ಲಂಡನ್: ಉನ್ನತ ವಿದ್ಯಾಭ್ಯಾಸಕ್ಕೆಂದು ಲಂಡನ್‌ಗೆ ತೆರಳಿದ್ದ ಹೈದರಾಬಾದ್ ಮೂಲದ ಯುವತಿಯನ್ನು ಲಂಡನ್‌ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಲಂಡನ್‌ನ ವೆಂಬೆಯಲ್ಲಿರುವ ಫ್ಲ್ಯಾಟ್‌ನಲ್ಲಿ ವಾಸವಿದ್ದ ಕೊಂಥಮ್ ತೇಜಸ್ವಿನಿ (27) ಅವರನ್ನು ಆಕೆಯ ಫ್ಲ್ಯಾಟ್‌ಮೇಟ್ ಚಾಕು ಇರಿದು ಹತ್ಯೆಗೈದಿದ್ದಾನೆ ಎಂದು ತಿಳಿದುಬಂದಿದೆ.
ಮಂಗಳವಾರ ಬೆಳಗ್ಗೆ ತೇಜಸ್ವಿನಿ ಜತೆ ಫ್ಲ್ಯಾಟ್ ಹಂಚಿಕೊಂಡಿದ್ದ, ಬ್ರೆಜಿಲ್‌ನ ಕೆವೆನ್ ಅಂಟಾನಿಯೋ ಲಾರೆನ್ಸೊ ಡೆ ಮೊರೈಸ್ ಎಂಬಾತ ಚಾಕು ಇರಿದು ಹತ್ಯೆಗೈದಿದ್ದಾನೆ. ಮತ್ತೊಬ್ಬ ಮಹಿಳೆಗೂ ಈತ ಚಾಕು ಇರಿದಿದ್ದು, ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್‌ನ ಮೆಟ್ರೋಪಾಲಿಟನ್ ಪೊಲೀಸರು ಕೆವೆನ್ ಅಂಟಾನಿಯೋ ಸೇರಿ ಮೂವರನ್ನು ಬಂಧಿಸಿದ್ದಾರೆ. ಆದಾಗ್ಯೂ, ಬರ್ಬರವಾಗಿ ಹತ್ಯೆಗೈಯಲು ನಿಖರ ಕಾರಣ ತಿಳಿದುಬಂದಿಲ್ಲ.
ಮಾಸ್ಟರ್ ಡಿಗ್ರಿ ಮಾಡಲು ಹೈದರಾಬಾದ್‌ನ ಹಯಾತ್‌ನಗರ ನಿವಾಸಿಯಾದ ಕೊಂಥಮ್ ತೇಜಸ್ವಿನಿ ಅವರು ಕಳೆದ ವರ್ಷ ಲಂಡನ್‌ಗೆ ತೆರಳಿದ್ದರು. ಮೂರು ವರ್ಷದ ಕೋರ್ಸ್ ಮುಗಿಸಿ, ಒಳ್ಳೆಯ ಉದ್ಯೋಗ ಹಿಡಿಯುವುದು ಅವರ ಕನಸಾಗಿತ್ತು. ಆದರೆ, ಇತ್ತೀಚೆಗಷ್ಟೇ ತೇಜಸ್ವಿನಿ ತಂಗಿದ್ದ ಫ್ಲ್ಯಾಟ್ ಸೇರಿಕೊಂಡಿದ್ದ ಬ್ರೆಜಿಲ್ ವ್ಯಕ್ತಿಯು ಏಕಾಏಕಿ ಹತ್ಯೆಗೈದಿದ್ದಾನೆ. ಬುಧವಾರ ಬೆಳಗ್ಗೆ ತೇಜಸ್ವಿನಿಯ ಪೋಷಕರಿಗೆ ಮಾಹಿತಿ ನೀಡಲಾಗಿದೆ.
ಕೆಲವೇ ತಿಂಗಳಲ್ಲಿ ಮದುವೆ ಇತ್ತು
ಲಂಡನ್‌ನಲ್ಲಿ ಅಧ್ಯಯನ ನಡೆಸುವ ಜತೆಗೆ ತೇಜಸ್ವಿನಿ ಅವರು ತಾತ್ಕಾಲಿಕವಾಗಿ ಕೆಲಸಕ್ಕೆ ಸೇರಿದ್ದರು. ಕೆಲ ತಿಂಗಳ ಹಿಂದಷ್ಟೇ ಪೋಷಕರು ಮದುವೆ ಪ್ರಸ್ತಾಪ ಮಾಡಿದಾಗ ಒಪ್ಪಿಕೊಂಡಿದ್ದ ಯುವತಿ, ಇದೇ ವರ್ಷ ಮದುವೆಯಾಗುವುದಾಗಿ ತಿಳಿಸಿದ್ದರು. “ತೇಜಸ್ವಿನಿ ಮೃತಪಟ್ಟಿರುವ ಕುರಿತು ಬುಧವಾರ ಬೆಳಗ್ಗೆ ಮಾಹಿತಿ ನೀಡಲಾಗಿದೆ. ಪ್ರಕರಣದ ಬಗ್ಗೆ ನಮಗೇನೂ ಗೊತ್ತಿಲ್ಲ. ನಾವು ದಿಗ್ಭ್ರಮೆಗೊಂಡಿದ್ದೇವೆ” ಎಂದು ತೇಜಸ್ವಿನಿಯ ತಂದೆ ಹೇಳಿದ್ದಾರೆ.
ಇದನ್ನೂ ಓದಿ: ಭೀಮಾತೀರದಲ್ಲಿ ಹರಿಯಿತು ರಕ್ತ; ಮತ್ತೊಬ್ಬ ಮಹಿಳೆಯ ಭೀಕರ ಹತ್ಯೆ
“ಕೆಲ ತಿಂಗಳ ಹಿಂದೆ ನಾವು ಮದುವೆ ಪ್ರಸ್ತಾಪ ಮಾಡಿದ್ದೆವು. ಆಕೆ, ಕಳೆದ ವರ್ಷ ಮನೆಗೆ ಬಂದು ಹೋಗಿದ್ದಳು. ಅಲ್ಲದೆ, ಇದೇ ವರ್ಷ ಮದುವೆಯಾಗುವುದಾಗಿ ತಿಳಿಸಿದ್ದಳು. ಇನ್ನು ಕೆಲವೇ ದಿನಗಳಲ್ಲಿ ತಾತ್ಕಾಲಿಕ ಕೆಲಸದ ವಾಯಿದೆ ಮುಗಿಯುತ್ತದೆ. ಭಾರತಕ್ಕೆ ಬರುತ್ತೇನೆ. ಆಗ ಮದುವೆಯಾಗುತ್ತೇನೆ ಎಂಬುದಾಗಿ ಹೇಳಿದ್ದಳು” ಎಂದು ತೇಜಸ್ವಿನಿ ತಂದೆ ತಿಳಿಸಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ