ಮುಂಬೈ: ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿ ಅಕ್ರಮವಾಗಿ ಗೋಮಾಂಸ ಸಾಗಣೆ (Beef Smuggling) ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಜನರೇ ಬಡಿದು ಕೊಂದಿದ್ದಾರೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮುಂಬೈನ ಕುರ್ಲಾ ನಿವಾಸಿಯಾದ ಅಫಾನ್ ಅನ್ಸಾರಿ (32) ಹತ್ಯೆಗೀಡಾದವರು. ಶನಿವಾರ ರಾತ್ರಿ ಹತ್ಯೆ ನಡೆದಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಅಫಾನ್ ಅನ್ಸಾರಿ ಹಾಗೂ ನಾಸಿರ್ ಶೇಖ್ ಎಂಬುವರು ಕಾರಿನಲ್ಲಿ ಗೋಮಾಂಸ ಸಾಗಿಸುತ್ತಿದ್ದರು. ಇದೇ ವೇಳೆ, ನಾಸಿಕ್ ಜಿಲ್ಲೆಯ ಗ್ರಾಮವೊಂದರ ಬಳಿ ಗೋರಕ್ಷಕರು ಕಾರನ್ನು ಅಡ್ಡಹಾಕಿದ್ದಾರೆ. ಕಾರಿನಲ್ಲಿ ಗೋಮಾಂಸ ಇರುವುದನ್ನು ಕಂಡು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದಾದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಫಾನ್ ಅನ್ಸಾರಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
“ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆದಿದೆ ಎಂಬ ಮಾಹಿತಿ ಲಭ್ಯವಾದ ಕಾರಣ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಆಗ ಇಬ್ಬರು ಗಂಭೀರವಾಗಿ ಗಾಯಗೊಂಡು, ರಸ್ತೆ ಮೇಲೆ ಬಿದ್ದಿದ್ದರು. ಇಬ್ಬರನ್ನು ಕೂಡಲೇ ಆಸ್ಪತ್ರೆಗೆ ದಾಖಲಾಯಿಸಲಾಯಿತು. ಇವರಲ್ಲಿ ಒಬ್ಬ ಮೃತಪಟ್ಟರೆ, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ” ಎಂದು ಸಬ್ ಇನ್ಸ್‌ಪೆಕ್ಟರ್ ಸುನೀಲ್ ಭಾಮ್ರೆ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 10 ಜನರನ್ನು ಬಂಧಿಸಿದ್ದಾರೆ. ಗಾಯಗೊಂಡ ವ್ಯಕ್ತಿ ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಕೊಲೆ ಹಾಗೂ ಗಲಭೆಯ ಕೇಸ್ ದಾಖಲಿಸಿದ್ದಾರೆ. ಹಾಗೆಯೇ, ಅವರು ಗೋಮಾಂಸ ಸಾಗಿಸುತ್ತಿದ್ದರೋ, ಇಲ್ಲವೋ ಎಂಬುದು ಲ್ಯಾಬ್ ವರದಿ ಬಂದ ಬಳಿಕವೇ ಗೊತ್ತಾಗಲಿದೆ ಎಂದು ಕೂಡ ಪೊಲೀಸರು ವಿವರಿಸಿದ್ದಾರೆ.
ಇದನ್ನೂ ಓದಿ: ಲಂಡನ್ ಶಾಲೆಗಳಲ್ಲಿ ಹಿಂದು ಮಕ್ಕಳಿಗೆ ಧರ್ಮದ ಹೆಸರಲ್ಲಿ ದೌರ್ಜನ್ಯ, ಗೋಮಾಂಸ ಎಸೆದು ನಿಂದನೆ; ಆತಂಕ ತಂದ ಸಮೀಕ್ಷಾ ವರದಿ
ಮಹಾರಾಷ್ಟ್ರದಲ್ಲಿ ಗೋವುಗಳ ಹತ್ಯೆಯನ್ನು ನಿರ್ಬಂಧಿಸುವ ಕಾಯ್ದೆಯನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದೆ. ಇದಾದ ಎಂಟು ವರ್ಷಗಳ ಬಳಿಕ ಮಹಾರಾಷ್ಟ್ರದಲ್ಲಿ ಗೋವುಗಳ ಹತ್ಯೆಯನ್ನು ನಿಷೇಧಿಸಲು ಆಯೋಗವೊಂದನ್ನು ರಚಿಸುವ ಪ್ರಸ್ತಾಪಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಆದಾಗ್ಯೂ, ಮಹಾರಾಷ್ಟ್ರದಲ್ಲಿ ಗೋವುಗಳ ಅಕ್ರಮ ಸಾಗಣೆ ಮುಂದುವರಿದಿದೆ. ಹಾಗಾಗಿ, ಗೋರಕ್ಷಕರು ವಾಹನಗಳನ್ನು ಅಡ್ಡಹಾಕಿ, ಅವರ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ನಡೆಯುತ್ತಿವೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ