ಬೆಂಗಳೂರು: ರಾಜಧಾನಿಯಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ನಿರಂತರ ಐಟಿ ದಾಳಿಯಲ್ಲಿ (IT Raid) ಅತಿ ಹೆಚ್ಚು ಸುದ್ದಿಯಾಗಿದ್ದು ಒಂದೇ ಮನೆಯಲ್ಲಿ 42 ಕೋಟಿ ರೂ. ನಗದು ಪತ್ತೆಯಾದ ಪ್ರಕರಣ. ಯಾರೂ ಉಪಯೋಗಿಸದ ಕೋಣೆಯ ಮಂಚದ ಅಡಿಯಲ್ಲಿ 22 ಬಾಕ್ಸ್‌ನಲ್ಲಿ ಕೂಡಿಟ್ಟ ಹಣ ಇದಾಗಿತ್ತು. 500 ರೂ. ನೋಟುಗಳನ್ನು ಅತ್ಯಂತ ವ್ಯವಸ್ಥಿತವಾಗಿ ಜೋಡಿಸಿಡಲಾಗಿತ್ತು.
ಈ ಹಣ ಪತ್ತೆಯಾಗಿದ್ದು ಬೆಂಗಳೂರಿನ ಆರ್‌ಟಿ ನಗರ ಸಮೀಪದ ಸುಲ್ತಾನ್ ಪಾಳ್ಯದಲ್ಲಿರುವ ಆತ್ಮಾನಂದ ಕಾಲೊನಿಯ ಮನೆಯಲ್ಲಿ. ಇದು ಪ್ರದೀಪ್ ಎಂಬವರಿಗೆ ಸೇರಿದ ಮನೆ. ಈ ಪ್ರದೀಪ್ ಯಾರೆಂದರೆ, ಬೆಂಗಳೂರಿನ ಕಂಟ್ರಾಕ್ಟರ್‌ಗಳ ಸಂಘದ ಉಪಾಧ್ಯಕ್ಷ ಅಂಬಿಕಾಪತಿ (Contractor Ambikapathi) ಅವರ ಮಗ. ನಿಮಗೆ ಗೊತ್ತಿರಲಿ, ರಾಜ್ಯದ ಕಂಟ್ರಾಕ್ಟರ್‌ಗಳ ಸಂಘಕ್ಕೆ (State Contractors Association) ಕೆಂಪಣ್ಣ ಅಧ್ಯಕ್ಷರಾದರೆ ಅಂಬಿಕಾಪತಿ ಅವರು ಉಪಾಧ್ಯಕ್ಷರು. ಇಂಥ ಪ್ರಭಾವಿ ಅಂಬಿಕಾಪತಿ ಅವರ ಪುತ್ರನ ಮನೆಗೆ ನಡೆದ ದಾಳಿಯ ವೇಳೆ ಈ ಹಣ ಪತ್ತೆಯಾಗಿದೆ.
ಇದರ ಜತೆಗೇ ಅಂಬಿಕಾಪತಿ ಅವರಿಗೆ ಸೇರಿದ ಮಾನ್ಯತಾ ಟೆಕ್ ಪಾರ್ಕ್‌ನ ಮನೆ, ಅವರ ಮಗಳಿಗೆ ಸೇರಿದ ಆರ್‌ಟಿ ನಗರದ ಇನ್ನೊಂದು ಮನೆ ಹಾಗೂ ಗಣೇಶ ಬ್ಲಾಕ್‌ನಲ್ಲಿರುವ ಅಂಬಿಕಾಪತಿಯ ಹಳೆ ಮನೆ ಸೇರಿದಂತೆ ಎಲ್ಲ ಕಡೆ ಐಟಿ ದಾಳಿ ನಡೆದಿದೆ.
ಅಂದ ಹಾಗೆ ಈ ಅಂಬಿಕಾಪತಿ ಸಣ್ಣ ವ್ಯಕ್ತಿಯೇನಲ್ಲ. ಅವರು ಈ ಹಿಂದೆ ವಾರ್ಡ್ 95ರ ಕಾರ್ಪೊರೇಟರ್ ಆಗಿದ್ದ ಅಶ್ವಥಮ್ಮ ಅವರ ಪತಿ. ಈ ಅಶ್ವಥಮ್ಮ ಯಾರೆಂದರೆ, ಪುಲಿಕೇಶಿ ನಗರದ ಮಾಜಿ ಕಾಂಗ್ರೆಸ್ ಶಾಸಕ. ಹಾಲಿ ಬಿಎಸ್‌ಪಿ ನಾಯಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಅಕ್ಕ.
ಎಲ್ಲರೂ ಅಖಂಡ ಶ್ರೀನಿವಾಸ್ ಮೂರ್ತಿ ಸಂಬಂಧಿಕರು
ಹೌದು, ಅಂಬಿಕಾಪತಿ, ಅಶ್ವಥಮ್ಮ ಮತ್ತು 42 ಕೋಟಿ ರೂ. ಸಿಕ್ಕ ಮನೆಯ ಒಡೆಯ ಪ್ರದೀಪ್ ಎಲ್ಲರೂ ಕೂಡಾ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಂಬಂಧಿಕರೇ. ಅಖಂಡ ಶ್ರೀನಿವಾಸ ಮೂರ್ತಿ ಅವರ ಅಕ್ಕನನ್ನು ಅಂಬಿಕಾಪತಿಗೆ ಮದುವೆ ಮಾಡಿಕೊಡಲಾಗಿದೆ. ಹಾಗಾಗಿ ಅಂಬಿಕಾಪತಿ ಮತ್ತು ಅಖಂಡ ಶ್ರೀನಿವಾಸ ಮೂರ್ತಿ ಬಾವ, ಬಾಮೈದ!
ಈ ನಡುವೆ, ಅಂಬಿಕಾಪತಿ-ಅಶ್ವಥಮ್ಮ ದಂಪತಿಯ ಮಗ ಪ್ರದೀಪ್‌ನಿಗೆ ಮದುವೆಯಾಗಿದ್ದು ಅಖಂಡ ಶ್ರೀನಿವಾಸ ಮೂರ್ತಿ ಮಗಳನ್ನು. ಅಂದರೆ, ಪ್ರದೀಪ್ ಅಖಂಡ ಶ್ರೀನಿವಾಸ ಮೂರ್ತಿಯ ಅಳಿಯ. ಅಖಂಡ ಶ್ರೀನಿವಾಸ ಮೂರ್ತಿ ಅವರು ಕಳೆದ ಬಾರಿ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದಾಗ ಅಶ್ವಥಮ್ಮ ಅವರು ಜತೆಗಿದ್ದರು.
ಗುರುವಾರ ಸಂಜೆ ದಾಳಿ ನಡೆದಿತ್ತು
ಐಟಿ ಅಧಿಕಾರಿಗಳು ಗುರುವಾರ ಸಂಜೆ ಆರು ಗಂಟೆಯ ಹೊತ್ತಿಗೆ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಆರ್‌ಟಿ ನಗರದ ಈ ಎರಡು ಮನೆಗಳಿಗೆ ಏಕಕಾಲದಲ್ಲಿ ಲಗ್ಗೆ ಇಟ್ಟಿದ್ದರು. ಈ ನಡುವೆ, ಮನೆಯ ಬೀಗದ ಕೀಯನ್ನು ಕೊಡದೆ ಮೊದಲು ಸತಾಯಿಸಿದ್ದ ಮನೆ ಮಾಲೀಕ ಬಳಿಕ ನೀಡಿದ್ದ.
ಒಳಗೆ ಹೋಗಿ ನೋಡಿದಾಗ ಬಳಸದ ಕೋಣೆಯ ಮಂಚದ ಅಡಿಯಲ್ಲಿ ಬಾಕ್ಸ್‌ನಲ್ಲಿ ಜೋಡಿಸಿ ಇಡಲಾಗಿದ್ದ 22 ಕೋಟಿ ರೂ. ಪತ್ತೆಯಾಗಿತ್ತು. ಈ ಮನೆಯ ಮಾಲೀಕ ಪ್ರದೀಪ್‌ನನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಜತೆಗೆ ಸಾಕಷ್ಟು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಇತ್ತ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಅಂಬಿಕಾಪತಿಯ ನಿವಾಸಕ್ಕೂ ದಾಳಿ ನಡೆದಿದೆ. ಅಲ್ಲಿ ಸಾಕಷ್ಟು ಪ್ರಮಾಣದ ಚಿನ್ನಾಭರಣ ಹಾಗೂ ಅಪಾರ ಪ್ರಮಾಣದ ದಾಖಲೆಪತ್ರಗಳು ಸಿಕ್ಕಿವೆ. ಅಂಬಿಕಾಪತಿ, ಪತ್ನಿ ಅಶ್ವಥಮ್ಮ, ಪುತ್ರ ಪ್ರದೀಪನ ಬ್ಯಾಂಕ್ ಖಾತೆಗಳ ವಿವರ, ಆರ್ತಿಕ ವ್ಯವಹಾರಗಳ ದಾಖಲೆಯನ್ನು ಸಂಗ್ರಹಿಸಲಾಗಿದೆ. ಅವೆಲ್ಲವನ್ನೂ ಐಟಿ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದು, ಮುಂದಿನ ವಿಚಾರಣೆಗೆ ಅಣಿಯಾಗಿದ್ದಾರೆ.
40 % ಕಮಿಷನ್ ಆರೋಪ ಮಾಡಿದ್ದ ಅಂಬಿಕಾಪತಿ
ಅಂಬಿಕಾಪತಿ ಕಂಟ್ರಾಕ್ಟರ್‌ಗಳ ಸಂಘದ ಉಪಾಧ್ಯಕ್ಷರು. ಆದರೆ, ಅವರು ಕಳೆದ ಏಳೆಂಟು ವರ್ಷಗಳಿಂದ ಯಾವುದೇ ಗುತ್ತಿಗೆ ಪಡೆದಿಲ್ವಂತೆ. ಆದರೆ ಸಂಘದಲ್ಲಿ ಸಕ್ರಿಯರಾಗಿದ್ದಾರೆ. ಇವರು ಮತ್ತು ಕೆಂಪಣ್ಣ ಅವರು ಸೇರಿಯೇ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಮಾಡಿದ್ದು.
ಬಿಜೆಪಿ ಸರ್ಕಾರ ಉರುಳಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಗುತ್ತಿಗೆದಾರರ ಹಳೆ ಬಾಕಿ ಪಾವತಿಸುವಂತೆ ಕೋರಿ ಅವರು ಕಳೆದ ಆಗಸ್ಟ್ 8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು.
ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಮುನಿರತ್ನ ಅವರ ಮೇಲೂ ಅಂಬಿಕಾಪತಿ ದೋಷಾರೋಪ ಮಾಡಿದ್ದರು. ಆಗ ಮುನಿರತ್ನ ಅವರು ಕೆಂಪಣ್ಣ ಮತ್ತು ಅಂಬಿಕಾಪತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ನಿಜವೆಂದರೆ, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಡಿ.ಕೆ. ಶಿವಕುಮಾರ್ ಬಾಕಿ ಪಾವತಿಗೆ ಕಮಿಷನ್ ಕೇಳುತ್ತಿದ್ದಾರೆ ಎಂಬ ಆರೋಪ ಮಾಡಿದ್ದ ಕಂಟ್ರಾಕ್ಟರ್ ಹೇಮಂತ್ ಮನೆಗೂ ದಾಳಿ ನಡೆದಿದೆ.
ಸ್ವಲ್ಪ ತಡವಾಗಿದ್ದರೂ ಹಣ ತೆಲಂಗಾಣಕ್ಕೆ ಹೋಗುತ್ತಿತ್ತಾ?
ಈ ನಡುವೆ ಸಿಕ್ಕಿರುವ ಒಂದು ಮಾಹಿತಿ ಪ್ರಕಾರ, ಐಟಿ ಅಧಿಕಾರಿಗಳು ದಾಳಿ ನಡೆಸುವುದು ಒಂದು ಗಂಟೆ ತಡವಾಗುತ್ತಿದ್ದರೂ ಈಗ ಪತ್ತೆಯಾಗಿರುವ 42 ಕೋಟಿ ರೂ. ಹಣವೂ ತೆಲಂಗಾಣಕ್ಕೆ ರವಾನೆ ಆಗುತ್ತಿತ್ತು ಎಂದು ಹೇಳಲಾಗಿದೆ. ಈ ಹಣ ಸಾಗಾಟಕ್ಕೆ ಸಂಬಂಧಿಸಿ ಚಾಲಕನಿಗೆ ಸೂಚನೆಯನ್ನು ನೀಡಲಾಗಿತ್ತು. ಕೀಯನ್ನು ಕೂಡಾ ಅವನಿಗೇ ಒಪ್ಪಿಸಲಾಗಿತ್ತು ಎನ್ನಲಾಗಿದೆ. ದಾಳಿ ಮಾಡಿದಾಗ ಕೀ ಅವನಲ್ಲಿತ್ತು. ಅವನಿಗೆ ಎಚ್ಚರಿಕೆ ನೀಡಿ ಕರೆಸಿಕೊಂಡ ಬಳಿಕವಷ್ಟೇ ಕೀ ಸಿಕ್ಕಿತ್ತು.
ಇದನ್ನೂ ಓದಿ: HD Kumaraswamy : ಮಂಚದ ಕೆಳಗೆ 42 ಕೋಟಿ!; ಇದು ಕಮಿಷನ್ ಕಲೆಕ್ಷನ್ ಹಣವೇ ಎಂದು ಕೇಳಿದ HDK
ಕಳೆದ ಒಂದು ವಾರದಲ್ಲಿ 84 ಕೋಟಿ ರೂ. ವಶಕ್ಕೆ
ಐಟಿ ಅಧಿಕಾರಿಗಳು ಕಳೆದ ಒಂದು ವಾರದಲ್ಲಿ ರಾಜಧಾನಿಯಲ್ಲಿ ಭರ್ಜರಿ ಬೇಟೆಯಾಗಿದ್ದಾರೆ. ಮೊದಲ ಹಂತದಲ್ಲಿ ಬಿಲ್ಡರ್‌ಗಳು ಮತ್ತು ಬಿಸಿನೆಸ್ ಮ್ಯಾನ್‌ಗಳ ಮನೆಗಳಿಗೆ ದಾಳಿ ನಡೆಸಿದ ಅಧಿಕಾರಿಗಳು ಒಟ್ಟು 20 ಕೋಟಿ ರೂ. ಸೀಜ್ ಮಾಡಿದ್ದರು. ಕಳೆದ ವಾರ ಗಜರಾಜ್ ಜ್ಯುವೆಲ್ಲರಿ ಮಾಲೀಕರ ಮನೆಯಲ್ಲಿ 22 ಕೋಟಿ ರೂ. ಪತ್ತೆಯಾಗಿತ್ತು. ಇದೀಗ ಅಂಬಿಕಾಪತಿ ಅವರಿಗೆ ಸೇರಿದ ಮನೆಯಲ್ಲಿ ಸಿಕ್ಕಿರುವ 42 ಕೋಟಿ ರೂ. ಸೇರಿಸಿದರೆ ಒಟ್ಟು 84 ಕೋಟಿ ರೂ. ಸಿಕ್ಕಿದಂತಾಗಿದೆ. ಇದುವರೆಗೆ ಉದ್ಯಮಿಗಳಾದ ಚಂದ್ರಶೇಖರ್, ಯಶಸ್ವಿನಿ, ಸುನಿತಾ, ವೆಂಕಟ ಶ್ರೀನಿವಾಸ್, ವಿಜಯ್ ಕುಮಾರ್ ಮನೆಗಳ ಮೇಲೆ ದಾಳಿ ನಡೆದಿದೆ.
ಪಂಚರಾಜ್ಯ ಚುನಾವಣೆಗೆ ಬೆಂಗಳೂರಿನಿಂದ ಹಣ ಪೂರೈಕೆ ನಡೆಯುತ್ತಿದೆ ಎಂಬ ಸಂಶಯದ ಆಧಾರದಲ್ಲಿ ಈ ದಾಳಿ ನಡೆದಿದೆ ಎಂದು ಹೇಳಾಗಿದೆ. ಚುನಾವಣೆ ಘೋಷಣೇಗೆ ಮೊದಲೇ ಐಟಿ ತನ್ನ ದಾಳಿ ಆರಂಭಿಸಿತ್ತು. ಇಲ್ಲಿ ತೆರಿಗೆ ವಂಚನೆ ನಡೆಸಿ ದೊಡ್ಡ ಪ್ರಮಾಣದ ಹಣವನ್ನು ಚುನಾವಣೆ ನಡೆಯುವ ರಾಜ್ಯಗಳಿಗೆ ರವಾನೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಹಣದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆರೋಪ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಬಿಲ್ ಪಾವತಿಗೆ ಪರ್ಸಂಟೇಜ್ ಕೇಳಿದ್ದರು. ಅದನ್ನು ಜೋಡಿಸಿ ತಂದು ಕೊಡಲಾಗಿದೆ ಎನ್ನುವುದು ಎಚ್.ಡಿ ಕುಮಾರಸ್ವಾಮಿ ಅವರ ಆರೋಪ. ಬಿಜೆಪಿ ನಾಯಕರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ಈ ಆರೋಪವನ್ನು ನಿರಾಕರಿಸಿದೆ.