Site icon Vistara News

ಮರೆಯಾದ ಮಾನವೀಯತೆ: ಮಹಿಳೆ ಮೇಲೆ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿ ಮೆರವಣಿಗೆ; ನಾಲ್ವರು ಮಹಿಳೆಯರ ಬಂಧನ

Indore Horror

Indore Horror

ಇಂದೋರ್‌: ಮಧ್ಯಪ್ರದೇಶದ ಇಂದೋರ್‌ ಜಿಲ್ಲೆಯ ಗ್ರಾಮವೊಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, 30 ವರ್ಷದ ಮಹಿಳೆಯನ್ನು ಥಳಿಸಿ ವಿವಸ್ತ್ರಗೊಳಿಸಿದ ಮೆರವಣಿಗೆ ನಡೆಸಿ ಅಮಾನವೀಯತೆ ಮೆರೆಯಲಾಗಿದೆ. ಈ ಪ್ರಕರಣದ ಸಂಬಂಧ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ (Indore Horror).

ಏನಿದು ಘಟನೆ?

ಹೋಳಿ ಆಚರಣೆಯ ವೇಳೆ ಈ ಘಟನೆ ನಡೆದಿದೆ. ʼʼಗೌತಮಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಬಚೋರಾ ಗ್ರಾಮದಲ್ಲಿ ಸೋಮವಾರ (ಮಾರ್ಚ್‌ 25) ನಾಲ್ವರು ಮಹಿಳೆಯರು ಸಂತ್ರಸ್ತ ಮಹಿಳೆಯನ್ನು ಅವರ ಮನೆಯಿಂದ ಬಲವಂತವಾಗಿ ಹೊರಗೆಳೆದುಕೊಂಡು ಬಂದಿದ್ದರು. ಬಳಿಕ ಮನಸೋಇಚ್ಛೆ ಥಳಿಸಿ, ಸಾವರ್ಜನಿಕವಾಗಿ ವಿವಸ್ತ್ರಗೊಳಿಸಿ ಅಮಾನುಷವಾಗಿ ವರ್ತಿಸಿದ್ದಾರೆʼʼ ಎಂದು ಪೊಲೀಸ್‌ ವರಿಷ್ಠಾಧಿಕಾರಿ (ಗ್ರಾಮೀಣ) ಸುನಿಲ್‌ ಮೆಹ್ತಾ ತಿಳಿಸಿದ್ದಾರೆ. ಬಳಿಕ ಆ ನಾಲ್ವರು ಮಹಿಳೆಯರು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮೆಹ್ತಾ ಅವರು ಬುಧವಾರ ಘಟನೆ ನಡೆದ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗ ಅಲ್ಲಿ ಶಾಂತಿ ನೆಲೆಸಿದೆ ಎಂದು ಮಾಹಿತಿ ನೀಡಿದ್ದಾರೆ. ʼʼಘಟನೆಯಿಂದ ಸಂತ್ರಸ್ತೆ ಶಾಕ್‌ಗೆ ಒಳಗಾಗಿದ್ದು, ಅವಮಾನ ತಾಳಲಾರದೆ ತನ್ನ ತಾಯಿ ಮನೆಗೆ ತೆರಳಿದ್ದಾರೆ. ಸಂತ್ರಸ್ತೆ ಮತ್ತು ಆರೋಪಿ ಮಹಿಳೆಯರು ಪರಿಶಿಷ್ಟ ಜಾತಿ (ಎಸ್‌ಸಿ) ಪಂಗಡಕ್ಕೆ ಸೇರಿದವರುʼʼ ಎಂದು ಮೆಹ್ತಾ ತಿಳಿಸಿದ್ದಾರೆ.

ಕಾನೂನು ಕ್ರಮ

ಈ ಪ್ರಕರಣದ ವಿಡಿಯೊವನ್ನು ಪ್ರಸಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ. ʼʼಆರೋಪಿಗಳು ದೌರ್ಜನ್ಯ ಎಸಗುವಾಗ ಸಂತ್ರಸ್ತೆ ಕೈ ಮುಗಿದು ಬಿಟ್ಟು ಬಿಡುವಂತೆ ಕೇಳಿಕೊಂಡಿದ್ದಾರೆ. ಆದರೂ ಕರಣೆ ತೋರದ ಆರೋಪಿಗಳು ಎಲ್ಲರೆದುರೇ ಬಟ್ಟೆಯನ್ನು ಹರಿದಿದ್ದಾರೆ. ಬಳಿಕ ಅವರು ಸಂತ್ರಸ್ತೆಯನ್ನು ಅದೇ ಸ್ಥಿತಿಯಲ್ಲಿ ಗ್ರಾಮದ ರಸ್ತೆಯಲ್ಲಿ ಸ್ವಲ್ಪ ದೂರಕ್ಕೆ ಕರೆದೊಯ್ದಿದ್ದಾರೆʼʼ ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ. ಘಟನೆಗೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 323 (ಸ್ವಯಂ ಪ್ರೇರಿತವಾಗಿ ಇತರರಿಗೆ ನೋವುಂಟು ಮಾಡುವುದು), 354-ಎ (ಲೈಂಗಿಕ ಕಿರುಕುಳ) ಮತ್ತು 452 (ಹಲ್ಲೆ ನಡೆಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Assault Case: ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ; ಇನ್ಸ್‌ಪೆಕ್ಟರ್ ಎತ್ತಂಗಡಿ

ಹಿಂದೆಯೂ ನಡೆದಿತ್ತು

ಕೆಲವು ತಿಂಗಳ ಹಿಂದೆ ರಾಜಸ್ಥಾನದಲ್ಲೂ ಆದಿವಾಸಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಸಂತ್ರಸ್ತೆಯ ಪತಿ ಹಾಗೂ ಆತನ ಸಂಬಂಧಿಕರೇ ಬೆತ್ತಲೆ ಮೆರವಣಿಗೆ ಮಾಡಿರುವ ವಿಡಿಯೊ ವೈರಲ್‌ ಆಗಿತ್ತು. ಘಟನೆ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದರು. ರಾಜಸ್ಥಾನದ ಪ್ರತಾಪ್‌ಗಢ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿತ್ತು. 21 ವರ್ಷದ ಬುಡಕಟ್ಟು ಸಮುದಾಯದ ಮಹಿಳೆಯನ್ನು ಗ್ರಾಮದಿಂದ ಅಪಹರಣ ಮಾಡಿದ ಪತಿ ಹಾಗೂ ಆತನ ಸಂಬಂಧಿಕರು ಆಕೆಯ ಮೇಲೆ ಹಲ್ಲೆ ನಡೆಸಿದ್ದರು. ಬಲವಂತವಾಗಿ ಆಕೆಯ ಬಟ್ಟೆ ಬಿಚ್ಚಿ, ಬೆತ್ತಲೆ ಮೆರವಣಿಗೆ ಮಾಡಿದ್ದರು. ಬೇರೊಬ್ಬ ವ್ಯಕ್ತಿಯ ಜತೆ ಸಂಬಂಧ ಇಟ್ಟುಕೊಂಡ ಹಿನ್ನೆಲೆಯಲ್ಲಿ ಪತಿ ಹಾಗೂ ಸಂಬಂಧಿಕರು ಹೀಗೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version