ಬೆಂಗಳೂರು: ಹೊಳೆನರಸೀಪುರ (Holenarasipura) ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ (physical abuse) ಪ್ರಕರಣದಲ್ಲೂ ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna case) ಅವರಿಗೆ ಜಾಮೀನು (Bail) ಮಂಜೂರಾಗಿದೆ. ಇನ್ನೊಂದು ಪ್ರಕರಣದಲ್ಲಿ ಈಗಾಗಲೇ ಜಾಮೀನು ದೊರೆತಿರುವುದರಿಂದ ರೇವಣ್ಣಗೆ ಬಿಗ್ ರಿಲೀಫ್ ದೊರೆತಂತಾಗಿದೆ ಎಂದು ಅಂದುಕೊಳ್ಳುತ್ತಿರುವಂತೆ ಅವರಿಗೆ ಎಸ್‌ಐಟಿ ಶಾಕ್ ನೀಡಿದೆ. ಜಾಮೀನು ಅರ್ಜಿಯನ್ನು ಪ್ರಶ್ನೆ ಮಾಡಿ ಹೈಕೋರ್ಟ್ ಮೊರೆ ಹೋಗಿದೆ.
ಜನಪ್ರತಿನಿಧಿಗಳ ಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಎಸ್ಐಟಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಆದೇಶವನ್ನು ಪ್ರಶ್ನೆ ಮಾಡಲಿದೆ.
ಈ ಸಂಬಂಧ ಜೆಡಿಎಸ್ ಮುಖಂಡ ಎ.ಪಿ. ರಂಗನಾಥ್ ಮಾಧ್ಯಮದವರೊಂದಿಗೆ ಮಾತನಾಡಿ, ಕಳೆದ ವಾರ ವಾದ – ಪ್ರತಿವಾದಗಳು ನಡೆದಿದ್ದವು. ಹೊಸ ಪ್ರಯೋಗ ಮಾಡಲು ಹೋಗಿ ಎಸ್‌ಐಟಿಗೆ ಮುಖಭಂಗವಾಗಿದೆ. ಇವತ್ತು ನ್ಯಾಯಾಲಯ ಎಸ್‌ಐಟಿಯ ನಡೆಯನ್ನು ವಜಾ ಮಾಡಿದೆ. ಇದೇ ಎಸ್‌ಐಟಿಯ ಎಸ್‌ಪಿಪಿ ಹೆಚ್ಚುವರಿ ಸೆಕ್ಷನ್ ಸೇರಿಸಲ್ಲವೆಂದು ಕೋರ್ಟ್‌ಗೆ ಹೇಳಿದ್ದರು. ಕೊನೆಗೆ 354 ಕೇಸ್‌ನಲ್ಲಿನ ಜಾಮೀನು ತೆಗೆದುಕೊಳ್ಳಲು ಬಂದಾಗ 376 ಸೇರಿಸಿದ್ದೇವೆ ಎಂದು ಹೇಳಿಕೊಂಡರು. ರೇವಣ್ಣ ಪರ ಹಿರಿಯ ಪರ ವಕೀಲ ಸಿ.ವಿ. ನಾಗೇಶ ವಾದ ಮಂಡಿಸಿ, ಎಸ್‌ಐಟಿ ತಪ್ಪುಗಳನ್ನು ಕೋರ್ಟ್ ಗಮನಕ್ಕೆ ತಂದರು. ಇವತ್ತು ನಮಗೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ಐದು ಲಕ್ಷ ರೂಪಾಯಿಯ ಬಾಂಡ್ ಮೇಲೆ ರೇವಣ್ಣಗೆ ಜಾಮೀನು ಸಿಕ್ಕಿದೆ. ಕೆ.ಆರ್. ನಗರ ಕೇಸ್‌ನಲ್ಲಿ ರೇವಣ್ಣ ಅವರಿಗೆ ಸಿಕ್ಕಿದ ಜಾಮೀನು ಆದೇಶವನ್ನು ಪ್ರಶ್ನಿಸಿ ಎಸ್ಐಟಿ ಹೈಕೋರ್ಟ್ ಮೊರೆ ಹೋಗಿರುವುದು ಸರ್ಕಾರದ ಹುನ್ನಾರವಾಗಿದೆ. ಇದರಲ್ಲಿ ರೇವಣ್ಣ ಅವರನ್ನು ಸಿಲುಕಿಸುವ ಪ್ರಯತ್ನ ನಡೆದಿದೆ. ಅವರ ಕಾನೂನು ಹೋರಾಟಕ್ಕೆ ನಾವು ಕೂಡ ಸಮರ್ಥವಾಗಿ ಹೈಕೋರ್ಟ್‌ನಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಹೊಳೆನರಸೀಪುರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಚ್‌ಡಿ ರೇವಣ್ಣಗೆ ಜಾಮೀನು
ಜಾಮೀನಿಗೆ ಐದು ಲಕ್ಷ ರೂಪಾಯಿ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ನೀಡುವಂತೆ ನ್ಯಾಯಾಧೀಶರು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ. 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರಾದ ಪ್ರೀತ್ ಜೆ. ಅವರು ಆದೇಶ ಹೊರಡಿಸಿದ್ದಾರೆ. ಇಂದು ವಿಚಾರಣೆಗೆ ರೇವಣ್ಣ ಬರಿಗಾಲಲ್ಲೇ ಹಾಜರಾಗಿದ್ದರು. ಜಾಮೀನು ದೊರೆತ ಬಳಿಕ ಅವರ ಮುಖದಲ್ಲಿ ನಿರಾಳತೆ ಕಂಡುಬಂತು.
ಗುರುವಾರ ಮಧ್ಯಂತರ ಜಾಮೀನು ನೀಡಿ ಶುಕ್ರವಾರಕ್ಕೆ (ಮೇ 17) ವಿಚಾರಣೆಯನ್ನು ಮುಂದೂಡಲಾಗಿತ್ತು. ಶುಕ್ರವಾರ ವಾದ – ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಸೋಮವಾರಕ್ಕೆ (ಮೇ 20) ವಿಚಾರಣೆಯನ್ನು ಮುಂದೂಡಿದ್ದರು. ಇದೀಗ ಎರಡನೇ ಪ್ರಕರಣದಲ್ಲಿ ಅವರಿಗೆ ಜಾಮೀನು ಲಭ್ಯವಾಗಿದೆ.
ಚಾಮರಾಜನಗರದ ಸಂತ್ರಸ್ತೆಯ ಕಿಡ್‌ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ರೇವಣ್ಣ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿತ್ತು. ಆರು ದಿನಗಳ ನಿರಂತರ ಕಾನೂನು ಸಮರದ ಬಳಿಕ ಅವರಿಗೆ ಜಾಮೀನು ದೊರೆತಿತ್ತು.
ಹೊಳೆನರಸೀಪುರ ಪ್ರಕರಣದಲ್ಲಿ ಎಸ್‌ಐಟಿ ಪರ ವಾದ ಮಂಡಿಸಿದ ಎಸ್‌ಪಿಪಿ ಜಯ್ನಾ ಕೊಠಾರಿ, ಎಚ್. ಡಿ. ರೇವಣ್ಣ ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು. ಆರೋಪಿ ರೇವಣ್ಣ ಅವರನ್ನು ಪೊಲೀಸರ ವಶಕ್ಕೆ ನೀಡಬೇಕು. ಇದೇ ಪ್ರಕರಣದ ಇನ್ನೊಬ್ಬ ಆರೋಪಿ ವಿಚಾರಣೆಗೆ ಹಾಜರಾಗಿಲ್ಲ. ಮತ್ತೊಬ್ಬ ಆರೋಪಿ ದೇಶ ಬಿಟ್ಟು ಹೋಗಿದ್ದಾರೆ. ಹೀಗಾಗಿ ಸಮಯ ನೀಡಬಾರದು. ಇಂದೇ ವಿಚಾರಣೆ ನಡೆಸಿ ಆದೇಶ ನೀಡಿ ಅಥವಾ ಪೊಲೀಸರ ವಶಕ್ಕೆ ನೀಡಬೇಕು ಎಂದು ವಾದಿಸಿದರು.
ಇದಕ್ಕೆ ಪ್ರತಿವಾದ ಮಂಡಿಸಿದ ರೇವಣ್ಣ ಪರ ವಕೀಲ ಅರುಣ್, ಎಚ್.ಡಿ. ರೇವಣ್ಣ ವಿರುದ್ಧ ಯಾವುದೇ ನಾನ್ ಬೇಲೆಬಲ್ ಸೆಕ್ಷನ್ ಇಲ್ಲ. ಜಾಮೀನು ನೀಡುವಂತಹ ಸೆಕ್ಷನ್‌ಗಳು ಇವೆ ಎಂದು ಹೇಳಿದರು. ನಾನ್ ಬೇಲೆಬಲ್ ಸೆಕ್ಷನ್ ಪ್ರಕರಣದಲ್ಲಿ ಸರ್ಕಾರದ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸುವ ಅಧಿಕಾರವೇ ಇಲ್ಲ. ಎಸ್‌ಪಿಪಿಗೆ ಆಕ್ಷೇಪಣೆ ಸಲ್ಲಿಸುವ ಅಧಿಕಾರ ಇದೆಯೇ ಎಂಬುದು ಮೊದಲು ನಿರ್ಧಾರ ಆಗಲಿ. ಈಗಾಗಲೇ ಎಚ್.ಡಿ. ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಆಗಲೇ ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಬಹುದಿತ್ತು. ಈಗ ಎಸ್ಐಟಿ ಕಸ್ಟಡಿಗೆ ಕೇಳುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ರೇವಣ್ಣ ಪರ ವಕೀಲರ ವಾದ ಹೀಗಿತ್ತು
ವಾದದ ವೇಳೆ ರೇವಣ್ಣ ಪರ ವಕೀಲರು ಪ್ರಕರಣದ ದೋಷಗಳನ್ನು ಕೋರ್ಟ್ ಮುಂದೆ ಎತ್ತಿ ತೋರಿಸಿದರು. ಪೊಲೀಸರು ದಾಖಲಿಸಿಕೊಂಡಿರುವ ದೂರಿನಲ್ಲಿ ಉಲ್ಲೇಖವಾಗಿರುವ ಮಹಿಳೆಯ ಹೇಳಿಕೆಯಲ್ಲಿನ ಗೊಂದಲದ ಬಗ್ಗೆ ಗಮನ ಸೆಳೆದಿದ್ದಾರೆ.
ಹೊಳೆನರಸೀಪುರದಲ್ಲಿ ಎಚ್.ಡಿ. ರೇವಣ್ಣ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರಿಗೆ ಜಾಮೀನು ನೀಡುವ ಬಗ್ಗೆ ವಾದ ಮಂಡಿಸಿದ ವಕೀಲ ಸಿ.ವಿ. ನಾಗೇಶ್, ದೂರುದಾರೆಯ ಹೇಳಿಕೆ ಬಗ್ಗೆ ಕೋರ್ಟ್ ಗಮನಕ್ಕೆ ತಂದರು. ಈ ಹೇಳಿಕೆಯು ಸಂಪೂರ್ಣ ಗೊಂದಲಮಯವಾಗಿದೆ. ಬೇಕೆಂದೇ ನಮ್ಮ ಕಕ್ಷಿದಾರರನ್ನು ಇಲ್ಲಿ ಫಿಟ್ ಮಾಡಲಾಗಿದೆ. ಇದೊಂದು ಸುಳ್ಳು ಕೇಸ್ ಎಂದು ವಾದಿಸಿದರು.
ಕೋರ್ಟ್‌ನಲ್ಲಿ ವಾದ ಮಂಡಿಸಿದ ಸಿ.ವಿ. ನಾಗೇಶ್, ದೂರುದಾರರು ಹೊಳೆನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಹೊಳೆನರಸೀಪುರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಬೆಂಗಳೂರಿಗೆ ಬಂದು ದೂರುದಾರರಿಂದ ತಮಗೆ ನೀಡಿದಂತೆ ದೂರು ಬರೆಸಿಕೊಂಡು ಹೋಗಿ ಕೇಸ್ ದಾಖಲಿಸಿದ್ದಾರೆ ಎಂಬುದನ್ನು ಗಮನಕ್ಕೆ ತಂದರು. ಅಲ್ಲದೆ, ಪೊಲೀಸರು ದಾಖಲು ಮಾಡಿಕೊಂಡಿರುವ ಹೇಳಿಕೆಯನ್ನು ಕೋರ್ಟ್ ಮುಂದೆ ಓದಿದರು.
ಇದು ಸಂತ್ರಸ್ತೆ ನೀಡಿದ ದೂರೇ ಅಲ್ಲ
ಪ್ರಜ್ವಲ್ ರೇವಣ್ಣ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ಏಪ್ರಿಲ್ 24ರ ರಾತ್ರಿ 11 ಗಂಟೆಗೆ ಬೆಂಗಳೂರಿನಲ್ಲಿರುವ ಸಂತ್ರಸ್ತೆಯೊಬ್ಬರು ದೂರು ನೀಡಲು ಬಂದಿದ್ದರು. ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿ, ಮಹಿಳಾ ಸಿಬ್ಬಂದಿಯೊಂದಿಗೆ ಸಂತ್ರಸ್ತೆ ಇರುವ ಸ್ಥಳಕ್ಕೆ ಹೋಗಿ ದೂರು ಪಡೆದು ಕೇಸ್ ದಾಖಲಿಸಿದ್ದಾಗಿ ಸ್ಟೇಷನ್ ಬುಕ್‌ನಲ್ಲಿ ಉಲ್ಲೇಖಿಸಿದ್ದಾರೆ. ಇಲ್ಲಿ ಸ್ಪಷ್ಟವಾಗಿ ಗೊತ್ತಾಗುವುದೇನೆಂದರೆ ಈ ದೂರು ರಿಜಿಸ್ಟರ್ ಆಗಿರುವುದಲ್ಲ. ದೂರನ್ನು ತಿದ್ದುಪಡಿ ಮಾಡಿ ತಮಗೆ ಬೇಕಾದ ಹಾಗೆ ಮಾಡಿಕೊಂಡಿದ್ದಾರೆ. ರೇವಣ್ಣ ವಿರುದ್ಧ ದೂರುದಾರೆ ನೀಡಿದ ದೂರನ್ನು ಮಹಿಳಾ ಅಧಿಕಾರಿ ದಾಖಲಿಸಿಕೊಳ್ಳಲ್ಲಿಲ್ಲ. ಆಕೆಯ ಹೇಳಿಕೆಯನ್ನು ಲಿಖಿತ ರೂಪದಲ್ಲಿ ದಾಖಲಿಸಿಕೊಂಡಿಲ್ಲ. ಇದು ಸಂತ್ರಸ್ತೆ ನೀಡಿದ ದೂರೇ ಅಲ್ಲ. ಬೇಕಂತಲೇ ಸೃಷ್ಟಿಯಾಗಿರುವ ಕೇಸ್ ಆಗಿದೆ. ಆಕೆಗೆ ಲೈಂಗಿಕ ದೌರ್ಜನ್ಯ ಅಂದರೇನು ಅಂತ ಗೊತ್ತೇ ಇರುವುದಿಲ್ಲ ಎಂದು ಸಿ.ವಿ. ನಾಗೇಶ್ ವಾದಿಸಿದರು.
ಸಂತ್ರಸ್ತೆ ಹೇಳಿಕೆಯಲ್ಲಿ ಭಾರಿ ಗೊಂದಲ!
ಲೈಂಗಿಕ ದೌರ್ಜನ್ಯವೇ ಬೇರೆ, ಅತ್ಯಾಚಾರವೇ ಬೇರೆ. ಸಂತ್ರಸ್ತೆ ನೀಡಿದ ದೂರಿನ ಅಂಶಗಳನ್ನು ಓದಿ ಹೇಳಿದ ಸಿ.ವಿ. ನಾಗೇಶ್, ಸಂತ್ರಸ್ತೆಯ ಪತಿ ಆಕೆಯ ಮೇಲೆ ಪಟ್ಟ ಅನುಮಾನವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆಕೆ ನನ್ನ ಮೇಲೆ ಆ ರೀತಿ ಕೃತ್ಯ ನಡೆದಿಲ್ಲ ಎಂದು ಹೇಳಿದ್ದಾಳೆ. ನಾಲ್ಕೈದು ವರ್ಷಗಳ ಹಿಂದೆ ನಡೆದಿರುವ ಕೃತ್ಯದ ಬಗ್ಗೆ ಆರೋಪಿಸಿದ್ದಾರೆ. ಒಂದು ಕಡೆ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ನೀಡಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳುತ್ತಾರೆ. ಮತ್ತೊಂದೆಡೆ ಸಂತ್ರಸ್ತೆ ಗಂಡ ಬೇರೆ ಹೆಣ್ಣು ಮಕ್ಕಳ ವಿಡಿಯೊ ಬಗ್ಗೆ ಕೇಳಿದಾಗ ನನ್ನ ಮೇಲೆ ಆ ರೀತಿ ಆಗಿಲ್ಲ ಅಂತ ಹೇಳಿದ್ದಾಳೆ. ಮತ್ತೊಂದೆಡೆ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳ ತಾಳಲಾರದೆ ಮನೆ ಕೆಲಸ ಬಿಟ್ಟು ಬಂದೆ ಎಂದು ಹೇಳುತ್ತಾಳೆ. ತನಿಖಾಧಿಕಾರಿಗಳು ಸಂತ್ರಸ್ತೆ ಹೇಳಿಕೆ ಆಧಾರದ ಮೇಲೆ 376 ದಾಖಲಿಸಲು ಅನುಮತಿ ಕೇಳಿದ್ದಾರೆ. ಯಾರ ಮೇಲೆ ಸೆಕ್ಷನ್ 376 ದಾಖಲಿಸುತ್ತಾರೆ ಎಂದು ಸಿ.ವಿ. ನಾಗೇಶ್ ಪ್ರಶ್ನೆ ಮಾಡಿದರು.
ಇದನ್ನೂ ಓದಿ: Prajwal Revanna Case: ಪ್ರಜ್ವಲ್ ರೇವಣ್ಣಗೆ ಸಂಕಷ್ಟ; ಅರೆಸ್ಟ್ ವಾರಂಟ್ ನೀಡಿದ ಕೋರ್ಟ್
ದೂರುದಾರರು ಲೈಂಗಿಕ ದೌರ್ಜನ್ಯ ತಾಳಲಾರದೆ 4 ವರ್ಷದ ಹಿಂದೆ ಮನೆ ಕೆಲಸ ಬಿಟ್ಟೆ ಎಂದು ಹೇಳುತ್ತಾರೆ. ಮನೆ ಬಿಟ್ಟು ಬಂದಿದ್ದಕ್ಕೆ ಪೊಲೀಸರನ್ನು ಕಳುಹಿಸಿ ಆಶ್ರಯ ಮನೆ ಖಾಲಿ ಮಾಡಿಸಿದರು ಎಂದು ಆರೋಪಿಸುತ್ತಾರೆ. ತಮ್ಮ ಒಡವೆ, ಬಟ್ಟೆ ಎಲ್ಲವನ್ನೂ ಕಿತ್ತುಕೊಂಡರು ಎಂದು ಹೇಳುತ್ತಾರೆ. ಹಾಗಾದರೆ ನಾಲ್ಕೂವರೆ ವರ್ಷದ ಹಿಂದೆ ಅವರ ಮನೆಯಲ್ಲಿದ್ದಾಗ ನಡೆದ ಅತ್ಯಾಚಾರ, ಲೈಂಗಿಕ ದೌರ್ಜನ್ಯವು ಅವರಿಗೆ ಗೊತ್ತಾಗಲಿಲ್ಲವೇ? ಮನೆ ಖಾಲಿ ಮಾಡಿಸಿದ ಮೇಲೆ ಯಾಕೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ನಡೆದಿದೆ ಅಂತ ಗೊತ್ತಾಯ್ತಾ ಎಂದು ಸಿ.ವಿ. ನಾಗೇಶ್ ಪ್ರಶ್ನೆ ಮಾಡಿದರು.