ನವದೆಹಲಿ: ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಸ್ಕ್ರ್ಯಾಪ್ ಮೆಟಲ್ ಮಾಫಿಯಾ ತಂಡದ ಮುಖ್ಯಸ್ಥ ಮತ್ತು ಗ್ಯಾಂಗ್‌ಸ್ಟರ್ (Scrap metal mafia and gangster) ರವಿ ಕಾನಾ (Ravi Kana) ಹಾಗೂ ಆತನ ಗ್ಯಾಂಗ್‌ಗೆ ಸಂಬಂಧಿಸಿದ 200 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ನೋಯ್ಡಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜತೆಗೆ ರವಿ ಕಾನಾ ತನ್ನ ಗೆಳತಿ ಕಾಜಲ್ ಝಾ (Kajal Jha)ಗೆ ಉಡುಗೊರೆಯಾಗಿ ನೀಡಿದ 100 ಕೋಟಿ ರೂ.ಗಳ ದಕ್ಷಿಣ ದೆಹಲಿಯ ಬಂಗಲೆಯ ಮೇಲೆ ದಾಳಿ ನಡೆಸಿ ಬೀಗ ಜಡಿದಿದ್ದಾರೆ.
ಕಾಜಲ್ ಝಾ ಹಿನ್ನೆಲೆ ಏನು?
ಕಾಜಲ್ ಝಾ ಕೆಲಸ ಹುಡುಕಿಕೊಂಡು ಬಂದು ರವಿ ಕಾನಾ ಗುಂಪು ಸೇರಿದ್ದಳು. ಕೆಲವೇ ದಿನಗಳಲ್ಲಿ ಆ ಗ್ಯಾಂಗ್‌ನ ಮುಖ್ಯ ಅಂಗವಾಗಿ ಬದಲಾದ ರೀತಿಯೇ ರೋಚಕ. ರವಿಗೆ ಸೇರಿದ ಎಲ್ಲ ಬೇನಾಮಿ ಆಸ್ತಿಯ ಲೆಕ್ಕಪತ್ರಗಳನ್ನು ಕಾಜಲ್ ಝಾ ನೋಡಿಕೊಳ್ಳುತ್ತಿದ್ದಳು. ರವಿಯ ಗ್ಯಾಂಗ್ ಜತೆಗೆ ಮನಸ್ಸಿನೊಳಗೂ ಜಾಗ ಪಡೆದಿದ್ದ ಕಾಜಲ್ ಅಪಾರ ಪ್ರಮಾಣದ ಆಸ್ತಿಯ ಒಡತಿಯೂ ಆಗಿದ್ದಳು. ರವಿ ಆಕೆಗೆ ದಕ್ಷಿಣ ದೆಹಲಿಯ ಐಷರಾಮಿ ಏರಿಯಾ ನ್ಯೂ ಫ್ರೆಂಡ್ಸ್ ಕಾಲನಿಯಲ್ಲಿ ಮೂರು ಅಂತಸ್ತಿನ ಬಂಗಲೆಯನ್ನು ಉಡುಗೊರೆಯಾಗಿ ಕೊಡಿಸಿದ್ದ. ಅದರ ಬೆಲೆ ಬರೋಬ್ಬರಿ 100 ಕೋಟಿ ರೂ. ಇತ್ತೀಚೆಗೆ ಪೊಲೀಸರು ಆ ಐಷಾರಾಮಿ ಬಂಗಲೆಯ ಮೇಲೆ ದಾಳಿ ನಡೆಸುವ ಮೊದಲು ಕಾಜಲ್ ಝಾ ಮತ್ತು ಅವಳ ಸಹಚರರು ಪರಾರಿಯಾಗಿದ್ದರು. ಸದ್ಯ ಪೊಲೀಸರು ಬಂಗಲೆಗೆ ಬೀಗ ಜಡಿದು ಸೀಲ್ ಹಾಕಿದ್ದಾರೆ.
ಪೊಲೀಸರು ಹೇಳೋದೇನು?
ರವಿ ಕಾನಾ ಎಂದೂ ಕರೆಯಲ್ಪಡುವ ರವೀಂದ್ರ ನಗರ್ 16 ಸದಸ್ಯರ ಗ್ಯಾಂಗ್ ಹೊಂದ್ದಾನೆ. ಈ ಗ್ಯಾಂಗ್ ರೀಬಾರ್ ಮತ್ತು ಸ್ಕ್ರ್ಯಾಪ್ ವಸ್ತುಗಳ ಅಕ್ರಮ ಸಂಗ್ರಹಣೆ ಮತ್ತು ಮಾರಾಟದಲ್ಲಿ ತೊಡಗಿದೆ. ಸ್ಕ್ರ್ಯಾಪ್ ಡೀಲರ್ ಆಗಿದ್ದ ಕಾನಾ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಸ್ಕ್ರ್ಯಾಪ್ ವಸ್ತುಗಳನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲು ಮತ್ತು ಮಾರಾಟ ಮಾಡಲು ಪ್ರಾರಂಭಿಸಿದ ಬಳಿಕ ಕೋಟ್ಯಧಿಪತಿಯಾಗಿದ್ದಾನೆ ಎಂದು ಪೊಲೀಸರ ಹೇಳುತ್ತಾರೆ.
ಪೊಲೀಸ್ ಸಂರಕ್ಷಣೆ!
ರವಿಯ ಸಹೋದರ ಹರೇಂದ್ರ ಪ್ರಧಾನ್ ಕೂಡ ಗ್ರೇಟರ್ ನೋಯ್ಡಾದಲ್ಲಿ ಕುಖ್ಯಾತ ಗ್ಯಾಂಗ್‌ಸ್ಟರ್ ಆಗಿದ್ದ. 2014ರಲ್ಲಿ ನಡೆದ ಗ್ಯಾಂಗ್‌ವಾರ್‌ನಲ್ಲಿ ಆತ ಮೃತಪಟ್ಟಿದ್ದ. ಸಹೋದರನ ಸಾವಿನ ಬಳಿಕ ರವಿ ಕಾನಾ ಅಧಿಕಾರ ವಹಿಸಿಕೊಂಡಿದ್ದ. ಆತನಿಗೆ ಕೊಲೆ ಬೆದರಿಕೆಗಳು ಬಂದ ನಂತರ ಪೊಲೀಸ್ ರಕ್ಷಣೆಯನ್ನೂ ಒದಗಿಸಲಾಗಿತ್ತು. ಈ ಹಿಂದೆ ಪೊಲೀಸರೊಂದಿಗೆ ರವಿ ವಿವಾಹ ಸಮಾರಂಭವೊಂದಕ್ಕೆ ತೆರಳುತ್ತಿರುವ ವಿಡಿಯೊ ವೈರಲ್ ಆಗಿತ್ತು.
ಇದೀಗ ರವಿ ಮತ್ತು ಆತನ ಗುಂಪಿನ ವಿರುದ್ಧ ಸುಮಾರು 11 ಕೇಸ್‌ಗಳು ದಾಖಲಾಗಿವೆ. ಇವರ ವಿರುದ್ಧ ಅಪಹರಣ, ದರೋಡೆ ಸೇರಿದಂತೆ ವಿವಿಧ ಪ್ರಕರಣಗಳಿವೆ ಎಂದು ಗ್ರೇಟರ್ ನೋಯ್ಡಾದ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗ್ರೇಟರ್ ನೋಯ್ಡಾ ಮತ್ತು ನೋಯ್ಡಾದಾದ್ಯಂತ ಗ್ಯಾಂಗ್ ಬಳಸುತ್ತಿದ್ದ ಹಲವು ಸ್ಕ್ರ್ಯಾಪ್ ಗೋದಾಮುಗಳ ಮೇಲೆ ದಾಳಿ ನಡೆಸಿ ಬೀಗಮುದ್ರೆ ಜಡಿಯಲಾಗಿದೆ. ಸದ್ಯ ರವಿ ತನ್ನ ಗೆಳತಿ ಕಾಜಲ್ ಝಾ ಮತ್ತು ಇತರ ಗ್ಯಾಂಗ್ ಸದಸ್ಯರೊಂದಿಗೆ ತಲೆ ಮರೆಸಿಕೊಂಡಿದ್ದಾನೆ.
ಇದನ್ನೂ ಓದಿ: Encounter in UP: ಯೋಗಿ ನಾಡಿನಲ್ಲಿ ಮತ್ತೊಂದು ಎನ್‌ಕೌಂಟರ್, ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಬಲಿ!