ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಇಂದು ಬೆಳಿಗ್ಗೆ ನಡೆದ ಶೂಟೌಟ್ (Shootout) ಪ್ರಕರಣದಲ್ಲಿ ಮೃತರ ಸಂಖ್ಯೆ 2ಕ್ಕೆ ಏರಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಹಂಪಸಂದ್ರ ಗ್ರಾಮದಲ್ಲಿ ಬಶೀರ್ ಅಹ್ಮದ್ (66) ಪಿಸ್ತೂಲಿನಿಂದ ಗುಂಡು ಹಾರಿಸಿದ ಬಳಿಕ ಮಚ್ಚಿನಿಂದ ದಾಳಿ ನಡೆಸಿದ್ದ. ಗುಂಡೇಟು ತಗುಲಿ ನಜೀರ್ ಅಹ್ಮದ್ (46) ಸ್ಥಳದಲ್ಲೇ ಅಸುನೀಗಿದ್ದರೆ, ಮಚ್ಚಿನ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಅವರ ತಂದೆ ಮಹಬೂಬ್ ಸಾಬ್ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ (Murder Case).
ಘಟನೆ ವಿವರ
ಸೌದಿಯಲ್ಲಿ ಕೆಲಸ ಮಾಡಿಕೊಂಡಿದ್ದ ಬಶೀರ್ ಅಹ್ಮದ್ ಮೃತ ಮಹಬೂಬ್ ಸಾಬ್‌ನ ಸಹೋದರ. ಈತ ಇತ್ತೀಚೆಗಷ್ಟೇ ಊರಿಗೆ ಬಂದಿದ್ದ. ಇಂದು ಬೆಳಿಗ್ಗೆ ನಜೀರ್ ಅಹ್ಮದ್ ಮತ್ತು ಮಹಬೂಬ್ ಸಾಬ್ ಎಂದಿನಂತೆ ನಮಾಜ್ ಮಾಡಲು ಮಸೀದಿಗೆ ಹೋಗುತ್ತಿದ್ದಾಗ ಬಶೀರ್ ಅಹ್ಮದ್ ತನ್ನ ಪಿಸ್ತೂಲಿನಿಂದ ಶೂಟ್ ಮಾಡಿದ್ದ. ಇದರಿಂದ ನಜೀರ್ ಸ್ಥಳದಲ್ಲೇ ಮೃತಪಟ್ಟಿದ್ದರು. ಇಷ್ಟಕ್ಕೇ ಸುಮ್ಮನಾಗದ ಬಶೀರ್ ಬಳಿಕ ಮಚ್ಚಿನಿಂದ ದಾಳಿ ನಡೆಸಿದ್ದ. ಇದರಿಂದ ಮಹಬೂಬ್ ಸಾಬ್ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕಾರಣವೇನು?
ಜಮೀನು ವಿವಾದ ಹಾಗೂ ಕೌಟುಂಬಿಕ ಕಲಹದಿಂದ ಈ ಕೊಲೆ ನಡೆದಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಗುಡಿಬಂಡೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸರು ಬಶೀರ್ ಅಹ್ಮದ್‌ನನ್ನು ವಶಕ್ಕೆ ಪಡೆದಿದ್ದಾರೆ.
ಪತಿಯಿಂದ ಪತ್ನಿಯ ಮೇಲೆ ಹಲ್ಲೆ; ಕೊಲೆಗೆ ಯತ್ನ
ರಾಮನಗರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಗೆ ಚಾಕುವಿನಿಂರ ಇರಿದು ಕೊಲೆಗೆ ಯತ್ನಿಸಿದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ ತುಳಸಿ ತೋಟದ ಬೀದಿಯಲ್ಲಿ ನಡೆದಿದೆ. ಶ್ವೇತಾ (32) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಶ್ವೇತಾ ಅವರಿಗೆ ಚನ್ನಪಟ್ಟಣ ಸಾರ್ವಜನಿಕರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಹಲ್ಲೆ ನಡೆಸಿರುವ ಪತಿ ಅರವಿಂದನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚನ್ನಪಟ್ಟಣ ಪೂರ್ವ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕುಡಿದು ಬಂದ ಅರವಿಂದ ಶ್ವೇತಾ ಜತೆ ಜಗಳವಾಡಿ ಬಳಿಕ ಚಾಕುವಿನಿಂದ ಇರಿದಿದ್ದಾನೆ.
ಮರ ಬಿದ್ದು ಯುವಕ ಸಾವು
ಕಾರವಾರ: ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಮರ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಶಿರಸಿ ರಸ್ತೆಯ ಬಾಚನಳ್ಳಿ ಗ್ರಾಮದಲ್ಲಿ ನಡೆದಿದೆ. ವಿನಯ ಗಾಡಿಗ (25) ಮೃತ ದುರ್ದೈವಿ. ಯಲ್ಲಾಪುರದ ಹಾಸಣಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಬ್ಬಿನಗದ್ದೆ ನಿವಾಸಿಯಾಗಿದ್ದ ವಿನಯ ಗಾಡಿಗ ಯಲ್ಲಾಪುರದಿಂದ ಮಂಚಿಕೇರಿ ಕಡೆ ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಮೈಮೇಲೆ ಮರ ಬಿದ್ದ ಪರಿಣಾಮ ವಿನಯ ಗಾಡಿಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸರು ಭೇಟಿ ನೀಡಿದ್ದಾರೆ. ಮರ ತುಂಡರಿಸಿ ಅರಣ್ಯ ಇಲಾಖೆ ಸಿಬ್ಬಂದಿ ರಸ್ತೆ ಸಂಚಾರವನ್ನು ಸುಗಮಗೊಳಿಸಿದರು.
ಇದನ್ನೂ ಓದಿ: Shootout: ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು: ಚಿಕ್ಕಪ್ಪನಿಂದಲೇ ಅಣ್ಣನ ಮಗನ ಕೊಲೆ