Site icon Vistara News

New Criminal Law: ರಾಜ್ಯದ ಮೊದಲ ಬಿಎನ್‌ಎಸ್‌ ಪ್ರಕರಣ ಹಾಸನದಲ್ಲಿ ದಾಖಲು, ಯಾವ ಕೇಸ್?‌

new criminal law

ಹಾಸನ: ರಾಜ್ಯದಲ್ಲಿ ಮೊದಲ ಬಿಎನ್ಎಸ್ (BNS FIR) ಪ್ರಕರಣ ಹಾಸನದಲ್ಲಿ (Hassan) ದಾಖಲಾಗಿದೆ. ಇಂದಿನಿಂದ ದೇಶಾದ್ಯಂತ ಜಾರಿಯಾಗುತ್ತಿರುವ ನೂತನ ಅಪರಾಧ ಕಾಯಿದೆ (New Criminal law) ಭಾರತೀಯ ನ್ಯಾಯ ಸಂಹಿತೆಯ (Bharatiya Nyaya Sanhita) ಅಡಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಮಹಿಳೆಯೊಬ್ಬರ ಸಾವಿಗೆ ಕಾರಣನಾದ ಚಾಲಕನ ಮೇಲೆ ಪ್ರಯೋಗಿಸಲ್ಪಟ್ಟಿದೆ.

ಹಾಸನ ರೂರಲ್ ಪೊಲೀಸ್ ಠಾಣೆಯಲ್ಲಿ ರಾಜ್ಯದ ಈ ಮೊದಲ ಬಿಎನ್ಎಸ್ ಪ್ರಕರಣ ಬೆಳಗ್ಗೆ 6.30‌ಕ್ಕೆ ದಾಖಲಾಗಿದೆ. ವೈದ್ಯ ಶಂಕರೇಗೌಡ ಎಂಬವರು ನೀಡಿದ ದೂರಿನ ಮೇಲೆ ಇದನ್ನು ಕಾಯಿದೆಯ ಸೆಕ್ಷನ್ 281, 106 ಅಡಿ ದಾಖಲು ಮಾಡಿಕೊಳ್ಳಲಾಗಿದೆ. ಸಾಗರ್ ಎಂಬ ಕಾರು ಚಾಲಕನ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಈತ ಅತಿ ವೇಗ ಹಾಗು ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿ ಮಹಿಳೆಯ ಸಾವಿಗೆ ಕಾರಣನಾಗಿದ್ದಾನೆ ಎಂದು ದೂರಲಾಗಿದೆ.

ದೂರು ನೀಡಿದ ವೈದ್ಯರ ಅತ್ತೆಯಾದ ಇಂದು ಎಂಬ ಮಹಿಳೆ ಮೃತಪಟ್ಟಿದ್ದಾರೆ. ಹಾಸನದ ಹಳೆಬೀಡು ರಸ್ತೆ ಸೀಗೇಗೇಟ್ ಹತ್ತಿರ ಸೇತುವೆಯಿಂದ ಕೆಳಗೆ ಕಾರು ಪಲ್ಟಿಯಾಗಿತ್ತು. ಬೆಂಗಳೂರು ಏರ್‌ಪೋರ್ಟ್‌ನಿಂದ ಶಂಕರೇಗೌಡನರ ಅತ್ತೆ ಇಂದು, ‌ಮಾವ ಯೋಗೇಶ್ ಅವರನ್ನು ಚಾಲಕ ಸಾಗರ್ ಪಿಕಪ್ ಮಾಡಿದ್ದ. ಅಪಘಾತದಲ್ಲಿ ಯೋಗೇಶ್ ಬಚಾವ್ ಆಗಿದ್ದರೆ, ಇಂದು ಸಾವಿಗೀಡಾಗಿದ್ದರು.

ಬೀದಿ ವ್ಯಾಪಾರಿಯ ಮೇಲೆ ಮೊದಲ ಕೇಸ್

ನವದೆಹಲಿ: ಬ್ರಿಟಿಷ್​ ವಸಾಹತು ಕಾಲದ ಕ್ರಿಮಿನಲ್‌ ಕಾನೂನುಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದು, ಇಂದು ಜಾರಿಗೆ ಬಂದಿದೆ (New Criminal Law). ಹೊಸ ಕಾನೂನಿನ ಪ್ರಕಾರ ಹೊಸದಿಲ್ಲಿಯ ರೈಲ್ವೆ ನಿಲ್ದಾಣದ ಬಳಿ ರಸ್ತೆಯ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಬೀದಿ ವ್ಯಾಪಾರಿಯ ವಿರುದ್ಧ ಮೊದಲ ಎಫ್ಐಆರ್ ದಾಖಲಿಸಲಾಗಿದೆ.

ಹೊಸ ಕ್ರಿಮಿನಲ್ ಕೋಡ್‌ನ ಸೆಕ್ಷನ್ 285ರ ಅಡಿಯಲ್ಲಿ ಈ ಎಫ್ಐಆರ್ ದಾಖಲಿಸಲಾಗಿದೆ. ಈ ಕಾನೂನಿನ ಪ್ರಕಾರ ಯಾವುದೇ ಸಾರ್ವಜನಿಕ ರಸ್ತೆಗೆ ಅಡ್ಡಿಪಡಿಸಿದರೆ ಅಥವಾ ಸಾರ್ವಜನಿಕ ಮಾರ್ಗದಲ್ಲಿ ಸಂಚರಿಸುವ ಯಾವುದೇ ವ್ಯಕ್ತಿಗೆ ಅಪಾಯ ಅಥವಾ ಗಾಯವನ್ನು ಉಂಟು ಮಾಡಿದರೆ 5 ಸಾವಿರ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ.‌

ಭಾನುವಾರ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ರಸ್ತೆಯಲ್ಲಿ ನೀರಿನ ಬಾಟಲಿಗಳು ಮತ್ತು ಗುಟ್ಕಾ ಮಾರಾಟ ಮಾಡುವ ಬೀದಿ ವ್ಯಾಪಾರಿಯನ್ನು ಗುರುತಿಸಿದ ನಂತರ ಎಫ್ಐಆರ್ ದಾಖಲಿಸಲಾಗಿದೆ. ಬೀದಿ ವ್ಯಾಪಾರಿಯ ತಾತ್ಕಾಲಿಕ ಅಂಗಡಿಯು ರಸ್ತೆಗೆ ಅಡ್ಡವಾಗಿ ನಿಂತಿತ್ತು. ಅದನ್ನು ಸ್ಥಳಾಂತರಿಸಲು ಪೊಲೀಸ್‌ ಸಿಬ್ಬಂದಿ ಕೇಳಿಕೊಂಡರೂ ಒಪ್ಪದೇ ಇದ್ದಾಗ ಎಫ್ಐಆರ್ ದಾಖಲಿಸಲಾಗಿದೆ.

ಎಫ್‌ಐಆರ್‌ನಲ್ಲಿ ಏನಿದೆ?

ಬೀದಿ ಬದಿ ವ್ಯಾಪಾರಿ ಭಾನುವಾರ ರಾತ್ರಿ ನವದೆಹಲಿ ರೈಲ್ವೆ ನಿಲ್ದಾಣದ ಬಳಿಯ ಪಾದಚಾರಿ ಮೇಲ್ಸೇತುವೆಯ ಕೆಳಗೆ ತನ್ನ ಅಂಗಡಿಯನ್ನು ನಿಲ್ಲಿಸಿದ್ದ ಎಂದು ಹೇಳಲಾಗಿದೆ. “ಆ ವ್ಯಾಪಾರಿಯು ಬೀದಿಯಲ್ಲಿ ನೀರಿನ ಬಾಟಲಿ, ಬೀಡಿ ಮತ್ತು ಸಿಗರೇಟುಗಳನ್ನು ಮಾರಾಟ ಮಾಡುತ್ತಿದ್ದ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಆತನ ಅಂಗಡಿ ಅಡ್ಡಿಯಾಗುತ್ತಿತ್ತು. ರಸ್ತೆಯಿಂದ ಅಂಗಡಿಯನ್ನು ತೆರವುಗೊಳಿಸುವಂತೆ ಸಬ್ ಇನ್ಸ್‌ಪೆಕ್ಟರ್ ಆ ವ್ಯಾಪಾರಿ ಬಳಿ ಹಲವು ಬಾರಿ ಮನವಿ ಮಾಡಿದರು. ಆದರೆ ಆತ ಅದಕ್ಕೆ ಒಪ್ಪಲಿಲ್ಲ” ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ವ್ಯಾಪಾರಿಯನ್ನು ಬಿಹಾರದ ಪಾಟ್ನಾ ಮೂಲದ ಪಂಕಜ್ ಕುಮಾರ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Amit Shah: ಹೊಸ ಕ್ರಿಮಿನಲ್ ಕಾನೂನಿನಲ್ಲಿ ಶಿಕ್ಷೆಯ ಬದಲು ನ್ಯಾಯಕ್ಕೆ ಪ್ರಾಧಾನ್ಯತೆ; ಅಮಿತ್ ಶಾ

Exit mobile version