Site icon Vistara News

MP Renukacharya : ಎಂ.ಪಿ ರೇಣುಕಾಚಾರ್ಯ, ಪುತ್ರನಿಗೆ ಫೋನ್‌ನಲ್ಲಿ ಕೊಲೆ ಬೆದರಿಕೆ

MP Renukacharya

ಬೆಂಗಳೂರು: ಮಾಜಿ ಸಚಿವ, ಹೊನ್ನಾಳಿ (Honnali) ಮಾಜಿ ಶಾಸಕ, ಬಿಜೆಪಿ (BJP) ಮುಖಂಡ ಎಂಪಿ ರೇಣುಕಾಚಾರ್ಯ (MP Renukacharya) ಅವರಿಗೆ ದೂರವಾಣಿ ಮೂಲಕ ಕೊಲೆ ಬೆದರಿಕೆ (murder threat) ಒಡ್ಡಲಾಗಿದೆ. ಮಗನನ್ನೂ ಕೊಲೆ ಮಾಡುತ್ತೇವೆ ಎಂದು ಬೆದರಿಸಲಾಗಿದೆ.

ಇಂದು ಬೆಳಗ್ಗೆ ಬೆದರಿಕೆ ಕರೆ ಬಂದಿದ್ದು, ʼನಿನಗೂ ನಿನ್ನ ಮಗನಿಗೂ ಇವತ್ತು ರಾತ್ರಿ ಒಳಗೆ ಮುಗಿಸ್ತೀವಿʼ ಎಂದು ಕರೆ ಮಾಡಿದವರು ಬೆದರಿಸಿದ್ದಾರೆ. 912250155161 ಹಾಗೂ 60695539248 ನಂಬರ್‌ಗಳಿಂದ ಕರೆ ಮಾಡಲಾಗಿದೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

ರೈತ ವಿರೋಧಿ ಸರಕಾರ: ರೇಣುಕಾಚಾರ್ಯ

ಈ ಸರ್ಕಾರ ರೈತ ವಿರೋಧಿ ಸರ್ಕಾರ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ರೈತರ ಆತ್ಮಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಎಂ.ಪಿ. ರೇಣುಕಾಚಾರ್ಯ ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರ ಹಿಡಿದ ಸಂದರ್ಭದಿಂದ ಇಲ್ಲಿಯವರೆಗೆ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಆತ್ಮಹತ್ಯೆಗೆ ಕಾರಣ ಕಂಡುಹಿಡಿದು ಸಾಲ ಮನ್ನಾ ಮಾಡುವುದು ಸೇರಿದಂತೆ ರೈತಪರ ಯೋಜನೆಗಳನ್ನು ರೂಪಿಸಬೇಕು ಎಂದಿದ್ದಾರೆ.

ಅಮಾನತು ಆದೇಶ ಹಿಂಪಡೆಯಬೇಕು: ಚನ್ನಗಿರಿ ಪೊಲೀಸ್‍ ಠಾಣೆ ಮೇಲೆ ಕಲ್ಲು ತೂರಾಟ, ಪೊಲೀಸರ ಮೇಲೆ ಹಲ್ಲೆ ನಡೆದರೂ ದುಷ್ಕರ್ಮಿಗಳನ್ನು ಬಂಧಿಸಿ, ಕಠಿಣ ಕ್ರಮ ಕೈಗೊಂಡಿಲ್ಲ. ಬದಲಿಗೆ ಡಿವೈಎಸ್‌ಪಿ ಪ್ರಶಾಂತ್ ಮುನ್ನೋಳಿ ಹಾಗೂ ಪೊಲೀಸ್‍ ಇನ್‌ಸ್ಪೆಕ್ಟರ್ ನಿರಂಜನ ಅವರನ್ನು ಹೊಣೆಗಾರರನ್ನಾಗಿಸಿ ಅಮಾನತುಗೊಳಿಸಿ, ತುಷ್ಟೀಕರಣ ನೀತಿ ಅನುಸರಿಸಿರುವುದು ಖಂಡನೀಯ. ಸರ್ಕಾರ ಕೂಡಲೇ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಚಂದ್ರಶೇಖರ ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸಿ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರು ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ನಿಗಮದ ಬಹುಕೋಟಿ ಹಗರಣ ಹಾಗೂ ಆತ್ಮಹತ್ಯೆ ಪ್ರಕರಣದಲ್ಲಿ ನ್ಯಾಯ ಸಿಗಬೇಕಾದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಬಿಜೆಪಿ ಫೈರ್‌ ಬ್ರ್ಯಾಂಡ್‌ಗಳ ಸೋಲು ಗೆಲುವಿನ ಲೆಕ್ಕಾಚಾರ ಹೇಗಿದೆ? ಎಕ್ಸಿಟ್‌ ಪೋಲ್‌ ಹೇಳೋದೇನು?

Exit mobile version