ಬೆಂಗಳೂರು/ ಪಣಜಿ: ಮಗನಿಗೆ ತಂದೆಯ ಜತೆ ಅಟ್ಯಾಚ್‌ಮೆಂಟ್ ಹೆಚ್ಚಾಗುತ್ತೆ ಎಂಬ ಕಾರಣಕ್ಕೆ ಬೆಂಗಳೂರಿನ ಸ್ಟಾರ್ಟಪ್ ಸಿಇಒ ಸುಚನಾ ಸೇಠ್ ತನ್ನ 4 ವರ್ಷದ ಮಗನನ್ನು ಗೋವಾದ (Goa Murder Case) ಅಪಾರ್ಟ್‌ಮೆಂಟ್‌ನಲ್ಲಿ ಹತ್ಯೆಗೈದಿದ್ದಳು. ಮಗನನ್ನು ಹತ್ಯೆಗೈದ ಆರೋಪದ (Killer CEO) ಮೇಲೆ ಬಂಧಿತಳಾಗಿರುವ ಸುಚನಾ ಸೇಠ್ (39) (Suchana Seth) ವಿರುದ್ಧ ಗೋವಾ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಕಲ್ಲಂಗೋಟ್ ಪೊಲೀಸರು ಗೋವಾ ಬಾಲಾಪರಾಧಿ ನ್ಯಾಯಾಲಯದಲ್ಲಿ ಸುಚನಾ ಸೇಠ್ ವಿರುದ್ಧ 642 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಮಗುವಿನ ಕತ್ತು ಹಿಸುಕಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಸುಚನಾ ಸೇಠ್ ವಿರುದ್ಧ ಸೆಕ್ಷನ್ 302 (ಕೊಲೆ) ಮತ್ತು 201 ಗೋವಾ ಮಕ್ಕಳ ಕಾಯ್ದೆಯ ಸೆಕ್ಷನ್ 8 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇನ್ನೂ ಗೋವಾ ಪೊಲೀಸರು ಈ ಪ್ರಕರಣದಲ್ಲಿ 59 ಜನರ ಸಾಕ್ಷಿಗಳನ್ನು ಹೆಸರಿಸಿದ್ದಾರೆ. ಜತೆಗೆ ಆರೋಪಿ ಸುಚನಾ ಸೇಠ್ ಪತಿ ವೆಂಕಟರಮಣ ಅವರ ಹೇಳಿಕೆಯನ್ನು ಸಹ ದಾಖಲಿಸಿದ್ದಾರೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶದ ಹೊರತಾಗಿಯೂ, ಸುಚಾನ ಸೇಠ್ ಮಗನನ್ನು ಭೇಟಿಯಾಗಲು ಅವಕಾಶ ಮಾಡಿಕೊಟ್ಟಿರಲಿಲ್ಲ ಎಂದು ವೆಂಕಟರಮಣ ತಿಳಿಸಿದ್ದರು.
ಜೂನ್ 14ಕ್ಕೆ ವಿಚಾರಣೆ
ಗೋವಾ ಮಕ್ಕಳ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜೂನ್ 14 ರಂದು ನಡೆಸಲಿದೆ. ಸದ್ಯ ಸುಚನಾ ಸೇಠ್ ನ್ಯಾಯಾಂಗ ಬಂಧನದಲ್ಲಿದ್ದು, ಟಿಶ್ಯೂ ಪೇಪರ್ ಮೇಲೆ ಐ ಲೈನರ್‌ನಲ್ಲಿ ಹತ್ಯೆಯ ಸಂಚು ರೂಪಿಸಿದ್ದ, ಕೈ ಬರಹದ ಟಿಪ್ಪಣಿಯನ್ನು ಚಾರ್ಜ್ ಶೀಟ್‌ನಲ್ಲಿ ಲಗತ್ತಿಸಿದ್ದಾರೆ. ಈ ಕೈ ಬರಹವನ್ನು ಫಾರೆನ್ಸಿಕ್ ಸೈನ್ಸ್ ಲಾಬ್ (Forensic Science Laboratory-FSL)ಗೆ ಕಳುಹಿಸಲಾಗಿತ್ತು. ಅದರ ದೃಢೀಕರಣ ವರದಿಯನ್ನು ಸಹ ಲಗತ್ತಿಸಿದ್ದಾರೆ.
ಇದನ್ನೂ ಓದಿ: Arvind Kejriwal: ಜೈಲು ವಾಸದಲ್ಲಿ 4.5 ಕೆಜಿ ತೂಕ ಕಳೆದುಕೊಂಡ ಕೇಜ್ರಿವಾಲ್!
ಮಗುವಿನ ಕೊಲೆ ಪ್ರಕರಣ: ಏನೇನು ನಡೆಯಿತು? ಕೊಂದಿದ್ದು ಹೇಗೆ?
-ಸುಚನಾ ಸೇಠ್ ಜನವರಿ 6ರಂದು ಉತ್ತರ ಗೋವಾದ ಕಾಂಡೋಲಿಮ್‌ನಲ್ಲಿರುವ ಸರ್ವಿಸ್ ಅಪಾರ್ಟ್‌ಮೆಂಟ್‌ಗೆ ಪ್ರವೇಶ ಪಡೆದಿದ್ದರು. ಹಾಗೆ ಒಳಗೆ ಹೋಗುವಾಗ ಆಕೆಯ ಕೈಯಲ್ಲಿದ್ದದ್ದು ಒಂದು ಬ್ಯಾಗ್ ಮತ್ತು ಪುಟ್ಟ ನಾಲ್ಕು ವರ್ಷದ ಮಗ.
-ಅಲ್ಲಿ ಎರಡು ದಿನ ಕಳೆದ ಸುಚನಾ ಅಪಾರ್ಟ್‌ಮೆಂಟ್ ಸಿಬ್ಬಂದಿಗೆ ಒಂದು ಬೇಡಿಕೆ ಸಲ್ಲಿಸುತ್ತಾರೆ. ನಾನು ಒಂದು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಬೇಕಾಗಿದೆ. ನನಗೆ ಒಂದು ಟ್ಯಾಕ್ಸಿ ಅರೇಂಜ್ ಮಾಡಿಕೊಡಿ.
– ಆಗ ಅಲ್ಲಿನ ಸಿಬ್ಬಂದಿ, ಟ್ಯಾಕ್ಸಿ ಯಾಕೆ ಮೇಡಂ, ಅದು ತುಂಬಾ ಕಾಸ್ಟ್ಲೀ. ಅದಕ್ಕಿಂತ ವಿಮಾನವೇ ಒಳ್ಳೆಯದು, ಕಡಿಮೆ ದುಡ್ಡಿನಲ್ಲಿ ಆಗುತ್ತದೆ ಮತ್ತು ಬೇಗನೆ ತಲುಪುತ್ತದೆ ಎಂದು ಹೇಳಿದ್ದರು. ಆದರೆ, ನನಗೆ ಟ್ಯಾಕ್ಸಿನೇ ಬೇಕು ಎಂದು ಸುಚನಾ ಹಠ ಹಿಡಿದಿದ್ದರು.
-ಅಂತಿಮವಾಗಿ ಜನವರಿ 8ರಂದು ಟ್ಯಾಕ್ಸಿಯನ್ನು ಬುಕ್ ಮಾಡಿ ಕೊಡಲಾಯಿತು. ಮುಂಜಾನೆ ಅವರು ಅಲ್ಲಿಂದ ಟ್ಯಾಕ್ಸಿ ಹತ್ತಿ ಹೊರಟಿದ್ದಾರೆ.
-ಟ್ಯಾಕ್ಸಿ ಹೊರಟು ಹೋದ ಬಳಿಕ ಅಪಾರ್ಟ್‌ಮೆಂಟ್‌ನ ಸಿಬ್ಬಂದಿ ಸುಚನಾ ಅವರು ತಂಗಿದ್ದ ಕೋಣೆಯನ್ನು ಕ್ಲೀನ್ ಮಾಡಲು ಹೋಗುತ್ತಾರೆ. ಅಲ್ಲಿನ ಟವೆಲ್‌ನಲ್ಲಿ ರಕ್ತದ ಕಲೆಗಳು ಗೋಚರಿಸುತ್ತವೆ. ಆಗ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುತ್ತಾರೆ.
-ಈ ನಡುವೆ, ಸುಚನಾ ಸೇಠ್ ಜತೆಗೆ ಬಂದಿದ್ದ ನಾಲ್ಕು ವರ್ಷದ ಮಗ ಚಿನ್ಮಯಿ ಮರಳಿ ಹೋಗುವಾಗ ಇರಲಿಲ್ಲ ಎನ್ನುವುದು ಸಿಬ್ಬಂದಿಗೆ ನೆನಪಾಗುತ್ತದೆ. ಜತೆಗೆ ಆಕೆ ಒಂದು ಭಾರವಾದ ಸೂಟ್ ಕೇಸನ್ನು ಎತ್ತಿಕೊಂಡು ಹೋಗಿದ್ದರು ಎಂದು ಪೊಲೀಸರಿಗೆ ತಿಳಿಸುತ್ತಾರೆ.
-ಪೊಲೀಸರು ಚಾಲಕನಿಗೆ ಕರೆ ಮಾಡಿ ಸುಚನಾ ಅವರಿಗೆ ಫೋನ್ ಕೊಡುವಂತೆ ಕೇಳುತ್ತಾರೆ. ಫೋನ್‌ನಲ್ಲಿ ರಕ್ತದ ಕಲೆ, ಮತ್ತು ಮಗು ಇಲ್ಲದಿರುವ ಬಗ್ಗೆ ಕೇಳುತ್ತಾರೆ.
-ಆಗ ಸುಚನಾ ಅವರು ಟವೆಲ್‌ನಲ್ಲಿದ್ದದ್ದು ಋತುಸ್ರಾವಕ್ಕೆ ಸಂಬಂಧಿಸಿದ್ದು ಎನ್ನುತ್ತಾರೆ. ಮಗನನ್ನು ದಕ್ಷಿಣ ಗೋವಾದ ಮರ್ಗೋವಾ ಪಟ್ಟಣದಲ್ಲಿರುವ ಸ್ನೇಹಿತರ ಮನೆಯಲ್ಲಿ ಬಿಟ್ಟಿದ್ದಾಗಿ ಹೇಳುತ್ತಾರೆ. ಮತ್ತು ನಂಬರ್ ಕೂಡಾ ಕೊಡುತ್ತಾರೆ. ಆದರೆ, ಅದು ಫೇಕ್ ನಂಬರ್ ಎನ್ನುವುದು ಪರಿಶೀಲಿಸಿದಾಗ ಗೊತ್ತಾಗುತ್ತದೆ.
-ಪೊಲೀಸರು ಕೂಡಲೇ ಟ್ಯಾಕ್ಸಿ ಚಾಲಕನಿಗೆ ಕರೆ ಮಾಡಿ ಕೊಂಕಣಿಯಲ್ಲಿ ಮಾತನಾಡಿ, ಟ್ಯಾಕ್ಸಿಯನ್ನು ಸಮೀಪದ ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಸೂಚಿಸುತ್ತಾರೆ. ಅವನು ಚಿತ್ರದುರ್ಗದ ಐಮಂಗಲ ಪೊಲೀಸ್ ಠಾಣೆಯ ಮುಂದೆ ಟ್ಯಾಕ್ಸಿ ನಿಲ್ಲಿಸುತ್ತಾನೆ.
-ಐಮಂಗಲ ಪೊಲೀಸರು ಕಾರನ್ನು ಪರಿಶೀಲಿಸಿದಾಗ ಬ್ಯಾಗ್‌ನಲ್ಲಿ ಮಗುವಿನ ಶವ ಪತ್ತೆಯಾಗುತ್ತದೆ, ಆಗ ಕೂಡಲೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದರು.
ಎತ್ತಿ ಆಡಿಸಿದ ತೋಳಲ್ಲಿ ಮಗನ ಅಂತ್ಯಕ್ರಿಯೆ ಮಾಡಿದ್ದ ತಂದೆ
ಗಂಡ-ಹೆಂಡತಿ ಜಗಳದಲ್ಲಿ 4 ವರ್ಷದ ಮಗು ಬಲಿಯಾಗಿತ್ತು. ಮಗುವನ್ನು ಮುದ್ದಾಡಬೇಕಿದ್ದ ಕೈಗಳು ಕರುಳಬಳ್ಳಿಗೆ ಕೊಳ್ಳಿ ಇಟ್ಟು (Killer CEO) ಜೈಲು ಕಂಬಿ ಹಿಂದೆ ಇದ್ದರೆ, ಇತ್ತ ಜ.10ರಂದು ಬೆಂಗಳೂರಿನ ಹರಿಶ್ಚಂದ್ರಘಾಟ್ನಲ್ಲಿ ತಂದೆ ವೆಂಕಟರಮಣ ಅತೀವ ದುಃಖದಲ್ಲೇ ಪುತ್ರ ಚಿನ್ಮಯ್‌ನ ಅಂತ್ಯಸಂಸ್ಕಾರ (Funeral) ನಡೆಸಿದ್ದರು. ಈ ದೃಶ್ಯ ನೋಡಿದವರೆಲ್ಲೂ ಈ ನೋವು ಯಾವ ತಂದೆಗೂ ಬೇಡಪ್ಪಾ ಎಂದು ಎದೆಭಾರ ಮಾಡಿಕೊಂಡಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ