Site icon Vistara News

Murder Attempt: ಮಗು ಹೆಣ್ಣೋ ಗಂಡೋ ನೋಡಲು ಹೆಂಡತಿಯ ಹೊಟ್ಟೆ ಸೀಳಿದವನಿಗೆ ಜೀವಾವಧಿ ಶಿಕ್ಷೆ!

Murder Attempt

ಉತ್ತರ ಪ್ರದೇಶ: ಹುಟ್ಟಲಿರುವ ಮಗು ಗಂಡೋ ಹೆಣ್ಣೋ (gender check) ಎಂಬುದನ್ನು ಪರೀಕ್ಷಿಸಲು ಹೆಂಡತಿಯ ಹೊಟ್ಟೆಯನ್ನೇ ಕತ್ತಿಯಿಂದ ಸೀಳಿದ್ದ (Murder Attempt) ಉತ್ತರ ಪ್ರದೇಶದ (uttarpradesh) ಬದೌನ್‌ ಗ್ರಾಮದ ಐವರು ಹೆಣ್ಣು ಮಕ್ಕಳ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬದೌನ್‌ನ ಸಿವಿಲ್ ಲೈನ್ಸ್‌ನ ನಿವಾಸಿ ಪನ್ನಾ ಲಾಲ್ ಶಿಕ್ಷೆಗೆ ಗುರಿಯಾದ ವ್ಯಕ್ತಿ.

2020ರ ಸೆಪ್ಟೆಂಬರ್‌ನಲ್ಲಿ ಪನ್ನಾಲಾಲ್ ಗರ್ಭಿಣಿಯಾಗಿದ್ದ ತನ್ನ ಪತ್ನಿ ಅನಿತಾ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದ. ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿತ್ತು. ಐದು ಹೆಣ್ಣು ಮಕ್ಕಳಿದ್ದರೂ ಪನ್ನಾ ಲಾಲ್‌ಗೆ ಗಂಡು ಮಗು ಬೇಕೆಂಬ ಹಠವಿತ್ತು. ಇದು ಪತಿ ಪತ್ನಿಯ ನಡುವೆ ನಿರಂತರ ಜಗಳಕ್ಕೆ ಕಾರಣವಾಗುತ್ತಿತ್ತು.

ಇವರಿಬ್ಬರ ಜಗಳದ ಬಗ್ಗೆ ಅನಿತಾ ಅವರ ಕುಟುಂಬಕ್ಕೂ ತಿಳಿದಿತ್ತು. ಅವರು ಇವರಿಬ್ಬರ ನಡುವಿನ ಜಗಳವನ್ನು ನಿಲ್ಲಿಸಲು ಪನ್ನಾ ಲಾಲ್ ಅವರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ಪನ್ನಾಲಾಲ್ ಅನಿತಾಗೆ ವಿಚ್ಛೇದನ ನೀಡಿ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗುವುದಾಗಿ ಬೆದರಿಕೆ ಹಾಕಿದ್ದ.

ಘಟನೆ ನಡೆದ ದಿನದಂದು ದಂಪತಿ ಗರ್ಭದಲ್ಲಿರುವ ಮಗುವಿನ ಲಿಂಗದ ಬಗ್ಗೆ ಮತ್ತೆ ಜಗಳವಾಡಿದ್ದಾರೆ. ಇದರಿಂದ ಕುಪಿತಗೊಂಡ ಪನ್ನಾ ಲಾಲ್ ಅನಿತಾಗೆ ಗಂಡು ಅಥವಾ ಹೆಣ್ಣು ಮಗುವಿದೆಯೇ ಎಂದು ಪರೀಕ್ಷಿಸಲು ಅನಿತಾ ಅವರ ಹೊಟ್ಟೆಯನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದ. ಅನಿತಾ ಜಗಳವಾಡಿದಾಗ ಆಕೆಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದ.

ಪನ್ನಾಲಾಲ್ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಆಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಈ ವೇಳೆ ಅವನು ಅವಳನ್ನು ಹಿಡಿದು ಹರಿತವಾದ ಕತ್ತಿಯಿಂದ ಅವಳ ಹೊಟ್ಟೆಯನ್ನು ಕತ್ತರಿಸಿ, ಮಗು ಹೆಣ್ಣೋ ಗಂಡೋ ನೋಡಿಯೇ ಬಿಡುತ್ತೇನೆ ಎಂದು ಅಬ್ಬರಿಸಿದ್ದ. ಆಗ ಆಕೆ ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ಆಕೆಯ ಕರುಳು ಹೊಟ್ಟೆಯಿಂದ ನೇತಾಡುವಷ್ಟು ಆಳವಾದ ಗಾಯವಾಗಿತ್ತು.

ಇದನ್ನೂ ಓದಿ: Viral Video: ಮೈದುನನ ಇಬ್ಬರು ಮಕ್ಕಳನ್ನು ವಿಷವಿಕ್ಕಿ ಕೊಂದಳು, ಮೂರನೇ ಮಗುವನ್ನು ಕೊಲ್ಲುವಾಗ ಸಿಕ್ಕಿ ಬಿದ್ದಳು!

ತೀವ್ರವಾಗಿ ಗಾಯಗೊಂಡರೂ ಆಕೆ ಬೀದಿಗೆ ಓಡಿದಳು. ಹತ್ತಿರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವಳ ಸಹೋದರ ಅವಳ ಕಿರುಚಾಟವನ್ನು ಕೇಳಿ ಅವಳನ್ನು ರಕ್ಷಿಸಲು ಬಂದ. ಆತನನ್ನು ಕಂಡ ಪನ್ನಾ ಲಾಲ್ ಸ್ಥಳದಿಂದ ಪರಾರಿಯಾದ. ಅನಿತಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆಕೆ ಬದುಕುಳಿದಿದ್ದರೂ, ಆಕೆಯ ಹೊಟ್ಟೆಯಲ್ಲಿದ್ದ ಗಂಡು ಸಾವನ್ನಪ್ಪಿತ್ತು. ಅದು ಗಂಡು ಮಗುವಾಗಿತ್ತು ಎಂದು ಅನಿತಾ ನ್ಯಾಯಾಲಯಕ್ಕೆ ನೀಡಿದ ದೂರಿನಲ್ಲಿ ತಿಳಿಸಿದ್ದರು.

ಆಸ್ತಿ ವಿವಾದದ ಕಾರಣ ಅನಿತಾ ತನ್ನ ಸಹೋದರರೊಂದಿಗೆ ಸೇರಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ತನಗೆ ತಾನೇ ಗಾಯ ಮಾಡಿಕೊಂಡಿದ್ದಾಳೆ ಎಂದು ಪನ್ನಾಲಾಲ್ ನ್ಯಾಯಾಲಯದಲ್ಲಿ ವಾದಿಸಿದ್ದ. ಆದರೆ ಪನ್ನಾಲಾಲ್ ವಿರುದ್ಧ ಆರೋಪ ಸಾಬೀತಾಗಿರುವುದರಿಂಅ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

Exit mobile version