ಬೆಂಗಳೂರು: 2017ರಲ್ಲಿ ನಡೆದು ಭಾರಿ ಚರ್ಚೆಗೆ ಗ್ರಾಸವಾಗಿದ್ದ ವಕೀಲ ಅಮಿತ್ ಕೇಶವ ಮೂರ್ತಿ ಕೊಲೆ (Lawyer Amit Keshavmurty murder) ಪ್ರಕರಣದಲ್ಲಿ ಆರೋಪಿ ರಾಜೇಶ್‌ಗೆ ಆಜೀವ ಜೈಲು ಶಿಕ್ಷೆ ವಿಧಿಸಿ (Lifetime sentence) ಕೋರ್ಟ್ (Bangalore court) ತೀರ್ಪು ನೀಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಹೊಸಮನಿ ಪುಂಡಲೀಕ ಅವರು ಬುಧವಾರ ವಿಚಾರಣೆಯ ವೇಳೆ ರಾಜೇಶ್‌ನನ್ನು ಆರೋಪಿ ಎಂದು ಘೋಷಿಸಿದ್ದರು. ಗುರುವಾರ ಶಿಕ್ಷೆಯ ಪ್ರಮಾಣವನ್ನು (Murder Judgement) ಪ್ರಕಟಿಸಿದರು.
2017ರ ಜನವರಿ 13ರಂದು ಹೆಸರಘಟ್ಟ ಸಮೀಪದ ಆಚಾರ್ಯ ಕಾಲೇಜು ಬಳಿ ಅಮಿತ್ ಕೇಶವ ಮೂರ್ತಿ ಕೊಲೆ ನಡೆದಿತ್ತು. ಪಿಡಿಒ ಆಗಿರುವ ತನ್ನ ಪತ್ನಿ ಶ್ರುತಿ ಗೌಡ ಮತ್ತು ವಕೀಲ ಅಮಿತ್ ಕೇಶವ ಮೂರ್ತಿಗೆ ಅಕ್ರಮ ಸಂಬಂಧವಿದೆ ಎಂಬ ಸಂಶಯ ಹೊಂದಿದ್ದ ಶ್ರುತಿಯ ಪತಿ ರಾಜೇಶ್ ಆಚಾರ್ಯ ಕಾಲೇಜಿನ ಬಳಿ ಅವರಿಬ್ಬರು ಒಂದೇ ಕಾರಿನಲ್ಲಿದ್ದ ಸಂದರ್ಭದಲ್ಲಿ ಗುಂಡು ಹಾರಿಸಿ ಅಮಿತ್ ಕೇಶವಮೂರ್ತಿಯನ್ನು ಕೊಲೆ ಮಾಡಿದ್ದ. ಬಳಿಕ ಶ್ರುತಿ ಗೌಡ ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಈ ಪ್ರಕರಣದ ವಿಚಾರಣೆ ನಾನಾ ಹಂತಗಳಲ್ಲಿ ನಡೆದು ಇದೀಗ ರಾಜೇಶ್‌ಗೆ ಶಿಕ್ಷೆ ವಿಧಿಸಲಾಗಿದೆ. ರಾಜೇಶ್‌ಗೆ ಅಜೀವ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದ ನ್ಯಾಯಾಲಯ ಒಂದು ಲಕ್ಷ ರೂ. ದಂಡವನ್ನೂ ವಿಧಿಸಿದೆ. ಗುಂಡು ಹಾರಿಸಿ ಕೊಲೆ ಮಾಡಿದ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರ ಕಾಯಿದೆಯಡಿ ನಾಲ್ಕು ತಿಂಗಳ ಜೈಲು ಶಿಕ್ಷೆ ಮತ್ತು 2000 ರೂ. ದಂಡ ವಿಧಿಸಲಾಗಿದೆ. ತೀರ್ಪಿನ ಪ್ರಕಾರ ರಾಜೇಶ್ ಜೀವನ ಪರ್ಯಂತ ಜೈಲಿನಲ್ಲೇ ಇರಬೇಕಾಗುತ್ತದೆ.
ಏನಿದು ಅಮಿತ್ ಕೇಶವಮೂರ್ತಿ ಕೊಲೆಯ ರಹಸ್ಯ?
ರಾಜೇಶ್ ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಗ್ರಾಮ ಪಂಚಾಯತ್ ಸದಸ್ಯನಾಗಿದ್ದ. ಆತನಿಗೆ ಮದುವೆಯಾಗಿದ್ದು ಶ್ರುತಿ ಗೌಡ ಅವರೊಂದಿಗೆ ಶ್ರುತಿ ಗೌಡ ನೆಲಮಂಗಲ ಪಂಚಾಯಿತಿಯಲ್ಲಿ ಪಿಡಿಒ ಆಗಿದ್ದರು. ಅಲ್ಲಿ ಅವರಿಗೆ ಒಬ್ಬ ವಕೀಲರ ಪರಿಚಯವಾಗುತ್ತದೆ. ಅವರೇ ಬಾಗಲಗುಂಟೆಯ ಎಂಇಐ ಲೇಔಟ್ ನಿವಾಸಿ ಅಮಿತ್ ಕೇಶವಮೂರ್ತಿ. ಅಮಿತ್ ಕೇಶವಮೂರ್ತಿ ಲಂಡನ್‌ನಲ್ಲಿ ಕಾನೂನು ವ್ಯಾಸಂಗ ಮಾಡಿ ಬೆಂಗಳೂರಿಗೆ ಮರಳಿದ್ದರು. ಅವರಿಗೆ ಮದುವೆಯಾಗಿ ಒಬ್ಬ ಮಗನಿದ್ದ.
ವೃತ್ತಿಯಲ್ಲಿ ವಕೀಲರಾಗಿದ್ದ ಅಮಿತ್ ಕೇಶವಮೂರ್ತಿ ತಮ್ಮ ಕೆಲಸದ ನಿಮಿತ್ತ ಪಂಚಾಯಿತಿಗೆ ಬಂದಾಗ ಶ್ರುತಿ ಗೌಡ ಅವರ ಪರಿಚಯವಾಗಿತ್ತು. ಬಳಿಕ ಅವರು ಚಾಟಿಂಗ್ ಮಾಡುವ ಮೂಲಕ ಹತ್ತಿರವಾಗಿದ್ದರು ಎನ್ನಲಾಗಿದೆ.
ಇದರ ವಾಸನೆ ರಾಜೇಶ್‌ಗೆ ಬಡಿದಿತ್ತು. ರಾಜೇಶ್ ತನ್ನ ಪತ್ನಿಯ ಮೇಲೆ ಒಂದು ಕಣ್ಣಿಟ್ಟಿದ್ದ. ಆದರೆ, ಅಂಥದ್ದು ಏನೂ ಇಲ್ಲ ಎಂದು ಆಕೆ ಹೇಳಿದ್ದಳು. ಆದರೆ, ಸಂಶಯ ತೀರದ ರಾಜೇಶ್ ಇನ್ನು ಕೆಲಸಕ್ಕೆ ಹೋಗುವುದೇ ಬೇಡ ಎಂದು ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿದ್ದ. ಆದರೆ, ಆಕೆ ತುಂಬ ಹಠ ಹಿಡಿದಿದ್ದರಿಂದ ಮತ್ತೆ ಕೆಲಸಕ್ಕೆ ಹೋಗಲು ಅವಕಾಶ ನೀಡಲಾಗಿತ್ತು. ಈ ನಡುವೆ ಅಮಿತ್ ಮತ್ತು ಶ್ರುತಿ ಮತ್ತೆ ಸಂಪರ್ಕಕ್ಕೆ ಬಂದಿರುವುದು ಅವನ ಗಮನಕ್ಕೆ ಬಂದಿತ್ತು.
ಈ ನಡುವೆ ರಾಜೇಶ್ ತನ್ನ ಪತ್ನಿ ಬಳಸುತ್ತಿದ್ದ ಕಾರನ್ನು ರಿಪೇರಿ ಮಾಡಿಸುತ್ತೇನೆ ಎಂದು ಹೇಳಿ ತೆಗೆದುಕೊಂಡು ಹೋಗಿ ಅದಕ್ಕೆ ಜಿಪಿಎಸ್ ಫಿಕ್ಸ್ ಮಾಡಿದ್ದ.
2017ರ ಜನವರಿ 13ರಂದು ಆಕೆ ಕಾರು ತೆಗೆದುಕೊಂಡು ಹೋಗಿದ್ದಳು. ಸಂಜೆಯ ಹೊತ್ತಿಗೆ ರಾಜೇಶ್ ತನ್ನ ಪತ್ನಿ ಶ್ರುತಿಗೆ ಕರೆ ಮಾಡಿ ಎಲ್ಲಿದ್ದೀಯಾ ಎಂದು ಕೇಳಿದ್ದಾನೆ. ಆಗ ಆಕೆ ನಾನು ಆಫೀಸಿನಲ್ಲಿದ್ದೇನೆ ಎಂದು ಹೇಳಿದ್ದಳು. ರಾಜೇಶ್ ಜಿಪಿಎಸ್ ಚೆಕ್ ಮಾಡಿದಾಗ ಕಾರು ಹೆಸರಘಟ್ಟ ಸಮೀಪದ ಆಚಾರ್ಯ ಕಾಲೇಜಿನ ಗೇಟಿನ ಮುಂದೆ ನಿಂತಿರುವುದು ಗೊತ್ತಾಯಿತು.
ರಾಜೇಶ್ ತನ್ನ ತಂದೆಯಾಗಿರುವ ಗೋಪಾಲಕೃಷ್ಣ ಅವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗುತ್ತಾನೆ. ಅಲ್ಲಿ ಶ್ರುತಿ ಮತ್ತು ಅಮಿತ್ ಕೇಶವಮೂರ್ತಿ ಕಾರಿನಲ್ಲಿ ಕುಳಿತುಕೊಂಡಿರುವುದು ಕಾಣುತ್ತದೆ. ಇದನ್ನು ನೋಡಿದ ರಾಜೇಶ್ ತಾನು ತಂದಿದ್ದ ಪಿಸ್ತೂಲಿನಿಂದ ಅಮಿತ್ ಕೇಶವ ಮೂರ್ತಿಗೆ ಗುಂಡು ಹಾರಿಸುತ್ತಾನೆ. ಅತ್ಯಂತ ಹತ್ತಿರದಿಂದ ಹಾರಿಸಿದ ಗುಂಡು ಅಮಿತ್ ಕೇಶವಮೂರ್ತಿಯ ಎದೆಯನ್ನೇ ಸೀಳುತ್ತದೆ.
ಕೂಡಲೇ ಶ್ರುತಿ ಅಮಿತ್ ಕೇಶವಮೂರ್ತಿಯನ್ನು ಸಮೀಪದಲ್ಲೇ ಇರುವ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸುತ್ತಾಳೆ. ಆಗಲೂ ರಾಜೇಶ್ ಮತ್ತು ಆತನ ತಂದೆ ಆಕೆಯನ್ನು ಹಿಂಬಾಲಿಸುತ್ತಾರೆ. ಆಸ್ಪತ್ರೆಯಲ್ಲಿ ಅಮಿತ್ ಪ್ರಾಣ ಕಳೆದುಕೊಂಡಿದ್ದಾನೆ ಎಂಬುದನ್ನು ಖಾತ್ರಿಪಡಿಸಿಕೊಂಡೇ ತೆರಳುತ್ತಾರೆ.
ಇತ್ತ ರಾಜೇಶ್ ಶ್ರುತಿಯ ಮನೆಯವರಿಗೆ ಫೋನ್ ಮಾಡಿ ಅಮಿತ್ ಕೇಶವ ಮೂರ್ತಿಗೂ ಶ್ರುತಿಗೂ ಅಕ್ರಮ ಸಂಬಂಧವಿತ್ತು. ಅವನನ್ನು ಗುಂಡು ಹಾರಿಸಿ ಕೊಂದಿದ್ದೇನೆ. ಬೇಕಿದ್ದರೆ ನಿಮ್ಮ ಮಗಳನ್ನು ಉಳಿಸಿಕೊಳ್ಳಿ ಎಂದು ಫೋನ್ ಮಾಡಿದ್ದ.
ಇತ್ತ ಆಸ್ಪತ್ರೆಯಲ್ಲಿ ಅಮಿತ್ ಕೇಶವಮೂರ್ತಿ ಪ್ರಾಣ ಕಳೆದುಕೊಳ್ಳುತ್ತಿದ್ದಂತೆಯೇ ಶ್ರುತಿ ಭಯಗೊಂಡಿದ್ದಾಳೆ. ಅತ್ಯಂತ ಕ್ರೂರವಾಗಿರುವ ಗಂಡನ ಮನೆಯವರು ಇನ್ನು ತನ್ನನ್ನೂ ಉಳಿಸುವುದಿಲ್ಲ ಎಂದು ಬಗೆದ ಆಕೆ ಒಂದು ತೀರ್ಮಾನಕ್ಕೆ ಬಂದಿದ್ದಾಳೆ. ಆಸ್ಪತ್ರೆಯಿಂದ ಹೊರಬಂದವಳೇ ಸಮೀಪದಲ್ಲಿದ್ದ ಒಂದು ಲಾಡ್ಜ್‌ಗೆ ಹೋಗಿ ಅಲ್ಲಿ ರೂಂ ಪಡೆದು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶ್ರುತಿ ಗೌಡ ಮನೆಯವರು ಬಂದು ನೋಡಿದಾಗ ಎಲ್ಲವೂ ಮುಗಿದಿತ್ತು.
ಕಳೆದ ಆರು ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆದಿದ್ದು, ಇದೀಗ ತೀರ್ಪು ಹೊರಬಿದ್ದಿದೆ. ರಾಜೇಶ್ ಕಾರಿಗೆ ಜಿಪಿಎಸ್ ಹಾಕಿಸಿದ್ದು, ಆಕೆಯನ್ನು ಹಿಂಬಾಲಿಸುತ್ತಿದ್ದುದು, ಆಚಾರ್ಯ ಕಾಲೇಜಿನ ಗೇಟಿನ ಹತ್ತಿರ ಬಂದ ಬಗೆಗಿನ ಸಿಸಿ ಟಿವಿ ಫೂಟೇಜ್‌ಗಳು ಕೊಲೆಯನ್ನು ರಾಜೇಶ್ ಮಾಡಿದ್ದು ಎಂಬುದಕ್ಕೆ ಸೂಕ್ತ ದಾಖಲೆಯಾಗಿ ನಿಂತವು.
ಇತ್ತ ಕಾಲೇಜಿನ ಗೇಟಿನಿಂದ ಅಮಿತ್‌ನನ್ನು ಆಸ್ಪತ್ರೆಗೆ ಕರೆದೊಯ್ಯುವುದು, ಅವರನ್ನು ರಾಜೇಶ್ ಹಿಂಬಾಲಿಸುವುದು ಕೂಡಾ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಅದರ ಜತೆಗೆ ರಾಜೇಶ್ ಶ್ರುತಿ ಗೌಡಳ ಪೋಷಕರಿಗೆ ಕರೆ ಮಾಡಿ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದು ಕೊಲೆಯನ್ನು ಸಾಬೀತು ಮಾಡಲು ಸಹಾಯವಾಯಿತು ಎಂದು ವಕೀಲರಾದ ಹನುಮಂತರಾಯಪ್ಪ ತಿಳಿಸಿದ್ದಾರೆ.
ವಿಚಾರಣೆಗಾಗಿ ಕೋರ್ಟ್ ಕಟಕಟೆಗೆ ಬಂದ ಆರೋಪಿ ರಾಜೇಶ್ ಫೈರ್ ಮಾಡಿದ್ದು ನಾನಲ್ಲ, ಶ್ರುತಿ ಎಂದು ಕತೆ ಕಟ್ಟಿದ್ದ. ಅಮಿತ್ ಹಾಗೂ ಶ್ರುತಿಗೆ ಗಲಾಟೆ ಆಗಿತ್ತು. ತನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಕ್ಕೆ ಕೋಪಗೊಂಡ ಆಕೆ ನನ್ನ ಬಳಿ ಇದ್ದ ಪಿಸ್ತೂಲ್ ಕಸಿದು ಅಮಿತ್‌ಗೆ ಗುಂಡು ಹೊಡೆದಿದ್ದಾಳೆ ಎಂದಿದ್ದ. ಆದರೆ, ಇದೆಲ್ಲವೂ ಸುಳ್ಳು ಎನ್ನುವುದಕ್ಕೆ ಪೂರಕವಾದ ಸಾಕ್ಷ್ಯಗಳು ಸ್ಥಳದಲ್ಲಿದ್ದವು ಎಂದು ವಕೀಲರು ತಿಳಿಸಿದ್ದಾರೆ.