ಬೆಂಗಳೂರು: ರಾಜಧಾನಿಯ ಕೋರಮಂಗಲ ಪಿಜಿಯೊಂದರಲ್ಲಿ (Murder in PG) ಕೃತಿ ಕುಮಾರಿ ಎಂಬ ಯುವತಿಯನ್ನು ಹತ್ಯೆ (Krithi Kumari Murder) ಮಾಡಿದ ಪಾತಕಿ ಅಭಿಷೇಕ್‌ನನ್ನು ಬಂಧಿಸಲಾಗಿದೆ. ಬೆಂಗಳೂರು ಪೊಲೀಸರು (Bangalore police) ಮಧ್ಯಪ್ರದೇಶಕ್ಕೆ ತೆರಳಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಮೊನ್ನೆಯೇ ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರು ಪೊಲೀಸರು, ಅಲ್ಲಿನ ಭೋಪಾಲ್‌ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿ, ಟ್ರಾನ್ಸಿಟ್ ವಾರೆಂಟ್ ಮೇಲೆ ಬೆಂಗಳೂರಿಗೆ ಕರೆತಂದಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಸಿಸಿಟಿವಿ ಫೂಟೇಜ್‌ಗಳು, ಪ್ರತ್ಯಕ್ಷದರ್ಶಿಗಳು ಹಾಗೂ ಆರೋಪಿಯ ಪ್ರೇಯಸಿಯ ಹೇಳಿಕೆಗಳ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.
ಏನಿದು ಪ್ರಕರಣ?
ರಾಜಧಾನಿಯ ಕೋರಮಂಗಲದ ಪಿಜಿಯಲ್ಲಿ ಕೊಲೆಯಾಗಿ (Murder in PG) ಹೋದ ಕೃತಿ ಕುಮಾರಿ ಮರ್ಡರ್ (Krithi Kumari Murder) ಪ್ರಕರಣದಲ್ಲಿ ಪಾತಕಿಯ ಬರ್ಬರತೆಯ ಬಗ್ಗೆ ಬೆಚ್ಚಿ ಬೀಳಿಸುವ ಇನ್ನಷ್ಟು ವಿವರಗಳು ಹೊರಬಿದ್ದಿವೆ. ಕೊಲೆಯಾಗಿ ಹೋದವಳು ಈತನ ಪ್ರೇಯಸಿಯ (lover) ಗೆಳತಿಯಾಗಿದ್ದು, ಈ ದುಷ್ಟನ ಕೈಯಿಂದ ಗೆಳತಿಯನ್ನು ಬಿಡಿಸುವ ಯತ್ನದಲ್ಲಿ ತಾನೇ ಮರ್ಡರ್ (Murder Case) ಆಗಿದ್ದಾಳೆ.
ಆರೋಪಿ ಅಭಿಷೇಕ್ ತಾನು ಪ್ರೀತಿಸಿದವಳನ್ನು ಗೃಹ ಬಂಧನದಲ್ಲಿಟ್ಟಿದ್ದ. ಆಕೆಯನ್ನು ಕಾಪಾಡಿದ ಆಕೆಯ ಗೆಳತಿಯೇ ಜೀವ ಕಳೆದುಕೊಂಡಿದ್ದಾಳೆ. ಅಭಿಷೇಕ್ ಯುವತಿಯೊಬ್ಬಳೊಂದಿಗೆ ಪ್ರೀತಿಯಲ್ಲಿದ್ದ. ತನ್ನ ಪ್ರೇಯಸಿಯನ್ನು ಬಲವಂತವಾಗಿ ಬಾಡಿಗೆ ರೂಮ್‌ನಲ್ಲಿ ಇರಿಸಿಕೊಂಡಿದ್ದ. ಕೊಲೆಗೂ ಮೂರು ದಿನದ ಹಿಂದೆ ಬಾಡಿಗೆ ರೂಮ್ ಮಾಡಿ, ಆಕೆಯನ್ನು ಕರೆದೊಯ್ದು ಬಲವಂತವಾಗಿ ರೂಮ್‌ನಲ್ಲಿಟ್ಟುಕೊಂಡಿದ್ದ.
ಆದರೆ ಪ್ರೇಯಸಿ ರೂಮ್‌ನಲ್ಲಿ ಇರಲಾಗದೆ ಒದ್ದಾಡಿದ್ದಳು. ರೂಮ್‌ಮೇಟ್ ಪಿಜಿಗೆ ಬರಲಿಲ್ಲ ಏಕೆಂದು ವಿಚಾರಿಸಿದಾಗ ಕೃತಿ ಕುಮಾರಿ, ಆರೋಪಿ ಆಕೆಯನ್ನು ಕೂಡಿ ಹಾಕಿದ್ದರ ಮಾಹಿತಿಯನ್ನು ಪಡೆದುಕೊಂಡಿದ್ದಳು. ನಂತರ ಸಮಯ ನೋಡಿ ಗೆಳತಿಯನ್ನು ರೂಮ್‌ನಿಂದ ಕರೆತರಲು ಪ್ಲ್ಯಾನ್ ಮಾಡಿದ್ದು, ತನ್ನ ಸ್ನೇಹಿತರೊಂದಿಗೆ ತೆರಳಿ ಗೆಳತಿಯನ್ನು ಪಿಜಿಗೆ ಕರೆತಂದಿದ್ದಳು. ಕೊಲೆ ನಡೆದ ಹಿಂದಿನ ದಿನ ಗೃಹಬಂಧನದಲ್ಲಿದ್ದ ಗೆಳತಿಯನ್ನು ಕೃತಿ ಪಾರುಮಾಡಿದ್ದಳು. ಈಕೆಯ ಈ ಮಾನವೀಯ ನಡತೆಯೇ ಆಕೆಯ ಜೀವ ತೆಗೆದಿದೆ.
ಈ ವಿಚಾರ ಗೊತ್ತಾಗಿದ್ದೇ ತಡ ಕೃತಿ ಮೇಲೆ ಆರೋಪಿ ಅಭಿಷೇಕ್ ತೀವ್ರವಾಗಿ ಕೋಪಗೊಂಡಿದ್ದ. ತನ್ನ ಪ್ರೇಯಸಿಯನ್ನು ಕರೆದುಕೊಂಡು ಹೋಗಿದ್ದಕ್ಕೆ ಕೋಪಗೊಂಡು ಮಂಗಳವಾರ ರಾತ್ರಿ 11.10ರ ಸುಮಾರಿಗೆ ಏಕಾಏಕಿ ಪಿಜಿಗೆ ಹೋಗಿದ್ದ. ಒಳ ಹೋದವನೇ ಸೀದಾ ಕೃತಿ ಕುಮಾರಿಗೆ ಚಾಕುವಿನಿಂದ ಯದ್ವಾತದ್ವಾ ಇರಿದು ಎಸ್ಕೇಪ್ ಆಗಿದ್ದಾನೆ.
ಘಟನೆ ನಡೆದದ್ದು ಹೀಗೆ
ಜು.23ರಂದು ಕೋರಮಂಗಲದ ಪಿಜಿಯಲ್ಲಿ ಕೃತಿ ಕುಮಾರಿ ಕೊಲೆ ನಡೆದಿತ್ತು. ಆರೋಪಿ ಅಭಿಷೇಕ್ ಕೃತಿ ಕುಮಾರಿಯನ್ನು ಎರಡೇ ನಿಮಿಷದಲ್ಲಿ ಕೊಲೆಮಾಡಿ ಪರಾರಿಯಾಗಿದ್ದಾನೆ. ಕತ್ತು, ಎದೆ, ಹೊಟ್ಟೆ ಭಾಗ ಸೇರಿ ಹಲವು ಕಡೆ ಇರಿದಿದ್ದಾನೆ. ಕತ್ತನ್ನು ಕೋಳಿ ಕತ್ತಿನಂತೆ ಕೊಯಿದಿದ್ದಾನೆ. ಮೊದಲು ಪಿಜಿ ರೂಮಿನ ಬಾಗಿಲು ಬಡಿದ ಕೊಲೆಗಾರ, ಆಕೆ ಬಾಗಿಲು ತೆರೆದ ಕೂಡಲೇ ಒಳಹೋಗಿದ್ದಾನೆ. ನಂತರ ಕೆಲವು ಸೆಕೆಂಡ್‌ನಲ್ಲಿ ಆಕೆ ಆತನಿಂದ ಪಾರಾಗಲು ಹೊರಗೋಡಿ ಬಂದಿದ್ದು, ಆಕೆಯನ್ನು ಕಾರಿಡಾರ್‌ನಲ್ಲೇ ತಡೆದ ಪಾತಕಿ ಮನಬಂದಂತೆ ಇರಿದಿದ್ದಾನೆ.
ಪ್ರಾಣ ಉಳಿಸಿಕೊಳ್ಳಲು ಕೃತಿ ಕುಮಾರಿ ಒದ್ದಾಡಿದ್ದಾಳೆ. ರಕ್ತದ ಮಡುವಿನಲ್ಲಿದ್ದ ಕೃತಿ ಕುಮಾರಿ ಆರ್ತನಾದ ಮಾಡಿದರೂ ಪಿಜಿಯಲ್ಲಿದ್ದ ಮೂವರು ಯುವತಿಯರು ಮಾತ್ರ ಹತ್ತಿರ ಬಂದಿಲ್ಲ. ಮಾನವೀಯತೆಯನ್ನೇ ಮರೆತಂತೆ ವರ್ತಿಸಿದ ಇವರು ಕೃತಿ ಕುಮಾರಿಯ ಹತ್ತಿರ ಕೂಡ ಹೋಗಿಲ್ಲ. ಕೈಯಲ್ಲಿದ್ದ ಮೊಬೈಲ್ ಫೋನ್ ನೋಡ್ತಾ ಆಚೆ ಹೋಗಿದ್ದಾರೆ. ಈ ಎಲ್ಲಾ ದೃಶ್ಯಗಳು ಪಿಜಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.