ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಗ್ರಾಮವೊಂದರಲ್ಲಿ ದೈಹಿಕ ಸುಖ ಬಯಸಿ ಅದನ್ನು ನೀಡದ ಚಿಕ್ಕಮ್ಮನನ್ನು ಉಸಿರುಗಟ್ಟಿಸಿ (suffocate) ಕೊಂದ ಆರೋಪದಲ್ಲಿ (Murder Case) ಅಪ್ರಾಪ್ತ ಬಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈತ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.
ಉಪ್ಪಿನಂಗಡಿಯ ಪೆರ್ನೆ ಗ್ರಾಮದಲ್ಲಿ ಘಟನೆ ನಡೆದಿದೆ. ವಿವಾಹಿತ ಮಹಿಳೆಯೊಬ್ಬರು ರಾತ್ರಿ ಮಲಗಿದ್ದಲ್ಲೇ ಸಾವನ್ನಪ್ಪಿದ್ದರು. ಬಿಳಿಯೂರಿನ ದರ್ಖಾಸು ನಿವಾಸಿ ಹೇಮಾವತಿ (37) ಭಾನುವಾರ ತಡ ರಾತ್ರಿ ಸಂಶಯಾಸ್ಪದವಾಗಿ ಮೃತಪಟ್ಟಿದ್ದು, ಇದಕ್ಕೆ ಸಂಬಂಧಿಸಿ 10ನೇ ತರಗತಿ ವಿದ್ಯಾರ್ಥಿ ಬಾಲಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈತ ತನ್ನ ಚಿಕ್ಕಮ್ಮನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹೇಮಾವತಿ ಅವರ ಮನೆಯಲ್ಲಿ ಅಂದು ರಾತ್ರಿ ತಂಗಿದ್ದ ಅಕ್ಕನ ಮಗ, ಹತ್ತನೇ ತರಗತಿ ವಿದ್ಯಾರ್ಥಿ, ಹೇಮಾವತಿ ಮಲಗಿದಲ್ಲಿಗೆ ಹೋಗಿ ದೇಹ ಸುಖ ಬಯಸಿದ್ದ. ಇದಕ್ಕೆ ಹೇಮಾವತಿಯವರು ಪ್ರತಿರೋಧ ವ್ಯಕ್ತಪಡಿಸಿದ್ದರೆನ್ನಲಾಗಿದೆ. ಬಳಿಕ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಪೊಲೀಸ್ ತನಿಖೆ ವೇಳೆ ಬಾಲಕ ಬಾಯಿ ಬಿಟ್ಟಿದ್ದಾನೆ. ಬಾಲಕನ ಮೈ ಮೇಲೆ ಪರಚಿದ ಗಾಯಗಳಿರುವುದನ್ನು ಬಾಲಕನ ತಂದೆಯೇ ಪೊಲೀಸರಿಗೆ ತಿಳಿಸಿದ್ದ ಹಿನ್ನೆಲೆಯಲ್ಲಿ ಬಾಲಕನ ಮೇಲೆ ಪ್ರಾರಂಭಿಕ ಹಂತದಲ್ಲಿಯೇ ಸಂಶಯ ಮೂಡಿತ್ತು. ತನಿಖೆಯ ವೇಳೆ ತಾನು ಈ ಕೃತ್ಯವೆಸಗಿರುವುದು ನಿಜ ಎಂದು ಬಾಲಕ ತಪ್ಪು ಒಪ್ಪಿಕೊಂಡಿರುವುದರಿಂದ ಆತನನ್ನು ಬಂಧನ ಪ್ರಕ್ರಿಯೆಗೆ ಒಳಪಡಿಸಲಾಯಿತು.
ಬಾಲಕ ಮಲಗಿದ್ದ ತನ್ನ ಚಿಕ್ಕಮ್ಮನೊಡನೆ ಲೈಂಗಿಕ ಕ್ರಿಯೆ ಬಯಸಿ ಆಕೆಯನ್ನು ಸ್ಪರ್ಶಿಸಿದ್ದ. ಎಚ್ಚರಗೊಂಡ ಹೇಮಾವತಿ ಆತನ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸುಮ್ಮನೆ ನಿದ್ರಿಸಬೇಕೆಂದು ಗದರಿಸಿದ್ದರು. ನಾಳೆ ತನ್ನ ಕೃತ್ಯವನ್ನು ನೆರೆಹೊರೆಯವರಿಗೆ ತಿಳಿಸಿದರೆ ತಾನು ಅವಮಾನಿತನಾಗುವ ಸಾಧ್ಯತೆ ಇದೆ ಎಂದು ಅಂಜಿಕೆಯಿಂದ ಈ ಬಾಲಕ ಆಕೆಯನ್ನು ಕೊಲ್ಲುವ ನಿರ್ಧಾರ ತಾಳಿದ್ದ. ಸುಮಾರು ಅರ್ಧ ಗಂಟೆಯ ಬಳಿಕ ನಿದ್ರೆಗೆ ಜಾರಿದ್ದ ಚಿಕ್ಕಮ್ಮನ ಕುತ್ತಿಗೆ ಹಿಸುಕಿ ಉಸಿರು ಕಟ್ಟಿಸಿ ಕೊಲೆಗೈದಿದ್ದ. ಚಿಕ್ಕಮ್ಮ ಮೃತಪಟ್ಟಿರುವುದು ದೃಢವಾದೊಡನೆ ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ತಾನೇ ಮೊದಲಾಗಿ ತನ್ನ ತಂದೆಗೆ ತಿಳಿಸಿ ಪಾರಾಗಲು ಯತ್ನಿಸಿದ್ದ. ಆದರೆ ಕುತ್ತಿಗೆ ಹಿಸುಕಿದ ವೇಳೆ ಆಕೆ ಪ್ರಾಣ ರಕ್ಷಣೆಗಾಗಿ ಬಾಲಕನಿಗೆ ಪರಚಿದ್ದು, ಈ ಪರಚಿದ ಗಾಯವೇ ಆತನ ವಿರುದ್ಧ ಸಾಕ್ಷಿಯಾಗಿ ಪೊಲೀಸರಿಗೆ ನೆರವಾಗಿದೆ.
ಇದನ್ನೂ ಓದಿ: Viral News: ವಿವಾಹಿತ ಮಹಿಳೆ ಮನೆಯ ಟ್ರಂಕ್‌ನೊಳಗೆ ಸಿಕ್ಕಿಬಿದ್ದ ಪ್ರೇಮಿ! ಮುಂದೇನಾಯ್ತು? ವಿಡಿಯೊ ನೋಡಿ!