Site icon Vistara News

KPSC: ಕೆಪಿಎಸ್‌ಸಿಯಲ್ಲಿ ನೇಮಕಾತಿ ಕಡತವೇ ನಾಪತ್ತೆ! ಅಕ್ರಮದ ಸಾಕ್ಷಿ ಅದರಲ್ಲಿತ್ತು!

kpsc office

kpsc office

ಬೆಂಗಳೂರು: ಕೋರ್ಟ್‌ನಲ್ಲಿ (High court) ಸಾಕ್ಷಿಯಾಗಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗ (Karnataka public services commission – KPSC – ಕೆಪಿಎಸ್‌ಸಿ) ದಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಕಿರಿಯ ಎಂಜಿನಿಯರ್‌ (Junior Engineer) ನೇಮಕಾತಿ ಆಯ್ಕೆ ಪಟ್ಟಿಯ ಕಡತವೇ ನಾಪತ್ತೆಯಾಗಿರುವ ವಿಚಾರ ಬಯಲಾಗಿದೆ.

ಕಡತ ನಾಪತ್ತೆಯಿಂದ ಕಂಗಾಲಾದ ಕೆಪಿಎಸ್‌ಸಿ ಅಧಿಕಾರಿಗಳು ಈ ಕುರಿತು ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಳೆಗೇರಿ ಅಭಿವೃದ್ಧಿ ಮಂಡಳಿಯ 9 (1 ಹೈ.ಕ) ಸಿವಿಲ್‌ ಕಿರಿಯ ಎಂಜಿನಿಯರ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕೆಪಿಎಸ್‌ಸಿ 2018ರ ನ.22ರಂದು ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟಸಿತ್ತು. ಈ ಪಟ್ಟಿ ಪ್ರಶ್ನಿಸಿ ಎಚ್‌.ಡಿ. ವಿವೇಕಾನಂದ ಎಂಬವರು ಹೈಕೋರ್ಟ್‌ನಲ್ಲಿ ರಿಟ್‌ ದಾಖಲಿಸಿದ್ದರು.

ಈ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದು, ಕೆಪಿಎಸ್‌ಸಿಗೆ ನೋಟಿಸ್‌ ಜಾರಿ ಮಾಡಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಕೆಪಿಎಸ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಲು ನೇಮಕಾತಿ ಪ್ರಕ್ರಿಯೆ, ಆಯ್ಕೆ ಪಟ್ಟಿ ಸೇರಿದಂತೆ ಹಲವು ಮಹತ್ವದ ವಿಷಯ ಒಳಗೊಂಡ ಗೋಪ್ಯ ಕಡತವನ್ನು ಶಾಖೆ-3ರಿಂದ ಸಿದ್ಧಪಡಿಸಿತ್ತು. ಬಳಿಕ ಈ ಕಡತ 2024ರ ಜ.22ರಿಂದ ನಾಪತ್ತೆಯಾಗಿತ್ತು.

ಕಡತ ನಾಪತ್ತೆ ಸಲುವಾಗಿ ಕಂಗಾಲಾದ ಸಿಬ್ಬಂದಿ ಆಯೋಗದ ಎಲ್ಲಾ ಶಾಖೆಗಳಿಗೂ ಸುತ್ತೋಲೆ ಹೊರಡಿಸಿ ಹುಡುಕಾಟ ನಡೆಸಿತ್ತು. ಆದರೆ, ಕಡತ ಇದುವರೆಗೂ ಸಿಕ್ಕಿಲಿಲ್ಲ. ಈ ನಿಟ್ಟಿನಲ್ಲಿ ಮಾರ್ಚ್ 13ರಂದು ನಡೆದ ಆಯೋಗದ ಸಭೆಯಲ್ಲಿ ಕಡತ ನಾಪತ್ತೆ ಕುರಿತು ಪೊಲೀಸರಿಗೆ ದೂರು ನೀಡಲು ತೀರ್ಮಾನಕ್ಕೆ ಬರಲಾಗಿತ್ತು. ಈ ನಿಟ್ಟಿನಲ್ಲಿ ಆಯೋಗದ ಅಧಿಕಾರಿ ಜೆ. ರಾಘವೇಂದ್ರ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೆಪಿಎಸ್‌ಸಿ ಆಂತರಿಕ ಮೂಲಗಳ ಮಾಹಿತಿಯ ಪ್ರಕಾರ, ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಅನುಮಾನ ಇದೆ. ಕೋರ್ಟ್‌ನಲ್ಲಿ ಈ ವಿಚಾರ ಬರುತ್ತಿದ್ದಂತೆ ಕಡತ ನಾಪತ್ತೆ ಮಾಡಲಾಗಿದೆ ಎಂಬ ಆರೋಪ ಇದೆ.

ಇದನ್ನೂ ಓದಿ: Job Alert: ಪದವೀಧರರಿಗೆ ಗುಡ್‌ನ್ಯೂಸ್‌; ಕೆಪಿಎಸ್‌ಸಿಯಿಂದ 50 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Exit mobile version