Site icon Vistara News

Murder case : ಹುಬ್ಬಳ್ಳಿ, ಬೆಂಗಳೂರಲ್ಲಿ ಅಪರಿಚಿತ ಶವ ಪತ್ತೆ; ಹಂತಕರ ಬೆನ್ನಿಗೆ ಬಿದ್ದ ಖಾಕಿ ಪಡೆ

Murder case

ಹುಬ್ಬಳ್ಳಿ/ಬೆಂಗಳೂರು: ಹುಬ್ಬಳ್ಳಿಯ ಹೊರವಲಯದ ಕಾರವಾರ ರಸ್ತೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬರ ಶವ‌ (Dead Body Found) ಪತ್ತೆಯಾಗಿದೆ. ಕೊಲೆ ಮಾಡಿ (Murder Case) ನಂತರ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ. ಸುಮಾರು 40 ವಯಸ್ಸಿನ ವ್ಯಕ್ತಿಯ ಶವವು ಸುಟ್ಟಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ. ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಪಾದ ಕಟ್‌ ಮಾಡಿ, ರೈಲ್ವೆ ಬ್ರಿಡ್ಜ್‌ಗೆ ಶವ ಬಿಸಾಡಿದ ಹಂತಕರು

ಬೆಂಗಳೂರಿನ ಶ್ರೀರಾಂಪುರದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಕೊಲೆ ಮಾಡಿ ಶ್ರೀರಾಂಪುರ ರೈಲ್ವೆ ಬ್ರಿಡ್ಜ್ ಬಳಿ ಶವ ಎಸೆದು ಹೋಗಿದ್ದಾರೆ. ಕ್ರಾಸ್ ಪೆಂಡೆಂಟ್ ಧರಿಸಿರುವ ಸುಮಾರು 35 ವರ್ಷದ ವ್ಯಕ್ತಿ ಪಾದ ಕಟ್ ಮಾಡಿ, ಕುತ್ತಿಗೆಗೆ ಬಲವಾಗಿ ಚುಚ್ಚಿ ಕೊಲೆ ಮಾಡಲಾಗಿದೆ. ಶ್ರೀರಾಂಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶ್ರೀರಾಂಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: Karnataka Weather Forecast : ರಾಯಚೂರಲ್ಲಿ ಬಿಸಿಲಾಜ್ಞೆ; ಮಧ್ಯಾಹ್ನ 12-4ರ ವರೆಗೆ ಹೊರಬರದಂತೆ ಡಿಸಿ ಕಟ್ಟಾಜ್ಞೆ!

ಎಣ್ಣೆ ಪಾರ್ಟಿ ನಂತರ ರಿಕ್ಷಾ ಚಾಲಕನ ಇರಿದು ಕೊಂದ ರೌಡಿ ಶೀಟರ್‌

ಬೆಂಗಳೂರು: ಕುಡಿದ ಅಮಲಿನಲ್ಲಿ ಹುಟ್ಟಿಕೊಂಡ ಗಲಾಟೆ ಕೊಲೆಯಲ್ಲಿ (Murder Case) ಅಂತ್ಯವಾಗಿದ್ದು, ರೌಡಿ ಶೀಟರ್‌ (Rowdy Sheeter) ಒಬ್ಬಾತ ಸ್ನೇಹಿತ ರಿಕ್ಷಾ ಚಾಲಕನನ್ನು ಇರಿದು (Stabbing) ಕೊಂದು ಹಾಕಿದ್ದಾನೆ. ಬೆಂಗಳೂರಿನ ನಾಗಶೆಟ್ಟಿಹಳ್ಳಿಯಲ್ಲಿ ನಿನ್ನೆ ತಡರಾತ್ರಿ (Crime news) ಈ ಕೃತ್ಯ ನಡೆದಿದೆ.

ಮೂರ್ತಿ (45) ವರ್ಷ ಕೊಲೆಯಾದ ಆಟೋ ಡ್ರೈವರ್. ಶರಣಪ್ಪ ಕೊಲೆ ಮಾಡಿದ ರೌಡಿ. ಮೂರ್ತಿಗೆ ರೌಡಿಶೀಟರ್ ಶರಣಪ್ಪ ಕೆಲ ವರ್ಷಗಳಿಂದ ಪರಿಚಯ. ನಿನ್ನೆ ಇಬ್ಬರೂ ಸ್ನೇಹಿತರು ನಾಗಶೆಟ್ಟಹಳ್ಳಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ನಂತರ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳ ತಾರಕಕ್ಕೇರಿದ್ದು ರೌಡಿಶೀಟರ್ ಶರಣಪ್ಪ ಡ್ಯಾಗರ್‌ನಿಂದ ಹಲವು ಬಾರಿ ಮೂರ್ತಿಗೆ ಇರಿದಿದ್ದಾನೆ. ಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದು. ಸದ್ಯ ಆರೋಪಿಗಾಗಿ ಸಂಜಯ್ ನಗರ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇನ್ನೊಂದು ವಂಟಮೂರಿ ಮಾದರಿ ಕೇಸ್‌, ಕಂಬಕ್ಕೆ ಕಟ್ಟಿ ಮಹಿಳೆಗೆ ಥಳಿತ

ಹಾವೇರಿ: ಬೆಳಗಾವಿ ಜಿಲ್ಲೆಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿ ಮೆರವಣಿಗೆ ಮಾಡಿದ ಅಮಾನುಷ ಪ್ರಕರಣದ ನೆನಪು ಮಾಸುವ ಮುನ್ನವೇ ಮತ್ತೊಂದು ಅಂಥದೇ ಪ್ರಕರಣ ನಡೆದಿದೆ. ಇದರಲ್ಲಿ ಮಹಿಳೆಯನ್ನು ಆಕೆಯ ಯಾವುದೇ ತಪ್ಪಿಲ್ಲದೆ ಕಂಬಕ್ಕೆ ಕಟ್ಟಿ ಥಳಿಸಲಾಗಿದೆ.

ಹಾವೇರಿ ಜಿಲ್ಲೆಯ ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ಅರಮಲ್ಲಾಪುರ ಗ್ರಾಮದಲ್ಲಿ ಈ ಬರ್ಬರ ಘಟನೆ ನಡೆದಿದೆ. ಹನಮವ್ವ ದುರಗಪ್ಪ ಮೆಡ್ಲೆರಿ (50) ಹಲ್ಲೆಗೊಳಗಾದ ಮಹಿಳೆ. ಈಕೆಯ ಮಗ ಅದೇ ಗ್ರಾಮದ ಯುವತಿಯೊಬ್ಬಳ ಜೊತೆಗೆ ಪರಾರಿಯಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕೆಲ ಗ್ರಾಮಸ್ಥರು ಮಹಿಳೆಯ ಮೇಲೆ ಹಲ್ಲೆ ನಡೆಸಿ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಯುವಕನ ಮಗ ಯುವತಿಯೊಬ್ಬಳನ್ನು ಅಪಹರಿಸಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಯುವತಿ ಕಡೆಯವರು ಥಳಿಸಿದ್ದಾರೆ. ಅದೇ ಗ್ರಾಮದ ಚಂದ್ರಪ್ಪ, ಗಂಗಪ್ಪ, ಗುತ್ತೆವ್ವ ಹಲ್ಲೆ ಮಾಡಿದ ಆರೋಪಿಗಳು. ಈಕೆಯ ಮಗ ಮಂಜುನಾಥ ಯುವತಿಯನ್ನು ಕರೆದುಕೊಂಡು ಹೋಗಿರುವ ಆರೋಪವಿದೆ. ಆತ ಯುವತಿಯನ್ನು ಬಲವಂತವಾಗಿ ಅಪಹರಿಸಿದ್ದಲ್ಲದೆ ಆಭರಣಗಳನ್ನೂ ದೋಚಿದ್ದಾನೆ ಎಂದು ಇವರು ದೂರಿದ್ದಾರೆ.

ಆರೋಪಿಗಳು ಮಹಿಳೆಯ ಮನೆಗೆ ನುಗ್ಗಿ “ನಿನ್ನ ಮಗ ಎಲ್ಲಿದ್ದಾನೆ ಹೇಳು” ಎಂದು ಪೀಡಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಹಲ್ಲೆ ನಡೆಸಿದರು. ಗಾಯಗೊಂಡ ಹನಮವ್ವಳಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ರಾಣೇಬೆನ್ನೂರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version