ಕೊಚ್ಚಿ: ಪ್ರಾಪ್ತ ವಯಸ್ಕರಿಬ್ಬರು ಪರಸ್ಪರ ಸಮ್ಮತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ, ಮದುವೆಯಾಗಲು ನಿರಾಕರಿಸಿದರೆ ಅದು ಅತ್ಯಾಚಾರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಸಹೋದ್ಯೋಗಿ ಹಾಗೂ ವಕೀಲೆಯೊಬ್ಬರು ನೀಡಿದ್ದ ಲೈಂಗಿಕ ದೌರ್ಜನ್ಯದ ದೂರಿನಡಿ ಬಂಧಿತರಾಗಿರುವ ಕೇಂದ್ರ ಸರ್ಕಾರದ ವಕೀಲ ಕೇರಳದ ನವನೀತ್ ಎನ್ ನಾಥ್ ಅವರ ಜಾಮೀನು ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ಅಂಶವನ್ನು ಪ್ರತಿಪಾದಿಸಿತು. ಮತ್ತು ಬಳಿಕ ಷರತ್ತುಬದ್ಧ ಜಾಮೀನು ನೀಡಿತು.
ಯಾವುದೇ ಪ್ರಕರಣ ಅತ್ಯಾಚಾರ ಎಂದು ಸಾಬೀತುಪಡಿಸಬೇಕಾದರೆ ಮೂರು ಪ್ರಮುಖ ಅಂಶಗಳಲ್ಲಿ ಒಂದು ಇರಲೇಬೇಕು. ಪರಸ್ಪರ ಒಪ್ಪಿಗೆ ಇಲ್ಲದೆ ಬಲವಂತದಿಂದ ನಡೆದಿರಬೇಕು, ಮೋಸ, ಬ್ಲ್ಯಾಕ್‌ಮೇಲ್ ಮೂಲಕ ಆಕೆಯ ಒಪ್ಪಿಗೆ ಪಡೆದಿರಬೇಕು, ಇಲ್ಲವೇ ಮದುವೆ ಆಗುತ್ತೇನೆ ಎಂದು ನಂಬಿಸಿಯೇ ಲೈಂಗಿಕವಾಗಿ ಬಳಸಿಕೊಂಡ ಬಗ್ಗೆ ಪುರಾವೆಗಳು ಇರಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಅತ್ಯಾಚಾರ ಅಪರಾಧ ಸಾಬೀತಿಗೆ ಮದುವೆಯಾಗುವ ಭರವಸೆಯ ಆಧಾರದ ಮೇಲೆ ಲೈಂಗಿಕ ಕ್ರಿಯೆಗೆ ಮಹಿಳೆಯ ಒಪ್ಪಿಗೆ ಪಡೆದಿರಬೇಕು ಮತ್ತು ಲೈಂಗಿಕ ಕ್ರಿಯೆಯ ಸಮಯದಲ್ಲಿ ಆ ಭರವಸೆ ನೀಡಿದವರಿಗೆ ತನ್ನ (ಮದುವೆಯಾಗುತ್ತೇನೆಂಬ) ಮಾತನ್ನು ಎತ್ತಿಹಿಡಿಯುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಋಜುವಾತಾಗಬೇಕು ಎಂದು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ತಿಳಿಸಿದರು.
“ಮೋಸದಿಂದ ಇಲ್ಲವೇ ದಿಕ್ಕುತಪ್ಪಿಸಿ ಲೈಂಗಿಕ ಕ್ರಿಯೆ ನಡೆಸದ ಹೊರತು ಇಬ್ಬರು ವಯಸ್ಕರ ನಡುವಿನ ಲೈಂಗಿಕ ಸಂಬಂಧ ಐಪಿಸಿ ಸೆಕ್ಷನ್ 376ರ ಅಡಿ ಅತ್ಯಾಚಾರಕ್ಕೆ ಸಮ ಆಗುವುದಿಲ್ಲ. ಇಬ್ಬರ ಲೈಂಗಿಕ ಸಂಬಂಧಕ್ಕೆ ಮದುವೆಯ ಅಂಕಿತ ಬೀಳದಿದ್ದರೂ ಕೂಡ ಲೈಂಗಿಕ ಸಮ್ಮತಿಗೆ ಧಕ್ಕೆ ತರುವ ಯಾವುದೇ ಅಂಶ ಇರದಿದ್ದಾಗ ಅದು ಅತ್ಯಾಚಾರವಾಗುವುದಿಲ್ಲ. ಇಬ್ಬರು ಶಾರೀರಿಕ ಸಂಬಂಧದಲ್ಲಿ ತೊಡಗಿದ್ದರೂ ಕೂಡ ನಂತರ ಮದುವೆಗೆ ಒಪ್ಪದಿದ್ದರೆ ಅಥವಾ ಸಂಬಂಧವನ್ನು ಮದುವೆಯವರೆಗೆ ಮುನ್ನಡೆಸಲು ವಿಫಲವಾದರೆ ಆ ಅಂಶಗಳು ಅತ್ಯಾಚಾರ ಆರೋಪ ನಿಗದಿಗೆ ಸಾಕಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಅತ್ಯಾಚಾರವಾಗಿದೆ ಎಂಬುದನ್ನು ಸಾಬೀತುಪಡಿಸಬೇಕಾದರೆ ಮದುವೆಯಾಗುವ ಭರವಸೆಯನ್ನು ಉದ್ದೇಶಪೂರ್ವಕವಾಗಿ ಸುಳ್ಳಾಗಿಸಿರಬೇಕು ಮತ್ತು ಅಂತಹ (ಸುಳ್ಳು) ಭರವಸೆಗೆ ಮಹಿಳೆ ಒಪ್ಪಿಗೆ ಸೂಚಿಸಿರಬೇಕು ಎಂದು ಪೀಠ ತಿಳಿಸಿದೆ.
ಇದನ್ನೂ ಓದಿ| 24 ವರ್ಷದ ಹೌಸ್ ಕೀಪಿಂಗ್ ಮಹಿಳೆ ಮೇಲೆ 15 ವರ್ಷದ ಬಾಲಕನಿಂದ ಅತ್ಯಾಚಾರ