ಬೆಂಗಳೂರು: ಮಂಗಳವಾರ ರಾತ್ರಿ ಬೆಂಗಳೂರಿನ ಕೋರಮಂಗಲದಲ್ಲಿರುವ ಲೇಡಿಸ್ ಪಿಜಿಗೆ ನುಗ್ಗಿದ ವ್ಯಕ್ತಿಯೊಬ್ಬ ಯುವತಿಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಚ್ಚಿ ಬೀಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ (Murder Case).
ʼʼಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ. ಕೊರಮಂಗಲ ಪೊಲೀಸರು ಸದ್ಯ ಆರೋಪಿಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ಎರಡು ದಿನದ ಹಿಂದೆಯಷ್ಟೇ ಕೃತಿ ಪಿಜಿಗೆ ಸೇರಿದ್ದರು. ಆಕೆ ಪಿಜಿಗೆ ಆಗಮಿಸುವ ವೇಳೆಯೂ ಈ ಯುವಕ ಲಗೇಜ್ ತೆಗದುಕೊಂಡು ಬಂದಿದ್ದ. ಆಗ ಯುವಕನನ್ನು ಒಳ ಬಿಡುವುದಿಲ್ಲ ಎಂದು ಪಿಜಿ ಸೆಕ್ಯೂರಿಟಿ ತಡೆದಿದ್ದರು. ಪಿಜಿ ಸೆಕ್ಯುರಿಟಿ ಬಳಿ, ಆತ ತನ್ನ ಸಹೋದರ ಎಂದು ಹೇಳಿ ಬೇಗ ಕಳುಹಿಸುತ್ತೇನೆ ಎಂದು ಕೃತಿ ಒಳ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿದ್ದೇನು?
ಕೃತಿ ಹತ್ಯೆ ಪ್ರಕರಣದ ಬಗ್ಗೆ ಪೂರ್ವ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ರಮನ್ ಗುಪ್ತ ಹೇಳಿಕೆ ನೀಡಿ, ʼʼಘಟನೆ ರಾತ್ರಿ 11.10ರಿಂದ 11.30ರ ಸುಮಾರಿಗೆ ನಡೆದಿದ್ದು, ರಾತ್ರಿ 12 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ತಕ್ಷಣ ನಮ್ಮ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಅಕೆ ಮೂಲತಃ ಬಿಹಾರದವರು ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಕೊಲೆಯಾಗಿದೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕು. ಪಿಜಿಯ ಸಿಸಿಟಿವಿ ಸೇರಿದಂತೆ ಎಲ್ಲವನ್ನೂ ಪರಿಶೀಲನೆ ನಡೆಸಿದ್ದೇವೆ. ಪಿಜಿಯ ನಿರ್ಲಕ್ಷ್ಯತನದ ಬಗ್ಗೆ ಪರಿಶೀಲಿಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನೂ ರಚಿಸಲಾಗಿದೆʼʼ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ
ಘಟನೆ ಹಿನ್ನೆಲೆ
ಮಂಗಳವಾರ ರಾತ್ರಿ ಸುಮಾರು 11.10ಕ್ಕೆ ಯುವಕನೋರ್ವ ಚಾಕು ಇಟ್ಟುಕೊಂಡು ಕೃತಿ ಇದ್ದ ಲೇಡಿಸ್ ಪಿಜಿಯೊಳಗೆ ನುಗ್ಗಿ ಆಕೆಯ ಕತ್ತು ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದ. ಪರಿಚಯಸ್ಥ ಯುವಕನಿಂದಲೇ ಕೃತ್ಯ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸದೆ ಪಿಜಿ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದೇ ಘಟನೆಗೆ ಕಾರಣ ಎನ್ನುವ ಆರೋಪವೂ ಕೇಳಿ ಬಂದಿದೆ. ಸದ್ಯ ಪೊಲೀಸರು ಮೃತ ಕೃತಿ ಕುಮಾರಿ ಅವರ ಮೊಬೈಲ್ ಪರಿಶೀಲಿಸುತ್ತಿದ್ದಾರೆ. ಕಾಲ್ ಡಿಟೈಲ್ಸ್ ಹಾಗೂ ಸಿಡಿಆರ್ ಪಡೆದು ಶೋಧಿಸುತ್ತಿದ್ದಾರೆ. ಕೊನೆಯದಾಗಿ ಯಾರಿಗೆ ಕರೆ ಮಾಡಿದ್ದಾರೆ, ಯಾವ ಯಾವ ನಂಬರ್‌ನಿಂದ ಕಾಲ್ ಬಂದಿದೆ ಎನ್ನುವ ಮಾಹಿತಿ ಕಲೆ ಹಾಕುತ್ತಿದ್ದಾರೆ.