವಿಚಾರಣೆ ನಡೆಸೋಣ ಎಂದು ಹೇಳಿದರು.
ವಾದ ಶುರು ಮಾಡಿದ ಎಸ್ಐಟಿ ಪರ ಎಸ್‌ಪಿಪಿ ಜಯ್ನಾ ಕೊಠಾರಿ, ಹೊಳೆನರಸೀಪುರ ಪ್ರಕರಣದಲ್ಲಿ ಐಪಿಸಿ 376 ಸೆಕ್ಷನ್ ಹಾಕಲಾಗಿದ್ದು, ಇದು ಅತ್ಯಾಚಾರ ಆರೋಪವಾಗಿದೆ. ಸಂತ್ರಸ್ತೆಯ ವಿಚಾರಣೆ ಬಳಿಕ ಅತ್ಯಾಚಾರ ಆರೋಪ ದಾಖಲಾಗಿದೆ. ಸಂತ್ರಸ್ತೆ ಹೇಳಿಕೆಯನ್ನು ಅವರು ಕೋರ್ಟ್‌ನಲ್ಲಿ ಓದಿ ಹೇಳಿದರು. ಮೊದಲಿಗೆ ಈ ಕೇಸಿನಲ್ಲಿ ಸೆಕ್ಷನ್ 354 ಮಾತ್ರ ಇತ್ತು. ವಿಚಾರಣೆ ಬಳಿಕ 376 ಸೇರ್ಪಡೆಯಾಗಿದೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿರುವ ಅಂಶಗಳನ್ನು ಉಲ್ಲೇಖಿಸಿ ಕೋರ್ಟ್ ಗಮನಕ್ಕೆ ತಂದರು.
ಆಶ್ರಯ ಮನೆಯೂ ವಾಪಸ್
ಎಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಅಂಶಗಳ ಕೋರ್ಟ್ ಮುಂದೆ ಓದಿದ ಎಸ್‌ಪಿಪಿ ಜಯ್ನಾ ಕೊಠಾರಿ, ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ಕಿರುಕುಳ ತಾಳಲಾರದೆ ಮನೆ ಬಿಟ್ಟು ಬಂದಿರುವುದಾಗಿ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ಕೆಲಸ ಬಿಟ್ಟು ಬಂದಿದಕ್ಕೆ ಮೊದಲು ನೀಡಿದ್ದ ಆಶ್ರಯ ಮನೆಯನ್ನು ಬಲವಂತವಾಗಿ ವಾಪಸ್ ಪಡೆದಿದ್ದಾರೆ. ಆ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದರೂ ನ್ಯಾಯ ಸಿಕ್ಕಿಲ್ಲ. ಸಂತ್ರಸ್ತೆಯ ಆರೋಪಗಳನ್ನು ಕೋರ್ಟ್ ಮುಂದೆ ಹೇಳಿದರು.
ಹೀಗಾಗಿ ಸಂತ್ರಸ್ತೆ ಹೇಳಿಕೆ ಮೇಲೆ ಸೆಕ್ಷನ್ 376 ಅನ್ನು ಸೇರಿಸಲಾಗಿದೆ ಎಂದು ವಾದಿಸಿದ ಜಯ್ನಾ ಕೊಠಾರಿ, ನಾನ್ ಬೇಲಬಲ್ ಸೆಕ್ಷನ್ ಸೇರಿಸಿರುವುದರಿಂದ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯಬೇಕು. ಇದರಿಂದ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ತನಿಖಾಧಿಕಾರಿಯ ಮನವಿ ನಂತರ ಸೆಕ್ಷನ್ 376 ಸೇರ್ಪಡೆಗೊಂಡಿದೆ. ಈ ಮೊದಲಿಗೆ ಈ ಕೇಸಿನಲ್ಲಿ ಸೆಕ್ಷನ್ 354 A, D ಮಾತ್ರವಿತ್ತು. ಪ್ರಜ್ಬಲ್ ರೇವಣ್ಣ ಹಾಗೂ ರೇವಣ್ಣ ವಿರುದ್ಧ ಇರುವ ಪ್ರಕರಣವನ್ನು ವಿಭಜಿಸಬಾರದು. ಇಬ್ಬರಿಂದಲೂ ಲೈಂಗಿಕ ದೌರ್ಜನ್ಯ ನಡೆದಿದೆ. ಇದರಿಂದ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಇಂತಹ ಪ್ರಕರಣಗಳಲ್ಲಿ ಜಾಮೀನು ನಿರಾಕರಿಸಿರುವ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿ ವಾದಿಸಿದರು.
ದೂರುದಾರೆಗೆ ಇಬ್ಬರಿಂದಲೂ ಕಿರುಕುಳ
ಎಸ್ಐಟಿ ತಂಡದಿಂದ ತನಿಖೆ ಪ್ರಗತಿಯಲ್ಲಿದೆ. ಈ ಸಂದರ್ಭದಲ್ಲಿ ಆರೋಪಿಗೆ ಜಾಮೀನು ನೀಡುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತದೆ. ಬೇಲಬಲ್ ಸೆಕ್ಷನ್ ಇದ್ದಾಗ ಮಾತ್ರ ಸೆಕ್ಷನ್ 436 ಪ್ರಕಾರ ಜಾಮೀನು ನೀಡಬಹುದು. ಆದರೆ, ಈ ಪ್ರಕರಣದಲ್ಲಿ ನಾನ್ ಬೇಲಬಲ್ ಸೆಕ್ಷನ್ 436 ಅಡಿಯಲ್ಲಿ ಜಾಮೀನು ನೀಡುವಂತಿಲ್ಲ. ಅಲ್ಲದೆ, ನಾನ್ ಬೇಲಬಲ್ ಸೆಕ್ಷನ್ ಇರುವುದಿರಿಂದ ಇದರ ವಿಚಾರಣೆಯು ಸೆಷನ್ಸ್ ಕೋರ್ಟ್‌ನಲ್ಲಿರುವುದರಿಂದ ಅಲ್ಲಿ ವಿಚಾರಣೆ ನಡೆಯಬೇಕು. ದೂರುದಾರರಿಗೆ ಮನೆಯಲ್ಲಿ ಇಬ್ಬರಿಂದಲೂ (ರೇವಣ್ಣ, ಪ್ರಜ್ವಲ್) ಕಿರುಕುಳ ನಡೆದಿದೆ. ಇದನ್ನೆಲ್ಲ ಮುಕ್ತ ನ್ಯಾಯಾಲಯದಲ್ಲಿ ವಿವರಿಸಲು ಆಗದು. ಇದು ಇನ್ ಕ್ಯಾಮೆರಾ ವಿಚಾರಣೆ ನಡೆಯಬೇಕು ಎಂದು ಜಯ್ನಾ ಕೊಠಾರಿ ವಾದ ಮಂಡಿಸಿದರು.
ಜಾಮೀನು ಅರ್ಜಿ ವಿಚಾರಣೆ ವ್ಯಾಪ್ತಿ ಈ ಕೋರ್ಟ್‌ಗಿಲ್ಲ: ಜಯ್ನಾ ಕೊಠಾರಿ
ಇಲ್ಲಿ ತಂದೆ – ಮಗ ಇಬ್ಬರಿಂದಲೂ ಲೈಂಗಿಕ ದೌರ್ಜನ್ಯ ನಡೆದಿದೆ. ರೇವಣ್ಣ ಅವರಿಂದ ಇಷ್ಟೇ ಪ್ರಮಾಣದಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಲು ಸಾಧ್ಯವಿಲ್ಲ. ಅದೆಲ್ಲವೂ ತನಿಖೆಯ ನಂತರವಷ್ಟೇ ಗೊತ್ತಾಗಬೇಕಿದೆ. ಈಗಲೇ ಶಾಸಕ ರೇವಣ್ಣ ಮೇಲೆ ಅತ್ಯಾಚಾರ ಆರೋಪ ಇಲ್ಲವೆಂದು ಹೇಳಲು ಸಾಧ್ಯವಾಗುವುದಿಲ್ಲ. ಒಮ್ಮೆ ಅತ್ಯಾಚಾರ ಆರೋಪ ದಾಖಲಾದರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಜಾಮೀನು ಅರ್ಜಿ ವಿಚಾರಣೆ ನಡೆಸಲು ಈ ಕೋರ್ಟ್‌ಗೆ ವ್ಯಾಪ್ತಿ ಇಲ್ಲ. ಸೆಕ್ಷನ್ 376 ಅಪರಾಧಕ್ಕೆ ಜೀವಾವಧಿ ಶಿಕ್ಷೆ ಇದೆ. ಇದು ಜಾಮೀನುರಹಿತ ಅಪರಾಧವಾಗಿದೆ. ಹೀಗಿದ್ದಾಗ ಜಾಮೀನು ಅರ್ಜಿ ಊರ್ಜಿತವಲ್ಲ. ಇಬ್ಬರ ವಿರುದ್ಧ ತನಿಖೆ ಇನ್ನೂ ನಡೆಯುತ್ತಿದೆ. ಆರೋಪ ಪಟ್ಟಿ ದಾಖಲಾದ ನಂತರವಷ್ಟೇ ಯಾರ ಮೇಲೆ ಏನು ಆರೋಪ ಎಂದು ತಿಳಿಯಲಿದೆ. ಸೆಕ್ಷನ್ 41ಎ ಅಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರೂ ಬಂದಿಲ್ಲ. ಇದನ್ನು ಜಾಮೀನು ಅರ್ಜಿಯ ವಿಚಾರಣೆ ವೇಳೆ ಹೇಳುತ್ತೇನೆ. ಈಗ ಜಾಮೀನು ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಬಾರದೆಂಬ ವಿಚಾರಕ್ಕಷ್ಟೇ ವಾದಿಸುತ್ತಿದ್ದೇನೆ ಎಂದು ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡಿಸಿದರು.
ಬಳಿಕ ಮತ್ತೊಬ್ಬ ಎಸ್‌ಪಿಪಿ ಅಶೋಕ್ ನಾಯಕ್ ವಾದ ಮಂಡಿಸಿ, ಜನಪ್ರತಿನಿಧಿಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು ಇಲ್ಲಿಗೆ ಬರುತ್ತವೆ. ಜಾಮೀನು ಅಂದರೆ ಸೆಷನ್ ನ್ಯಾಯಾಲಯದ ಕೋರ್ಟ್ 82ಕ್ಕೆ ಬರುತ್ತದೆ ಎಂದು ಹೇಳುತ್ತಿದ್ದಂತೆ ಮಧ್ಯಪ್ರವೇಶಿಸಿದ ನ್ಯಾಯಾಧೀಶರು, ಇದು ಪೋಕ್ಸೋ ಕೇಸ್ ಆಗಿದ್ದರೆ ನೀವು ಸೆಷನ್ ಕೋರ್ಟ್‌ಗೆ ಹೋಗಿ. ಇದು ಇಲ್ಲಿ ನಿರ್ವಹಿಸಲಾಗದಿದ್ದರೆ ಅಲ್ಲಿಗೆ ಕಳಿಸಲಾಗುತ್ತದೆ ಎಂದು ಹೇಳಿದರು.
ಮತ್ತೆ ವಾದ ಮುಂದುವರಿಸಿದ ಅಶೋಕ್ ನಾಯಕ್, ಸಂತ್ರಸ್ತೆ ಮೇಲೆ ತಂದೆ ಮತ್ತು ಪುತ್ರ ಇಬ್ಬರೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಒಬ್ಬಳ ಮೇಲೆ ಪದೇ ಪದೆ ದೌರ್ಜನ್ಯವೆಸಗಿದ್ದಾರೆ. ಕೊಲೆ ಪ್ರಕರಣದಲ್ಲಿ 302 ಸೆಕ್ಷನ್ ಜತೆಗೆ ಇತರೆ ಬೇಲಬಲ್ ಸೆಕ್ಷನ್‌ಗಳನ್ನ ಹಾಕಿರುತ್ತಾರೆ. ಹಾಗಂತ ಆರೋಪಿಗಳನ್ನು ಹಾಗೂ ಕೇಸ್ ಅನ್ನು ವಿಭಜನೆ ಮಾಡಲು ಆಗುತ್ತದೆಯೇ? ಅದೇ ರೀತಿ ಈ ಪ್ರಕರಣದಲ್ಲಿ ತಂದೆ, ಮಗ ಇಬ್ಬರೂ ಒಂದೇ ಅಪರಾಧ ಎಸಗಿದ್ದಾರೆ. ಒಂದೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಎರಡನೇ ಆರೋಪಿಯನ್ನು ಮೊದಲನೇ ಆರೋಪಿಯೇ ರಕ್ಷಣೆ ಮಾಡುತ್ತಿದ್ದಾರೆ. ದೇಶ ಬಿಟ್ಟು ಹೋಗಲು ಮೊದಲ ಆರೋಪಿಯೇ ಸಹಾಯ ಮಾಡಿದ್ದಾರೆ ಎಂದು ಹೇಳಿದರು.
ಪ್ರತಿ ವಾದ ಮಂಡಿಸಿದ ಸಿ.ವಿ. ನಾಗೇಶ್
ಈ ವೇಳೆ ರೇವಣ್ಣ ಪರ ವಕೀಲ ಸಿ.ವಿ. ನಾಗೇಶ್ ಪ್ರತಿವಾದ ಆರಂಭಿಸಿ, ನಮ್ಮ ಕಕ್ಷಿದಾರರ ವಿರುದ್ಧ ದಾಖಲಾಗಿರುವ ಪ್ರಕರಣವು ಬೇಲಬಲ್ ಸೆಕ್ಷನ್‌ಗಳಾಗಿವೆ. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಕೇಸ್‌ನಲ್ಲಿ ಜಾಮೀನು ನೀಡಬೇಕಾದ ಸೆಕ್ಷನ್‌ಗಳನ್ನು ಹಾಕಲಾಗಿದೆ. ಎಫ್ಐಆರ್ ದಾಖಲಾದ ದಿನಾಂಕ, ಅದರಲ್ಲಿರುವ ಸೆಕ್ಷನ್‌ಗಳು ಏನು ಎಂಬುದನ್ನು ಇದೇ ವೇಳೆ ಕೋರ್ಟ್ ಗಮನಕ್ಕೆ ತಂದರು. ಯಾವುದೇ ವ್ಯಕ್ತಿಯ ವಿರುದ್ಧ ದೂರು ದಾಖಲಾದರೆ, ಆತ ಬಂಧನಕ್ಕೊಳಗಾಗುವ ಮುನ್ನ ಶರಣಾದರೆ ಜಾಮೀನು ನೀಡಬಹುದು. ಇದರ ಗ್ರಾವಿಟಿಯೇ 436 ಸಿಆರ್‌ಪಿಸಿ ಆಗಿದೆ. ಇಲ್ಲಿ ಸಿಆರ್‌ಪಿಸಿ 439 ಅಲ್ಲ. ರೇವಣ್ಣ ವಿರುದ್ಧ ಈಗ ಆರೋಪ ಕೇಳಿಬಂದಿದೆ. ಆದರೆ, ಈ ಆರೋಪವು ದೂರು ದಾಖಲಾದ ದಿನ ಅಥವಾ ವಾರದ ಹಿಂದೆ ಇಲ್ಲವೇ ವರ್ಷದ ಹಿಂದೆ ನಡೆದಿಲ್ಲ. ಕೃತ್ಯ ನಡೆದು ಹಲವು ವರ್ಷಗಳೇ ಕಳೆದು ಹೋಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗರ್ಭಗುಡಿಯಲ್ಲಿ ದೇವರು ಕುಳಿತಂತೆ ಕುಳಿತಿದ್ದೆ!
ಈ ವೇಳೆ ಮಧ್ಯ ಪ್ರವೇಶ ಮಾಡಿದ ಎಸ್‌ಪಿಪಿ ಜಯ್ನಾ ಕೊಠಾರಿ ಆಕ್ಷೇಪ ವ್ಯಕ್ತಪಡಿಸಲು ಮುಂದಾದರು. ಅದಕ್ಕೆ ಸಿಟ್ಟಾದ ಸಿ.ವಿ. ನಾಗೇಶ್, “ನೀವು ವಾದ ಮಾಡಬೇಕಾದರೆ ನಾನು ಗರ್ಭಗುಡಿಯಲ್ಲಿ ದೇವರು ಕುಳಿತ ಹಾಗೆ ಕುಳಿತುಕೊಂಡಿದ್ದೆ. ಏನಾದರೂ ತೊಂದರೆ ಮಾಡಿದ್ದೇನಾ? ಎಂದು ಪ್ರಶ್ನಿಸಿ ತಮ್ಮ ವಾದವನ್ನು ಮುಂದುವರಿಸಿದರು.
ಇದು ಅತ್ಯಾಚಾರ ಪ್ರಕರಣ ಅಲ್ಲ
ಸೆಷನ್ಸ್ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ 376 ಸೆಕ್ಷನ್ ಇರಲಿಲ್ಲ. ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಬಂದಾಗ ಈ ಸೆಕ್ಷನ್ ಸೇರ್ಪಡೆಯಾಗಿದೆ. ಅವತ್ತು ನಿರೀಕ್ಷಣಾ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದರು. ಇವರು ಮೊದಲೇ 376 ಇದೆ ಎಂದು ಹೇಳಿದ್ದರೆ, ನಾವು ನಿರೀಕ್ಷಣಾ ಜಾಮೀನು ಅರ್ಜಿಯನ್ನೇ ವಾಪಸ್ ಪಡೆಯುತ್ತಿರಲಿಲ್ಲ. ರೇವಣ್ಣ ವಿರುದ್ಧ 376 ಇದೆ ಅಂತ ಹೇಳಲಿ. ಆಗ ನಾವು ಕಾನೂನು ಹೋರಾಟಕ್ಕೆ ಸಿದ್ಧರಿದ್ದೇವೆ. ನಮ್ಮ ಕಕ್ಷಿದಾರರ ವಿರುದ್ಧ ದಾಖಲಾಗಿರೋದು ಕೇವಲ ಲೈಂಗಿಕ ದೌರ್ಜನ್ಯ ಪ್ರಕರಣವಾಗಿದೆ. ಅತ್ಯಾಚಾರ ಪ್ರಕರಣ ಅಲ್ಲ. ಇದೊಂದು ಸುಳ್ಳು ಕೇಸ್ ಆಗಿದೆ ಎಂದು ಸಿ.ವಿ. ನಾಗೇಶ್ ವಾದಿಸಿದರು.
ಇದುವರೆಗೂ ರೇವಣ್ಣ ಅವರಿಗೆ ನೀಡಿದ ಯಾವ ನೋಟಿಸ್‌ನಲ್ಲೂ ಸೆಕ್ಷನ್ 376 ಇದೆ ಅಂತ ಉಲ್ಲೇಖಿಸಿಲ್ಲ. ಈಗ 376 ಇದೆ ಎಂದು ಹೇಳುತ್ತಿದ್ದಾರೆ. ಇದರಿಂದ ನಮ್ಮ ಕಕ್ಷಿದಾರರಿಗೆ ಜಾಮೀನು ನೀಡಬಹುದು. ರೇವಣ್ಣ ವಿರುದ್ಧ ದಾಖಲಾಗಿರುವ ಕೇಸ್‌ನಲ್ಲಿ ಎಲ್ಲವೂ ಬೇಲಬಲ್ ಸೆಕ್ಷನ್‌ಗಳಿವೆ. ಹೀಗಾಗಿ ಜಾಮೀನು ನೀಡಬೇಕೆಂದು ಮನವಿ ಮಾಡಿದ ಸಿ.ವಿ. ನಾಗೇಶ್ ತಮ್ಮ ವಾದವನ್ನು ಮುಕ್ತಾಯ ಮಾಡಿದರು.
ಇದನ್ನೂ ಓದಿ: Prajwal Revanna Case: ವಕೀಲ ದೇವರಾಜೇಗೌಡರಿಗೆ ನ್ಯಾಯಾಂಗ ಬಂಧನ; ಪೊಲೀಸ್ ಕಸ್ಟಡಿ ಅಂತ್ಯ
ಎಫ್‌ಐಆರ್ ಬಳಿಕವೂ ಸೆಕ್ಷನ್ ಸೇರಿಸಬಹುದು
ಬಳಿಕ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡಿಸಿ, ರೇವಣ್ಣ ಪರ ವಕೀಲರು ಕೇವಲ ಬೇಲಬಲ್ ಸೆಕ್ಷನ್‌ಗಳ ಬಗ್ಗೆ ಮಾತ್ರ ಹೇಳಿದ್ದಾರೆ. ಪ್ರಾರಂಭದಲ್ಲೇ ಜಾಮೀನು ರಹಿತ ಸೆಕ್ಷನ್‌ಗಳನ್ನು ದಾಖಲಿಸದೆ ಇರಬಹುದು. ತನಿಖೆ ನಡೆದಾಗ ಯಾವಾಗ ಬೇಕಿದ್ದರೂ ಅಪರಾಧ ನಡೆದಿರುವ ಸೆಕ್ಷನ್‌ಗಳನ್ನು ಎಫ್‌ಐಆರ್‌ನಲ್ಲಿ ಸೇರಿಸಬಹುದು. ಈ ಬಗ್ಗೆ ಅವಕಾಶವೂ ಇದೆ. ನಂತರವು ಜಾಮೀನು ರಹಿತದ ಸೆಕ್ಷನ್‌ಗಳನ್ನು ಕೂಡಾ ಸೇರಿಸುವ ಅವಕಾಶ ಇದೆ. ಅದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂದು ಹೇಳಿದರು.
ಭಯದಿಂದ ಗಂಡನ ಬಳಿ ಸತ್ಯ ಮುಚ್ಚಿಟ್ಟಿರುವ ಸಂತ್ರಸ್ತೆ
ರೇವಣ್ಣ ಪರ ವಕೀಲರು ಹೇಳುವಂತೆ ಮಹಿಳಾ ಪೊಲೀಸ್ ಇಲ್ಲದೆ ನಮ್ಮ ಪೊಲೀಸರು ಹೋಗಿಲ್ಲ. ಮಹಿಳಾ ಸಿಬ್ಬಂದಿಯ ಜತೆಯಲ್ಲೆ ಹೋಗಿ ದೂರು ದಾಖಲಿಸಿಕೊಂಡಿದ್ದಾರೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಸಂತ್ರಸ್ತೆ ತನ್ನ ಗಂಡನ ಬಳಿ ಕೆಲವೊಂದನ್ನು ಮುಚ್ಚಿಟ್ಟಿದ್ದಾಳೆ. ಸತ್ಯ ಹೇಳಿದರೆ ಮನೆಯಿಂದ ಹೊರ ಹಾಕುತ್ತಾರೆ ಎಂಬ ಭಯದಲ್ಲಿ ಆಕೆ ಗಂಡನಿಗೆ ಆ ರೀತಿಯಾಗಿ ಹೇಳಿದ್ದಾಳೆ. ಆಕೆಯ ಸುರಕ್ಷತೆಗೆ ಸಂಬಂಧಿಸಿದ ವಿಚಾರವಾಗಿದ್ದರಿಂದ ರಹಸ್ಯ ಸ್ಥಳದಲ್ಲಿ ದೂರು ಪಡೆಯಲಾಗಿದೆ. ಇದು ಸಂಪೂರ್ಣವಾಗಿ ಮಹಿಳೆಯ ರಕ್ಷಣೆಗೆ ಸಂಬಂಧಿಸಿದ ವಿಚಾರವಾಗಿದೆ. ನಾವು ಮೆಮೋ ಹಾಕಿದ್ದೆವು, ರಿಮಾಂಡ್ ಅಪ್ಲಿಕೇಶನ್‌ನಲ್ಲೂ ಲೈಂಗಿಕ ದೌರ್ಜನ್ಯ ಅಂತ ಹೇಳಿದ್ದೆವು. ಆದರೆ, ಈಗ ಸೆಕ್ಷನ್ 376 ಹಾಕಿರುವುದಕ್ಕೆ ದಾಖಲೆ ಇದೆ ಎಂದು ಎಸ್‌ಪಿಪಿ ಜಯ್ನಾ ಕೊಠಾರಿ ತಮ್ಮ ವಾದವನ್ನು ಮುಕ್ತಾಯಗೊಳಿಸಿದರು.