ಮುಂಬೈ: ಮಾನಸಿಕ ಅಸ್ವಸ್ಥೆಯೊಬ್ಬಳು ದುಪಟ್ಟಾದಿಂದ ಕುತ್ತಿಗೆ ಬಿಗಿದು ತನ್ನ 11 ವರ್ಷದ ಮಗಳನ್ನು ಕೊಂದು ಬಳಿಕ ತನ್ನ ಮಣಿಕಟ್ಟನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆಘತಕಾರಿ ಘಟನೆ ಮುಂಬೈಯ ಬೊರಿವಲಿಯಲ್ಲಿ ಗುರುವಾರ (ಫೆಬ್ರವರಿ 15) ನಡೆದಿದೆ (Crime News).
ಆರಂಭದಲ್ಲಿ ಮಹಿಳೆಯ ಪತಿ ಕಸ್ತೂರ್ಬಾ ಪೊಲೀಸ್ ಠಾಣೆಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಈ ಮೇಲೆ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿತ್ತು. ಆಕೆಯ ಪಕ್ಕದಲ್ಲಿ ಕುತ್ತಿಗೆಗೆ ದುಪಟ್ಟಾ ಸುತ್ತಿಕೊಂಡಿದ್ದ ಮಗಳ ಶವವೂ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಔಷಧ ತಪ್ಪಿಸಿದ್ದ ಮಹಿಳೆ
ಈ ಮಹಿಳೆ 10 ವರ್ಷಗಳಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಇದಕ್ಕಾಗಿ ಆಕೆ ಅಂಧೇರಿ ಮತ್ತು ಬರೋಡಾದ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆದರೆ ಮೂರು ದಿನಗಳಿಂದ ಆಕೆ ವೈದ್ಯರು ಸೂಚಿಸಿದ ಔಷಧ ಸೇವಿಸಿರಲಿಲ್ಲ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ. ʼʼಮೃತ ಬಾಲಕಿಯನ್ನು ರುಹಾನಿ ಸೋಲಂಕಿ ಎಂದು ಗುರುತಿಸಲಾಗಿದೆ. ಶತಾಬ್ದಿ ಆಸ್ಪತ್ರೆಯಲ್ಲಿ ರುಹಾನಿ ಮೃತಪಟ್ಟಿದ್ದಾಳೆ. ಆಕೆಯ ತಾಯಿ, 46 ವರ್ಷದ ರೇಖಾ ಇದೀಗ ಚೇತರಿಸಿಕೊಳ್ಳುತ್ತಿದ್ದು, ಚಿಕಿತ್ಸೆ ಮುಂದುವರಿಸಲಾಗುತ್ತಿದೆʼʼ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಘಟನೆ ಗುರುವಾರ ರಾತ್ರಿ ಸುಮಾರು 10.30ರ ವೇಳೆಗೆ ಸಂಭವಿಸಿದೆ. ಅಂದು ರಾತ್ರಿ ಊಟ ಮುಗಿಸಿ ರೇಖಾ ಮತ್ತು ರುಹಾನಿ ರೂಮ್‌ಗೆ ತೆರಳಿದ್ದರು. ಈ ವೇಳೆ ರೇಖಾ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಳು. ಆಕೆಯ ಪತಿ ಹೊರಗೆ ಉಳಿದಿದ್ದರು. ʼʼಸ್ಪಲ್ಪ ಹೊತ್ತಿನಲ್ಲಿ ರೂಮ್ ಒಳಗಿನಿಂದ ರುಹಾನಿ ಅಳುವ ಧ್ವನಿ ಕೇಳಿಸಿತು. ಹೀಗಾಗಿ ಭೀತಿಯಿಂದ ಪೊಲೀಸರಿಗೆ ಕರೆ ಮಾಡಿದೆ. ಅವರು ಬಂದಾಗಲೂ ಬಾಗಿಲು ಲಾಕ್ ಆಗಿತ್ತು. ಬಳಿಕ ಪೊಲೀಸರು ಬಲ ಪ್ರಯೋಗಿಸಿ ಬಾಗಿಲು ಒಡೆದರುʼʼ ಎಂದು ರೇಖಾ ಪತಿ ತಿಳಿಸಿದ್ದಾರೆ.
ರೇಖಾ ಮೂರು ದಿನಗಳಿಂದ ಔಷಧ ತೆಗೆದುಕೊಳ್ಳದ್ದೇ ಇದ್ದುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಉದ್ದೇಶಕಪೂರ್ವಕವಾಗಿಯೇ ಆಕೆ ಔಷಧ ತಪ್ಪಿಸಿದ್ದೇ ಎನ್ನುವ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ. ಮಹಿಳೆ ಮತ್ತು ಆಕೆಯ ಪತಿಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. “ನಾವು ಮಹಿಳೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಕಸ್ತೂರ್ಬಾ ಮಾರ್ಗ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Crime News : ಮಧ್ಯರಾತ್ರಿ ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ, ಆಘಾತಕಾರಿ ವಿಡಿಯೊ ಇಲ್ಲಿದೆ
ಅಪಾರ್ಟ್‌ಮೆಂಟ್ ನಿವಾಸಿಯೊಬ್ಬರು ಮಾತನಾಡಿ, ʼʼಮೇಲ್ನೋಟಕ್ಕೆ ಅವರು ಸಾಮಾನ್ಯ ಕುಟುಂಬದವರಂತೆ ಕಾಣುತ್ತಿದ್ದರು. ಹೌಸಿಂಗ್ ಸೊಸೈಟಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರುಹಾನಿ ನೃತ್ಯ ಪ್ರದರ್ಶನ ನೀಡಿದ್ದಳು ಮತ್ತು ಲವಲವಿಕೆಯ ಹುಡುಗಿಯಂತೆ ಕಾಣುತ್ತಿದ್ದಳು. ನಿನ್ನೆ ಸಂಜೆ ಅವಳು ತನ್ನ ಶ್ವಾನವನ್ನು ವಾಕಿಂಗ್ ಕರೆದುಕೊಂಡು ಹೋಗುತ್ತಿರುವುದನ್ನೂ ನೋಡಿದ್ದೆ. ಆದರೆ ಇದೀಗ ಈ ಸುದ್ದಿ ಕೇಳಿ ಆಘಾತವಾಗಿದೆʼʼ ಎಂದು ಹೇಳಿದ್ದಾರೆ. ರುಹಾನಿ ಅವರ ತಂದೆ ಅದೇ ಏರಿಯಾದಲ್ಲಿ ಅಂಗಡಿ ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ