Site icon Vistara News

ಹೈದರಾಬಾದ್‌ ಗ್ಯಾಂಗ್‌ ರೇಪ್:‌ AIMIM ಶಾಸಕರ ಪುತ್ರ ಬಂಧನ

assault

ಹೈದರಾಬಾದ್‌: ಮೇ 28ರಂದು ಹೈದರಾಬಾದ್‌ನಲ್ಲಿ 17 ವರ್ಷದ ಬಾಲಕಿಯ ಮೇಲೆ ನಡೆದ ಭೀಕರ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಶಾಸಕರೊಬ್ಬರ ಪುತ್ರನನ್ನು ಬಂಧಿಸಲಾಗಿದೆ.

ಆರೋಪಿ ಕೂಡ ಅಪ್ರಾಪ್ತ ವಯಸ್ಸಿನವನಾಗಿದ್ದು, ಈತನನ್ನು ಸೋಮವಾರ ಬಂಧಿಸಿ ವೀಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ. ಈತ ಪ್ರಕರಣದ ಐವರು ಬಾಲಾಪರಾಧಿಗಳಲ್ಲಿ ಒಬ್ಬ. ಐದೂ ಮಂದಿಯೂ ಪ್ರಸ್ತುತ ವೀಕ್ಷಣಾ ಮನೆಯಲ್ಲಿದ್ದಾರೆ. ಪ್ರಕರಣದಲ್ಲಿ ಜೂನ್ 3ರಂದು ಬಂಧಿತನಾಗಿದ್ದ 18 ವರ್ಷದ ಯುವಕ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

ಎಐಎಂಐಎಂ ಶಾಸಕರ ಪುತ್ರನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆಯೇ ಹೊರತು ಸಾಮೂಹಿಕ ಅತ್ಯಾಚಾರವಲ್ಲ ಎಂದು ಮೂಲಗಳು ತಿಳಿಸಿವೆ. ಸಂತ್ರಸ್ತೆಯು ಸಾಮೂಹಿಕ ಅತ್ಯಾಚಾರಕ್ಕೊಳಗಾದ ಇನ್ನೋವಾದಲ್ಲಿ ಅವನು ಇರಲಿಲ್ಲ, ಆದರೆ ಮರ್ಸಿಡಿಸ್‌ನಲ್ಲಿ ಪ್ರಯಾಣಿಸುವಾಗ ಅವಳನ್ನು ನಿಂದಿಸಿ ಅವಳ ಮೇಲೆ ಹಲ್ಲೆ ಮಾಡಿದ್ದ ಎಂದು ಮೂಲಗಳು ತಿಳಿಸಿವೆ. ಸಾಮೂಹಿಕ ಅತ್ಯಾಚಾರ ನಡೆದ ಇನ್ನೋವಾ ಸರ್ಕಾರಿ ವಾಹನ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಹೇಳಿದ್ದಾರೆ.

ಮೇ 28ರಂದು ಬಾಲಕಿ ಪಬ್‌ನಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಜುಬಿಲಿ ಹಿಲ್ಸ್‌ನ ನಿರ್ಜನ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹುಡುಗಿ ಪಬ್‌ನಿಂದ ಹೊರಡುತ್ತಿರುವಾಗ, ಅಲ್ಲಿ ಅವಳನ್ನು ಭೇಟಿಯಾದ ಕೆಲವು ಯುವಕರು ಅವಳನ್ನು ಮನೆಗೆ ಬಿಡಲು ಮುಂದಾಗಿದ್ದರು. ನಂತರ ಹೈದರಾಬಾದ್‌ನ ಐಷಾರಾಮಿ ಪ್ರದೇಶವಾದ ಜುಬಿಲಿ ಹಿಲ್ಸ್‌ನಲ್ಲಿ ಕಾರನ್ನು ನಿಲ್ಲಿಸಿ ಹುಡುಗಿಯ ಮೇಲೆ ಸರದಿಯಲ್ಲಿ ಅತ್ಯಾಚಾರ ಮಾಡಿದ್ದರು.

ಇದನ್ನೂ ಓದಿ: ಹೈದರಾಬಾದ್‌ ಗ್ಯಾಂಗ್‌ ರೇಪ್‌ ಕೇಸ್‌; ವಿಡಿಯೋ ಬಿಡುಗಡೆ ಮಾಡಿ ಟೀಕೆಗೆ ಗುರಿಯಾದ ಬಿಜೆಪಿ ಮುಖಂಡ !

Exit mobile version