Site icon Vistara News

ಕೋಣೆಗೆ ಹಾವು ಬಿಟ್ಟು ಪತ್ನಿ, 2 ವರ್ಷದ ಮಗಳನ್ನು ಕೊಂದ ನೀಚ; ಇಂಥವರನ್ನು ಏನು ಮಾಡಬೇಕು?

Snake

Snake Bites Man in Bihar, He Bites it Back Thrice; Check Who Survived

ಭುವನೇಶ್ವರ: ‘ಹಾವಿಗೆ ಹಲ್ಲಿನಲ್ಲಿ ಮಾತ್ರ ವಿಷ ಇದ್ದರೆ ಮನುಷ್ಯನಿಗೆ ದೇಹದ ತುಂಬ ವಿಷ ಇರುತ್ತದೆ’ ಎಂಬ ಮಾತಿದೆ. ಈ ಮಾತಿಗೆ ನಿದರ್ಶನ ಎಂಬಂತೆ ಒಡಿಶಾದಲ್ಲಿ (Odisha Man Kills Wife) ವ್ಯಕ್ತಿಯೊಬ್ಬ ಪತ್ನಿ ಹಾಗೂ ಎರಡು ವರ್ಷದ ಮಗಳಿದ್ದ ಕೋಣೆಗೆ ವಿಷಕಾರಿ ಹಾವನ್ನು ಬಿಟ್ಟು, ಇಬ್ಬರನ್ನೂ (Physical Abuse) ಕೊಂದಿದ್ದಾನೆ. ಪತ್ನಿ ಹಾಗೂ ಮಗಳು ಮಲಗಿದ್ದಾಗ ಅವರ ಕೋಣೆಗೆ ಹಾವು ಬಿಟ್ಟು, ಅದರಿಂದ ಕಚ್ಚಿಸಿ ಕೊಂದಿದ್ದಾನೆ ಎಂದು ತಿಳಿದುಬಂದಿದೆ. ಈಗ ಆರೋಪಿಯನ್ನು ಬಂಧಿಸಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಒಡಿಶಾದ ಗಂಜಂ ಜಿಲ್ಲೆಯ ಅಧೇಯಿಗಾಂವ್‌ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತರನ್ನು ಕೆ. ಬಸಂತಿ ಪಾತ್ರ (23) ಹಾಗೂ ದೇವಸ್ಮಿತಾ (2) ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಕೊಂದ ಆರೋಪದಲ್ಲಿ ಕೆ. ಗಣೇಶ್‌ ಪಾತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಗಣೇಶ್‌ ಹಾಗೂ ಬಸಂತಿಯು 2020ರಲ್ಲಿ ಮದುವೆಯಾಗಿದ್ದಾರೆ. ಮದುವೆ ಆಗಿ, ಮಗಳು ಜನಿಸಿದ್ದಳು. ಕುಟುಂಬದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಕೆಲ ತಿಂಗಳಿಂದ ಗಣೇಶ್‌ ಹಾಗೂ ಬಸಂತಿ ಮಧ್ಯೆ ಜಗಳ ನಡೆಯುತ್ತಿದ್ದವು. ಇದರಿಂದ ಕುಪಿತಗೊಂಡಿದ್ದ ಗಣೇಶ್‌ ಇಂತಹ ನೀಚ ಕೆಲಸ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಹಾವು ತಂದಿದ್ದು ಎಲ್ಲಿಂದ?

ಪತ್ನಿ ಹಾಗೂ ಮಗಳನ್ನು ಕೊಲ್ಲುವ ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದ ಗಣೇಶ್‌, ಹಾವಾಡಿಗನೊಬ್ಬನಿಂದ ಹಾವು ತಂದಿದ್ದ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಇದೆ, ಪೂಜೆ ಮಾಡಿಸಬೇಕು ಎಂದು ಸುಳ್ಳು ಹೇಳಿ ಹಾವು ತಂದಿದ್ದ. ಅಕ್ಟೋಬರ್‌ 6ರಂದು ತಡರಾತ್ರಿ ಚೀಲವೊಂದರಲ್ಲಿ ಹಾವು ತಂದಿದ್ದ ಗಣೇಶ್‌, ಪತ್ನಿ ಹಾಗೂ ಪುತ್ರಿ ಮಲಗಿದ್ದ ಕೋಣೆಯಲ್ಲಿ ಹಾವು ಬಿಟ್ಟಿದ್ದ. ಹಾವು ಕಚ್ಚಿ ಇಬ್ಬರೂ ಮೃತಪಟ್ಟಿದ್ದರು. ಪೊಲೀಸರು ಕೂಡ ಆಕಸ್ಮಿಕ ಸಾವು ಎಂದು ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ: Crime News: ಸತ್ತು ಹೋಗಿದ್ದೇನೆ ಎಂದು ನಂಬಿಸಿದ ಕೊಲೆ ಆರೋಪಿ 2 ವರ್ಷದ ಬಳಿಕ ಅರೆಸ್ಟ್!‌

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಪತ್ನಿ ಹಾಗೂ ಪುತ್ರಿ ಒಂದು ಕೋಣೆಯಲ್ಲಿ ಮಲಗಿದ್ದು, ಗಣೇಶ್‌ ಬೇರೊಂದು ಕೋಣೆಯಲ್ಲಿ ಮಲಗಿದ್ದ. ಇದರಿಂದ ಅನುಮಾನಗೊಂಡಿದ್ದ ಬಸಂತಿಯ ತಂದೆಯು ಅಳಿಯನ (ಗಣೇಶ್)‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. “ದೂರು ದಾಖಲಾದ ಬಳಿಕ ಆರೋಪಿಯನ್ನು ಬಂಧಿಸಲಾಯಿತು. ವಿಚಾರಣೆಯ ಆರಂಭದಲ್ಲಿ ಆತ ಮುಗ್ಧನೆಂದು ಪ್ರತಿಪಾದಿಸಿದ್ದ. ಆದರೆ, ಕೊನೆಗೂ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಜಗಳದ ಕಾರಣದಿಂದಾಗಿ ಹಾವು ಬಿಟ್ಟು ಕೊಂದಿದ್ದೇನೆ ಎಂಬುದಾಗಿ ಹೇಳಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version