ಬೆಂಗಳೂರು: ಉತ್ತರ ಪ್ರದೇಶದಲ್ಲಿ ದುಷ್ಕರ್ಮಿಗಳು ಎಲ್ಲರ ಎದುರೇ ಜಗಳ ಆಡಿಕೊಳ್ಳುವುದು, ಹಲ್ಲೆ ನಡೆಸುವ ಪ್ರಕರಣಗಳು ಆಗಾಗ ನಡೆಯುತ್ತಿರುತ್ತವೆ. ಇದೀಗ ಅದೇ ರೀತಿಯಲ್ಲಿ ಒಂದು ವರ್ಷದ ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಕೊಲ್ಲಲು ಯತ್ನಿಸಿರುವ ಘಟನೆ ನಡೆದಿದೆ. ಘಟನೆಯ ವಿಡಿಯೊ ಅಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊ ವೈರಲ್ (Viral Video) ಆಗಿದೆ ಕೂಡ.
ಉತ್ತರ ಪ್ರದೇಶದ ಶಹಜಾನ್ನಗರದಲ್ಲಿ ಈ ಘಟನೆ ನಡೆದಿದೆ. 30 ವರ್ಷದ ವ್ಯಕ್ತಿ ರಾತ್ರಿ ವೇಳೆ ತನ್ನ ಒಂದು ವರ್ಷದ ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಕರೆದುಕೊಂಡು ಹೋಗುತ್ತಿದ್ದ. ಆಗ ರಸ್ತೆ ಬದಿಯಲ್ಲಿ ಒಂದು ಬೈಕ್ನಲ್ಲಿ ಇಬ್ಬರು ವ್ಯಕ್ತಿಗಳು ನಿಂತಿರುತ್ತಾರೆ. ಆ ವ್ಯಕ್ತಿ ಆ ಬೈಕ್ ಅನ್ನು ದಾಟಿ ಮುಂದೆ ಹೋದಾಗ ಅಲ್ಲೇ ಇದ್ದ ಇನ್ನೊಬ್ಬ ವ್ಯಕ್ತಿ ಆತನ ಎದುರಿಗೆ ಬಂದಿದ್ದು, ನೇರವಾಗಿ ಆ ತಂದೆಗೆ ಗುಂಡಿಟ್ಟಿದ್ದಾನೆ. ತಂದೆ ಮಗಳ ಜೊತೆಯಲ್ಲಿ ಅಲ್ಲಿಯೇ ಕೆಳಗೆ ಬಿದ್ದಿದ್ದಾನೆ.
ಇದನ್ನೂ ಓದಿ: Viral Video : ಸೈಕಲ್ ಓಡಿಸುತ್ತಲೇ ಐ ಲವ್ ಮೈ ಇಂಡಿಯಾ ಹಾಡಿಗೆ ನೃತ್ಯ ಮಾಡಿದ ಯುವತಿ!
ಇತ್ತ ಗುಂಡಿಟ್ಟ ವ್ಯಕ್ತಿ ಅಲ್ಲಿ ಬೈಕ್ನಲ್ಲಿ ನಿಂತು ಕಾಯುತ್ತಿದ್ದ ಇಬ್ಬರು ವ್ಯಕ್ತಿಗಳ ಜತೆ ಸೇರಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಈ ದೃಶ್ಯಗಳು ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದೆ. ವಿಡಿಯೊವನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ವರದಿಗಳ ಪ್ರಕಾರ ಗುಂಡೇಟು ತಿಂದ ತಂದೆಗೆ ಗಂಭೀರ ಸ್ಥಿತಿಯಲ್ಲಿದ್ದಾರೆ. ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಹಾಗೆಯೇ ಅವರ ಮಗುವಿಗೆ ಯಾವುದೇ ಪೆಟ್ಟು ಬಿದ್ದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಗುಂಡು ಹಾರಿಸಿದ ದುಷ್ಕರ್ಮಿಗಳು ಸದ್ಯ ಪರಾರಿಯಾಗಿದ್ದಾರೆ. ಈ ಕೊಲೆ ಯತ್ನದ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ವಿಚಾರವಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.