Site icon Vistara News

Actor Darshan: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಹೆಸರು ಆಚೆ ಬಂದದ್ದು ಹೀಗೆ!

Actor Darshan

Renukaswamy Murder Case: Actor Darshan's Judicial Custody Extended Till July 18

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ (Renuka Swamy Murder) ಪ್ರಕರಣದಲ್ಲಿ ನಟ ದರ್ಶನ್‌ (Actor Darshan) ಹೆಸರು ಆಚೆಗೇ ಬಾರದೆ ಮುಚ್ಚಿಹೋಗುವುದರಲ್ಲಿತ್ತು. ಆರಂಭದಲ್ಲಿ ಪೊಲೀಸರಿಗೂ (Police) ಇದರ ಅರಿವು ಇರಲಿಲ್ಲ. ಆದರೆ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ತನಿಖೆ ಮಾಡುತ್ತ ಹೋದಂತೆಲ್ಲಾ ಒಂದೊಂದೇ ಎಳೆಗಳು ಬಿಚ್ಚಿಕೊಂಡು ದರ್ಶನ್‌ ಜೈಲುಪಾಲಾಗುವಂತಾಯಿತು. ಅದೇ ಒಂದು ರೋಚಕ ಕಹಾನಿ.

ಹತ್ಯೆಯ ಹಿಂದಿದ್ದ ಮಾಸ್ಟರ್ ಮೈಂಡ್ ಹೆಸರು ಬಾಯಿ ಬಿಡಿಸುವುದಕ್ಕೆ ಪೊಲೀಸರಿಗೆ ಸರಿ ಸುಮಾರು ಹತ್ತು ಗಂಟೆ ತೆಗೆದುಕೊಂಡಿತ್ತು. ಅದು ನಡೆದದ್ದು ಹೀಗೆ- ರೇಣುಕಾ ಸ್ವಾಮಿಯನ್ನು ಹಂತಕ‌ ಪಡೆ ಕೊಲೆ ಮಾಡಿದ್ದು ಶನಿವಾರ. ಭಾನುವಾರ ಸುಮನಹಳ್ಳಿ ಕಾಲುವೆಯಲ್ಲಿ ಆತನ ಶವ ಸಿಕ್ಕಿತ್ತು. ಶವ ಯಾರದು ಎಂಬ ಹುಡುಕಾಟದಲ್ಲಿದ್ದ ಪೊಲೀಸರಿಗೆ ನಾಲ್ವರು ಆರೋಪಿಗಳು ತಾವಾಗಿ ಬಂದು ಶರಣಾಗಿದ್ದರು.

ಕಾರ್ತಿಕ್, ನಿಖಿಲ್, ಕೇಶವ ಮೂರ್ತಿ ಹಾಗೂ ರಾಘವೇಂದ್ರ ಪೊಲೀಸರ ಬಳಿಗೆ ಸೋಮವಾರ ಬಂದು, ಕೊಲೆ ಮಾಡಿದ್ದು ನಾವೇ ಅಂತ ಹೇಳಿದ್ದರು. ಹಣಕಾಸಿನ ವಿಚಾರಕ್ಕಾಗಿ ನಾವೇ ಹಲ್ಲೆ ಮಾಡಿದೆವು, ಹಲ್ಲೆ ಮಾಡಿದ್ದು ಜಾಸ್ತಿಯಾಗಿ ಆತ ಸತ್ತುಹೋದ ಎಂದಿದ್ದರು. ಎಷ್ಟು ಪ್ರಶ್ನಿಸಿದರೂ ಅದರಾಚೆಗೆ ಬಾಯಿ ಬಿಟ್ಟಿರಲಿಲ್ಲ. ಆದರೆ ಹಲ್ಲೆ ಮಾಡಿದ ಜಾಗ ಯಾವುದು, ಅಲ್ಲಿಂದ ಇಲ್ಲಿಗೆ ಹೆಣ ಸಾಗಿಸಿದ್ದು ಹೇಗೆ, ಯಾವ ವಾಹನದಲ್ಲಿ, ರೇಣುಕಾ ಸ್ವಾಮಿಗೆ ಕೊಟ್ಟ ಹಣ ನಿಮಗೆ ಬಂದಿದ್ದು ಹೇಗೆ, ಆತನಿಗೂ ನಿಮಗೂ ಹೇಗೆ ಲಿಂಕು, ಇತ್ಯಾದಿ ಸರಣಿ ಪ್ರಶ್ನೆಗಳನ್ನು ಪೊಲೀಸರು ಹಾಕತೊಡಗಿದ ಕೂಡಲೇ ಶರಣಾಗತರು ಉತ್ತರ ಕೊಡಲಾಗದೆ ತತ್ತರಿಸಲು ಆರಂಭಿಸಿದರು.

ಸತತ ಹತ್ತು ಗಂಟೆಗಳ ಪ್ರಶ್ನಾವಳಿಯ ಬಳಿಕ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಪ್ರದೂಷ್ ಹಾಗೂ ವಿನಯ್ ಹೆಸರುಗಳನ್ನು ಶರಣಾಗತರು ಬಾಯಿ ಬಿಟ್ಟಿದ್ದರು. ಇವರಿಬ್ಬರ ಹೆಸರು ಬಂದ ಕೂಡಲೇ ಜಾಗೃತರಾದ ಪೊಲೀಸರು, ಪ್ರಕರಣದಲ್ಲಿ ಇನ್ನಷ್ಟು ದೊಡ್ಡ ಹೆಸರುಗಳು ಇರಬಹುದು ಎಂಬ ಅರಿವಾಗಿ ಜಾಗೃತರಾದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರದೂಷ್ ಹಾಗೂ ವಿನಯ್‌ರನ್ನು ವಶಕ್ಕೆ ಪಡೆದರು.

ಪ್ರದೂಷ್‌ ಹಾಗೂ ವಿನಯ್‌ ಸುಲಭವಾಗಿ ಬಾಯಿ ಬಿಡಲಿಲ್ಲ. ಆರಂಭದಲ್ಲಿ, ಶರಣಾದವರು ಯಾರೂ ನಮಗೆ ಗೊತ್ತೇ ಇಲ್ಲ ಎಂದುಬಿಟ್ಟರು. ಪೊಲೀಸರು ವಿಚಾರಣೆ ತೀವ್ರಗೊಳಿಸಿದರು. ಆಗಲೂ ದರ್ಶನ್‌ ಹೆಸರು ಬಾಯಿ ಬಿಡಲಿಲ್ಲ ಪ್ರದೂಷ್ ಹಾಗೂ ವಿನಯ್. ಆದರೆ ಬೆಳಗಿನ ಜಾವ ಪೊಲೀಸರ ವಿಚಾರಣೆ ಧಾಟಿಗೆ ಬಳಲಿಹೋಗಿದ್ದ ವಿನಯ್ ಹಾಗೂ ಪ್ರದೂಷ್ ಪವಿತ್ರ ಗೌಡಳ ಹೆಸರು ಹೇಳಿದ್ದರು. ಪವಿತ್ರ ಗೌಡ ಯಾರು ಎಂದು ತಲೆ ಕೆಡಿಸಿಕೊಂಡ ಪೊಲೀಸರಿಗೆ ಆಕೆಗೆ ದರ್ಶನ್‌ ಲಿಂಕ್‌ ಇರುವುದು ಗೊತ್ತಾಗಿ ಇದು ಹೈ ಪ್ರೊಫೈಲ್‌ ಕೇಸು ಎಂಬುದು ಗೊತ್ತಾಗಿ ಹೋಗಿದೆ.

ನಂತರ ಪೊಲೀಸರು ಪವಿತ್ರ ಗೌಡಳ ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಅಷ್ಟರಲ್ಲಿ ದರ್ಶನ್ ಜೊತೆ ಪವಿತ್ರ ಗೌಡ ಲಿಂಕ್ ಇರುವುದು ಚಾಟಿಂಗ್ಸ್, ಕಾಲ್ ಡಿಟೇಲ್ಸ್ ಮೂಲಕ ಪತ್ತೆಯಾಗಿದೆ. ಆರೋಪಿಗಳನ್ನೂ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ಕೂರಿಸಿಕೊಂಡು ಮತ್ತಷ್ಟು ವಿಚಾರಣೆ ನಡೆಸಿದಾಗ ಎಲ್ಲರೂ ಡಿ ಬಾಸ್‌ ಗ್ಯಾಂಗ್‌ ಆಗಿರುವುದು ಗೊತ್ತಾಗಿದೆ. ಪವಿತ್ರ ಗೌಡ ಕಾಲ್‌ ಹಿಸ್ಟರಿ, ಚಾಟ್‌ ಎಲ್ಲ ತೆಗೆದಾಗ ಅದರಲ್ಲಿ ರೇಣುಕ ಸ್ವಾಮಿಯ ಅಶ್ಲೀಲ ಮೆಸೇಜ್‌ಗಳ ಬಗೆಗಿನ ವಿವರಗಳು ಕಂಡುಬಂದಿವೆ. ಈ ಬಗ್ಗೆ ಪವನ್‌, ದರ್ಶನ್‌ಗೆ ಕಾಲ್‌ ಮಾಡಿ ರೇಣುಕಾ ಸ್ವಾಮಿಯ ಹಾವಳಿಯ ಬಗ್ಗೆ ತಿಳಿಸಿದ್ದು ಕೂಡ ಗೊತ್ತಾಗಿದೆ.

ಕೂಡಲೇ ಪ್ರಕರಣದ ತನಿಖೆ ನಡೆಸುತ್ತಿದ್ದ ಡಿಸಿಪಿ ಗಿರೀಶ್ ಈ ವಿಷಯವನ್ನು ಕಮೀಷನರ್‌ಗೆ ಮುಟ್ಟಿಸಿದ್ದರು. ಪ್ರಕರಣದ ಗಂಭೀರತೆ ಅರಿತ ಕಮೀಷನರ್, ದರ್ಶನ್ ಬಂಧನಕ್ಕೆ‌‌ ಸೂಚನೆ ನೀಡಿದ್ದರು. ಜೂನ್ 10ರ ರಾತ್ರಿಯೇ ಮೈಸೂರಿಗೆ ತೆರಳಿದ ಬೆಂಗಳೂರು ಪೊಲೀಸರು ದರ್ಶನ್ ಇರುವ ಸ್ಥಳದ ಮಾಹಿತಿ ಕಲೆ ಹಾಕಿದ್ದರು. ಜೂನ್ 11ರ ಬೆಳಗ್ಗೆ 6.30ಕ್ಕೆ ಮೈಸೂರಿನ ರ್ಯಾಡಿಸನ್ ಹೋಟೆಲ್​ನಲ್ಲಿ ಜಿಮ್ ಮಾಡುತ್ತಿದ್ದ ದರ್ಶನ್ ಹೊರಗೆ ಬಂದ ಕೂಡಲೇ ವಶಕ್ಕೆ ಪಡೆದರು.

ಇದನ್ನೂ ಓದಿ: Actor Darshan: ದರ್ಶನ್‌ ಮೇಲಿನ ಅಂಧಾಭಿಮಾನ; ಮಗನನ್ನೇ ಕೈದಿ ಮಾಡಿದ ಹುಚ್ಚು ಫ್ಯಾನ್!

Exit mobile version