ಮುಂಬಯಿ: ದಟ್ಟವಾದ ಅರಣ್ಯದಲ್ಲಿ (forest area) ಅಮೆರಿಕನ್ ಮಹಿಳೆಯೊಬ್ಬರನ್ನು (American woman) ಕಬ್ಬಿಣದ ಸರಪಳಿಯಿಂದ ಮರಕ್ಕೆ ಕಟ್ಟಿ (Murder Attempt) ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಮಹಾರಾಷ್ಟ್ರ ಪೊಲೀಸರು (Maharashtra Police) ಆಕೆಯನ್ನು ರಕ್ಷಿಸಿದ್ದಾರೆ. ಆಕೆಯ ಮಾಜಿ ಪತಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸೋನುರ್ಲಿ ಗ್ರಾಮದ ಕಾಡಿನಲ್ಲಿ 50 ವರ್ಷದ ಲಲಿತಾ ಕಯಿ ಕುಮಾರ್ ಎಂಬಾಕೆಯನ್ನು ಮರಕ್ಕೆ ಕಬ್ಬಿಣದ ಸರಪಳಿಯಿಂದ ಕಟ್ಟಿಹಾಕಲಾಗಿತ್ತು. ತನ್ನ ಮಾಜಿ ಪತಿ ತನ್ನನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿ ಹೋಗಿರುವುದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ ಎನ್ನಲಾಗಿದೆ.
ಮಹಿಳೆಯ ಕೂಗು ಕೇಳಿದ ಕುರುಬನೊಬ್ಬ ಸರಪಳಿಯಲ್ಲಿ ಸಿಲುಕಿ ಸಂಕಷ್ಟದಲ್ಲಿರುವ ಆಕೆಯನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರಿಗೆ ಆಕೆಯ ಬಳಿ ಆಧಾರ್ ಕಾರ್ಡ್ ಸಿಕ್ಕಿದ್ದು, ಇದರಿಂದ ಆಕೆಯ ತಮಿಳುನಾಡು ವಿಳಾಸ ಸಿಕ್ಕಿದೆ. ಜೊತೆಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಪಾಸ್‌ಪೋರ್ಟ್‌ನ ಫೋಟೋಕಾಪಿಯೂ ದೊರೆತಿದೆ ಎಂದು ಪೊಲೀಸರು ಹೇಳಿದ್ದಾರೆ.
ಆಕೆಯ ವೀಸಾ ಅವಧಿ ಮುಗಿದಿದೆ ಮತ್ತು ಆಕೆಯ ರಾಷ್ಟ್ರೀಯತೆಯನ್ನು ಖಚಿತಪಡಿಸಿಕೊಳ್ಳಲು ಆಕೆಯ ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಪೊಲೀಸರಿಗೆ ದೊರೆತ ಪ್ರಾಥಮಿಕ ಮಾಹಿತಿಯಂತೆ ಮಹಿಳೆ ಕಳೆದ 10 ವರ್ಷಗಳಿಂದ ಭಾರತದಲ್ಲಿದ್ದಾರೆ. ಮಹಿಳೆ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ಒಂದೆರಡು ದಿನಗಳಿಂದ ಏನನ್ನೂ ಸೇವಿಸದ ಕಾರಣ ಮತ್ತು ಈ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ದುರ್ಬಲವಾಗಿದ್ದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಕೆಯನ್ನು ಮೊದಲು ಕೊಂಕಣ ಪ್ರದೇಶದ ಸಾವಂತವಾಡಿಯ ಆಸ್ಪತ್ರೆಗೆ ಸೇರಿಸಿ ಬಳಿಕ ಸಿಂಧುದುರ್ಗದ ಓರೋಸ್‌ಗೆ ಕರೆದೊಯ್ಯಲಾಯಿತು. ಆಕೆಯ ಮಾನಸಿಕ ಮತ್ತು ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಹೆಚ್ಚಿನ ಚಿಕಿತ್ಸೆಗಾಗಿ ಗೋವಾ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. ಆಕೆ ಅಪಾಯದಿಂದ ಪಾರಾಗಿದ್ದಾಳೆ. ಚಿಕಿತ್ಸೆ ನೀಡುತ್ತಿರುವ ವೈದ್ಯರು ಆಕೆ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ಆಕೆಯ ಬಳಿ ವೈದ್ಯಕೀಯ ಪ್ರಿಸ್ಕ್ರಿಪ್ಷನ್‌ಗಳನ್ನು ನಾವು ಕಂಡುಕೊಂಡಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಮಹಿಳೆ ಬರೆದಿರುವ ಟಿಪ್ಪಣಿಯನ್ನು ಆಧರಿಸಿ ಆಕೆಯ ಮಾಜಿ ಪತಿ ವಿರುದ್ಧ ಕೊಲೆ ಯತ್ನ, ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕೃತ್ಯ ಮತ್ತು ಭಾರತೀಯ ನ್ಯಾಯ ಸಂಹಿತಾ (BNS) ಅಡಿಯಲ್ಲಿ ಅಕ್ರಮ ಬಂಧನದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಸಿಂಧುದುರ್ಗ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸೌರಭ್ ಅಗರವಾಲ್ ಹೇಳಿದ್ದಾರೆ.
ಮಹಿಳೆಯ ಹೇಳಿಕೆಯನ್ನು ಇನ್ನೂ ಅಧಿಕೃತವಾಗಿ ದಾಖಲಿಸಿಕೊಳ್ಳಬೇಕಾಗಿದೆ. ಆದರೆ ಪ್ರಕರಣದ ದಾಖಲಾದ ಅನಂತರ, ಪೊಲೀಸ್ ತಂಡಗಳು ತನಿಖೆಯನ್ನು ಪ್ರಾರಂಭಿಸಿವೆ ಎಂದು ಅವರು ಹೇಳಿದರು.
ಇದನ್ನೂ ಓದಿ: Murder Case : ಇನ್‌ಸ್ಟಾಗ್ರಾಮ್ ಗೆಳೆಯನಿಗಾಗಿ ಗಂಡನನ್ನೇ ಕೊಲೆ ಮಾಡಿಸಿದ ಐನಾತಿ ಹೆಂಡತಿ
ಪೊಲೀಸರು ಆಕೆಯಿಂದ ವಶಪಡಿಸಿಕೊಂಡಿರುವ ಪ್ರಿಸ್ಕ್ರಿಪ್ಷನ್‌ಗಳು ಆಕೆ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಳು ಎಂದು ಸೂಚಿಸುತ್ತದೆ. ಆಕೆಯ ಪತಿ ಮತ್ತು ಇತರ ಸಂಬಂಧಿಕರನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳು ಪ್ರಸ್ತುತ ತಮಿಳುನಾಡು ಮತ್ತು ಗೋವಾದಲ್ಲಿವೆ ಎಂದು ಅವರು ಹೇಳಿದರು. ತನಿಖೆಯ ಭಾಗವಾಗಿ ಆಕೆಯ ಸಂಬಂಧಿಕರನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳು ತಮಿಳುನಾಡು, ಗೋವಾ ಮತ್ತು ಇತರ ಕೆಲವು ಸ್ಥಳಗಳಿಗೆ ತೆರಳಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.