ಮುಂಬೈ: ಆನ್ಲೈನ್ ಅಲ್ಲಿ ಮೋಸವಾಗುವ (Online Fraud) ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಹೇಳಲಾಗುತ್ತಿರುತ್ತದೆ. ಆದರೆ ಅದನ್ನು ಲೆಕ್ಕಿಸದ ಎಷ್ಟೋ ಮಂದಿ ಇಂದಿಗೂ ಆನ್ಲೈನ್ ವಂಚನೆಗೆ ಒಳಗಾಗುತ್ತಿದ್ದಾರೆ. ಅದೇ ರೀತಿ ಯೂಟ್ಯೂಬ್ ವಿಡಿಯೊಗಳನ್ನು ಲೈಕ್ ಮಾಡಿ ಹಣ ಗಳಿಸುವ ಆಸೆಗೆ ಬಿದ್ದ ಮಹಿಳೆಯೊಬ್ಬರು 10 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
ಇದನ್ನೂ ಓದಿ: Tips For Protect From Banking Fraud: ಬ್ಯಾಂಕಿಂಗ್ ವಂಚನೆ ಆಗದಂತೆ ನೋಡಿಕೊಳ್ಳೋದು ಹೇಗೆ?
49 ವರ್ಷದ ಮಹಿಳೆ ಫೇಸ್ಬುಕ್ ನೋಡುತ್ತಿರುವಾಗ ಅದರಲ್ಲಿ ಯೂಟ್ಯೂಬ್ ವಿಡಿಯೊ ಲೈಕ್ ಮಾಡಿ, 50 ರೂ. ಗಳಿಸಿ ಎನ್ನುವ ಜಾಹೀರಾತೊಂದು ಕಂಡಿದೆ. ಅದಕ್ಕಾಗಿ ಮಹಿಳೆ ಜಾಹೀರಾತುದಾರರನ್ನು ಸಂಪರ್ಕಿಸಿದಾಗ ಅವರು ವಾಟ್ಸ್ಆ್ಯಪ್ ಅಲ್ಲಿ ಮಹಿಳೆಯನ್ನು ಮರು ಸಂಪರ್ಕ ಮಾಡಿದ್ದಾರೆ. ಯೂಟ್ಯೂಬ್ ಅಲ್ಲಿ ಕೆಲ ವಿಡಿಯೊಗಳನ್ನು ಲೈಕ್ ಮಾಡಲು ಹೇಳಿದ್ದು, ಲೈಕ್ ಮಾಡಿರುವ ಸ್ಕ್ರೀನ್ ಶಾಟ್ ಕಳುಹಿಸಿದಾಗ ಮಹಿಳೆಗೆ 150 ರೂ. ಪಾವತಿಸಲಾಗಿದೆ. ನಂತರ ಟೆಲಿಗ್ರಾಂ ಚಾನೆಲ್ ಒಂದಕ್ಕೆ ಸೇರಿಸಲಾಗಿದ್ದು, ಈ ರೀತಿ ಟಾಸ್ಕ್ ಮುಂದುವರಿಸಲು ಹಣ ಪಾವತಿಸಬೇಕೆಂದು ಹೇಳಲಾಗಿದೆ. ಅದಕ್ಕಾಗಿ ಮಹಿಳೆ 1000 ರೂ. ಪಾವತಿ ಮಾಡಿದ್ದಾರೆ.
ಮಹಿಳೆಗೆ 1000 ರೂ. ಬದಲಾಗಿ 1900 ರೂ. ಅನ್ನು ಮರುಪಾವತಿ ಮಾಡಲಾಗಿದೆ. ಮತ್ತೆ 3000 ರೂ. ಕಟ್ಟಿಸಿಕೊಂಡು 4,265 ರೂ. ಮರುಪಾವತಿ ಮಾಡಲಾಗಿದೆ. ಅದಾದ ನಂತರ ಮತ್ತೊಂದು ಟೆಲಿಗ್ರಾಂ ಗುಂಪಿಗೆ ಇವರನ್ನು ಸೇರಿಸಲಾಗಿದೆ. ಅದರಲ್ಲಿ ಮೂರು ಟಾಸ್ಕ್ ಸಂಪೂರ್ಣಗೊಂಡ ನಂತರ ಹಣ ಮರುಪಾವತಿ ಆಗುತ್ತದೆ ಎಂದು ತಿಳಿಸಲಾಗಿದೆ. 20 ಲಕ್ಷ ರೂ. ಮರುಪಾವತಿ ಮಾಡುವ ಆಸೆ ತೋರಿಸಿ ಮಹಿಳೆಯಿಂದ 8.95 ಲಕ್ಷ ಪಾವತಿ ಮಾಡಿಸಿಕೊಳ್ಳಲಾಗಿದೆ. ಮಹಿಳೆಯ ಸಹೋದರನೂ ಕೂಡ 20,000 ಹಣ ಪಾವತಿ ಮಾಡಿದ್ದಾನೆ. ಆಕೆಯ ಪತಿಯೂ 1 ಲಕ್ಷ ರೂ. ಪಾವತಿಸಿದ್ದಾನೆ.
ಇದನ್ನೂ ಓದಿ: Cricket Fraud: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹೆಸರಿನಲ್ಲಿ ಮಹಿಳೆಯಿಂದ 1.5 ಕೋಟಿ ರೂ. ದೋಚಿದ ಗ್ಯಾಂಗ್, 4 ವರ್ಷದ ಬಳಿಕ ಕೇಸ್!
ಮೋಸಗಾರರು ತಮ್ಮ ವೆಬ್ಸೈಟ್ ಅಲ್ಲಿ ಮಹಿಳೆಯ ಹೆಸರಿನಲ್ಲಿ ಖಾತೆ ಮಾಡಿದ್ದು, ಅದರಲ್ಲಿ ಪಾವತಿ ಮಾಡಿರುವ ಹಣ 10.88 ಲಕ್ಷ, ಮರುಪಾವತಿ ಹಣ 20 ಲಕ್ಷ ಎಂದು ತೋರಿಸಿದ್ದಾರೆ. 20 ಲಕ್ಷ ಪಡೆಯುವುದಕ್ಕೆ ಮತ್ತೆ 8 ಲಕ್ಷ ಕಟ್ಟಬೇಕೆಂದು ಹೇಳಿದ್ದಾರೆ. ಆದರೆ ಕಟ್ಟಲು ಹಣವಿಲ್ಲವೆಂದು ಹೇಳಿದಾಗ, ನಿಮ್ಮ ಹಣವನ್ನು ವಾಪಸು ಕೊಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಅನುಮಾನ ಬಂದ ಹಿನ್ನೆಲೆ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಜನವರಿ 31ರಿಂದ ಫೆ.6ರ ಸಮಯದಲ್ಲಿ ಈ ಮೋಸ ನಡೆದಿದ್ದಾಗಿ ವರದಿಯಿದೆ.