ಬೆಂಗಳೂರು: ರಾಜಧಾನಿಯಲ್ಲಿ ನಡೆದ ಬರ್ಬರ ಅಪರಾಧ ಪ್ರಕರಣವೊಂದರಲ್ಲಿ ತಾಯಿಯೇ ಮಕ್ಕಳನ್ನು ಕೊಲೆ ಮಾಡಿದ್ದಾಳೆ. ಇಬ್ಬರು ಮಕ್ಕಳನ್ನು ಕೊಂದು, ನಂತರ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾಳೆ (Murder Case).
ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ (ಏಪ್ರಿಲ್ 9) ರಾತ್ರಿ ಈ ಬರ್ಬರ ಘಟನೆ ನಡೆದಿದೆ. 9 ವರ್ಷದ ಹೆಣ್ಣು ಮಗು ಹಾಗೂ 7 ವರ್ಷದ ಗಂಡು ಮಗುವನ್ನು ಕೊಲೆ ಮಾಡಲಾಗಿದೆ. ಮಕ್ಕಳನ್ನು ಕೊಲೆ ಮಾಡಿದ ತಾಯಿ ಗಂಗಾದೇವಿ ಎಂಬಾಕೆಯನ್ನು ಜಾಲಹಳ್ಳಿ ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಲಕ್ಷ್ಮೀ (9) ಹಾಗೂ ಗೌತಮ್ (7) ಕೊಲೆಯಾದ ಮಕ್ಕಳು.
ಆಂಧ್ರ ಪ್ರದೇಶ ಮೂಲದ ಗಂಗಾದೇವಿ ಕುಟುಂಬ, ಬೆಂಗಳೂರಿನ ಜಾಲಹಳ್ಳಿಯಲ್ಲಿ ವಾಸವಾಗಿತ್ತು. ಅಚ್ಚರಿ ಎಂದರೆ ಕೊಲೆ ಆರೋಪಿತೆ ಗಂಗಾದೇವಿ ಪತಿ ಪೋಕ್ಸೋ ಕೇಸ್‌ನಲ್ಲಿ ಬಂಧಿತನಾಗಿ ಈಗಾಗಲೇ ಜೈಲಿನಲ್ಲಿದ್ದಾನೆ. ಪತಿ ಮಗಳ ಜತೆಗೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಸ್ವತಃ ಗಂಗಾದೇವಿಯೇ ಪತಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಗಂಗಾದೇವಿ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.
ಕೊಲೆಗೆ ಕಾರಣವೇನು?
ಮಕ್ಕಳಿಬ್ಬರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡದ ಬಳಿಕ ಗಂಗಾದೇವಿ ಕಂಟ್ರೊಲ್ ರೂಂಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಗಂಗಾದೇವಿಗೆ ಹತ್ತು ವರ್ಷಗಳ ಹಿಂದೆ ಮದುವೆಯಾಗಿತ್ತು. ಆಕೆಯ ಪತಿ ಪತಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ತಿಂಗಳು ಆತನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ʼʼಕೇಸ್ ಸಂಬಂಧ ಕೌನ್ಸಿಲಿಂಗ್ ನಡೆಸಿ ಆತನನ್ನು ಬಂಧಿಸಲಾಗಿತ್ತು. ಹೀಗಾಗಿ ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಗಂಗಾದೇವಿ ಈ ಕೃತ್ಯ ಎಸಗಿದ್ದಾಳೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪತ್ನಿಯನ್ನು ಕೊಂದ, ತಾನೂ ನೇಣು ಹಾಕಿಕೊಂಡ
ಕೊಪ್ಪಳ: ಪತ್ನಿಯನ್ನು ಹೊಡೆದು ಕೊಲೆ ಮಾಡಿದ ಪತಿ ಕೊಲೆಯ ನಂತರ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬರ್ಬರ ಘಟನೆ ಕೊಪ್ಪಳ ತಾಲೂಕಿನ ಬುಡಶೆಟ್ನಾಳ ಗ್ರಾಮದಲ್ಲಿ ನಡೆದಿದೆ. ಬುಡಶೆಟ್ನಾಳದ ನಿಂಗಪ್ಪ (45) ಪತ್ನಿಯ ಕೊಲೆಗಡುಕ ಹಾಗೂ ಆತ್ಮಹತ್ಯೆ ಮಾಡಿಕೊಂಡಾತ. ಪತ್ನಿ ಲಕ್ಷ್ಮವ್ವ (40) ಗಂಡನಿಂದ ಕೊಲೆಯಾಗಿರುವವಳು. ಕುಡಿತದ ಚಟಕ್ಕೆ ಅಂಟಿಕೊಂಡಿದ್ದ ನಿಂಗಪ್ಪ, ಪದೇ ಪದೆ ಮದ್ಯ ಸೇವಿಸಿ ಬಂದು ಪತ್ನಿಯ ಜೊತೆಗೆ ವಿನಾಕಾರಣ ಜಗಳ ತೆಗೆಯುತ್ತಿದ್ದ ಎಂದು ಆಸುಪಾಸಿನವರು ತಿಳಿಸಿದ್ದಾರೆ.
ಹೊಲದಲ್ಲೇ ಘಟನೆ ನಡೆದಿದೆ. ಹೊಲದಲ್ಲೇ ಹೆಂಡತಿಯನ್ನು ಕೊಂದು ಹಾಕಿದ ಈತ, ಅಲ್ಲೇ ಇದ್ದ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದಾನೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: Road Accident: ಬೈಕ್ ಚಲಾಯಿಸುತ್ತಿದ್ದ ತಂದೆ- ಮಗ ಅಪಘಾತದಲ್ಲಿ ಸಾವು
ರಾಜಕಾಲುವೆಗೆ ಬಿದ್ದ ಬೈಕ್, ಸವಾರ ಸಾವು
ಕಾರವಾರ: ನಿಯಂತ್ರಣ ತಪ್ಪಿ ರಾಜಕಾಲುವೆಗೆ ಬೈಕ್ ಬಿದ್ದ ಪರಿಣಾಮ ಒಬ್ಬ ಸ್ಥಳದಲ್ಲೇ ಸತ್ತಿದ್ದು, ಇನ್ನೋರ್ವ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ- ಯಲ್ಲಾಪುರ ರಸ್ತೆಯ ಪಂಚವಟಿ ಕ್ರಾಸ್ ಬಳಿ ಘಟನೆ ನಡೆದಿದೆ. ಸಂದೀಪ ಛಲವಾದಿ (24) ಮೃತ ಬೈಕ್ ಸವಾರ. ಸುಭಾಷ್ ದೇವಾಡಿಗ (26) ಗಂಭೀರ ಗಾಯಗೊಂಡವನು. ಯಲ್ಲಾಪುರದ ಭರತ್ನಳ್ಳಿ ಗ್ರಾಮದ ಈ ಯುವಕರು ಸ್ನೇಹಿತನನ್ನು ಶಿರಸಿ ಬಸ್ ನಿಲ್ದಾಣಕ್ಕೆ ಬಿಟ್ಟು ವಾಪಸ್ಸಾಗುವಾಗ ಅಪಘಾತ ನಡೆದಿದೆ. ಇಳಿಜಾರಿನ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಬೈಕ್ ಸುಮಾರು 20 ಅಡಿ ಆಳದ ರಾಜಕಾಲುವೆಗೆ ಬಿದ್ದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ