Site icon Vistara News

Crime News: 20 ವರ್ಷದ ಪಶು ವೈದ್ಯಕೀಯ ವಿದ್ಯಾರ್ಥಿ ಸಾವಿನ ಪ್ರಕರಣ; ಕಾರಣ ಬಹಿರಂಗ

Sidharthan JS

Sidharthan JS

ತಿರುವನಂತಪುರಂ: ಕೇರಳದ ವಯನಾಡ್ ಜಿಲ್ಲೆಯ ಕಾಲೇಜು ಹಾಸ್ಟೆಲ್‌ನ ಸ್ನಾನಗೃಹದಲ್ಲಿ ಫೆಬ್ರವರಿ 18ರಂದು ನೇಣು ಬಿಗಿದ ಸ್ಥಿತಿಯಲ್ಲಿ 20 ವರ್ಷದ ಪಶು ವೈದ್ಯಕೀಯ ವಿದ್ಯಾರ್ಥಿ ಸಿದ್ಧಾರ್ಥನ್ ಜೆ.ಎಸ್. (Sidharthan JS)ನ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದೀಗ ಈ ಪ್ರಕರಣದ ಮುಖ್ಯ ಸಂಗತಿಯೊಂದು ಹೊರ ಬಿದ್ದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸಿದ್ಧಾರ್ಥನ್ ಮೇಲೆ ಸೀನಿಯರ್ಸ್‌ ಮತ್ತು ಸಹಪಾಠಿಗಳು ಸುಮಾರು 29 ಗಂಟೆಗಳ ಕಾಲ ನಿರಂತರವಾಗಿ ಹಲ್ಲೆ ನಡೆಸಿದ್ದರು ಎಂದು ವರದಿ ತಿಳಿಸಿದೆ (Crime News).

ಕೇಂದ್ರೀಯ ತನಿಖಾ ದಳ(ಸಿಬಿಐ)ಕ್ಕೆ ಹಸ್ತಾಂತರಿಸಲಾದ ಕೇರಳ ಪೊಲೀಸರ ಕಡತದಲ್ಲಿ ಈ ಮಾಹಿತಿಯನ್ನು ಉಲ್ಲೇಖಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಸೀನಿಯರ್ಸ್‌ ಮತ್ತು ಸಹಪಾಠಿಗಳು ಸಿದ್ಧಾರ್ಥನ್ ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸಿದ್ದಾರೆ. ಇದರಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವಿವರಿಸಲಾಗಿದೆ. ಈ ಸಾವಿನ ತನಿಖೆಯನ್ನು ಸಿಬಿಐ ಶುಕ್ರವಾರ ಸಂಜೆ ವಹಿಸಿಕೊಂಡಿದೆ.

ವರದಿಯಲ್ಲಿ ಏನಿದೆ?

ಫೆಬ್ರವರಿ 16ರ ಬೆಳಗ್ಗೆ 9ರಿಂದ ಫೆಬ್ರವರಿ 17ರ ಮಧ್ಯಾಹ್ನ 2ರವರೆಗೆ ಸಿದ್ಧಾರ್ಥನ್ ‘ಕ್ರೂರ ರ‍್ಯಾಗಿಂಗ್‌’ಗೆ ಒಳಗಾಗಿದ್ದರು. ಸೀನಿಯರ್ಸ್ ಬೆಲ್ಟ್‌ನಿಂದಲೂ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. “ಇದರಿಂದ ಸಿದ್ಧಾರ್ಥನ್‌ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇದರಿಂದ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಭಾವಿಸಿದರು. ಮಾತ್ರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ ಎಂದು ತೀರ್ಮಾನಿಸಿ, ಫೆಬ್ರವರಿ 18ರ ಮಧ್ಯಾಹ್ನ 12.30ರಿಂದ 1.45ರ ನಡುವೆ ಹಾಸ್ಟೆಲ್‌ನ ಸ್ನಾನಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆʼʼ ಎಂದು ಮೂಲಗಳು ತಿಳಿಸಿವೆ.

“ಪೊಲೀಸರು ಆರಂಭದಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದರು. ಇಲ್ಲಿಯವರೆಗೆ ನಡೆಸಿದ ತನಿಖೆ, ಕಾಲೇಜಿನ ರ‍್ಯಾಗಿಂಗ್‌ ವಿರೋಧಿ ದಳವು ತಯಾರಿಸಿದ ವರದಿಯಿಂದ, ಕಾಲೇಜಿನ ಡೀನ್, ಶವ ಪರೀಕ್ಷೆ ನಡೆಸಿದ ವೈದ್ಯಕೀಯ ಅಧಿಕಾರಿಯ ಹೇಳಿಕೆಯಿಂದ ಮತ್ತು ಇತರ ಸಾಕ್ಷಿಗಳ ಹೇಳಿಕೆಯಿಂದ ಹಲ್ಲೆ ನಡೆದಿರುವುದು ಸಾಬೀತಾಗಿದೆ. ಕೆಲವು ಹಿರಿಯ ವಿದ್ಯಾರ್ಥಿಗಳು ಮತ್ತು ಸಹಪಾಠಿಗಳು ಸಿದ್ಧಾರ್ಥನ್ ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸಿದ್ದಾರೆʼʼ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸಿಬಿಐಯಿಂದ ಎಫ್‌ಆರ್‌ಐ

ಈ ಸಂಬಂಧ ಕೇಂದ್ರ ಸರ್ಕಾರದಿಂದ ಅಧಿಸೂಚನೆ ಬಂದ ಕೆಲವೇ ಗಂಟೆಗಳಲ್ಲಿ ಸಿಬಿಐ ಶುಕ್ರವಾರ ತಡರಾತ್ರಿ 20 ಜನರ ವಿರುದ್ಧ ವಯನಾಡ್‌ನ ವೈತಿರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಅನ್ನು ಮರು ನೋಂದಾಯಿಸಿದೆ. ಆರೋಪಿಗಳ ವಿರುದ್ಧ ಕ್ರಿಮಿನಲ್ ಪಿತೂರಿ, ಆತ್ಮಹತ್ಯೆಗೆ ಪ್ರಚೋದನೆ, ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು ಮತ್ತು ಕೇರಳದ ರ‍್ಯಾಗಿಂಗ್‌ ವಿರೋಧಿ ಕಾನೂನಿಗೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಧಿ ವಿಜ್ಞಾನ ತಂಡದೊಂದಿಗೆ ಸಿಬಿಐ ತಂಡ ಶೀಘ್ರದಲ್ಲೇ ರಾಜ್ಯಕ್ಕೆ ಭೇಟಿ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಕೀಯ ಕೋಲಾಹಲ

ಸಿದ್ಧಾರ್ಥನ್‌ ಆತ್ಮಹತ್ಯೆ ಪ್ರಕರಣ ಕೇರಳದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಆಡಳಿತರೂಢ ಎಡಪಕ್ಷಗಳ ವಿರುದ್ಧ ತಿರುಗಿ ಬಿದ್ದಿದ್ದವು. ಕೊನೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾರ್ಚ್ 9ರಂದು ಸಿಬಿಐ ತನಿಖೆಯ ಭರವಸೆ ನೀಡಿದ್ದರು.

ಇದನ್ನೂ ಓದಿ: Crime News: 8ನೇ ತರಗತಿಯ ಬಾಲಕನ ಮೇಲೆ ಹಲ್ಲೆ ನಡೆಸಿ,  ಗುದ ದ್ವಾರಕ್ಕೆ ಕೋಲು ತುರುಕಿಸಿ ವಿಕೃತಿ ಮೆರೆದ ಸಹಪಾಠಿಗಳು

ತನಿಖೆಗೆ ಸಂಬಂಧಿಸಿದಂತೆ ದಾಖಲೆಗಳು ಮತ್ತು ವಿವರಗಳನ್ನು ಸಿಬಿಐಗೆ ಹಸ್ತಾಂತರಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿದ ಆರೋಪದ ಮೇಲೆ ಕೇರಳ ಸರ್ಕಾರ ಇತ್ತೀಚೆಗೆ ಗೃಹ ಇಲಾಖೆಯ ಮೂವರು ನೌಕರರನ್ನು ಅಮಾನತುಗೊಳಿಸಿತ್ತು. ಪ್ರತಿಪಕ್ಷಗಳಲ್ಲದೆ ಮೃತ ವಿದ್ಯಾರ್ಥಿಯ ಕುಟುಂಬವು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ʼʼಸಿದ್ಧಾರ್ಥನ್‌ಗೆ ಸುಮಾರು ಎಂಟು ತಿಂಗಳ ಕಾಲ ಕಿರುಕುಳ ನೀಡಲಾಗುತ್ತಿತ್ತುʼʼ ಎಂದು ಮೃತನ ತಂದೆ ಜಯಪ್ರಕಾಶ್ ಆರೋಪಿಸಿದ್ದಾರೆ. ʼʼಹಲವು ಹಿರಿಯ ಎಸ್ಎಫ್ಐ ನಾಯಕರು ತೊಂದರೆ ನೀಡಿದ್ದಾರೆʼʼ ಎಂದು ಅವರು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version