ಹೊಸದಿಲ್ಲಿ: ಮೃತ ಗ್ಯಾಂಗ್‌ಸ್ಟರ್ (Gangster) ಒಬ್ಬನ ಮಾಜಿ ಗೆಳತಿ, ಮಾಡೆಲ್ ಒಬ್ಬಾಕೆಯನ್ನು ಗುರ್ಗಾಂವ್ ಹೋಟೆಲ್‌ನಲ್ಲಿ ಹತ್ಯೆ (Model Murder) ಮಾಡಲಾಗಿದೆ. ಹೊಟೇಲ್ ಮಾಲೀಕ ಮತ್ತು ಆತನ ಸಹಚರರೇ ಸೇರಿ ಹತ್ಯೆಗೈದಿದ್ದಾರೆ.
27 ವರ್ಷದ ದಿವ್ಯಾ ಪಹುಜಾ (Divya Pahuja murder) ಕೊಲೆಯಾದ ಮಾಡೆಲ್. ಸಿಸಿಟಿವಿಯಲ್ಲಿ ಕೊಲೆಗಾರರ ಕೃತ್ಯ ಬಯಲಾಗಿದ್ದು, ಶವ ಇನ್ನೂ ಪತ್ತೆಯಾಗಬೇಕಿದೆ. ಕೊಲೆಗಾರರು ಆಕೆಯ ಶವವನ್ನು ಬಿಎಂಡಬ್ಲ್ಯು ಕಾರಿನಲ್ಲಿ ಹಾಕಿ ಒಯ್ದು ಎಲ್ಲೋ ಎಸೆದಿದ್ದಾರೆ. ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಈಕೆ 2016ರಲ್ಲಿ ಗುರುಗ್ರಾಮ್‌ನ ಮೋಸ್ಟ್ ವಾಂಟೆಡ್ ದರೋಡೆಕೋರನಾಗಿದ್ದ ಸಂದೀಪ್ ಗಡೋಲಿಯ ಗರ್ಲ್‌ಫ್ರೆಂಡ್ ಆಗಿದ್ದಳು. ತನ್ನ ಬಾಯ್‌ಫ್ರೆಂಡ್‌ನ ನಕಲಿ ಎನ್‌ಕೌಂಟರ್‌ಗೆ ಅವಕಾಶ ಮಾಡಿಕೊಟ್ಟ ಕಾರಣಕ್ಕೆ ಪಹುಜಾ ಏಳು ವರ್ಷಗಳ ಕಾಲ ಜೈಲಿನಲ್ಲಿದ್ದಳು. ಕಳೆದ ವರ್ಷ ಜುಲೈನಲ್ಲಿ ಬಾಂಬೆ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದಳು.
ಜನವರಿ 1ರಂದು ತನ್ನ ಸ್ನೇಹಿತ ಅಭಿಜೀತ್ ಸಿಂಗ್‌ನೊಂದಿಗೆ ಈಕೆ ಹೊರಗೆ ಹೋಗಿದ್ದಾಳೆ ಮತ್ತು ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಕುಟುಂಬದಿಂದ ಗುರುಗ್ರಾಮ್‌ನ ಸೆಕ್ಟರ್ 14 ಪೊಲೀಸ್ ಠಾಣೆಯ ಅಧಿಕಾರಿಗಳು ದೂರು ಸ್ವೀಕರಿಸಿದ್ದರು. ತಲಾಶ್ ಮಾಡಿದ ಪೊಲೀಸರಿಗೆ ಗುರುಗ್ರಾಮ್‌ನಲ್ಲಿರುವ ಹೋಟೆಲ್ ಸಿಟಿ ಪಾಯಿಂಟ್‌ನಲ್ಲಿ ಆಕೆ ತಂಗಿದ್ದುದು ತಿಳಿದುಬಂದಿತ್ತು.
ಇದು ಅಭಿಜಿತ್ ಸಿಂಗ್ ಒಡೆತನದಲ್ಲಿದೆ. ಪಹುಜಾಳ ಫೋನ್ ಹಲವಾರು ಗಂಟೆಗಳ ಕಾಲ ಸ್ವಿಚ್ ಆಫ್ ಆಗಿತ್ತು. ಪೊಲೀಸರು ಹೋಟೆಲ್‌ಗೆ ಬಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕಾರಿಡಾರ್‌ನಲ್ಲಿ ಶವವನ್ನು ಶೀಟ್‌ನಲ್ಲಿ ಸುತ್ತಿ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಮಾಡೆಲ್ ಹತ್ಯೆಗೆ ಸಂಬಂಧಿಸಿ ಸಿಂಗ್ ಮತ್ತು ಅವನ ಇಬ್ಬರು ಸಹಾಯಕರನ್ನು ಬಂಧಿಸಲಾಗಿದೆ. ಶವಕ್ಕಾಗಿ ಶೋಧ ನಡೆಯುತ್ತಿದೆ.
ಮೃತದೇಹವನ್ನು ತನ್ನ ಬಿಎಂಡಬ್ಲ್ಯುನಲ್ಲಿ ಹಾಕಿ ಅದು ಸಿಗದಂತೆ ವಿಲೇವಾರಿ ಮಾಡಲು ಸಿಂಗ್ ತನ್ನ ಸಹಾಯಕರಿಗೆ ₹10 ಲಕ್ಷ ನೀಡಿದ್ದ ಎಂದು ಗೊತ್ತಾಗಿದೆ. ಹೊಸ ವರ್ಷದ ದಿನ ಸಿಂಗ್‌ನೊಂದಿಗೆ ಪಹುಜಾ ಹೊರಗೆ ಹೋಗಿದ್ದಳು. ಮರುದಿನ ಮುಂಜಾನೆ 4.15ರ ಸುಮಾರಿಗೆ ಸಹಚರನೊಬ್ಬನೊಂದಿಗೆ ಹೋಟೆಲ್‌ಗೆ ಮರಳಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2016ರಲ್ಲಿ ಮುಂಬೈ ಹೋಟೆಲ್‌ನಲ್ಲಿ ಹರ್ಯಾಣ ಪೊಲೀಸರ ಎನ್‌ಕೌಂಟರ್‌ನಲ್ಲಿ ಈತ ಸತ್ತಿದ್ದ. ಆ ಸಂದರ್ಭದಲ್ಲಿ ಪಹುಜಾ ಗಡೋಲಿಯೊಂದಿಗೆ ಹೋಟೆಲ್ ಕೋಣೆಯಲ್ಲಿದ್ದಳು. ಆತನ ಬಗ್ಗೆ ಆಕೆಯೇ ಪೊಲೀಸರಿಗೆ ಸುಳಿವು ನೀಡಿ, ಎನ್‌ಕೌಂಟರ್‌ಗೆ ಅವಕಾಶ ಮಾಡಿಕೊಟ್ಟಿದ್ದಳು ಎಂದು ಆರೋಪಿಸಲಾಗಿತ್ತು. ಎನ್‌ಕೌಂಟರ್ ನಕಲಿ ಎಂಬ ಹಿನ್ನೆಲೆಯಲ್ಲಿ ಇಲಾಖಾ ತನಿಖೆ ನಡೆದು ಹಲವಾರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿತ್ತು. ನಕಲಿ ಎನ್‌ಕೌಂಟರ್‌ಗೆ ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಪಹುಜಾ ಮತ್ತು ಆಕೆಯ ತಾಯಿಯನ್ನು ಸಹ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು.
ಕೆಲವು ಮೂಲಗಳ ಪ್ರಕಾರ ಈಕೆ ಅಭಿಜಿತ್ ಸಿಂಗ್‌ನ ಕೆಲವು ರಹಸ್ಯಮಯ ವಿಡಿಯೋಗಳನ್ನು ಹೊಂದಿದ್ದು, ಅವುಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು. ಈಕೆಯಿಂದ ಮುಕ್ತಿ ಹೊಂದಲು ಅಭಿಜಿತ್ ಸಿಂಗ್ ಪಹುಜಾಳನ್ನು ಕೊಲ್ಲಿಸಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Murder Case : ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ, 4 ದಿನದ ಬಳಿಕ ಶವ ಪತ್ತೆ