Site icon Vistara News

Murder Case: ಬಾರ್‌ನಲ್ಲಿ ಗುರಾಯಿಸಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

murder case anekal

ಆನೇಕಲ್:‌ ಬಾರ್‌ನಲ್ಲಿ ಗುರಾಯಿಸಿ ನೋಡಿದ ಎಂಬ ಕಾರಣಕ್ಕಾಗಿ ಬರ್ಬರವಾಗಿ ಒಬ್ಬ ವ್ಯಕ್ತಿಯ ಹತ್ಯೆ (Murder Case) ಮಾಡಲಾಗಿದೆ. ಈ ಘಟನೆ ನಡೆದಿರುವುದು ಆನೆಕಲ್‌ (Anekal Murder) ತಾಲೂಕಿನ ಕಲ್ಕೆರೆಯ ಎಸ್.ಕೆ.ಆರ್ ಬಾರ್‌ನಲ್ಲಿ. ಬಿಯರ್ (Beer bottle) ಬಾಟಲಿಯಿಂದ ತಲೆಗೆ ಹೊಡೆದು, ಹೊಟ್ಟೆಗೆ ಚುಚ್ಚಿ ಕೊಲೆ ಮಾಡಲಾಗಿದೆ.

ಹರ್ಷವರ್ಧನ್ (34) ಕೊಲೆಯಾದ ವ್ಯಕ್ತಿ. ಬನ್ನೇರುಘಟ್ಟ ಸಮೀಪದ ಸಿಕೆ ಪಾಳ್ಯದಲ್ಲಿ ವಾಸವಿದ್ದ ಹರ್ಷವರ್ಧನ್, ಗುಲ್ಬರ್ಗಾ ಮೂಲದವರಾಗಿದ್ದು, ಕೆಲ ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದರು. ಬನ್ನೇರುಘಟ್ಟ ರಸ್ತೆಯಲ್ಲಿನ ಖಾಸಗಿ ಶಾಲೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮದುವೆಯಾಗಿ ಇಬ್ಬರು ಮಕ್ಕಳು ಸಹ ಇದ್ದಾರೆ.

ನಿನ್ನೆ ಸಂಜೆ ಕೆಲಸ ಮುಗಿಸಿ ಶಾಲೆಯಿಂದ ನೇರ ಕಲ್ಕೆರೆಯ ಎಸ್.ಕೆ.ಆರ್ ಬಾರ್ ಕಡೆ ಹೋಗಿದ್ದರು. ಅಲ್ಲಿ ಮದ್ಯ ಸೇವಿಸುವ ವೇಳೆ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಮತ್ತಿಬ್ಬರು ಆಸಾಮಿಗಳ ಕೂಗಾಟದಿಂದ ಬೇಸತ್ತು ಆಕ್ಷೇಪಿಸುವಂತೆ ಅವರತ್ತ ನೋಡಿದ್ದರು. ʼಏನೋ ಗುರಾಯಿಸ್ತೀಯಾ?ʼ ಎಂದು ಜಗಳ ತೆಗೆದ ಪುಂಡರು ಬಿಯರ್ ಬಾಟಲಿಯಿಂದ ಹರ್ಷವರ್ಧನ್‌ ತಲೆಗೆ ಹೊಡೆದಿದ್ದಲ್ಲದೆ, ಬಳಿಕ ಚಾಕು ಮತ್ತೆ ಬಿಯರ್ ಬಾಟಲಿಯಿಂದ ಹೊಟ್ಟೆ ಭಾಗಕ್ಕೆ ಚುಚ್ಚಿದ್ದಾರೆ. ಹರ್ಷ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಬಾರ್‌ನ ಸಿಸಿಟಿವಿಯಲ್ಲಿ ಕೊಲೆಗಾರರ ಕೃತ್ಯ ದಾಖಲಾಗಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕೆಲಸದಿಂದ ತೆಗೆದಿದ್ದಕ್ಕೆ ನೊಂದು ಯುವಕ ಆತ್ಮಹತ್ಯೆ

ಮೈಸೂರು: ಕಂಪನಿಯಲ್ಲಿ ಕೆಲಸದಿಂದ ತೆಗೆದು ಕಿರುಕುಳ ನೀಡಿದ್ದಾರೆ ಎಂದು ಮನನೊಂದು ಯುವಕನೊಬ್ಬ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ತಿ.ನರಸೀಪುರದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಗ್ರಾಮದ ಕಿರಣ್ (28) ಮೃತ ಯುವಕ.

ತಿ.ನರಸೀಪುರದ ಸಾಯಿ ಗಾರ್ಮೆಂಟ್ಸ್‌ನಲ್ಲಿ ಯುವಕ ಕಿರಣ್‌ ಕೆಲಸ ಮಾಡುತ್ತಿದ್ದ. ಆದರೆ, ಕಂಪನಿಯಲ್ಲಿ ಕೆಲಸದಿಂದ ಬೇಕಂತಲೇ ತೆಗೆದಿದ್ದಾರೆ. ನನ್ನ ಸಾವಿಗೆ ಕಂಪನಿಯ ಕ್ವಾಲಿಟಿ ಎ.ಜಿ.ಎಂ ಲೋಕೇಶ್‌ ಹಾಗೂ ಎಚ್.ಆರ್. ಎ.ಜಿ.ಎಂ ಅನಿಲ್ ಕಾರಣ ಎಂದು ಡೆತ್‌ ನೋಟ್‌ನಲ್ಲಿ ಯುವಕ ಉಲ್ಲೇಖಿಸಿದ್ದಾನೆ.

ನನ್ನನ್ನು ಕೆಲಸದಿಂದ ಬೇಕಂತಲೇ ತೆಗೆದಿದ್ದಾರೆ. ನನ್ನ ಬಗ್ಗೆ ಬೇರೆ ಕಡೆ ಕೆಟ್ಟ ಫೀಡ್ ಬ್ಯಾಕ್ ಕೊಟ್ಟು ಎಲ್ಲೂ ಕೆಲಸಕ್ಕೆ ತೆಗೆದುಕೊಳ್ಳದ ಹಾಗೆ ಮಾಡಿದ್ದಾರೆ. ಲೋಕೇಶ್‌ ಮತ್ತು ಅನಿಲ್‌ ಅವರಿಂದ ಕೆಲಸ ಸಿಗದ ನಾನು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್‌ನಲ್ಲಿ ಮೃತ ಕಿರಣ್ ಉಲ್ಲೇಖ ಮಾಡಿದ್ದಾನೆ. ಈ ಬಗ್ಗೆ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Actor Darshan: ರೇಣುಕಾಸ್ವಾಮಿ ಹಲ್ಲೆಗೆ ಬಳಸಿದ್ದ ʻಪೊಲೀಸ್ ಲಾಠಿʼ ಪತ್ತೆ! ʻಡಿ ಗ್ಯಾಂಗ್‌ʼಗೆ ಸಿಕ್ಕಿದ್ದು ಹೇಗೆ?

Exit mobile version