ಹೊಸದಿಲ್ಲಿ: ಅಪರಾಧಿಗಳಿಗೆ ಮರಣ ದಂಡನೆ ವಿಧಿಸುವ ಮುನ್ನ ಅವರ ಮಾನಸಿಕ ಆರೋಗ್ಯದ ಸ್ಥಿತಿಗತಿಯನ್ನು ಗಮನಿಸಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವಾರ ನೀಡಿದ ತೀರ್ಪಿನಲ್ಲಿ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅದರಂತೆ, ಯಾರಿಗಾದರೂ ಮರಣದಂಡನೆ ವಿಧಿಸುವ ಮೊದಲು ನ್ಯಾಯಾಲಯಗಳು ಈಗ ಆರೋಪಿಯ ಮಾನಸಿಕ ಆರೋಗ್ಯ ವರದಿ ತರಿಸಿಕೊಂಡು ಜೈಲಿನಲ್ಲಿ ಅವರ ನಡವಳಿಕೆಯನ್ನು ಮೌಲ್ಯಮಾಪನ ಮಾಡಬೇಕಾಗುತ್ತದೆ.
ಮಧ್ಯಪ್ರದೇಶದ ಮೂವರು ಅಪರಾಧಿಗಳು ಜೂನ್ 2011ರಲ್ಲಿ ಕಳ್ಳತನ ಮಾಡಲು ಮನೆಗೆ ಪ್ರವೇಶಿಸಿದ ಬಳಿಕ ಮೂವರು ಮಹಿಳೆಯರನ್ನು ಬರ್ಬರವಾಗಿ ಕೊಲೆ ಮಾಡಿ, ಬಳಿಕ ವಿಚಾರಣಾ ನ್ಯಾಯಾಲಯ ಹಾಗೂ ರಾಜ್ಯ ಹೈಕೋರ್ಟ್‌ನಿಂದ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದರು. ಅವರು ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ, ಜೈಲಿನಲ್ಲಿ ಅವರ ಉತ್ತಮ ನಡವಳಿಕೆ ಮತ್ತು ಸುಧಾರಣೆಯ ಕಡೆಗೆ ಬಲವಾದ ಒಲವನ್ನು ನೋಡಿ, ಮರಣದಂಡನೆಯ ತೀರ್ಪುಗಳನ್ನು ಕನಿಷ್ಠ 25 ವರ್ಷಗಳವರೆಗೆ ಜೀವಾವಧಿ ಶಿಕ್ಷೆಯಾಗಿ ಬದಲಾಯಿಸಿತು.
ಇದನ್ನೂ ಓದಿ| ರಾಜೀವ್ ಹತ್ಯೆ: ಬ್ಯಾಟರಿ ತಂದುಕೊಟ್ಟಿದ್ದ ಪೆರಾರಿವಾಲನ್ 32 ವರ್ಷ ಬಳಿಕ ಬಂಧಮುಕ್ತ
ನ್ಯಾಯಮೂರ್ತಿಗಳಾದ ಯು ಉದಯ್ ಲಲಿತ್, ಎಸ್ ರವೀಂದ್ರ ಭಟ್ ಮತ್ತು ಬೇಲಾ ತ್ರಿವೇದಿ ಅವರ ಪೀಠವು ಶುಕ್ರವಾರ ಪ್ರಕಟಿಸಿದ ತೀರ್ಪಿನಲ್ಲಿ, ಬಚನ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್ (1980) ನಲ್ಲಿ ಮರಣದಂಡನೆ ವಿಧಿಸುವ ಮೊದಲು ಶಿಕ್ಷೆಯ ಪ್ರಮಾಣವನ್ನು ತಗ್ಗಿಸುವ ಸಂದರ್ಭಗಳನ್ನು ನಿರ್ಣಯಿಸುವ ಅಗತ್ಯವಿದೆ ಎಂದು ಒತ್ತಿಹೇಳಿದೆ. ಶಿಕ್ಷೆಯ ಪ್ರಮಾಣ ಪ್ರಕಟಿಸುವ ಮುನ್ನ ಈ ಏಳು ಅಂಶಗಳನ್ನು ವಿಶ್ಲೇಷಿಸುವಂತೆ ಅದು ಸೂಚಿಸಿದೆ. ಅವುಗಳೆಂದರೆ: ಅಪರಾಧ ಎಸಗಿದ ಸಂದರ್ಭಗಳು (ತೀವ್ರವಾದ ಮಾನಸಿಕ ಅಥವಾ ಭಾವನಾತ್ಮಕ ಅಡಚಣೆಯಿಂದ ಮಾಡಿದ ಕೃತ್ಯ, ಬಲವಂತದ ಸನ್ನಿವೇಶದಲ್ಲಿ ಎಸಗಿದ ಕೃತ್ಯ, ಅಪರಾಧ ಎಸಗಿರುವುದನ್ನು ಆರೋಪಿಯು ನೈತಿಕವಾಗಿ ಸಮರ್ಥಸುವಂತಿದ್ದರೆ), ಆರೋಪಿಯ ವಯಸ್ಸು, ಘಟನೆಯ ಸಮಯದಲ್ಲಿ ಆತ/ಆಕೆಯ ಮಾನಸಿಕ ಸ್ಥಿತಿ , ಸುಧಾರಣೆಯ ಸಾಧ್ಯತೆ, ಮತ್ತು ಆರೋಪಿಗಳು ಸಮಾಜಕ್ಕೆ ನಿರಂತರ ಬೆದರಿಕೆಯಾಗಿ ಮುಂದುವರಿಯುತ್ತಾರೆಯೇ ಎಂಬ ಅಂಶಗಳನ್ನು ವಿಶ್ಲೇಷಿಸುವಂತೆ ಸೂಚಿಸಿತು.
ಮರಣದಂಡನೆಯನ್ನು “ಅಪರೂಪದಲ್ಲಿ ಅಪರೂಪದ” ಪ್ರಕರಣಗಳಲ್ಲಿ ಮಾತ್ರ ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿತು. ಮರಣದಂಡನೆಯ ಬಗ್ಗೆ ಚರ್ಚಿಸುವಾಗ ಹೆಚ್ಚಿನ ನ್ಯಾಯಾಲಯಗಳು ಉಲ್ಲೇಖಿಸುವ ಸಿದ್ಧಾಂತವಿದು. ಈ ಕಾರ್ಯವಿಧಾನದ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವ ವ್ಯವಸ್ಥೆ ಇಲ್ಲದ ಕಾರಣ ಈಗ ಈ ಮಾರ್ಗಸೂಚಿಗಳನ್ನು ನೀಡಬೇಕಾಯಿತು ಎಂದು ನ್ಯಾಯ ಪೀಠ ಹೇಳಿದೆ. ‘ಮರಣದಂಡನೆ ವಿಧಿಸಬಹುದಾದ ಅಪರಾಧ ಪ್ರಕರಣದಲ್ಲಿ- ಸೆಷನ್ಸ್ ನ್ಯಾಯಾಲಯವು ತೀರ್ಪು ಪ್ರಕಟಿಸುವ ಮುನ್ನ- ಸೂಕ್ತ ಹಂತದಲ್ಲಿ, ಆಪಾದಿತರ ಮನೋವೈದ್ಯಕೀಯ ಮತ್ತು ಮಾನಸಿಕ ಮೌಲ್ಯಮಾಪನವನ್ನು ಸರಕಾರವು ಮುಂಚಿತವಾಗಿ ಸಂಗ್ರಹಿಸಿ ಸಲ್ಲಿಸಬೇಕು” ಎಂದು ತೀರ್ಪು ಹೇಳಿದೆ, ಅಪರಾಧ ಎಸಗುವ ಸಮಯದಲ್ಲಿ ವ್ಯಕ್ತಿಯ ಮನಸ್ಸಿನ ಸ್ಥಿತಿಗತಿಯನ್ನು ಇದು ಖಚಿತಪಡಿಸುತ್ತದೆ.
ಹೆಚ್ಚುವರಿಯಾಗಿ, ಆರೋಪಿಯ ವಯಸ್ಸು, ಕುಟುಂಬದ ಹಿನ್ನೆಲೆ, ಅಪರಾಧ ಹಿನ್ನೆಲೆ, ಶೈಕ್ಷಣಿಕ ಅರ್ಹತೆ ಮತ್ತು ಇತರ ವಿವರಗಳ ಮಾಹಿತಿಯನ್ನು ಸಂಗ್ರಹಿಸಲು ನ್ಯಾಯಾಲಯವು ರಾಜ್ಯಕ್ಕೆ ನಿರ್ದೇಶಿಸಿತು. “ಜೈಲಿನಲ್ಲಿ ಅಪರಾಧಿಯ ವರ್ತನೆ ಮತ್ತು ನಡವಳಿಕೆ”, “ಜೈಲಿನಲ್ಲಿ ಮಾಡಿದ ಕೆಲಸ” ಮತ್ತು “ಆರೋಪಿಯು ತೊಡಗಿಸಿಕೊಂಡಿರುವ ಚಟುವಟಿಕೆಗಳು”, ಇತರ ವಿವರಗಳ ಕುರಿತು ನ್ಯಾಯಾಲಯಕ್ಕೆ ಮಾಹಿತಿಯನ್ನು ಒದಗಿಸುವಂತೆ ಜೈಲು ಅಧೀಕ್ಷಕರು ಅಥವಾ ಪರೀಕ್ಷಾ ಅಧಿಕಾರಿಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಬೇಕು. ಅಂತಹ ವರದಿಯು ಜೈಲಿನಲ್ಲಿನ ಸುಧಾರಣಾ ಪ್ರಗತಿ ಮತ್ತು ಯಾವುದೇ “ಅಪರಾಧ ಸಾಬೀತಿನ ನಂತರದ ಮಾನಸಿಕ ಅಸ್ವಸ್ಥತೆ” ಇರುವಿಕೆಯ ಕುರಿತು “ತಾಜಾ ಮನೋವೈದ್ಯಕೀಯ ಮತ್ತು ಮಾನಸಿಕ ವರದಿಯನ್ನು” ಒಳಗೊಂಡಿರಬೇಕು ಎಂದು ಪೀಠವು ಹೇಳಿದೆ.
ಪೀಠದ 122 ಪುಟಗಳ ತೀರ್ಪನ್ನು ಬರೆಯುತ್ತಾ, ನ್ಯಾಯಮೂರ್ತಿ ಭಟ್, ‘ದುರದೃಷ್ಟಕರ ವಾಸ್ತವವೆಂದರೆ, ವಿಚಾರಣೆಯ ಹಂತದಲ್ಲಿ ಉತ್ತಮವಾಗಿ ದಾಖಲಿಸಲಾದ ವಾಸ್ತವಾಂಶಗಳು, ಶಿಕ್ಷೆಯ ಪ್ರಮಾಣ ತಗ್ಗಿಸುವ ಸಂದರ್ಭಗಳ ಅನುಪಸ್ಥಿತಿಯಲ್ಲಿ, ಹೆಚ್ಚು ಬಲವಾದ ಶಿಕ್ಷೆಯ ತೀರ್ಪನ್ನು ನೀಡುವಂತೆ ನ್ಯಾಯಾಲಯವನ್ನು ಪ್ರತಿಬಂಧಿಸುತ್ತವೆ. ಹೀಗಾಗಿ ಬಚನ್ ಸಿಂಗ್ ಪರೀಕ್ಷೆಯ ತಪ್ಪಾದ ಅನ್ವಯಿಸುವಿಕೆಯ ಆಧಾರದ ಮೇಲೆ ಮರಣದಂಡನೆಯನ್ನು ವಿಧಿಸಲಾಗುತ್ತದೆ’ ಎಂದು ಹೇಳಿದ್ದಾರೆ. ಈ ತೀರ್ಪು “ಬಹಳ ಕಾಲದ ನಿರೀಕ್ಷೆಯಾಗಿತ್ತು’ ಎಂದು ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಅವರು ಪ್ರತಿಕ್ರಿಯಿಸಿದ್ದಾರೆ. “ಇದು ಕೇವಲ ಮನೋವೈದ್ಯಕೀಯ ಮೌಲ್ಯಮಾಪನದ ಬಗ್ಗೆ ಅಲ್ಲ ಆದರೆ ಇಡೀ ಶ್ರೇಣಿಯ ಸನ್ನಿವೇಶಗಳ ಮೌಲ್ಯಮಾಪನವಾಗಿದೆ – ಕುಟುಂಬ, ವಯಸ್ಸು, ಬಡತನ, ಹಿಂದಿನ ಅನ್ಯಾಯ – ಇಂತಹ ಕೆಲವು ಕಾರಣಗಳು ಅಪರಾಧವನ್ನು ಮಾಡುವ ವ್ಯಕ್ತಿಗೆ ಸನ್ನಿವೇಶವನ್ನು ಸೃಷ್ಟಿಸಿತು ಎಂಬುದನ್ನು ವಿವರಿಸುತ್ತದೆ’ ಎಂದು ಅವರು ಹೇಳಿದರು.
ಬಚನ್ ಸಿಂಗ್ ತೀರ್ಪಿನ ನಂತರ ನಾಲ್ಕು ದಶಕಗಳವರೆಗೆ, ನ್ಯಾಯಾಲಯದ ಪರಿಗಣನೆಗೆ ತಗ್ಗಿಸುವ ಸಂದರ್ಭಗಳನ್ನು ಯೋಜನೆ ಅಥವಾ ವ್ಯವಸ್ಥೆಯ ಅನುಪಸ್ಥಿತಿಯನ್ನು ನ್ಯಾಯಾಲಯ ಗಮನಿಸಿದೆ. “ಅಪರಾಧದ ಕ್ರೌರ್ಯಕ್ಕೆ ಪ್ರತೀಕಾರದ ಪ್ರತಿಕ್ರಿಯೆಗೆ ಒಳಗಾಗುವುದನ್ನು ತಪ್ಪಿಸಲು, ವಿಚಾರಣೆಯ ಹಂತದಲ್ಲಿ ಶಿಕ್ಷೆ ತಗ್ಗಿಸುವ ಸಂದರ್ಭಗಳನ್ನು ಪರಿಗಣಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವ ತುರ್ತು ಅವಶ್ಯಕತೆಯಿದೆ. ಮೇಲ್ಮನವಿ ಹಂತವನ್ನು ತಲುಪುವ ಬಹುಪಾಲು ಪ್ರಕರಣಗಳಲ್ಲಿನ ಪರಿಸ್ಥಿತಿಯು ಗಮನಾರ್ಹವಾಗಿದೆ. ಇದಕ್ಕಾಗಿ ವಿಚಾರಣಾ ನ್ಯಾಯಾಲಯವು ಆರೋಪಿಗಳು ಮತ್ತು ರಾಜ್ಯದಿಂದ ಮಾಹಿತಿಯನ್ನು ಪಡೆದುಕೊಳ್ಳಬೇಕು” ಎಂದು ಪೀಠ ಹೇಳಿದೆ.
ಇದನ್ನೂ ಓದಿ| ಹೈದರಾಬಾದ್ ರೇಪ್ ಕೇಸ್ ಎನ್‌ಕೌಂಟರ್ ಉದ್ದೇಶ ಪೂರ್ವಕ ಎಂದ ಸುಪ್ರೀಂಕೋರ್ಟ್ ರಚಿತ ಆಯೋಗ