ಚೆನ್ನೈ: ತಮಿಳುನಾಡಿನಲ್ಲಿ 24 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬಾಕೆಯನ್ನು ಆಕೆಯ ಹುಟ್ಟುಹಬ್ಬದ ದಿನವೇ ಪಾಪಿಯೊಬ್ಬ ಸುಟ್ಟು ಕೊಂದು (Burnt Alive) ಹಾಕಿದ್ದಾನೆ. ಆಕೆಯನ್ನು ಮದುವೆಯಾಗುವುದಕ್ಕಾಗಿಯೇ ಆರೋಪಿ ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದ. ಆದರೆ ಆಕೆ ಮದುವೆಯಾಗಲು ನಿರಾಕರಿಸಿದ್ದು, ಸಿಟ್ಟಿಗೆದ್ದ ಆತ ಬರ್ಬರವಾಗಿ ಕೊಲೆ (Murder Case, Crime News) ಮಾಡಿದ್ದಾನೆ.
ಚೆನ್ನೈನ ದಕ್ಷಿಣ ಉಪನಗರವಾದ ಕೆಲಂಬಾಕ್ಕಂ ಬಳಿಯ ತಲಂಬೂರ್‌ನಲ್ಲಿ ಈ ಹೇಯ ಘಟನೆ ನಡೆದಿದೆ. 26 ವರ್ಷದ ವೆಟ್ರಿಮಾರನ್ ಅಲಿಯಾಸ್ ಪಾಂಡಿ ಮಹೇಶ್ವರಿ ಕೊಲೆಪಾತಕಿ. ಈಕೆ ಟ್ರಾನ್ಸ್‌ಜೆಂಡರ್ (Transgender) ಆಗಿದ್ದು, ಸಾಫ್ಟ್‌ವೇರ್ ಇಂಜಿನಿಯರ್ ಆರ್.ನಂದಿನಿ (24) ಎಂಬಾಕೆಯ ಸಹಪಾಠಿಯಾಗಿದ್ದಳು. ಮಧುರೈ ಮೂಲದ ನಂದಿನಿ ಚೆನ್ನೈನಲ್ಲಿ ಸಂಬಂಧಿಕರೊಂದಿಗೆ ನೆಲೆಸಿದ್ದಳು. ಈಕೆಯ ಜೊತೆಗೆ ವೆಟ್ರಿ ಆತ್ಮೀಯವಾಗಿದ್ದಳು. ಇವರಿಬ್ಬರೂ ತೊರೈಪಾಕ್ಕಂನಲ್ಲಿರುವ ಖಾಸಗಿ ಐಟಿ ಸಂಸ್ಥೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
ನಂದಿನಿಯಲ್ಲಿ ವೆಟ್ರಿ ಅನುರಕ್ತೆಯಾದ ಬಳಿಕ ಇಬ್ಬರ ನಡುವಿನ ಸಂಬಂಧ ಕರಾಳ ತಿರುವು ತೆಗೆದುಕೊಂಡಿತು. ಈಕೆಯನ್ನು ಮದುವೆಯಾಗುವುದಕ್ಕಾಗಿ ವೆಟ್ರಿ ಲಿಂಗ ಬದಲಾಯಿಸಿಕೊಂಡು ಪುರುಷನಾಗಿದ್ದ. ಆದರೆ ವೆಟ್ರಿಯನ್ನು ಮದುವೆಯಾಗಲು ನಂದಿನಿ ಒಪ್ಪಿರಲಿಲ್ಲ. ಇದೇ ವೇಳೆ ಆಕೆ ಬೇರೊಬ್ಬ ಪುರುಷನೊಂದಿಗೆ ಸಲಿಗೆ ಬೆಳೆಸಿಕೊಂಡಿದ್ದಳು. ಇದರಿಂದ ಕೆರಳಿದ ವೆಟ್ರಿ ನಂದಿನಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದಾನೆ.
ನಂದಿನಿಯ ಬರ್ತ್‌ಡೇ ದಿನ ಆಕೆಯನ್ನು ʼಸರ್‌ಪ್ರೈಸ್ ಕೊಡ್ತೀನಿʼ ಎಂದು ಕರೆದುಕೊಂಡು ಹೋದ ಆತ ಆಕೆಯನ್ನು ಸರಪಳಿಯಲ್ಲಿ ಕಟ್ಟಿಹಾಕಿ, ಬ್ಲೇಡ್‌ನಿಂದ ಕೊಯ್ದು, ಬಳಿಕ ಪೆಟ್ರೋಲ್ ಸುರಿದು ಬೆಂಕಿ ಕೊಟ್ಟು ಸಜೀವವಾಗಿ ಸುಟ್ಟುಹಾಕಿದ್ದಾನೆ. ಸ್ಥಳೀಯ ನಿವಾಸಿಗಳು ಕೂಡಲೇ ಆಸ್ಪತ್ರೆಗೆ ಸಾಗಿಸಿದರಾದರೂ ನಂದಿನಿ ಬದುಕುಳಿಯಲಿಲ್ಲ. ಬರ್ಬರ ಕೃತ್ಯ ಎಸಗಿ ಪರಾರಿಯಾಗಿದ್ದ ವೆಟ್ರಿಮಾರನ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: Murder Case: ಕೊಲೆ ಆರೋಪಿಯನ್ನು ಹೋಟೆಲ್‌ನೊಳಗೆ ಕೊಚ್ಚಿ ಹತ್ಯೆ