Site icon Vistara News

Murder Case: ಜಮೀನು ವಿವಾದಕ್ಕೆ ಹರಿಯಿತು ನೆತ್ತರು: ತಂಗಿಯ ಗಂಡನಿಗೇ ಚಾಕು ಇರಿದು ಕೊಂದವನ ಅರೆಸ್ಟ್‌ 

Murder Case

ಬೆಂಗಳೂರು: ಜಮೀನು ವಿಚಾರಕ್ಕೆ ಸಂಬಂಧಿಸಿ ಸೋದರ ಸಂಬಂಧಿಯನ್ನೇ ಕೊಲೆ ಮಾಡಿರುವ ಘಟನೆ ರಾಮಮೂರ್ತಿನಗರದ ವಿಜಿನಾಪುರದಲ್ಲಿ ನಡೆದಿದೆ. ಬಾಬುರೆಡ್ಡಿ ಕೊಲೆಯಾದ ವ್ಯಕ್ತಿ. ಸದ್ಯ ಆರೋಪಿಗಳಾದ ಬಾಬುರೆಡ್ಡಿ ಅವರ ಸಹೋದರಿಯ ಪತಿ ಗೋಪಾಲ್ ರೆಡ್ಡಿ, ಅಣ್ಣನ ಮಗ ಭರತ್‌ನನ್ನು ಪೊಲೀಸರು ಬಂಧಿಸಿದ್ದಾರೆ (Murder Case).

ಜಮೀನು ವ್ಯಾಜ್ಯ ವಿಚಾರಕ್ಕೆ ಸಂಬಂಧಿಸಿ ನಡೆದ ಗಲಾಟೆಯಿಂದ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ

ಬಾಬುರೆಡ್ಡಿ ಮತ್ತು ಗೋಪಾಲ್ ರೆಡ್ಡಿ ಅವರಿಗೆ ಸಂಬಂಧಿಸಿದ ಜಮೀನು ಹಂಚಿಕೆಯ ವ್ಯಾಜ್ಯ ಕೋರ್ಟ್‌ನಲ್ಲಿತ್ತು. ಈ ಹಿನ್ನೆಲೆಯಲ್ಲಿ ಜಮೀನು ಭಾಗದ ವಿಚಾರವಾಗಿ ಮಾತುಕತೆ ಮಾಡಲು ಪಂಚಾಯಿತಿ ನಡೆಸಲಾಗಿತ್ತು. ಪಂಚಾಯಿತಿ ವೇಳೆ ಮಾತಿಗೆ ಮಾತು ಬೆಳೆದು ಬಾಬುರೆಡ್ಡಿ ಮತ್ತು ಸಂಬಂಧಿಕರ ನಡುವೆ ಗಲಾಟೆ ಆರಂಭವಾಗಿತ್ತು. ಈ ವೇಳೆ ಭರತ್ ಹಾಗೂ ಗೋಪಾಲ್ ರೆಡ್ಡಿ ಸಿಟ್ಟಿನಿಂದ ಬಾಬುರೆಡ್ಡಿಗೆ ಚಾಕುವಿನಿಂದ ಇರಿದು ಬಿಟ್ಟಿದ್ದರು.

ಚಾಕು ಇರಿತದಿಂದ ತೀವ್ರ ರಕ್ತಸ್ರಾವವಾಗಿ ಬಾಬುರೆಡ್ಡಿ ಮೃತಪಟ್ಟಿದ್ದರು. ಈ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭರತ್ ಹಾಗೂ ಗೋಪಾಲ್ ರೆಡ್ಡಿಯನ್ನು ಬಂಧಿಸಲಾಗಿದೆ.

ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ ಪ್ರಕರಣ: ಮೃತನ ಗುರುತು ಪತ್ತೆ

ಬೆಂಗಳೂರು: ಶನಿವಾರ ನಗರದ ದೊಡ್ಡಕಲ್ಲಸಂದ್ರ ಬಳಿ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಮೃತನನ್ನು 35 ವರ್ಷದ  ನವೀನ್ ಕುಮಾರ್ ಅರೋರಾ ಎಂದು ಗುರುತಿಸಲಾಗಿದ್ದು, ಈತ ಮೂಲತಃ ಉತ್ತರಪ್ರದೇಶದ ಆಲಿಘಡ್‌ನವನು.

ನವೀನ್ ಕುಮಾರ್ ಕುಟುಂಬ ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ‌ ನೆಲೆಸಿದೆ. ನವೀನ್‌ ಈ ಹಿಂದೆ ಬೆಂಗಳೂರಿನಲ್ಲಿ‌ ಹಾರ್ಡ್‌ವೇರ್‌ ಅಂಗಡಿ ನಡೆಸುತ್ತಿದ್ದ. ಐದಾರು ವರ್ಷದ ಹಿಂದೆ ಬ್ಯುಸಿನೆಸ್ ಲಾಸ್ ಆಗಿದ್ದ ಕಾರಣ ನವೀನ್ ಕುಮಾರ್ ಸಂಪೂರ್ಣ ಉದ್ಯೋಗ ಕೈ ಬಿಟ್ಟಿದ್ದ. ನಂತರ ಕುಟುಂಬದಿಂದ ಬೇರೆಯಾಗಿ ಜೀವನ ನಡೆಸುತ್ತಿದ್ದ,

ಐದಾರು ವರ್ಷದಿಂದ ಕುಟುಂಬದಿಂದ ಬೇರೆಯಾಗಿ ಒಂಟಿ‌ ಬದುಕುತ್ತಿದ್ದ ನವೀನ್‌ ಉದ್ಯೋಗವೂ ಇಲ್ಲದೇ ನೊಂದಿದ್ದ. ಇದೇ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಶನಿವಾರ ಸಂಜೆಯ ವೇಳೆಗೆ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ನವೀನ್ ನಂತರ ಬರುತ್ತಿರುವ ಮೆಟ್ರೋದ ಎದುರು ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಸದ್ಯ ನವೀನ್ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಮೆಟ್ರೋ ಅಧಿಕಾರಿಗಳ ವಿರುದ್ಧ ಆಕ್ರೋಶ

ನವೀನ್‌ ಆತ್ಮಹತ್ಯೆ ಮಾಡಿಕೊಂಡ ಬಳಿಕ ಪ್ರಯಾಣಿಕರನ್ನು ಮಧ್ಯದಲ್ಲೇ ಇಳಿಸಲಾಗಿದೆ ಎಂದು ಮೆಟ್ರೋ ಅಧಿಕಾರಿಗಳ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಟ್ರೋವನ್ನು ಅರ್ಧದಲ್ಲೇ ನಿಲ್ಲಿಸಿ ಇಳಿಯಲು ಸೂಚಿಸಿದ್ದರಿಂದ ಹಳಿಯ ಪಕ್ಕದಲ್ಲಿ ಪ್ರಯಾಣಿಕರು ಭಯದಲ್ಲಿಯೇ ಹೆಜ್ಜೆ ಹಾಕಿದ್ದಾರೆ. ಸಾಲು ಸಾಲು ಅವಘಡ ಸಂಭವಿಸಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎನ್ನುವ ದೂರು ಕೇಳಿ ಬಂದಿದೆ. ನವೀನ್‌ ಮೆಟ್ರೋ ಹಳಿಗೆ ಜಂಪ್ ಮಾಡುತ್ತಿದ್ದಂತೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಹೀಗಾಗಿ ಮೆಟ್ರೋ ಹಳಿಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ವೇಳೆ ಮೆಟ್ರೋದಲ್ಲಿದ್ದ ಪ್ರಯಾಣಿಕರನ್ನು ಸಿಬ್ಬಂದಿ ಇಳಿಸಿದ್ದರು.

ʼʼಹಳಿಯಲ್ಲಿ ಮೃತದೇಹ ಇದ್ದಿದ್ದರಿಂದ ಅರ್ಧದಲ್ಲೇ ಪ್ರಯಾಣ ಮೊಟಕುಗೊಳಿಸಲಾಗಿತ್ತು. ಪರಿಣಾಮವಾಗಿ ಮೆಟ್ರೋ ಟ್ರ್ಯಾಕ್, ಬ್ರಿಡ್ಜ್ ಮೇಲೆಯೇ ಪ್ರಯಾಣಿಕರು ಓಡಾಡುವಂತಾಯ್ತುʼʼ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾನೆ.

Exit mobile version