Site icon Vistara News

Murder Case: ಹುಡುಗಿಯರನ್ನು ಚುಡಾಯಿಸುತ್ತಿದ್ದ ಯುವಕನನ್ನು ತಂದೆಯೇ ಕೊಂದ!

father kills son

ಹೊಸದಿಲ್ಲಿ: ಫೋನ್‌ನಲ್ಲಿ ಅಶ್ಲೀಲ ವೀಡಿಯೊಗಳನ್ನು (Obscene videos) ನೋಡುತ್ತಿದ್ದ ಮತ್ತು ಶಾಲೆಯಲ್ಲಿ ಹುಡುಗಿಯರನ್ನು ಚುಡಾಯಿಸುತ್ತಿದ್ದ (Teasing) ಮಗನನ್ನು ರೋಸಿ ಹೋದ ತಂದೆಯೊಬ್ಬ (Father kills Son) ತಾನೇ ಕೊಂದು (murder Case) ಹಾಕಿದ್ದಾನೆ.

ತಂದೆಯೇ ಮಗನ ಪಾನೀಯಕ್ಕೆ ವಿಷ ಹಾಕಿ ಸಾಯಿಸಿದ ಘಟನೆ ಮಹಾರಾಷ್ಟ್ರದ ಸೋಲಾಪುರದಲ್ಲಿ ಕಳೆದ ತಿಂಗಳು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗ ವಿಶಾಲ್‌ (14) ಕೊಲೆ ಮಾಡಿದ ತಂದೆ ವಿಜಯ್ ಬಟ್ಟು ಎಂಬಾತನನ್ನು ಬಂಧಿಸಲಾಗಿದೆ.

ಹದಿಹರೆಯದ ಯುವಕ ಕಾಣೆಯಾದ ಬಗ್ಗೆ ದೂರನ್ನು ಜನವರಿ 13ರಂದು ಪೊಲೀಸರು ಸ್ವೀಕರಿಸಿದ್ದರು. ಶೀಘ್ರದಲ್ಲೇ ಯುವಕನ ಶವ ಪತ್ತೆಯಾಗಿತ್ತು. ಕುಟುಂಬದವರು ಶವವನ್ನು ತಮ್ಮ ಕಾಣೆಯಾದ ಮಗ ವಿಶಾಲ್ ಎಂದು ಗುರುತಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಅವನು ವಿಷ ಸೇವಿಸಿದ್ದ ಎಂದು ತಿಳಿದುಬಂದಿತ್ತು.

ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಿದ್ದರು. ಅವರ ಪ್ರತಿಕ್ರಿಯೆಗಳಲ್ಲಿನ ವ್ಯತ್ಯಾಸಗಳನ್ನು ಗಮನಿಸಿದ ಪೊಲೀಸರು ಬಾಲಕನ ತಂದೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಆತ ಅಪರಾಧವನ್ನು ಒಪ್ಪಿಕೊಂಡ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶಾಲ್‌ ಓದುತ್ತಿರಲಿಲ್ಲ. ಆತ ಶಾಲೆಯಲ್ಲಿ ಹುಡುಗಿಯರನ್ನು ಚುಡಾಯಿಸುತ್ತಿದ್ದ. ಫೋನ್‌ನಲ್ಲಿ ಅಶ್ಲೀಲ ವೀಡಿಯೊಗಳನ್ನು ನೋಡುತ್ತಿದ್ದ. ಶಾಲೆಯಿಂದಲೂ ದೂರುಗಳು ಬರುತ್ತಿದ್ದವು. ನಿನ್ನ ನಡತೆ ಸರಿಪಡಿಸಿಕೋ ಎಂದು ಹೆತ್ತವರು ಎಷ್ಟು ಬುದ್ಧಿ ಹೇಳಿದರೂ ಅದನ್ನು ವಿಶಾಲ್‌ ಆಲಿಸಿರಲಿಲ್ಲ.

ಮಗನ ವರ್ತನೆಯಿಂದ ಹತಾಶೆಗೊಂಡ ಬಟ್ಟು, ಜನವರಿ 13ರಂದು ವಿಶಾಲ್‌ನನ್ನು ತನ್ನ ದ್ವಿಚಕ್ರ ವಾಹನದಲ್ಲಿ ತುಳಜಾಪುರ ರಸ್ತೆಗೆ ಕರೆದೊಯ್ದ. ಅಲ್ಲಿ ತಂಪು ಪಾನೀಯವನ್ನು ಖರೀದಿಸಿ ಅದಕ್ಕೆ ವಿಷ ಬೆರೆಸಿ ಮಗನಿಗೆ ನೀಡಿದ್ದ. ವಿಶಾಲ್ ಪ್ರಜ್ಞೆ ಕಳೆದುಕೊಂಡಿದ್ದ. ಬಟ್ಟು ಒಬ್ಬನೇ ಮನೆಗೆ ಮರಳಿದ್ದ. ಸಂಜೆ ಬಟ್ಟು ಮತ್ತು ಆತನ ಪತ್ನಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಮಗ ಕಾಣೆಯಾಗಿದ್ದಾನೆ ಎಂದು ದೂರು ಸಲ್ಲಿಸಿದ್ದರು.

ಇದನ್ನೂ ಓದಿ: Robbery Case: ರಾಜಧಾನಿಯಲ್ಲಿ ಹಾಡ ಹಗಲೇ ಮಚ್ಚು ಬೀಸಿ 15 ಲಕ್ಷ ರೂ. ದರೋಡೆ

Exit mobile version