Site icon Vistara News

Neha Murder Case: ಹಿಂದೂ ಯುವತಿಯರ ಜೀವಕ್ಕೆ ಗ್ಯಾರಂಟಿ ಕೊಡಿಸಿ ಸರ್: ಜೋಶಿಗೆ ನೇಹಾ ತಂದೆ ನಿರಂಜನ್ ಮನವಿ

Neha Murder case Niranjan urges Joshi to guarantee the lives of Hindu girls

ಹುಬ್ಬಳ್ಳಿ: “ಮಗಳು ನೇಹಾ ಕಗ್ಗೊಲೆ (Neha Murder Case) ಪ್ರಕರಣದಲ್ಲಿ ನಮಗೆ ನ್ಯಾಯ ದಕ್ಕಿಸಿ ಕೊಡಿ, ದಯವಿಟ್ಟು ಹಿಂದೂ ಯುವತಿಯರ ಜೀವಕ್ಕೆ ಗ್ಯಾರಂಟಿ ಕೊಡಿಸಿ, ಮಕ್ಕಳ ಅಮೂಲ್ಯ ಜೀವ ಉಳಿಸಿಕೊಡಿ, ಇದು ನಿಮ್ಮಿಂದ ಮಾತ್ರವೇ ಸಾಧ್ಯ ಸರ್, ಪ್ಲೀಸ್. ಹಂತಕನಿಗೆ ಕಠಿಣ ಶಿಕ್ಷೆ ಕೊಡಿಸಿ” ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಬಳಿ ಕೊಲೆಯಾದ ನೇಹಾ ಹಿರೇಮಠ ಅವರ ತಂದೆ ನಿರಂಜನ್‌ ಹಿರೇಮಠ (Niranjan Hiremath) ಮನವಿ ಮಾಡಿದರು.

ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ಯುವತಿ ನೇಹಾ ಕಗ್ಗೊಲೆ ವಿಷಯ ತಿಳಿದು ಗುರುವಾರ ರಾತ್ರಿಯೇ ಕಾರ್ಪೋರೇಟರ್ ನಿರಂಜನ್ ಹಿರೇಮಠ ಅವರ ಮನೆಗೆ ತೆರಳಿದ್ದ ಕೇಂದ್ರ ಸಚಿವರೆದುರು ಕುಟುಂಬ ವರ್ಗ ದುಃಖ ತೋಡಿಕೊಂಡಿತು.

ಹಿಂದೂ ಹೆಣ್ಣು ಮಕ್ಕಳ ಹತ್ಯೆ ಕೊನೆಯಾಗಲಿ

ಕಾಲೇಜು ಕ್ಯಾಂಪಸ್‌ನಲ್ಲೇ ಹೀಗೆ ಹತ್ಯೆ ನಡೆದರೆ ಹಿಂದೂ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡೋದಾದರೂ ಹೇಗೆ? ಸರ್ಕಾರದವರು ಇಂಥ ನೀಚರಿಗೆ ಕಠಿಣ ಶಿಕ್ಷೆ ಕೊಡಲಿ. ಹಿಂದೂ ಹೆಣ್ಣುಮಕ್ಕಳ ಹತ್ಯೆ ಇಲ್ಲಿಗೇ ಕೊನೆಗಾಣಿಸಿ ಎಂದು ನೇಹಾ ಸೋದರತ್ತೆ ಸಚಿವ ಜೋಶಿ ಅವರಲ್ಲಿ ಕಣ್ಣೀರಿಡುತ್ತಲೇ ಕೋರಿಕೊಂಡರು.

ಹಿಂದೂ ಯುವತಿಯರೇ ಟಾರ್ಗೆಟ್; ತಕ್ಕ ಶಾಸ್ತಿ ಆಗಲೇಬೇಕು

ಅಂದ ಚೆಂದದ ಹಿಂದೂ ವಿದ್ಯಾರ್ಥಿ-ಯುವತಿಯರೇ ಟಾರ್ಗೆಟ್ ಆಗುತ್ತಿದ್ದಾರೆ. ನಾನು ಕಾರ್ಪೋರೇಟ್ ಇದ್ದೇನೆ. ನನ್ನ ಮಗಳಿಗೇ ಹೀಗಾದರೆ ಸಾಮಾನ್ಯರ ಮಕ್ಕಳ ಗತಿ ಏನು? ಹಾಗಾಗಿ ಇದಕ್ಕೊಂದು ತಕ್ಕ ಶಾಸ್ತಿ ಆಗಲೇಬೇಕು ಎಂದು ನೇಹಾಳ ತಂದೆ ನಿರಂಜನ್ ಹಿರೇಮಠ ಅವರು ಪ್ರಲ್ಹಾದ್‌ ಜೋಶಿ ಅವರಲ್ಲಿ ಒತ್ತಾಯಿಸಿದರು.

ಶಿವಪೂಜೆ ಆಗದೆ ಹನಿ ನೀರು ಕುಡಿಯುತ್ತಿರಲಿಲ್ಲ

ನೇಹಾ ನಿತ್ಯ ಬೆಳಗ್ಗೆ ಶಿವಪೂಜೆ ಮಾಡದೇ ಒಂದು ಹನಿ ನೀರನ್ನೂ ಕುಡಿಯುತ್ತಿರಲಿಲ್ಲ. ಅಂಥ ಸಂಸ್ಕಾರವಂತ ಮಗಳು ಆಕೆ. ಲವ್ ಗಿವ್ ಅಂತ ಹೋದವಳಲ್ಲ ಎಂದು ತಂದೆ ಮತ್ತು ಸೋದರತ್ತೆ ಕಣ್ಣೀರಿಟ್ಟರು.

ಒಂದು ತಂಡವೇ ಇದ್ದಂತಿದೆ

ಲವ್ ಪ್ರಪೋಸಲ್ ಒಪ್ಪಲಿಲ್ಲ ಎಂದಾಕ್ಷಣ ಹೀಗೆ ಕಟುಕರಂತೆ ಕೊಲೆ ಮಾಡುವುದೇ? ಹಿಂದೂ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡುವ ಒಂದು ತಂಡವೇ ರೆಡಿಯಾಗಿದೆ ಅನಿಸುತ್ತಿದೆ ಎಂದು ಕಾರ್ಪೋರೇಟರ್ ನಿರಂಜನ್ ಆಕ್ರೋಶವನ್ನು ಹೊರಹಾಕಿದರು.

ಇದನ್ನೂ ಓದಿ: Neha Murder Case: ನೇಹಾ ಕೇಸ್‌ನಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ; ಡಿಜಿಗೆ ಸಿಎಂ ಸೂಚನೆ

ಮಾದರಿ ಆಗಬೇಕು ಶಿಕ್ಷೆ

ತಮ್ಮ ಮಗಳ ಹತ್ಯೆ ಪ್ರಕರಣದಲ್ಲಿ ಕೊಡುವ ಶಿಕ್ಷೆ ಕ್ರೂರ ಮನಸ್ಥಿತಿಯುಳ್ಳವರಿಗೆ ಪಾಠವಾಗಬೇಕು. ಒಂದು ಮಾದರಿ ಶಿಕ್ಷೆಯಾಗಬೇಕು. ಹೇಗಾದರೂ ಮಾಡಿ ಇಂಥ ನೀಚರನ್ನು ಮಟ್ಟ ಹಾಕಬೇಕು ಸರ್. ಇಲ್ಲದಿದ್ರೆ ನಮಗೆ ಉಳಿಗಾಲವಿಲ್ಲ ಎಂದು ನೇಹಾ ತಂದೆ, ಕಾರ್ಪೋರೇಟರ್‌ ನಿರಂಜನ್ ಅವರು ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು.

ಹೋರಾಟ ಮಾಡೋಣ ಧೃತಿಗೆಡಬೇಡಿ

ಲವ್ ಫೇಲ್ ಆದವರು ಸಮಾಜದಲ್ಲಿ ಹತ್ಯೆಯಂತಹ ಹಂತಕ್ಕೆ ಹೋಗುತ್ತಿರುವುದು ಆತಂಕವನ್ನು ಹುಟ್ಟಿಸುತ್ತಿದೆ. ಯಾರೂ ಈ ಬಗ್ಗೆ ಧೃತಿಗೆಡಬೇಡಿ. ಇದರ ವಿರುದ್ಧ ಹೋರಾಟ ಮಾಡೋಣ ಎಂದು ಸಚಿವ ಪ್ರಲ್ಹಾದ್‌ ಜೋಶಿ ಅವರು ನೇಹಾಳ ಕುಟುಂಬಕ್ಕೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದರು. ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ್, ಮಹೇಶ್ ತೆಂಗಿನಕಾಯಿ ಮತ್ತಿತರರು ಮುಖಂಡರು ಇದ್ದರು.

Exit mobile version